spot_img
Tuesday, March 10, 2026
spot_img

ಪಡಿತರ ಚೀಟಿ ನ್ಯಾಯಬೆಲೆ ಅಂಗಡಿವಾರು ಸಮಗ್ರ ಮಾಹಿತಿ ನೀಡಲು ಅಧಿಕಾರಿಗಳಿಗೆ ಎಚ್.ಹರಿಪ್ರಸಾದ್ ಶೆಟ್ಟಿ ಸೂಚನೆ

ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದತಿಯ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ತಾಲೂಕಿನ ಪ್ರತೀ ನ್ಯಾಯಬೆಲೆ ಅಂಗಡಿವಾರು ಪಡಿತರ ಚೀಟಿಯ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ನೀಡಬೇಕು. ಪ್ರತಿಯೊಬ್ಬರೂ ಕೂಡಾ ಸತ್ಯಾಸತ್ಯತೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಪ್ರಗತಿಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಕ್ಟೋಬರ್ ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಲ್ಲಿ ರೂ.7,90,00,000 (ಒಟ್ಟು 212,91,86,000) ಗೃಹ ಜ್ಯೋತಿ ಯೋಜನೆಯಲ್ಲಿ ರೂ.4,61,35,475 (ಒಟ್ಟು ರೂ.109,87,35,716) ಅನ್ನಭಾಗ್ಯ ಯೋಜನೆಯಲ್ಲಿ ರೂ.1,91,14,380 (ಒಟ್ಟು 48,0625,919) ಯುವನಿಧಿ (ಒಟ್ಟು 2,39,77,500), ಶಕ್ತಿ ಯೋಜನೆಯಲ್ಲಿ 3,12,63,050 (ಒಟ್ಟು 64,73,89,842) ಬಿಡುಗಡೆಯಾಗಿದೆ. ಪಂಚಗ್ಯಾರಂಟಿ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟು 17,55,12,905, ಈ ತನಕ ಒಟ್ಟು 437,99,14,977 ಬಿಡುಗಡೆಯಾಗಿದೆ ಎಂದು ಹೇಳಿದರು.

ಗಂಗೊಳ್ಳಿಗೆ ಬರುತ್ತಿದ್ದ ಕೆಎಸ್‍ಆರ್.ಟಿಸಿ ಬಸ್ಸಿನ ಚಾಲಕರನ್ನು ಬದಲಾವಣೆ ಮಾಡಲಾಗಿದೆ. ಬಸ್ಸಿನ ಬೇಡಿಕೆ ಇರುವ ಕಡೆಗಳಲ್ಲಿ ಮೊದಲು ಪರವಾನಿಗೆ ಇದ್ದರೆ ಬಸ್ ಓಡಿಸಲು ಕ್ರಮ ಕೈಗೊಳ್ಳಿ, ಪರವಾನಿಗೆ ಇಲ್ಲದಿದ್ದರೆ ರೂಟ್ ಸರ್ವೇ ಮಾಡಿ ಪರವಾನಿಗೆಗೆ ಪ್ರಯತ್ನ ಮಾಡಿ ಎಂದರು. ಬಡಾಕೆರೆ ಮಾರ್ಗಕ್ಕೆ ಈಗಾಗಲೇ ಪರವಾನಿಗೆ ದೊರಕಿದೆ. ಶೀಘ್ರ ಬಸ್ ಸಂಚಾರ ಮಾಡಲಿದೆ ಎಂದರು.

ಗ್ಯಾರಂಟಿ ಸಮಿತಿ ಸದಸ್ಯ ಜಹೀರ್ ಆಹಮ್ಮದ್ ಮಾತನಾಡಿ ಗಂಗೊಳ್ಳಿ ಭಾಗದಲ್ಲಿ ಸಂಚರಿಸುವ ಬಸ್‍ಗಳಿಗೆ ಸ್ಥಳೀಯ ಚಾಲಕರನ್ನೇ ನಿಯೋಜಿಸಬೇಕು, ಅವರಿಗೆ ಸ್ಥಳೀಯವಾದ ಮಾಹಿತಿ ಇರುತ್ತದೆ.ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಕೆಎಸ್‍ಆರ್.ಟಿಸಿ ಬಸ್‍ಗಳಿಗೆ ನಿಲುಗಡೆ ನೀಡಬೇಕು ಎಂದು ಹೇಳಿದರು.

ಅಭಿಷೇಕ್ ಪೂಜಾರಿ ಮಾತನಾಡಿ ಹೇರಿಕುದ್ರುವಿನಲ್ಲಿ ಎಲ್ಲಾ ಲೋಕಲ್ ಕೆಎಸ್‍ಆರ್.ಟಿಸಿ ಬಸ್‍ಗಳಿಗೂ ನಿಲುಗಡೆ ನೀಡಬೇಕು, ಈ ಬಗ್ಗೆ ಹಲವಾರು ಸಭೆಗಳಲ್ಲಿ ಹೇಳುತ್ತಾ ಬಂದಿದ್ದೇನೆ ಎಂದು ಹೇಳಿದರು.

ಗ್ಯಾರಂಟಿ ಸಮಿತಿ ಸದಸ್ಯ ಮಂಜು ಕೊಠಾರಿ ಮಾತನಾಡಿ, ನೂಜಾಡಿ ಮಾರ್ಗದಲ್ಲಿ ಕೆಎಸ್‍ಆರ್.ಟಿಸಿ ಬಸ್‍ಗೆ ಪರ್ಮಿಟ್ ಇದೆ. ಬಸ್ ಓಡುತ್ತಿಲ್ಲ. ನಾನು ಕಳೆದ ಎಂಟು ತಿಂಗಳಿಂದ ಈ ಬಗ್ಗೆ ಒತ್ತಾಯಿಸತ್ತಲೇ ಇದ್ದೇನೆ. ಈಗ ಸಾರ್ವಜನಿರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಮಾರ್ಗದಲ್ಲಿ ಬಸ್ ಓಡಿಸಬೇಕು ಎಂದರು.

ಮುಳ್ಳಿಕಟ್ಟೆ-ಬಾರಂದಡಿ-ಆಲೂರು ಮಾರ್ಗವಾಗಿ ಕೆಎಸ್‍ಆರ್.ಟಿಸಿ ಬಸ್ ಗೆ ಪರವಾನಿಗೆ ಇದೆಯಾ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ. ಪರವಾನಿಗೆ ಇದ್ದರೆ ಬಸ್ ಓಡಿಸಿ, ಪರವಾನಿಗೆ ಇಲ್ಲದಿದ್ದರೆ ಪರವಾನಿಗೆಗೆ ಮಾಡಿಸಿ ಎಂದು ಅಧ್ಯಕ್ಷರು ಡಿಪೋ ಅಧಿಕಾರಿಗಳಿಗೆ ಸೂಚಿಸಿದರು.
ಹೇರಿಕುದ್ರುವಿನಲ್ಲಿ ಅಧಿಕೃತ ಬಸ್ ನಿಲ್ದಾಣ ಎಂದು ಫಲಕ ಅಳವಡಿಸಿ ಎಂದು ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ 18 ಮಂದಿ ಮೃತ ಫಲಾನುಭವಿಗಳಿದ್ದು ಅವರ ವಾರಿಸುಧಾರರಿಗೆ ಹೆಸರಿಗೆ ಪಡಿತರ ಚೀಟಿಯನ್ನು ಮಾಡಿಸಬೇಕಾಗುತ್ತದೆ. ಅವರು ಮೃತಪಟ್ಟ ಬಳಿಕದ ಹಣ ವಾಪಾಸ್ಸಾಗುತ್ತದೆ ಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ವಸುಂಧರ ಹೆಗ್ಡೆ ಮಾತನಾಡಿ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಗಳಿವೆ. ತೊಂಭಟ್ಟು, ಕೊಡಬೈಲು ಭಾಗದಲ್ಲಿ ಇಂಥಹ ಪ್ರಕರಣಗಳಿವೆ. ಮರಣ ಹೊಂದಿದ ಕುಟುಂಬ ಯಜಮಾನಿಯ ಮಗಳು, ಅಥವಾ ಸೊಸೆಗೆ ಗೃಹಲಕ್ಷ್ಮೀ ಸಿಗುವಂತಾಗಬೇಕು ಎಂದರು.

ಗ್ಯಾರಂಟಿ ಸಮಿತಿ ಸದಸ್ಯ ಕೋಣಿ ನಾರಾಯಣ ಆಚಾರ್ ಮಾತನಾಡಿ ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಪೊರ್ಟಲ್‍ನಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದರು.

ಗೃಹಜ್ಯೋತಿ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಿತು. ಗೃಹಬಳಕೆ ಉದ್ದೇಶಕ್ಕೆ ವಿದ್ಯುತ್ ಬಳಕೆದಾರ ಮೃತ ಪಟ್ಟಾಗ ಅವರ ವಾರೀಸುದಾರರ ಹೆಸರಿಗೆ ಮಾಡುವಾಗ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹಾಗಾಗಿ ಅದೆಷ್ಟೋ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಮೃತ ಪಟ್ಟ ವ್ಯಕ್ತಿಗಳ ಹೆಸರಿನಲ್ಲಿಯೇ ಇರುತ್ತದೆ. ಅಕ್ರಮ ಸಕ್ರಮದ ಸ್ಥಳದಲ್ಲಿ ಮನೆಕಟ್ಟಿಕೊಂಡು ವಾಸಿಸುವ ವ್ಯಕ್ತಿಗೆ ವಿದ್ಯುತ್ ಸಂಪರ್ಕ ದೊರಕಿರುತ್ತದೆ. ಈಗ ಆತ ಮೃತಪಟ್ಟಿರುತ್ತಾನೆ. ವಿದ್ಯುತ್ ಸಂಪರ್ಕವನ್ನು ಆ ಮನೆಯ ವಾಸಿಸುವ ಇನ್ನೊಬ್ಬರ ಹೆಸರಿಗೆ ಮಾಡುವಾಗ ಆರ್,ಟಿ.ಸಿ ಮೊದಲಾದ ದಾಖಲಾತಿ ಕೇಳುವುದು ಕಂಡು ಬರುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಯಿತು.

ವಸುಂಧರ ಹೆಗ್ಡೆ ಹಾಗೂ ಗಣೇಶ ಕುಂಭಾಸಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದರು. ಜನರಿಗೆ ಅನುಕೂಲವಾಗುವಂತೆ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಗಣೇಶ ಕುಂಭಾಸಿ ಮಾತನಾಡಿ ಕೊರಗ ಕುಟುಂಬಗಳಲ್ಲಿ ಇಂಥಹ ಸಾಕಷ್ಟು ಪ್ರಕರಣಗಳಿವೆ. ಇದನ್ನು ಗ್ರಾಮ ಪಂಚಾಯತ್‍ಗಳು, ಅಧಿಕಾರಿಗಳು ಮುಂದಾಗಿ ನಿಂತು ಸರಿಪಡಿಸಬೇಕು ಎಂದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!