Sunday, September 8, 2024

ಭಕ್ತಿ, ಸಂಭ್ರಮದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ, ಕೊಡಿ ಹಬ್ಬ

ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪರಶುರಾಮ ಸೃಷ್ಟಿಯ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ ನ.19ರಂದು ಶುಕ್ರವಾರ ನಡೆಯಿತು.

ಕಳೆದ ವರ್ಷ ಕೋವಿಡ್-19ನಿಂದಾಗಿ ಸರಳವಾಗಿ ರಥೋತ್ಸವ ನಡೆದಿತ್ತು. ಆದರೆ ಈ ಬಾರಿ ಕೊರೋನಾ ಆತಂಕ ಇದ್ದರೂ ಕೂಡಾ ಕೋವಿಡ್ ಮಾರ್ಗಸೂಚಿಯಂತೆ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಮೊದಲಿಂತೆ ಭಕ್ತರ ಸಂದಣಿ, ಅಂಗಡಿ-ಮುಂಗಟ್ಟುಗಳು, ಮನೋರಂಜನಾ ಪಾರ್ಕ್‌ಗಳು, ಝಗಮಗಿಸುವ ವಿದ್ಯುತ್ ಅಲಂಕಾರದಿಂದ ಕೊಡಿಹಬ್ಬಕ್ಕೆ ಎಂದಿನ ಮೆರುಗು ಲಭಿಸಿದೆ.

ರಥೋತ್ಸವದ ಅಂಗವಾಗಿ ನ.12ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಶುಕ್ರವಾರ ದಿವಾಗಂಟೆ 11-50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು.

ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಗರುಡ ಪ್ರದಕ್ಷಣೆ ಸಹಜ ಪ್ರಕ್ರಿಯೆ. ಎಷ್ಟೋ ಜನ ಭಕ್ತರು ಗರುಡ ಬರುವುದನ್ನೇ ಕಾದಿರುತ್ತಾರೆ. ಇವತ್ತು ಕೂಡಾ ರಥಕ್ಕೆ ಗರುಡ ಪ್ರದಕ್ಷಣೆ ಬಂದಿರುವ ದೃಶ್ಯವನ್ನು ನೋಡಿ ಭಕ್ತರು ಪುಳಕಿತರಾದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎಂ.ಪ್ರಭಾಕರ ಶೆಟ್ಟಿ, ದೇವಳದ ತಂತ್ರಿಗಳಾಗಿ ಪ್ರಸನ್ನ ಕುಮಾರ್ ಐತಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಗಣೇಶ್ ಗೌಡ, ಸಮಿತಿ ಸದಸ್ಯರಾಗಿ ಎಸ್.ರಾಘವೇಂದ್ರ ರಾವ್ ನೇರಂಬಳ್ಳಿ, ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ಹಾಗೂ ಅರ್ಚಕರು, ಸಿಬ್ಬಂದಿ ವರ್ಗ ಹಾಗು ಸಮಸ್ತ ಕೋಟೇಶ್ವರ ಗ್ರಾಮಸ್ಥರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ನ.12ರಿಂದ ಅಂಕುರಾರೋಹಣದಿಂದ ರಥೋತ್ಸವದ ಧಾರ್ಮಿಕ ವಿಧಿವಿಧಾನ ಆರಂಭವಾಗಿತ್ತು. ನ.20ರ ತನಕವೂ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತವೆ. ರಾತ್ರಿ 8 ಗಂಟೆಯಿಂದ ದೇವಸ್ಥಾನದ ಶ್ರೀ ಶಾಂತಾರಾಮ ರಂಗಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಧ್ವಜಪುರ – ಕೋಟೇಶ್ವರ : ಪುರಾಣಗಳಲ್ಲಿ ಕೋಟೇಶ್ವರವನ್ನು ಧ್ವಜಪುರವೆಂದು ಕರೆಯಲಾಗಿದೆ. ಈಶ್ವರನು ತ್ರಿಪುರಾರಿ. ಕೋಟೇಶ್ವರವೂ ಸಮೀಪದ ತ್ರಿಪುರಗಳನ್ನು ಗೆದ್ದು ಅಲ್ಲಿಂದ ಕಪ್ಪಕಾಣಿಕೆಗಳನ್ನು ಪಡೆದು ಇಲ್ಲಿ ಧ್ವಜ ಹಾರಿಸುವ ರಥೋತ್ಸವವನ್ನು ಆಚರಿಸುವುದರಿಂದ ಇದು ಧ್ವಜಪುರವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೋಟೇಶ್ವರದ ಸುತ್ತಮುತ್ತ ೬೮ ಶಿವ ಕ್ಷೇತ್ರಗಳಿದ್ದು ಅವುಗಳಲ್ಲಿ ಕೋಟಿಲಿಂಗೇಶ್ವರನ ಸನ್ನಿಧಾನವೇ ಅತ್ಯಂತ ಪ್ರಮುಖವಾದುದು. ೬೮ ಕ್ಷೇತ್ರಗಳ ತಲೆವಣಿಯಾಗಿ ರಾರಾಜಿಸುತ್ತಾ ಇಲ್ಲಿ ಶಿವನ ಕೀರ್ತಿ ಧ್ವಜವು ಹಾರಾಡುತ್ತಿದೆಯೆಂಬ ಅರ್ಥದಲ್ಲಿ ಅದು ಧ್ವಜಪುರವೆನ್ನಿಸಿರಬಹುದೆಂಬ ಅಭಿಪ್ರಾಯ ಚಿಂತಕರದ್ದು. ವಸುರಾಜನು ದೇವಾಲಯದ ಮುಂದೆ ೧೧೪ ಹಸ್ತ ಪ್ರಮಾಣದ ಧ್ವಜಸ್ತಂಭವೊಂದನ್ನು ನಿರ್ಮಿಸಿದ್ದನೆಂಬ ಹಿನ್ನಲೆಯಲ್ಲಿಯೂ ಧ್ವಜಪುರವೆಂಬ ಹೆಸರು ಬಂದಿರಬಹುದು ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ.


ಕೊಡಿ ಹಬ್ಬ :ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ತಾಲೂಕಿನ ದೊಡ್ಡ ಈ ರಥೋತ್ಸವಕ್ಕೆ ‘ಕೊಡಿ ಹಬ್ಬ ಎಂದು ಹೆಸರು ಬರಲು ಕಾರಣವಾಯಿತು. ಕೊಡಿ ಹಬ್ಬದ ಆಚರಣೆ ಪ್ರಾಚೀನಕಾಲದಿಂದಲೂ ನಡೆದು ಬಂದಿದೆ. ಬಸ್ರೂರಿನ ರಾಜ ವಸು ಚಕ್ರವರ್ತಿ ತನಗೆ ಸಂತಾನ ಭಾಗ್ಯ ಕರುಣಿಸಿದರೆ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಪುನರುತ್ಥಾನ ನಡೆಸುದಾಗಿ ಹರಕೆ ಹೊರುತ್ತಾನೆ. ಪುತ್ರ ಸಂತಾನವಾದಾಗ ಹರಕೆಯಂತೆ ದೇವಾಲಯವನ್ನು ಭವ್ಯವಾಗಿ ಪುನರ್ ನಿರ್ಮಿಸಿದ ಎಂದು ಇತಿಹಾಸ ತಜ್ಞರು ವಿವರಿಸುತ್ತಾರೆ. ಕೋಟೇಶ್ವರದ ಸುತ್ತುಮುತ್ತಲಿನ ನವವಿವಾಹಿತರು ಬದುಕಿನ ಕುಡಿಯೊಡೆವ ಕ್ಷೇತ್ರವೆಂದೇ ನಂಬುಗೆ ತಳೆದವರಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಾರೆ.

ಸುತ್ತಕ್ಕಿ ಸೇವೆ: ಸುಮಾರು 5 ಎಕರೆ ವಿಸ್ತೀರ್ಣದ ವಿಶಾಲವಾದ ಈ ಕೆರೆಗೆ ಸುತ್ತಕ್ಕಿ ತಳಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಹಬ್ಬದ ದಿನ ಬೆಳಿಗ್ಗೆ 3 ಗಂಟೆಯಿಂದಲೇ ದೂರ ದೂರದ ಹರಕೆ ಹೊತ್ತ ಭಕ್ತಾಭಿಮಾನಿಗಳು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಮನೆಯಲ್ಲಿಯೇ ಬೆಳೆದ ಅಕ್ಕಿಯನ್ನು ಈ ಕೆರೆಯ ಸುತ್ತ ಹಾಯಿಸಿದ ಬಿಳಿ ಬಟ್ಟೆಯ ಮೇಲೆ ತಳಿಯುತ್ತಾರೆ.


ಕೋಟೇಶ್ವರದ ಕೊಡಿ ಹಬ್ಬ ಗರ್ನ ಕಟ್ಟುದರಿಂದ ಗರ್ನ ಬಿಚ್ಚುವುದರ ತನಕ ಹಬ್ಬದ ವಾತಾವರಣವಿರುತ್ತದೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿ ಮಳೆಯಿಂದಾಗಿ ತುಸು ನಿರಾಸೆ ಮೂಡಿಸಿತು. ಆದರೆ ಭಕ್ತರ ಸಂಭ್ರಮಕ್ಕೆ ಕೊರತೆ ಆಗಲಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!