Saturday, May 11, 2024

ವಂಡ್ಸೆ ಗ್ರಾಮ ಪಂಚಾಯತ್‌ನ ಟಾಸ್ಕ್‌ ಪೋರ್ಸ್ ಸಮಿತಿ ಸಭೆ: ಕೋವಿಡ್ ತಡೆಗೆ ಗ್ರಾ.ಪಂ. ಮಟ್ಟದಲ್ಲಿ ಹಲವು ಮಹತ್ವದ ನಿರ್ಣಯ


ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್‌ನ ಟಾಸ್ಕ್‌ಪೋರ್ಸ್ ಸಮಿತಿ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೋವಿಡ್-19 ಮಾರ್ಗಸೂಚಿ ಹಾಗೂ ಕರೋನಾ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಚರ್ಚೆ ನಡೆಯಿತು.


ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತೆ ಪ್ರಯತ್ನಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್‌ನ ಸಮಯ ಹೆಚ್ಚಿಸಿ ಗರಿಷ್ಠ ಮಟ್ಟದಲ್ಲಿ ಟೆಸ್ಟ್ ಮಾಡಿಸುವುದು, ವಂಡ್ಸೆಯಲ್ಲಿ ಈಗ 8 ಪಾಸಿಟಿವ್ ಪ್ರಕರಣಗಳು ಇದ್ದು ಪ್ರಕರಣ ಇನ್ನೂ ಜಾಸ್ತಿಯಾದರೆ ವಂಡ್ಸೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ಹೋಂ ಐಸೊಲೇಶನ್ ಅವಶ್ಯಕತೆ ಇರುವವರಿಗೆ ಅಲ್ಲಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯರ್ನಿಹಣಾಧಿಕಾರಿಗಳ ಅನುಮತಿ ಪಡೆದು ಕಾರ್ಯೋನ್ಮುಖವಾಗುವುದು, ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನ ಮಾಡುವುದು, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹಾಗೂ ಆರಕ್ಷಕ ಸಿಬ್ಬಂದಿ ಅಗತ್ಯವಸ್ತುಗಳ ಖರೀಧಿಯ ವೇಳೆ ಭೇಟಿ ನೀಡಿ ನಿಯಮ ಉಲ್ಲಂಘನೆ ಆಗುತ್ತಿದ್ದರೆ ಕ್ರಮ ಕೈಗೊಳ್ಳುವುದು, ಹೊರ ಜಿಲ್ಲೆಯಿಂದ ಗ್ರಾಮಕ್ಕೆ ಬಂದವರನ್ನು ಗುರುತಿಸಿ ಅವರ ಆರೋಗ್ಯದ ಮೇಲೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ನಿಗಾ ಇಡುವುದು, ಪ್ರತಿ ವಾರ್ಡ್‌ಗೆ ಇಬ್ಬರು ಸ್ವಯಂ ಸೇವಕರ ನೇಮಿಸುವುದು, ಹೋಂ ಐಸೊಲೇಶನ್‌ನಲ್ಲಿರುವವರು, ಮಾರುಕಟ್ಟೆಗೆ ಅಗತ್ಯ ವಸ್ತು ಖರೀಧಿಗೆ ಬರಲು ಆಗದವರಿಗೆ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವುದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾನಿಗಳ ಮೂಲಕ ಆಹಾರ ಸಾಮಗ್ರಿ ಒದಗಿಸುವುದು, ಬಸ್ ಪ್ರಯಾಣಿಕರ ತಂಗುದಾಣಗಳಲ್ಲಿ ಅನಾಥರು, ಭಿಕ್ಷುಕರು ಕಂಡು ಬಂದರೆ ಅವರಿಗೆ ಪಂಚಾಯತಿ ವತಿಯಿಂದಲೇ ಊಟ ಒದಗಿಸುವುದು, ತಂದೆ ತಾಯಿಗಳಿಗಿಬ್ಬರಿಗೂ ಪಾಸಿಟಿವ್ ಬಂದು ಸಣ್ಣ ಮಕ್ಕಳು ಮಾತ್ರ ಇದ್ದರೆ ಅಂತಹ ಮಕ್ಕಳನ್ನು ಪೋಷಕರ ಆರೋಗ್ಯ ಸುಧರಿಸುವ ತನಕ ಕನ್ಯಾನದ ನಮ್ಮ ಭೂಮಿ ಸಂಸ್ಥೆಯಲ್ಲಿ ಇರಲು ವ್ಯವಸ್ಥೆ ಮಾಡಲಾಗಿದ್ದು ಈ ಬಗ್ಗೆ ಗಮನ ವಹಿಸುವುದು, ಹೊರ ಭಾಗದಿಂದ ಬಂದು ಉದ್ಯೋಗದ ಅವಶ್ಯಕತೆಯಲ್ಲಿರುವವರಿಗೆ ಉದ್ಯೋಗ ಖಾತರಿಯಲ್ಲಿ ನೊಂದಣಿ ಮಾಡಿಕೊಂಡು ಮರುದಿನದಿಂದಲೇ ಕೆಲಸ ನೀಡಲಾಗುವುದು, ಹೋಂ ಐಸೊಲೇಶನ್‌ನಲ್ಲಿರುವವರಿಗೆ ಪಂಚಾಯಿತಿ ವತಿಯಿಂದ ಪಲ್ಸ್ ಆಕ್ಸಿಮೀಟರ್ ಒದಗಿಸುವುದು, ಹೋಂ ಐಸೊಲೇಶನ್ ಅವಧಿ ಮುಗಿದ ಬಳಿಕ ಅದನ್ನು ಪಂಚಾಯತಿಗೆ ಮರಳಿಸುವುದು, ಗೃಹ ಆರೈಕೆಯಲ್ಲಿರುವವರ ಮೇಲೆ ಆಶಾ, ಆರೋಗ್ಯ ಹಾಗೂ ಪಂಚಾಯತ್ ತೀವ್ರ ನಿಗಾ ವಹಿಸಿ ವರದಿ ಪಡೆದುಕೊಳ್ಳುತ್ತಿರುವುದು, ಅವರ ಮನೆಯವರು ಇತರೊಂದಿಗೆ ಸಂಪರ್ಕದಲ್ಲಿರದಂತೆ ನೋಡಿಕೊಳ್ಳುವುದು ಮೊದಲಾದ ನಿರ್ಣಯಗಳನ್ನು ತಗೆದುಕೊಳ್ಳಲಾಯಿತು.


ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಆರಂಭಿಸಲಾಗಿದ್ದು ಅದರ ಸಂಖ್ಯೆ 9480878283 ಆಗಿದೆ. ಒಟ್ಟಾರೆಯಾಗಿ ವಂಡ್ಸೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮಗಳನ್ನು ತಗೆದುಕೊಳ್ಳಲು ತೀರ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಅವಿನಾಶ್, ಸದಸ್ಯರಾದ ಪ್ರಶಾಂತ ಪೂಜಾರಿ, ಸುಬ್ಬು, ಗೋವರ್ದನ ಜೋಗಿ, ಸುಶೀಲ, ಶಶಿಕಲಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರೂಪಾ ಗೋಪಿ, ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಸುಮ, ಎ.ಎನ್.ಎಂ ಪಾರ್ವತಿ ಪಟಗಾರ್, ಕೊಲ್ಲೂರು ಠಾಣೆಯ ಆರಕ್ಷಕ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!