Thursday, November 21, 2024

ಕೊರೊನಾ ಅಟ್ಟಹಾಸಕ್ಕೆ “ಐಪಿಎಲ್” ಬಲಿ

-ಜಗದೀಶಚಂದ್ರ ಅಂಚನ್ ಸೂಟರ್ ಪೇಟೆ
ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಮಹಾಮಾರಿಯ ಅಟ್ಟಹಾಸದ ನಡುವೆ ಆರಂಭಗೊಂಡ ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷೆಯ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ಇದೀಗ ರದ್ದಾಗಿದೆ. ಐಪಿಎಲ್ ಬಯೋಬಬಲ್‍ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ ) ಮಹತ್ವಾಕಾಂಕ್ಷೆಯ ಐಪಿಎಲ್ ಪಂದ್ಯಾಟವನ್ನು ಮೇ-4ರಂದು ಸಂಪೂರ್ಣವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ. ಮೇ -3ರಂದು ಕೆಕೆಆರ್ ತಂಡದ ಇಬ್ಬರು ಆಟಗಾರರು ಕೊರೊನಾ ವೈರಸ್‍ಗೆ ತುತ್ತಾದ ನಂತರ ಮರುದಿನ ಮತ್ತೆರಡು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬಿಸಿಸಿಐ ಈ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ತರುವ ವಿಷಯವಾದರೂ ಬಿಸಿಸಿಐ ಸಕಾಲಿಕ ನಿರ್ಧಾರವನ್ನು ಕೈಗೊಂಡು ಮುಂಬರುವ ಭಾರೀ ಸಂಕಷ್ಟಕ್ಕೆ ಬ್ರೇಕ್ ಹಾಕಿದೆ.


ಐಪಿಎಲ್ -14ನೇ ಆವೃತ್ತಿಯ ಪಂದ್ಯಾಟ ಕಳೆದ ತಿಂಗಳು ಏಪ್ರಿಲ್-9ರಂದು ಆರಂಭವಾಗಿತ್ತು. ಪಂದ್ಯಾಟ ಶುರುವಾದಾಗಿನಿಂದ ಸತತ 24 ದಿನಗಳಲ್ಲಿ 29 ಪಂದ್ಯಗಳು ಪೂರ್ಣಗೊಂಡಿವೆ. ಇನ್ನು ಫೈನಲ್ ಪಂದ್ಯವೂ ಸೇರಿದಂತೆ 31 ಪಂದ್ಯಗಳು ನಡೆಯಬೇಕಿತ್ತು. ಇದರ ನಡುವೆ ದಿಡೀರಾಗಿ ಪಂದ್ಯಾಟವನ್ನು ಬಿಸಿಸಿಐ ಮುಂದೂಡಲು ಮುಖ್ಯ ಕಾರಣ ಪ್ರಮುಖ ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿರುವುದು. ಇದಕ್ಕೂ ಮುನ್ನವೇ ಭಾರತದಲ್ಲಿನ ಬಯೋಬಬಲ್? ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆರ್‍ಸಿಬಿ ಆಟಗಾರರಾದ ಆಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಟೂರ್ನಿಯನ್ನು ತೊರೆಯು ಬೆದರಿಕೆಯೊಡ್ಡಿದ್ದರು. ಅಲ್ಲದೆ ರಾಜಸ್ಥಾನ್ ಆಟಗಾರರಾದ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ಆಂಡ್ರ್ಯೂ ಟೈ ಕೂಡ ಕೊರೊನಾ ಭೀತಿಯಿಂದ ಅರ್ಧದಲ್ಲೇ ಪಂದ್ಯಾಟದಿಂದ ಹಿಂದೆ ಸರಿದಿದ್ದರು. ಇದರ ಬೆನ್ನಲ್ಲೇ ಉಳಿದ ವಿದೇಶಿ ಆಟಗಾರರು ತವರಿಗೆ ಮರಳುವ ಸಿದ್ಧತೆಯಲ್ಲಿದ್ದರು.


11 ಆಟಗಾರರಿಗೆ ಸೋಂಕು :
ಈ ಬಾರಿಯ ಐಪಿಎಲ್? ಪಂದ್ಯಾಟದ ಆರಂಭದಿಂದಲೇ ಕೊರೊನಾ ಸೋಂಕಿನ ಭೀತಿ ಆವರಿಸಿತ್ತು . ಆದರೆ, ಬಿಸಿಸಿಐ ಇದಕ್ಕೆ ಬೇಕಾದ ಸಕಲ ಮುಂಜಾಗೃತೆ ತೆಗೆದುಕೊಂಡು ಐಪಿಎಲ್ ಪಂದ್ಯಾಟವನ್ನು ಆರಂಭಿಸಿತು . ಆದರೂ ಮೇ -3ರಂದು ಒಂದೇ ದಿನದಲ್ಲಿ ನಾಲ್ಕು ಆಟಗಾರರು ಸೋಂಕಿಗೆ ಒಳಗಾಗಿರುವುದು ಬಿಸಿಸಿಐಗೆ ದೊಡ್ಡ ತಲೆನೋವು ಆಗಿತ್ತು. ಪರಿಣಾಮ, ಕೊರೊನಾ ಸವಾಲಿನೊಂದಿಗೆ ಐಪಿಎಲ್ ಪಂದ್ಯಾಟವನ್ನು ಮುಂದುವರಿಸುವ ನಿರ್ಧಾರದಿಂದ ಬಿಸಿಸಿಐ ಹಿಂದೆ ಸರಿಯುವ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಐಪಿಎಲ್-14ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ 11 ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾ ಸೋಂಕಿಗೆ ಒಳಗಾಗಿದ್ದರೆ, ಅದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಅದರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿತು. ಈ ಮೂವರು ಆಟಗಾರರು ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಪಂದ್ಯಾಟದಲ್ಲಿ ತಮ್ಮ ಆಟ ಮುಂದುವರಿಸಿದ್ದರು.


ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನ್ರಿಕ್ ನೋಕಿಯಾ ಹಾಗೂ ಆರ್‍ಸಿಬಿ ತಂಡದ ಡೇನಿಯಲ್ ಸ್ಯಾಮ್ಸ್ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ಕೂಡ ಚೇತರಿಸಿಕೊಂಡು ಪಂದ್ಯಾಟದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಎಲ್ಲರನ್ನು ದಂಗು ಬಡಿಸಿತ್ತು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್? ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ , ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರಲ್ಲೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಇದರ ಮರುದಿನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಹಾಗೂ ಸನ್‍ರೈಸರ್ಸ್ ಹೈದರಾಬಾದ್ ತಂಡದ ವೃದ್ದಿಮಾನ್ ಸಾಹ ಸೋಂಕಿಗೆ ಒಳಗಾಗಿದ್ದು ಬಿಸಿಸಿಐ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಇದರ ನಡುವೆ ಮುಂಬೈ ಇಂಡಿಯನ್ಸ್ ಕೀಪಿಂಗ್ ಕೋಚ್ ಕಿರಣ್ ಮೋರೆ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಅಂತಿಮವಾಗಿ ಟೂರ್ನಿಯನ್ನು ಮುಂದೂಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತು.


ಐಪಿಎಲ್ ರದ್ದಾಗಲು ಅಸಲಿ ಕಾರಣ :
ಅಸಲಿಗೆ ಐಪಿಎಲ್ ರದ್ದಾಗಲು ಹಲವು ಕಾರಣಗಳು ಇವೆ. ಬಯೋಬಬಲ್ ಒಳಗೆ ಜಿಪಿಎಸ್ ವ್ಯವಸ್ಥೆ ಸರಿಯಿರಲಿಲ್ಲ. ಮುಖ್ಯವಾಗಿ ಬಯೋಬಬಲ್ ಒಳಗಿದ್ದವರು ಬಹಳಷ್ಟು ಬಾರಿ ಕೊವೀಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದರು. ಆಟಗಾರರಿಗೆ ಮತ್ತು ಮೈದಾನ ಸಿಬ್ಬಂದಿಗಳಿಗೆ ಪ್ರತ್ಯೇಕ ಬಯೋಬಬಲ್ ಇರಲಿಲ್ಲ .ಬಯೋಬಬಲ್ ದುರ್ಬಲವಾದ ಕಾರಣದಿಂದಲೇ ಕೊರೊನಾ ವೈರಲ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಮೇಲ್ನೋಟಕ್ಕೆ ಬಿಸಿಸಿಐ ಐಪಿಎಲ್ -14ನೇ ಆವೃತ್ತಿಯಲ್ಲಿ ತೆಗೆದುಕೊಂಡ ಕೆಲವೊಂದು ನಿರ್ಧಾರಗಳು ತಪ್ಪಾಗಿತ್ತು. ದೇಶ ಕೋವಿಡ್ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಸಿದ್ದೇ ದೊಡ್ಡ ತಪ್ಪು. ‘ಬಿಸಿಸಿಐ ‘ ಯ ದುಡುಕುತನವೇ ಈ ತರದ ಸಂಕಷ್ಟ ತಂದಿರುವುದಕ್ಕೆ ನಿದರ್ಶನವಾಗಿದೆ. ಐಪಿಎಲ್ ಆರಂಭಕ್ಕೆ ಮೊದಲೇ ಪಂದ್ಯಾಟವನ್ನು ಮುಂದೂಡುವಂತೆ ಬಿಸಿಸಿಐ ಗೆ ಹಲವರು ಸಲಹೆ ನೀಡಿದ್ದರು . ಆದರೆ , ಇವೆಲ್ಲವನ್ನು ಗಾಳಿಗೆ ತೂರಿದ ಬಿಸಿಸಿಐ ಐಪಿಎಲ್ ಪಂದ್ಯಾಟವನ್ನು ಆರಂಭಿಸಿ ಇದೀಗ ಅನಿವಾರ್ಯವಾಗಿ ಅರ್ಧದಲ್ಲೇ ಪಂದ್ಯಾಟವನ್ನು ನಿಲ್ಲಿಸುವಂತಾಗಿದೆ.


ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ :
ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ನಲ್ಲಿ ಭಾಗಿಯಾದ ಪ್ರತಿಯೊಬ್ಬ ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಉದ್ದೇಶದಿಂದಲೇ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಬಿಸಿಸಿಐ ಮುಂದೂಡಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟನೆ ನೀಡಿದೆ. ಅಧಿಕೃತ ಪ್ರಕಟಣೆ ಹೊರಡಿಸಿರುವ ಐಪಿಎಲ್ ಆಡಳಿತ ಮಂಡಳಿಯು, ಆಟಗಾರರು ಸೇರದಂತೆ ಐಪಿಎಲ್ ಭಾಗಿಯಾಗಿರುವ ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತತ್‍ಕ್ಷಣದಿಂದಲೇ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಸದ್ಯ ಬಿಸಿಸಿಐ ಈ ಬಾರಿಯ ಐಪಿಎಲ್ ಪಂದ್ಯಾಟವನ್ನು ರದ್ದು ಪಡಿಸಿದರೂ ಕೂಡ ಟೂರ್ನಿಯನ್ನು ಮತ್ತೆ ಪುನರಾರಂಭಿಸುವ ಬಗ್ಗೆಯೂ ಚಿಂತನೆಯನ್ನು ಕೂಡ ಸಂದರ್ಭದಲ್ಲಿ ನಡೆಸಿದೆ . ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ಮಹತ್ವದ ಟೂರ್ನಿಗಳು ಹಾಗೂ ಸರಣಿಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಉಳಿದ ಐಪಿಎಲ್ ಪಂದ್ಯಗಳನ್ನು ಹೇಗೆ ನಡೆಸುತ್ತದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.


ಬಿಸಿಸಿಐಗೆ ಭಾರೀ ನಷ್ಟ :
ಐಪಿಎಲ್ ರದ್ದತಿಯಿಂದ ಬಿಸಿಸಿಐಗೆ ಸುಮಾರು 2000 ಕೋಟಿಯಿಂದ 2500 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಪ್ರಸಾರ ಆದಾಯದಲ್ಲಿ ಭಾರೀ ನಷ್ಟವಾಗಲಿದೆ. ಕಳೆದ ಐಪಿಎಲ್ ಆವೃತ್ತಿಯಿಂದ ಪ್ರೇಕ್ಷಕರು ಇಲ್ಲದೆ ಖಾಲಿ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಬೋರ್ಡ್ ಮತ್ತು ಫ್ರಾಂಚೈಸಿಗಳಿಗೆ ಟಿಕೆಟ್ ಆದಾಯವೂ ನಷ್ಟವಾಗುತ್ತಿದೆ. ಸ್ಟಾರ್ ನೆಟ್ ವರ್ಕ್ ಐದು ವರ್ಷಗಳವರೆಗೆ ಐಪಿಎಲ್ ಪ್ರಸಾರಕ್ಕಾಗಿ 16,347 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಪ್ರತಿ ಐಪಿಎಲ್ ಪಂದ್ಯವೊಂದಕ್ಕೆ ಸುಮಾರು 54.5 ಕೋಟಿ ರೂಪಾಯಿ ಆದಾಯ ಬರುತ್ತದೆ. ಇದೀಗ 29 ಪಂದ್ಯಗಳಿಂದ 1580 ಕೋಟಿ ರೂಪಾಯಿಗಳನ್ನು ಮಾತ್ರ ಸ್ಟಾರ್ ನೆಟ್ವರ್ಕ್ನಿಂದ ಬಿಸಿಸಿಐ ಪಡೆಯಲಿದೆ. ಉಳಿದ 31 ಪಂದ್ಯಗಳ ನಡೆಯದಿದ್ದರೆ ಸುಮಾರು 1690 ಕೋಟಿ ನಷ್ಟವಾಗಲಿದೆ. ಅದೇ ರೀತಿ ಶೀರ್ಷಿಕೆ ಪ್ರಾಯೋಜಕರಿಂದ 440 ಕೋಟಿ ರೂಪಾಯಿಗಳನ್ನು ಪಡೆಯಬೇಕಿತ್ತು. ಇದೀಗ ಅರ್ಧದಲ್ಲೇ ಟೂರ್ನಿ ಮೊಟಕು ಗೊಂಡಿರುವುದರಿಂದ ಅರ್ಧ ಮೊತ್ತ ಮಾತ್ರ ಬಿಸಿಸಿಐಗೆ ಸಿಗಲಿದೆ. ಇವೆಲ್ಲವನ್ನೂ ಲೆಕ್ಕಹಾಕಿದರೂ ಕನಿಷ್ಠವೆಂದರೂ 2000ರಿಂದ 2200 ಕೋಟಿ ರೂಪಾಯಿ ಬಿಸಿಸಿಐಗೆ ನಷ್ಟವಾಗಲಿದೆ.

ಅಂಕಪಟ್ಟಿಯಲ್ಲಿ ಡೆಲ್ಲಿ ತಂಡಕ್ಕೆ ಅಗ್ರಸ್ಥಾನ :
ಐಪಿಎಲ್ ಪಂದ್ಯಾಟದಲ್ಲಿ ಎಲ್ಲಾ ತಂಡಗಳು ಕೂಡ ಮೊದಲ ಹಂತದ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಎರಡನೇ ಹಂತದ ಪಂದ್ಯಾವಳಿಯ ಮೊದಲ ಮುಖಾಮುಖಿ ಮೇ -2ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮಧ್ಯೆ ನಡೆದಿತ್ತು. ಉಳಿದ ತಂಡಗಳು ಲೀಗ್ ಹಂತದ ಭರ್ತಿ ಅರ್ಧ ಪಂದ್ಯಾವಳಿಯನ್ನು ಮುಗಿಸಿದೆ. ಈ ಹಂತದಲ್ಲಿ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ರಿಷಭ್ ಪಂತ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 8 ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋತು 6 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ 12 ಅಂಕಗಳನ್ನು ಗಳಿಸಿ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು . ಇನ್ನು ಟೂರ್ನಿ ರದ್ದಾಗುವ ಸಂದರ್ಭದಲ್ಲಿ ಎರಡನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಈ ಎರಡು ತಂಡಗಳು ಕೂಡ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳನ್ನು ಸಂಪಾದಿಸಿದ್ದು ರನ್‍ರೇಟ್‍ನಲ್ಲಿ ಧೋನಿ ಪಡೆ ಉತ್ತಮ ಸಾಧನೆ ತೋರಿದೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಮತ್ತೊಂದು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್. ಮುಂಬೈ ತಂಡ ಆಡಿದ 7 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಪಡೆದು 8 ಅಂಕ ಸಂಪಾದಿಸಿದೆ. ರಾಜಸ್ಥಾನ್ ರಾಯಲ್ಸ್ , ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಅನುಕ್ರಮವಾಗಿ 5 , 6 , 7ನೇ ಸ್ಥಾನದಲ್ಲಿದೆ.


ಈ ಬಾರಿಯ ಐಪಿಎಲ್‍ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದೂ ಆಡಿದ ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಗೆದ್ದಿದ್ದು 2 ಅಂಕವನ್ನು ಹೊಂದಿದೆ.


ಧವನ್ ಟಾಪ್ ಸ್ಕೋರರ್ :
ಐಪಿಎಲ್ ಟೂರ್ನಿಯ ಮೊದಲಾರ್ಧದ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚು ರನ್‍ಗಳಿಸಿದ ಆಟಗಾರರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ ಧವನ್ 8 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 380 ರನ್‍ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 7 ಪಂದ್ಯಗಳಲ್ಲಿ 331 ರನ್ ಗಳಿಸಿದ್ದಾರೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ಫಾಫ್ ಡುಪ್ಲೆಸಿಸ್ 320 ರನ್ ಗಳಿಸಿ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.


ಹರ್ಷಲ್ ಟಾಪ್ ವಿಕೆಟ್ ಟೇಕರ್ :
ಈ ಪಂದ್ಯಾಟದಲ್ಲಿ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 7 ಪಂದ್ಯಗಳಲ್ಲಿ 15.12ರ ಸರಾಸರಿಯಲ್ಲಿ 17 ವಿಕೆಟ್ ಪಡೆದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಸ್ ಮೊರಿಸ್ ತಲಾ 14 ವಿಕೆಟ್ ಪಡೆದು ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ .

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!