
ಕುಂದಾಪುರ: ಭಜನೆ ಭಗವಂತನ ಮೆಚ್ಚಿಸುವ ಸುಲಭ ಮಾರ್ಗ, ಅಂತಹ ಶಕ್ತಿ ಭಜನೆಗಿದೆ. ಅಂತಹ ಒಂದು ಭಜನೆ, ಒಂದೇ ದಿನದಲ್ಲಿ ಬೀಜಾಡಿ ಗೋಪಾಡಿ ಶ್ರೀ ರಾಮ ಭಜನಾ ಮಂದಿರದ ಭಜಕ, ಇಂಜಿನಿಯರ್ ಮಹೇಶ್ ಕುಂದರ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸಿಬಿಟ್ಟಿದ್ದಾರೆ. ಇವರ ನಾಲಗೆಯಿಂದ ಹೊರಹೊಮ್ಮಿದ ಭಜನೆಯೊಂದು ಸಾಮಾಜಿಕ ಜಾಲತಾಣದಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಇನ್ನೂ ಕೂಡಾ ಮುನ್ನುಗ್ಗುತ್ತಲೇ ಇದೆ. ಭಜನೆಯ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಒಂದು ಭಜನೆ ಇಷ್ಟೊಂದು ಕ್ಷೀಪ್ರ ಹಾಗೂ ವೇಗವಾಗಿ ಹರಿದಾಡುತ್ತಿರುವುದು ಸೋಜಿಗವನ್ನುಂಟು ಮಾಡುತ್ತಿದೆ.
ಬೀಜಾಡಿ ಗೋಪಾಡಿ ಶ್ರೀ ರಾಮ ಭಜನಾ ಮಂದಿರದ ಸದಸ್ಯ ಮಹೇಶ್ ಕುಂದರ್ ಅವರಲ್ಲಿ ದೈವದತ್ತವಾದ ಕಂಠಸಿರಿ ಇದೆ. ಒಂದೊಂದು ಭಜನೆಯನ್ನು ಕೂಡಾ ಅವರು ಅನುಭವಿಸಿ, ಆಧರಿಸಿ ಹಾಡುತ್ತಾರೆ. ಆ ಭಾವ ಭರಿತ ಭಜನೆಯಲ್ಲಿ ಭಗವಂತನ ಭವ್ಯತೆ-ದಿವ್ಯತೆಯನ್ನು ಕಾಣಬಹುದು. ಭಜನೆ ಎನ್ನುವ ಅಕ್ಷರ ರೂಪ ಭಜಕನ ಜಿಹ್ವೆಯಲ್ಲಿ ಸ್ಪಷ್ಟ ಸ್ವರೂಪ ಪಡೆದುಕೊಳ್ಳುತ್ತದೆ. ಸಾವಿರಾರು ಕಿವಿಗಳಿಗೆ ಅದು ಪ್ರಸಾರ ಹೊಂದುತ್ತದೆ. ಮಹೇಶ್ ಕುಂದರ್ ಹಾಡಿರುವ “ರಾ ಎಂದ ಮಾತ್ರದೊಳು” ಎಂಬ ಭಜನೆ ಭಜನಾಸಕ್ತರು ಮಾತ್ರವಲ್ಲ ಗಾನಸಕ್ತರ ಮನ ಗೆದ್ದಿದೆ. ಕಾರಣ ಅಲ್ಲಿ ಅಂತಹ ಅದ್ಬುತವಾದ ಆಕರ್ಷಣೀಯವಾದ ಅಂಶ ಅಡಗಿದೆ.
ಗಿಳಿಯಾರುವಿನಲ್ಲಿ ಮೇಹಂದಿ ಕಾರ್ಯಕ್ರಮವೊಂದರಲ್ಲಿ ನಡೆದ ಕುಣಿತ ಭಜನೆ ಕಾರ್ಯಕ್ರಮದ ಈ ಒಂದು ಸನ್ನಿವೇಶವನ್ನು ನಾಗರಾಜ ಕೋಟ ಮತ್ತು ನಾಗೇಶ ಕೋಟ ಚಿತ್ರೀಕರಿಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹವಾವನ್ನೇ ಸೃಷ್ಟಿ ಮಾಡಿತು.
ಮಹೇಶ್ ಕುಂದರ್ ಕರಾವಳಿ ಭಾಗದ ಪ್ರಸಿದ್ಧ ಭಜನಾ ತಂಡವಾದ ಬೀಜಾಡಿ ಗೋಪಾಡಿ ಶ್ರೀ ರಾಮ ಭಜನಾ ಮಂದಿರದ ಪ್ರತಿಭಾನ್ವಿತ ಸದಸ್ಯ. ಭಜನಾ ಕೇಸರಿ ಭಜನೆ ರಾಮಣ್ಣ ನಂತವರಿಂದ ಪ್ರಭಾವಿತರಾದ ಮಹೇಶ್ ಭಜನಾ ಮಂದಿರದ ಈಗಿನ ಗುರುಗಳಾದ ಭಜನಾ ರಂಗದ ಕಾಳಿಂಗ ನಾವುಡ ಖ್ಯಾತಿಯ ದಿನೇಶ್ ಸುವರ್ಣರ ಶಿಷ್ಯ. ಬಾಲ್ಯದಿಂದಲೇ ಭಜನೆಯಲ್ಲಿ ತೊಡಗಿಸಿಕೊಂಡಿರುವ ಮಹೇಶ್ ಕುಂದರ್ ಈಗ ಇಂಜನಿಯರ್ ಆಗಿದ್ದರೂ ಕೂಡ ಹೌಂದೇರಾಯನ ಓಲಗ, ಕೋಲಾಟ, ಕುಣಿತ ಭಜನೆಗಳಂತಹ ಕರಾವಳಿಯ ಸಾಂಪ್ರದಾಯಿಕ ಕಲೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು.
ದಿ|ಅಣ್ಣಪ್ಪ ಶ್ರೀಯಾನ್ ಮತ್ತು ಕುಸುಮ ದಂಪತಿಗಳ ನಾಲ್ಕನೆ ಪುತ್ರರಾದ ಮಹೇಶ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಉಡುಪಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಪಡುವಲ್ಲಿ, ಪ್ರೌಢಶಿಕ್ಷಣವನ್ನು ಕುಂದಾಪುರದ ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ವಿ.ಜಿ.ಎಸ್ ಕೋಟದಲ್ಲಿ ಮುಗಿಸಿ ಬಳಿಕ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಕಟ್ಟಡ ನಿರ್ಮಾಣದ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೂರಾರು ದಾಸರ ಕೀರ್ತನೆಗಳನ್ನು ಕಂಠಸ್ಥಾಯಿಯಾಗಿಸಿಕೊಂಡಿರುವ ಇವರು ಕೀರ್ತನೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಬಲ್ಲರು. ಭಜನೆಯ ಆದಿ, ಮಧ್ಯೆ, ಅಂತ್ಯದ ಸ್ಪಷ್ಟ ಜ್ಞಾನ ಹೊಂದಿರುವ ಇವರು ಭಜನೆಯನ್ನು ಸ್ಪಷ್ಟವಾಗಿ ಶ್ರೋತೃವಿಗೆ ಕಟ್ಟಿಕೊಡಬಲ್ಲರು.
ಭಜನಾ ಅಂತ್ಯಕ್ಷರಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು ಭಜನೆಯ ಭಾವರ್ಥದ ಜೊತೆಗೆ ಅಂಕಿತನಾಮಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿದ್ದಾರೆ. ಕರಾವಳಿ ಯುವಕ ಮಂಡಳಿಯ ಸಕ್ರಿಯ ಸದಸ್ಯರಾಗಿರುವ ಮಹೇಶ್ ಯುವಜನ ಮೇಳಗಳಲ್ಲಿ ಕರಾವಳಿಯ ಕೋಲಾಟ, ಹೌಂದೇರಾಯನ ಓಲಗಗಳ ಪ್ರದರ್ಶನ ನೀಡಿ ಬಹುಮಾನ ಪಡೆದಿದ್ದಾರೆ. ತಮಿಳಿನಲ್ಲಿ ಮಹೇಶ್ ಹಾಡಿದ ಅಯ್ಯಪ್ಪ ಸ್ವಾಮಿಯ “ಪಳ್ಳಿ ಕಟ್ಟಿ” ಭಜನೆಯು ಹಾಗೂ ತೆಲುಗಿನಲಿ ದಾಸರಾದ “ಅಣ್ಣಮಯ್ಯ” ರವರ ರಚಿತ ಬ್ರಹ್ಮಮೊಕ್ಕಟ್ಟೆ ಗೀತೆಯೂ ಕೂಡ ಜನ ಮನ್ನಣೆಗೊಳಿಸಿದೆ.
ಆಧುನಿಕತೆಯ ಅಲೆಯಲ್ಲಿ ಮೂಲ ಸಂಪ್ರದಾಯಗಳನ್ನು ಮರೆಯುತ್ತಿರುವ ಯುವಜನತೆಯ ನಡುವೆ ಮಹೇಶ್ ಮಾದರಿಯಾಗಿ ನಿಲ್ಲುತ್ತಾರೆ. ಇವರ ಅದ್ಬುತವಾದ ಕಂಠಸಿರಿ ಮುಂದೊಂದು ದಿನ ಗಾಯನ ಸಾಮ್ರಾಜ್ಯಕ್ಕೂ ವಿಸ್ತರಣೆಗೊಳ್ಳಲಿ. ಭಜನೆ ಇನ್ನಷ್ಟು ಜನಪ್ರಿಯತೆ ಪಡೆದುಕೊಳ್ಳಲಿ.
“ಇದೆಲ್ಲ ಶ್ರೀರಾಮನ ಮಹಿಮೆ. ನಮ್ಮ ನಿರೀಕ್ಷೆಗೂ ಮೀರಿದ ಯಶಸ್ಸು ಕಾರ್ಯಕ್ರಮಗಳಲ್ಲಿ ನಮಗೆ ಲಭಿಸುತ್ತದೆ. ನಮ್ಮ ಭಜನಾ ಮಂದಿರಕ್ಕೂ ಅಂತಹ ಭವ್ಯವಾದ ಇತಿಹಾಸವಿದೆ. ಭಜನೆ ರಾಮಣ್ಣನಂತಹ ಮೇರುಶಕ್ತಿಗಳು ಭಜಿಸಿದ ಹೆಗ್ಗಳಿಕೆ ಇದೆ. ದಿನೇಶ ಸುವರ್ಣರಂತಹ ಗುರುಗಳ ಮಾರ್ಗದರ್ಶನವಿದೆ. ಭಜನೆಯನ್ನು ಹೊಸತಲೆಮಾರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮಹತ್ತರವಾದ ಹೊಣೆಗಾರಿಕೆ ನಮ್ಮ ಮೇಲಿದೆ” -ಮಹೇಶ ಕುಂದರ್
(ಬರೆಹ: ನಾಗರಾಜ್ ವಂಡ್ಸೆ)
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ