Thursday, November 21, 2024

ಧೋನಿ ಈಗ ಟೀಂ ಇಂಡಿಯಾದ ಮೆಂಟರ್

-ಪಿ.ಎಸ್.ಜಗದೀಶ್ಚಂದ್ರ ಅಂಚನ್

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಅಜಾತಶತ್ರು. ಇವರು ತನ್ನ ಕ್ರಿಕೆಟ್ ಬದುಕಿನಲ್ಲಿ ಸಂಪಾದಿಸಿದ ಕೀರ್ತಿ ಹಾಗೂ ಪಡೆದ ಪ್ರಶಸ್ತಿಗಳು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಟೀಂ ಇಂಡಿಯಾದ ಯಾವ ನಾಯಕರಿಗೂ ದಕ್ಕಿರಲಿಕ್ಕಿಲ್ಲ. ಅಂತಹ ಅದ್ಭುತ ಸಾಧನೆಯನ್ನು ಕ್ರಿಕೆಟ್ ಜಗತ್ತಿನಲ್ಲಿ ಧೋನಿ ಸಾಧಿಸಿದ್ದಾರೆ. ಸುದೀರ್ಘ ಅವಧಿಯವರೆಗೆ ಟೀಂ ಇಂಡಿಯಾವನ್ನು ಮುನ್ನಡೆಸಿ ಯಶಸ್ವಿಯಾಗಿದ್ದ ಮಹೇಂದ್ರ ಸಿಂಗ್ ಧೋನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ‌ಐ) ಟೀಂ ಇಂಡಿಯಾಕ್ಕೆ ಮೆಂಟರ್’ ಆಗಿ ನೇಮಕ ಮಾಡಿದೆ. ಬಿಸಿಸಿ‌ಐ ತೆಗೆದುಕೊಂಡ ಇಂತದೊಂದು ನಿರ್ಧಾರ ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವಾದುದು.

ಕ್ರಿಕೆಟ್ ಬದುಕಿನ ಸಂಧ್ಯಾಕಾಲದಲ್ಲಿದ್ದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ೨೦೨೦ರ ಆಗಸ್ಟ್-೧೫ರಂದು ವಿದಾಯ ಹೇಳಿದ್ದರು. ಇವರು ನಿವೃತ್ತಿ ಘೋಷಿಸಿದ ನಂತರ ಐಪಿ‌ಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ತನ್ನ ಕೂಲ್ ಕ್ಯಾಪ್ಟನ್ಸಿಯಿಂದ ಟೀಂ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ ಎಂಎಸ್. ಧೋನಿ ಇದೀಗ ಕೊಹ್ಲಿ ಪಡೆಯನ್ನು ಟ್ವೆಂಟಿ-೨೦ ವಿಶ್ವಕಪ್ ಟೂರ್ನಿಗೆ ಸಜ್ಜುಗೊಳಿಸುವ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಬಳಿಕ ಹಲವಾರು ಗೆಲುವುಗಳು ಬಂದಿವೆ. ಕೊಹ್ಲಿ ಅವಧಿಯಲ್ಲಿ ಟೀಂ ಇಂಡಿಯಾ ಟೆಸ್ಟ್ , ಏಕದಿನ ಕ್ರಿಕೆಟ್ ನಲ್ಲಿ ನಂ.೧ ಸ್ಥಾನವನ್ನು ಅಲಂಕರಿಸಿದೆ. ಆದರೆ, ಕೊಹ್ಲಿ ನಾಯಕತ್ವದ ಮೈನಸ್ ಪಾಯಿಂಟ್ ಅಂದರೆ ಇದುವರೆಗೆ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ ಎಂಬುವುದು . ಈ ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಸಾಗಿದ ಕೊಹ್ಲಿ ಪಡೆ, ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಯಿತು. ಇವೆಲ್ಲವೂ ಕೊಹ್ಲಿ ನಾಯಕತ್ವದ ಮೇಲೆ ಭಾರೀ ಒತ್ತಡ ಬೀರಿತು. ಈ ಒತ್ತಡದಲ್ಲೇ ಕೊಹ್ಲಿ ಮುಂದಿನ ಟ್ವೆಂಟಿ-೨೦ ವಿಶ್ವಕಪ್ ನಂತರ ಟ್ವೆಂಟಿ-೨೦ ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ದಿಢೀರ್ ಆಗಿ ತೆಗೆದುಕೊಂಡ ನಿರ್ಧಾರ ಬಿಸಿಸಿ‌ಐ ಬಿಗ್ ಬಾಸ್ ಗಳಿಗೆ ನುಂಗಲಾರದ ತುತ್ತಾಗಿದೆ. ಕೊಹ್ಲಿ ರಾಜೀನಾಮೆ ಟೀಂ ಇಂಡಿಯಾ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸಿದೆ. ಹಾಗಾಗಿ ಟೀಂ ಇಂಡಿಯಾದಲ್ಲಿ ಸಮತೋಲನ ಮೂಡಿಸುವ ಮಾರ್ಗದರ್ಶಕನ ಅವಶ್ಯಕತೆ ಖಂಡಿತವಾಗಿಯೂ ಇತ್ತು . ಈ ಒಂದು ಸ್ಥಾನಕ್ಕೆ ಯೋಗ್ಯತೆ ಆಧಾರದಲ್ಲಿ ಧೋನಿಯೇ ಅರ್ಹ ವ್ಯಕ್ತಿ. ಹಲವು ಬಾರಿ ಸ್ಪರ್ಧಾತ್ಮಕ ರೀತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿರುವ ಧೋನಿ ನಾಯಕತ್ವದಲ್ಲಿ ಸಾಧಿಸಿದ ಯಶಸ್ಸು ಅಪಾರ. ವಿಶ್ವ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ನಾಯಕರಾಗಿದ್ದ ಇವರು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ನಾಯಕರಾಗಿ ಅದ್ಭುತ ದಾಖಲೆಯನ್ನೇ ಹೊಂದಿದ್ದಾರೆ.

ಧೋನಿ ಯಶಸ್ವಿ ನಾಯಕ :
ಎಂಎಸ್. ಧೋನಿ ೨೦೦೭ರಲ್ಲಿ ಮೊದಲ ಬಾರಿ ಪರಿಚಯಿಸಲ್ಲಟ್ಟ ಐಸಿಸಿ ಟ್ವೆಂಟಿ-೨೦ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸಾರಥ್ಯವನ್ನು ವಹಿಸಿಕೊಂಡು ನಡೆಸಿದ ಚಮತ್ಕಾರಕ್ಕೆ ಕ್ರಿಕೆಟ್ ಜಗತ್ತೇ ತಲೆಬಾಗಿದೆ. ಟೀಂ ಇಂಡಿಯಾದ ಅತಿರಥ ಮಹಾರಥರೆಲ್ಲರೂ ಟ್ವೆಂಟಿ-೨೦ ವಿಶ್ವಕಪ್ ಪಂದ್ಯಾಟದಿಂದ ದೂರ ಉಳಿದಾಗ ಧೋನಿ ಯುವ ಪಡೆಯನ್ನು ಮುಂದಿಟ್ಟುಕೊಂಡು ೨೦೦೭ರ ಚೊಚ್ಚಲ ಟ್ವೆಂಟಿ-೨೦ ವಿಶ್ವಕಪ್‌ನ್ನು ಗೆದ್ದಿರುವುದೇ ದೊಡ್ಡ ಸಾಧನೆ. ೨೦೧೦ ಮತ್ತು ೨೦೧೬ರಲ್ಲಿ ಏಶ್ಯಾ ಕಪ್ ಗೆದ್ದ ಸಾಧನೆ. ಆ ಬಳಿಕ ೨೦೧೧ರ ಐಸಿಸಿ ಏಕದಿನ ವಿಶ್ವಕಪ್ ಮತ್ತು ೨೦೧೩ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಎಂಎಸ್.ಧೋನಿ ಸಾರಥ್ಯದಲ್ಲಿ ಗೆದ್ದಿದೆ . ಅಷ್ಟೂ ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡವನ್ನು ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟಿನಲ್ಲಿ ನಂ.೧ ಸ್ಥಾನಕ್ಕೇರಿಸಿದ ಮೊದಲ ನಾಯಕ ಎನ್ನುವ ಹೆಗ್ಗಳಿಕೆ ಕೂಡ ಮಹೇಂದ್ರ ಸಿಂಗ್ ಧೋನಿಗೆ ಸಲ್ಲುತ್ತದೆ.
ಹಾಗಾಗಿ, ಮೆಂಟರ್ ಮಹೇಂದ್ರ ಸಿಂಗ್ ಧೋನಿ ಮೇಲೆ ಅಪಾರ ಭರವಸೆಯನ್ನು ಇಟ್ಟುಕೊಳ್ಳಲಾಗಿದೆ. ಸುಮಾರು ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಟ್ವೆಂಟಿ-೨೦ ವಿಶ್ವಕಪ್ ನ್ನು ಟೀಂ ಇಂಡಿಯಾ ಗೆಲ್ಲಲೇ ಬೇಕು ಎನ್ನುವ ಉತ್ಸಾಹದಲ್ಲಿದ್ದರೂ ಕೊಹ್ಲಿ ತೆಗೆದುಕೊಂಡ ನಿರ್ಧಾರ ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ . ಈ ನಿಟ್ಟಿನಲ್ಲಿ ಧೋನಿ ಮಾರ್ಗದರ್ಶನ ಯಾವ ರೀತಿ ವರ್ಕೌಟ್ ಆಗಬಹುದು ಎನ್ನುವ ಕುತೂಹಲವೂ ಇದೆ. ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿದ ಬಗ್ಗೆಯೂ ಅಪಸ್ವರ ಎದ್ದಿದೆ. ಸದ್ಯ ಟೀಂ ಇಂಡಿಯಾದಲ್ಲಿ ಯಶಸ್ವಿ ಕೋಚ್ ರವಿಶಾಸ್ತ್ರಿ ಇರುವಾಗ ಧೋನಿಯ ಅವಶ್ಯಕತೆ ಇದೆಯೇ ? ಎನ್ನುವ ಪ್ರಶ್ನೆ ಎದ್ದರೂ ಇದೆಲ್ಲಕ್ಕೂ ಮಹೇಂದ್ರ ಸಿಂಗ್ ಧೋನಿ ತನ್ನ ಮಾರ್ಗದರ್ಶನದ ಮೂಲಕವೇ ಉತ್ತರ ನೀಡಬೇಕಾಗಿದೆ.

ಅಂದಹಾಗೆ, ಎಂಎಸ್ ಧೋನಿ ಟ್ವೆಂಟಿ -೨೦ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾದಲ್ಲಿ ಮಾರ್ಗದರ್ಶಕರಾಗಿರುವುದು ತುಂಬ ಉತ್ತಮವಾದ ವಿಷಯ. ಸದ್ಯಕ್ಕಿರುವ ಟೀಂ ಇಂಡಿಯಾ ಆಟಗಾರರು ಎಂಎಸ್ ಧೋನಿ ಕುರಿತಾಗಿ ದೊಡ್ಡಮಟ್ಟದ ಗೌರವವನ್ನು ಹೊಂದಿದ್ದಾರೆ. ಹೀಗಾಗಿ ಧೋನಿ ಮೆಂಟರ್ ಆಗಿ ತಂಡದಲ್ಲಿರುವುದು ಕೊಹ್ಲಿ ಪಡೆಗೆ ಆನೆ ಬಲ ಬಂದಂತಾಗಿದೆ. ಧೋನಿ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟ್ವೆಂಟಿ-೨೦ ವಿಶ್ವಕಪ್ ಗೆದ್ದರೆ ಕೊಹ್ಲಿ ಸ್ಮರಣೀಯ ರೀತಿಯಲ್ಲಿ ಟ್ವೆಂಟಿ-೨೦ ನಾಯಕತ್ವದಿಂದ ವಿರಾಮಿಸಲಿರುವರು. ಈ ಮೂಲಕ ಗುರು ಮಹೇಂದ್ರ ಸಿಂಗ್ ಧೋನಿ ತನ್ನ ಪ್ರೀತಿಯ ಶಿಷ್ಯ ವಿರಾಟ್ ಕೊಹ್ಲಿಗೆ ನೀಡುವ ಗೆಲುವಿನ ಉಡುಗೊರೆ ಕೂಡ ಆಗಬಹುದು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!