Sunday, September 8, 2024

‘ಹಿಗ್ಗು-ಅರಿವಿನ ಮಾಲೆ’ ಪುಸ್ತಕ ದತ್ತಿಗೆ ಪಂಜು ಗಂಗೊಳ್ಳಿ ಅವರ ಕುಂದಾಪ್ರ ಕನ್ನಡ ನಿಘಂಟು ಆಯ್ಕೆ

ಕುಂದಾಪುರ: ತಲ್ಲೂರಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿರುವ ಹಿಗ್ಗು-ಅರಿವಿನ ಮಾಲೆ ಪುಸ್ತಕ ದತ್ತಿಯ ಚೊಚ್ಚಲ ಅನುದಾನವನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ಕುಂದಾಪ್ರ ಕನ್ನಡ ನಿಘಂಟು ಎಂಬ ಬೃಹತ್ ಕುಂದಗನ್ನಡ ಪದಕೋಶಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಆಡಳಿತ ಟ್ರಸ್ಟಿ ಸುರೇಶ ತಲ್ಲೂರು ತಿಳಿಸಿದ್ದಾರೆ.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಕರಾವಳಿಯ ನೆಲ, ಜಲ, ಪರಿಸರ ಮತ್ತು ಬದುಕನ್ನು ಆರೋಗ್ಯಪೂರ್ಣವಾದ ಮನಸ್ಸುಗಳೊಂದಿಗೆ ಕಟ್ಟುವ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪುಟ್ಟ ಪ್ರಯತ್ನಗಳ ಸರಣೀಯೇ ಕರಾವಳಿ ಕಟ್ಟು. ಈ ಚಳುವಳಿಯ ಭಾಗವಾಗಿ ಈಗಾಗಲೇ ತಲ್ಲೂರು ನುಡಿಮಾಲೆ ದತ್ತಿನಿಧಿ ಉಪನ್ಯಾಸಗಳು ನಡೆದಿವೆ. ಕೊರೋನಾ ಕಾಲದಲ್ಲಿ ರಚಿಸಲಾಗಿರುವ ವೀಡಿಯೊ ಸರಣಿಗಳು ಚಾಲ್ತಿಯಲ್ಲಿವೆ. ಇದೀಗ ಹಿಗ್ಗು -ಅರಿವಿನ ಮಾಲೆ ಯೋಜನೆಯನ್ನು ರೂಪಿಸಲಾಗಿದ್ದು ಎರಡು ಲಕ್ಷ ರೂಪಾಯಿಗಳ ಪುಸ್ತಕ ಪ್ರಕಟಣೆ ದತ್ತಿಯನ್ನು ಕರಾವಳಿಯ ಅನನ್ಯ, ಅಪರೂಪದ ಮತ್ತು ಮೌಲಿಕವಾದ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಿರಿಸಲು ಟ್ರಸ್ಟ್ ನಿರ್ಧರಿಸಿದೆ ಎಂದರು.

ವೃತ್ತಿಪರ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಮುಂಬಯಿಯ ಬ್ಯುಸಿನೆಸ್ ಇಂಡಿಯಾ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿದ್ದಾರೆ. ಅವರು ಎರಡು ದಶಕಗಳ ಕಾಲ ಶ್ರಮಿಸಿ ಸಂಗ್ರಹಿಸಿ ಸಂಪಾದಿಸಿದ ಕುಂದಾಪ್ರ ಕನ್ನಡ ನಿಘಂಟು ಸುಮಾರು 10,000ಕ್ಕೂ ಮಿಕ್ಕಿ ಕುಂದಾಪ್ರ ಕನ್ನಡ ಪದಗಳ ಮತ್ತು 1700 ರಷ್ಟು ನುಡಿಗಟ್ಟುಗಳ ಅರ್ಥವಿವರಣೆ ನೀಡುತ್ತದೆ. ಜೊತೆಗೆ ಕುಂದಾಪ್ರ ಕನ್ನಡದ ರೀತಿ, ರಿವಾಜು, ಕಟ್ಟುಪಾಡು, ಆಚಾರವಿಚಾರಗಳನ್ನು ಒಳಗೊಂಡಿರುವ ವಿಶಿಷ್ಠ ಸಾಂಸ್ಕೃತಿಕ ಕೋಶವಾಗಿದೆ. ಸುಮಾರು 700 ಪುಟಗಳ ಈ ಶಬ್ದಕೋಶವನ್ನು ಕರಾವಳಿ ಕಟ್ಟುವ ಕೆಲಸದಲ್ಲಿ ಮಹತ್ವದ್ದೆನಿಸುವ ದಾಖಲೀಕರಣದ ಹೆಜ್ಜೆ ಎಂದು ಪರಿಭಾವಿಸುತ್ತದೆ ಎಂದರು.

ಉಡುಪಿಯ ಪ್ರೊಡಿಜಿ ಮುದ್ರಣ ಸಂಸ್ಥೆಯ ಪ್ರೊಡಿಜಿ ಪ್ರಕಾಶನದಿಂದ ಪ್ರಕಟಗೊಳ್ಳಲಿರುವ ಈ ನಿಘಂಟು, ಮುಂದಿನ ವರ್ಷದ ಆದಿಯಲ್ಲಿ ಪ್ರಕಟಗೊಳ್ಳಲಿದೆ ಎಂದು ಹೇಳಿದ ಅವರು 2008ರಲ್ಲಿ ಆರಂಭವಾದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವಿಶೇಷ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದು ಪ್ರಸ್ತುತ 35 ಮಕ್ಕಳು ಇದ್ದಾರೆ. 9 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಟ್ರಸ್ಟಿಗಳಾದ ರಾಜರಾಮ್ ತಲ್ಲೂರು, ಸದಾನಂದ ತಲ್ಲೂರು, ವಸಂತ ಶ್ಯಾನುಭಾಗ್, ಕಲಾವಿದ ಎಲ್.ಎನ್ ತಲ್ಲೂರು ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!