spot_img
Thursday, September 10, 2026
spot_img

ಬಳ್ಕೂರು-ಕಂಡ್ಲೂರು ಸೇತುವೆ: ಹೊಸ ಸೇತುವೆ ಆಗುವ ತನಕ ಹಳೆಯ ಸೇತುವೆ ತಗೆಯಬಾರದು- ಸಾರ್ವಜನಿಕರ ಹಕ್ಕೋತ್ತಾಯ

ಕುಂದಾಪುರ: ಬಳ್ಕೂರು-ಕಂಡ್ಲೂರು ರಾಜ್ಯ ಹೆದ್ದಾರಿಯಲ್ಲಿರುವ ಮುಖ್ಯ ಸಂಪರ್ಕ ಸೇತುವೆ ಶಿಥಿಲಗೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಮಂಜೂರಾಗಿದ್ದು, ಈಗ ಇರುವ ಹಳೆ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಸೇತುವೆ ಮಾಡುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಹೊಸ ಸೇತುವೆ ಆಗುವ ತನಕ ಹಳೆಯ ಸೇತುವೆ ತಗೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಗುರುವಾರ ಕಂಡ್ಲೂರು ಭವಾನಿ ಸಂಜೀವ ಸಭಾಭವನದಲ್ಲಿ ಸಾರ್ವಜನಿಕ ಚಿಂತನ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು, ರೂ.57 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಡಿಪಿ‌ಆರ್ ಸಿದ್ಧವಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ಕೂಡಾ ನಡೆಯಲಿದೆ. ಈಗ ರಾಜ್ಯ ಹೆದ್ದಾರಿಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಶಿಥಿಲಗೊಂಡ ಸೇತುವೆಯನ್ನು ಒಡೆದು ಅಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಕೆ ಯೋಜನೆ ರೂಪಿಸಿದೆ. ಸೇತುವೆ ನಿರ್ಮಾಣವಾಗುವ ತನಕ ರಾಜ್ಯ ಹೆದ್ದಾರಿ ಬಂದ್ ಮಾಡುವುದು ಅವರ ಯೋಜನೆ. ದಿನಕ್ಕೆ ಸುಮಾರು 20ಸಾವಿರಕ್ಕೂ ಹೆಚ್ಚು ವಾಹನ ಸಂಚಾರ ಮಾಡುವ ಹೆದ್ದಾರಿಯನ್ನೇ ಸ್ತಗಿತ ಮಾಡುವುದು ಅವೈಜ್ಞಾನಿಕ ಮತ್ತು ಖಂಡನಾರ್ಹ. ಸೇತುವೆ ಶಿಥಿಲಗೊಂಡಿದ್ದು ನಿಜ, 2027-18ರಲ್ಲಿಯೇ ಪರಿಶೀಲನೆ ಮಾಡಿ ಸಮಿತಿ ವರದಿಯನ್ನೂ ನೀಡಿತು. ವರದಿ ಕೊಟ್ಟು 9 ವರ್ಷವಾಗಿದೆ. ಇತ್ತೀಚೆಗೆ ಶಾಸಕ ಗುರುರಾಜ ಗಂಟಿಹೊಳೆಯವರ ಪ್ರಯತ್ನದಿಂದಾಗಿ ಹೊಸ ಸೇತುವೆ ಮಂಜೂರಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಗೆ ಒಂಭತ್ತು ವರ್ಷಗಳಲ್ಲಿ ಇಲ್ಲದ ಆತುರ ಈಗ ಆರಂಭವಾಗಿದೆ. ಗಡಿಬಿಡಿಯಲ್ಲಿ ಟೆಂಡರ್ ಕರೆದು, ಹಳೆ ಸೇತುವೆ ನೆಲಸಮ ಮಾಡಿ ಹೊಸ ಸೇತುವೆ ನಿರ್ಮಾಣಕ್ಕೆ ಆತುರ ತೋರುತ್ತಿದ್ದಾರೆ. ಹೊಸ ಸೇತುವೆ ನಿರ್ಮಾಣವಾಗಲು ಮೂರ್‍ನಾಲ್ಕು ವರ್ಷಗಳು ಬೇಕಾಗುತ್ತದೆ. ಅಲ್ಲಿಯ ತನಕ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಸ್ತಗಿತ ಮಾಡಲು ಎಲ್ಲೂ ಅವಕಾಶವಿಲ್ಲ. ಈಗ ಇರುವ ಸೇತುವೆ ಸಂಚಾರಕ್ಕೆ ಸುರಕ್ಷಿತವಾಗಿಲ್ಲ ಎಂದು ಈಗ ಆತುರ ತೋರುವ ಅಧಿಕಾರಿಗಳು ವರದಿ ಬಂದು ಒಂಭತ್ತು ವರ್ಷಗಳ ತನಕ ಏನು ಮಾಡುತ್ತಿದ್ದರು? ಹೊಸ ಸೇತುವೆಯ ನಿರ್ಮಾಣ ಆಗುವ ತನಕ ಹಳೆ ಸೇತುವೆ ಉಳಿಸಿಕೊಳ್ಳುವ ಅವಕಾಶಗಳು ಇವೆ. ಸೂಕ್ತ ಭೂಸ್ವಾಧೀನ ಮಾಡಿಕೊಳ್ಳಲು ಅವಕಾಶವಿದೆ. ೫೮ ಲಕ್ಷ ರೂ.ಈಗ ಹಳೆ ಸೇತುವೆ ಕೆಡಹಲು ವ್ಯಯಿಸುವ ಇಲಾಖೆಗೆ ಭೂ ಸ್ವಾಧೀನ ಮಾಡಿಕೊಂಡು ಹಳೆ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಏನು ಸಮಸ್ಯೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಸೇತುವೆ ನಿರ್ಮಾಣದ ತನಕ ರಾಜ್ಯ ಹೆದ್ದಾರಿ ಸ್ತಗಿತವಾದರೆ ಜನಜೀವನ ಊಹಿಸಲಾಗದಷ್ಟು ತೊಂದರೆ ಆಗುತ್ತದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಅವರು ಸೂಚಿಸುವ ಅಂಪಾರು ನೇರಳಕಟ್ಟೆ ತಲ್ಲೂರು, ಕಂಡ್ಲೂರು ಸೌಕೂರು ಮಾವಿನಕಟ್ಟೆ, ಆತ್ತ ಶಂಕರನಾರಾಯಣ ಸೌಡ ಮಾರ್ಗ ಯಾವುದೂ ಕೂಡಾ ಸೂಕ್ತ ಪರ್ಯಾಯ ಮಾರ್ಗಗಳಲ್ಲ ಎಂದು ಹೇಳಿದ ಅವರು ಹಳೆ ಸೇತುವೆ ಒಡೆದು ಸಂಚಾರ ಸ್ತಗಿತ ಮಾಡಿದರೆ ಜನ ಖಂಡಿತ ರೊಚ್ಚಿಗೇಳುತ್ತಾರೆ. ಅದಕ್ಕಿಂತ ಮೊದಲು ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಮೇಲೆ ಒತ್ತಡ ತಂದು ಹಳೆ ಸೇತುವೆ ಉಳಿಸಿಕೊಂಡೆ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ, ಅವರು ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಹೋಗಿದೆ. ಶೀಘ್ರ ಇದು ರಾಷ್ಟ್ರೀಯ ಹೆದ್ದಾರಿ ಆಗುವ ಸಾಧ್ಯತೆಯೂ ಇದೆ ಎಂದರು.

ಹೋರಾಟ ಸಮಿತಿ ಪ್ರಮುಖರಾದ ಸದಾನಂದ ಬಳ್ಕೂರು ಮಾತನಾಡಿ, ಬಳ್ಕೂರು-ಕಂಡ್ಲೂರು ಸೇತುವೆ ಶಿಥಿಲಗೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದು ರಾಜ್ಯ ಹೆದ್ದಾರಿ. ಯಾವುದೇ ಕಾರಣಕ್ಕೂ ರಾಜ್ಯ ಹೆದ್ದಾರಿಯನ್ನು ಸೇತುವೆ ನಿರ್ಮಾಣವಾಗುವ ತನಕ ಸ್ತಗಿತ ಮಾಡುವುದು ಸೂಕ್ತವಲ್ಲ. ಇಲ್ಲಿ ಯಾವುದೇ ಪರ್ಯಾಯ ಮಾರ್ಗಗಳು ಸಮರ್ಪಕವಾಗಿಲ್ಲ. ಹಾಗಾಗಿ ಈಗ ಇರುವ ಹಳೆಯ ಸೇತುವೆಯನ್ನು ಉಳಿಸಿಕೊಂಡೇ ಹೊಸ ಸೇತುವೆಯನ್ನು ನಿರ್ಮಾಣ ಮಾಡಬೇಕು. ಇದು ಜನಜೀವನದ ಪ್ರಶ್ನೆ. ಬಳ್ಕೂರು-ಕಂಡ್ಲೂರು-ಅಂಪಾರು ಹೀಗೆ ಗ್ರಾಮಗಳು ಅವಿನಭಾವ ಸಂಬಂಧಹೊಂದಿದೆ. ಕೃಷಿ, ಸಹಕಾರ, ಹೈನೋದ್ಯಮ, ಶಿಕ್ಷಣ, ಆರೋಗ್ಯ ಪ್ರತಿಯೊಂದಕ್ಕೂ ಕೂಡಾ ಇದೇ ಮಾರ್ಗವೇ ಅನಿವಾರ್ಯ. ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುವ ಉದಾಹರಣೆ ಎಲ್ಲಿಯೂ ಇಲ್ಲ. ಒಂದು ವೇಳೆ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದರೆ ನಾವು ಖಂಡಿಸುತ್ತೇವೆ. ಹಳೆ ಸೇತುವೆಯ ಪಕ್ಕದಲ್ಲಿಯೇ ಹೊಸ ಸೇತುವೆ ಆಗಬೇಕು. ನಮ್ಮ ಬೇಡಿಕೆಗೆ ಇಲಾಖೆ ಸ್ಪಂದಿಸದೆ ಬೇಜಬ್ದಾರಿ ತೋರಿದರೆ ಖಂಡಿತ ನಾವು ವಿರೋಧಿಸುತ್ತೇವೆ. ಹಳೆ ಸೇತುವೆ ಕೆಡಹಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಪ್ರಮುಖರಾದ ವಿಕಾಸ್ ಹೆಗ್ಡೆ ಮಾತನಾಡಿ, ಸಂಘಟಿತವಾದ ಹೋರಾಟ ಇಲ್ಲಿ ಆಗಬೇಕು. ಪಕ್ಷಾತೀತವಾದ ಹೋರಾಟದ ಮೂಲಕ ಹಳೆ ಸೇತುವೆ ಉಳಿಸಿಕೊಂಡು ಹೊಸ ಸೇತುವೆ ಮಾಡಲು ಒತ್ತಡ ತರಬೇಕು. ಜನರ ಬೇಡಿಕೆ, ಹೋರಾಟದ ಮುಂದೆ ಯಾವ ಇಲಾಖೆಗಳು ಮೇಲಲ್ಲ. ಜನರ ಅಭಿಪ್ರಾಯಗಳಿಗೆ ಮನ್ನಣೆ ಕೊಡಲೇ ಬೇಕಾಗುತ್ತದೆ. ಸರಕಾರ ಕೂಡಾ ಟೆಂಡರ್ ಕರೆಯುವ ಮೊದಲು ಜನರ ಬೇಡಿಕೆಯನ್ನು ಪರಿಗಣಿಸಬೇಕು ಎಂದರು.

ಹೋರಾಟ ಸಮಿತಿಯ ಪ್ರಕಾಶ್ಚಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಸಂಬಂಧಪಟ್ಟ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವಿ ನೀಡುವ ಬಗ್ಗೆ ನಿರ್ಣಯಿಸಲಾಯಿತು.
ನಿಶ್ಚಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!