spot_img
Wednesday, January 22, 2025
spot_img

ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ (66 ವ) ಅ.12ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಬಹುಬೇಗನೆ ಸಿದ್ಧಿ ಪ್ರಸಿದ್ಧಿ ಪಡೆದ ಅವರು ‘ಯಕ್ಷರತ್ನ’ ಬಿರುದಿಗೆ ಭಾಜನರಾಗಿದ್ದರು. ಇವರಿಗೆ ಯಕ್ಷಗಾನ ಮನೆತನದ ಬಳುವಳಿ. ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳ ವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ. ಪದ್ಯಾಣ ತಿರುಮಲೇಶ್ವರ ಭಟ್- ಸಾವಿತ್ರಿ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರಿಗೆ ಮನೆಯೇ ಮೊದಲ ಯಕ್ಷಗಾನ ಪಾಠ ಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಹದಿನೈದರ ಹರೆಯದಲ್ಲೆ ಯಕ್ಷರಂಗ ಪ್ರವೇಶಿಸಿದರು. ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನ ಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸರಾಗ ಸಂಯೋಜನೆ ಮಾಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರು. 1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಇವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರನಾಡುಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ. ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಇವರು ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!