Sunday, September 8, 2024

ಲೇಖಕಿ ಪಾರ್ವತಿ ಜಿ ಐತಾಳ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ: ನಾಡಿನ ಖ್ಯಾತ ಲೇಖಕಿ, ಅನುವಾದಕಿ, ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ.ಪಾರ್ವತಿ ಜಿ. ಐತಾಳ್ ಅವರಿಗೆ ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉಡುಪಿಯಲ್ಲಿ ನ.೧ರಂದು ನಡೆದ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ೩೬ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ೨೦೧೭ ಜುಲೈ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ ಡಾ.ಪಾರ್ವತಿ ಜಿ. ಐತಾಳ್ ಕಾಲೇಜಿನಲ್ಲಿ ಅಧ್ಯಾಪನದ ಜತೆಗೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಗೆ ಸೇರಿದ ಧರ್ಮತ್ತಡ್ಕ ಎಂಬ ಗ್ರಾಮೀಣ ಪ್ರದೇಶದ ಬಾಳಿಕೆ ಮನೆತನದಲ್ಲಿ ಜನಿಸಿದ ಇವರು ಧರ್ಮತ್ತಡ್ಕ ಎ.ಯು.ಪಿ.ಶಾಲೆ, ವಿಠಲ ಬಾಲಿಕಾ ಪ್ರೌಢ ಶಾಲೆ, ಸರಕಾರಿ ಕಾಲೇಜು ಕಾಸರಗೋಡು. ಮಾನಸಗಂಗೋತ್ರಿ, ಮೈಸೂರುಗಳಲ್ಲಿ ತಮ್ಮ ಶಿಕ್ಷಣ ಮುಗಿಸಿ ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಕುಂದಾಪುರದ ಗಂಗಾಧರ ಐತಾಳರನ್ನು ವಿವಾಹವಾಗಿ ಭಂಡಾರ್‌ಕಾರ್‍ಸ್ ಕಾಲೇಜಿಗೆ ವರ್ಗವಾಗಿ ಬಂದರು. ಅದಾಗಲೇ ಅನೇಕ ಲೇಖನಗಳನ್ನೂ ಹಿಂದಿ. ಇಂಗ್ಲಿಷ್ ಮತ್ತು ಮಲಯಾಳಗಳಿಂದ ಅನೇಕ ಕಥೆಗಳನ್ನೂ ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬಂದಿದ್ದ ಇವರು ತಮ್ಮ ಕೌಟುಂಬಿಕ ಬದುಕಿನಲ್ಲಿ ನೆಲೆಯೂರಿದ ನಂತರ ಪುಸ್ತಕ ರಚನೆಯಲ್ಲಿ ತೊಡಗಿಕೊಂಡು ಅನೇಕ ಕೃತಿಗಳನ್ನು ರಚಿಸಿದರು.

ಇವರ ಕೃತಿಗಳ ನಿರೂಪಣಾಶೈಲಿ ಮತ್ತು ಗುಣಮಟ್ಟಗಳನ್ನು ನೋಡಿ ಕರ್ನಾಟಕದ ಮುಂಚೂಣಿಯ ಪ್ರಕಾಶಕರಾದ ನವಕರ್ನಾಟಕ, ಅಂಕಿತ, ಮನೋಹರ ಗ್ರಂಥಮಾಲಾ, ವಸಂತ ಪ್ರಕಾಶನ, ಶ್ರೀನಿವಾಸ ಪುಸ್ತಕ, ದೇಸಿ ಪುಸ್ತಕ, ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಮೊದಲಾದ ಸಂಸ್ಥೆಗಳು ಅವುಗಳನ್ನು ಪ್ರಕಟಿಸಿದ್ದಾರೆ. ಅನುವಾದಿತ ಕೃತಿಗಳು ಮಾತ್ರವಲ್ಲದೆ ಇವರು ಸ್ವತಂತ್ರವಾಗಿ ಬರೆದ ಕಥೆ-ಕಾದಂಬರಿ, ನಾಟಕಗಳು, ವ್ಯಕ್ತಿಚಿತ್ರ, ವೈಚಾರಿಕ ಲೇಖನಗಳು, ಪುಸ್ತಕ ವಿಮರ್ಶೆ, ರಂಗ ವಿಮರ್ಶೆಗಳೂ ಪ್ರಕಟವಾದವು. ಇದುವರೆಗೆ ಪಾರ್ವತಿ ಐತಾಳರ ೮೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

ಐದು ಭಾಷೆಗಳನ್ನು ಬಲ್ಲ ಪಾರ್ವತಿ ಐತಾಳರು ಇಂಗ್ಲಿಷ್, ಹಿಂದಿ, ತುಳು ಮತ್ತು ಮಲಯಾಳಗಳಿಂದ ಕನ್ನಡಕ್ಕೂ ಕನ್ನಡದಿಂದ ಆ ಭಾಷೆಗಳಿಗೂ ಅನುವಾದ ಮಾಡಿ ಅನುವಾದ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಿ ಕರ್ನಾಟಕ ಅನುವಾದ ಅಕಾಡೆಮಿಯಿಂದ (ಕುವೆಂಪು ಭಾಷಾ ಭಾರತಿ) ೨೦೧೧ರಲ್ಲಿ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕೇರಳದಿಂದ ಕಾಳಿಯತ್ತ್ ದಾಮೋದರನ್ ಸ್ಮಾರಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅಲ್ಲದೆ ಅನುವಾದಿತ ಕೃತಿಗಳಿಗಾಗಿ ಡಾ.ಶಿವರಾಮ ಕಾರಂತ ಸಾಹಿತ್ಯ ಪಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಹೆಚ್.ವಿ.ಸಾವಿತ್ರಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ ಮತ್ತು ಸ್ವತಂತ್ರ ಕೃತಿಗಳಾದ ಒಡಲ ಬೆಂಕಿ ಕಾದಂಬರಿಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ, ಮಹಿಳಾ ಚಿಂತನೆಯ ವಿಭಿನ್ನ ನೆಲೆಗಳು ಎಂಬ ವೈಚಾರಿಕ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ.ಪರಮೇಶ್ವರ ಭಟ್ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿ, ತಂತ್ರಗಾರ್ತಿ ಮಕ್ಕಳ ನಾಟಕಕ್ಕೆ ಉಡುಪಿಯ ರಥಬೀದಿ ಗೆಳೆಯರ ಮುರಾರಿ-ಕೆದ್ಲಾಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ಸಂಘ-ಸಂಸ್ಥೆಗಳಿಂದ ಪುರಸ್ಕಾರಗಳನ್ನು ಪಡೆದಿದ್ದಾರೆ.

ಶಿವರಾಮ ಕಾರಂತ ಮತ್ತು ತಕಳಿ ಶಿವಶಂಕರ ಪಿಳ್ಳೆಯವರ ಕಾದಂಬರಿಗಳ ತೌಲನಿಕ ಅಧ್ಯಯನಕ್ಕಾಗಿ ಕಣ್ಣೂರು ವಿ.ವಿ.ಯಿಂದ ಡಾಕ್ಟರೇಟ್ ಲಭಿಸಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ, ಪಿ.ಹೆಚ್.ಡಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವುದು ಮಾತ್ರವಲ್ಲದೆ ಸಾಹಿತ್ಯ ಅಕಾಡೆಮಿಗಳ ಪುಸ್ತಕ ಬಹುಮಾನ ಯೋಜನೆಯಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿ ತಮ್ಮ ವಿದ್ವತ್ತನ್ನು ಮೆರೆದಿದ್ದಾರೆ. ಬಹುಮುಖ ಪ್ರತಿಭಾವಂತರಾದ ಇವರು ಸಾಹಿತ್ಯ ಮಾತ್ರವಲ್ಲದೆ ಕಲೆಯಲ್ಲೂ ಆಸಕ್ತಿ ಹೊಂದಿರುವ ಇವರು ಆಕಾಶವಾಣಿ ನಾಟಕಗಳಲ್ಲಿ ಧ್ವನಿ ನೀಡುವ ಕಲಾವಿದೆಯೂ ಹೌದು. ಕಾಲೇಜಿನಲ್ಲಿ ಲಲಿತಕಲಾ ಸಂಘದ ಸಂಚಾಲಕಿಯಾಗಿ ತಮ್ಮ ವಿದ್ಯಾರ್ಥಿಗಳಿಗೆ ರೂಪಕ ಮತ್ತು ಲಘುಸಂಗೀತ ತರಬೇತಿಗಳನ್ನೂ ನೀಡಿದ್ದಾರೆ.

ಇವರ ಸಮಗ್ರ ಕೃತಿ ನೋಟ ಸುರಗಂಗಾ ನರೇಂದ್ರ ಎಸ್. ಗಂಗೊಳ್ಳಿ ಸಂಪಾದಕತ್ವದಲ್ಲಿ ಜನಪ್ರತಿನಿಧಿ ಪ್ರಕಾಶನದಿಂದ ಇತ್ತೀಚೆಗೆ ಪ್ರಕಟಗೊಂಡಿದೆ. ಅವರ ಇನ್ನೂ ಹಲವು ಕೃತಿಗಳು ಪ್ರಕಟಣೆಗೆ ಸಿದ್ಧವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪೂರ್ವವಾದ ಸೇವೆಗೆ ಯೋಗ್ಯವಾಗಿಯೇ ಪ್ರಶಸ್ತಿ ಲಭಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!