spot_img
Tuesday, March 24, 2026
spot_img

ಸಮಗ್ರ ಕೃಷಿಯಲ್ಲಿ ಯುವ ಸಾಹಸಿ| ಮಚ್ಚಟ್ಟು ಸೂರಿಕೊಡ್ಲು ರವಿ ಪೂಜಾರಿಯವರ ಯಶೋಗಾಥೆ

 


ಅಮಾಸೆಬೈಲು, ಸೆ.25: ಯುವ ಜನತೆ ಇವತ್ತು ಕೃಷಿ ಕ್ಷೇತ್ರಕ್ಕೆ ಬರುವುದು ಹೊಸ ಟ್ರೆಂಡ್ ಆಗಿದೆ. ಕೃಷಿಯಲ್ಲಿ ಇರುವ ಅವಕಾಶಗಳು ಮತ್ತು ಭವಿಷ್ಯದ ದೂರಗಾಮಿ ಯೋಚನೆ ಹೊಂದಿರುವವರಿಗೆ ಬದುಕಿನ ದಾರಿಯಾಗುತ್ತಿದೆ. ಅಮಾಸೆಬೈಲು ಸಮೀಪದ ಮಚ್ಚಟ್ಟು ಗ್ರಾಮದ ಸೂರಿಕೊಡ್ಲು ಎಂಬಲ್ಲಿ ರವಿ ಪೂಜಾರಿ ಎನ್ನುವ ಯುವ ಕೃಷಿಕನ ಕೃಷಿ ಯಶೋಗಾಥೆ ಮಾದರಿಯಂತಿದೆ.

ಕೃಷಿ ಕುಟುಂಬದ ರವಿ ಪೂಜಾರಿ ವಿದ್ಯಾಭ್ಯಾಸದ ಬಳಿಕ ಸೇವಾಕ್ಷೇತ್ರವನ್ನು ಆಯ್ದುಕೊಂಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾನಿರತರಾದರು.ಅಲ್ಲಿಂದ ಕೃಷಿಯ ಬಗ್ಗೆ ಇನ್ನಷ್ಟು ಪ್ರೇರೆಪಿತರಾಗಿ ಕೃಷಿ ಕಾರ್ಯಕ್ಕೆ ಒತ್ತು ನೀಡಿದರು. ನಂತರ ರಿಕ್ಷಾ ಖರೀದಿಸಿದರು. ಅದನ್ನು ವೃತ್ತಿಯನ್ನಾಗಿಸಿಕೊಂಡರು. ಇದರ ನಡುವೆಯೇ ತಾನೋಬ್ಬ ಮಾದರಿ ಕೃಷಿಕನಾಗುವ ಕನಸಿನಿಂದ ಅಡಿಕೆ, ತೆಂಗು, ಕಾಳುಮೆಣಸು, ತರಕಾರಿ ಹೀಗೆ ಕೃಷಿಯಲ್ಲಿ ತೊಡಗಿಸಿಕೊಂಡರು.

ಕೃಷಿಯಲ್ಲಿ ದೂರಗಾಮಿ ಯೋಚನೆಯನ್ನು ಹೊಂದಿರುವ ರವಿ ಪೂಜಾರಿ, ಅಡಿಕೆ ತೋಟವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಸಾಲು ಬರುವಂತೆ 8.5 ಅಡಿ ಅಂತರದಲ್ಲಿ ಇಂಟರ್ ಮಂಗಳ, ಮೋಹಿತ್ ನಗರ ತಳಿಯ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಹಿಂದಿನ ಸ್ಥಳೀಯ ತಳಿಯ ಅಡಿಕೆ ತೋಟದ ಜೊತೆಗೆ ಹೊಸ ತೋಟವೂ ಇವತ್ತು ಕಣ್ಮನ ಸಳೆಯುತ್ತಿದೆ. ಇವರ ತೋಟದ ವ್ಯವಸ್ಥಿತ ನಿರ್ವಹಣೆ ಮತ್ತು ಸಂರಕ್ಷಣೆಯಿಂದಾಗಿ ತೋಟ ಮತ್ತು ಫಸಲು ನೋಡಿದಾಗ ಗುಡ್ಡ ಪ್ರದೇಶದಲ್ಲಿ ಇಂತಹ ಸಂಪದ್ಭರಿತ ತೋಟ ಮಾಡಲು ಸಾಧ್ಯ ಎನ್ನುವುದನ್ನು ರವಿ ಪೂಜಾರಿ ಸಾಧಿಸಿ ತೋರಿಸಿದ್ದಾರೆ.

ಮಿಶ್ರ ಕೃಷಿ ಪದ್ದತಿ:
ರವಿ ಪೂಜಾರಿ ಏಕರೂಪ ಕೃಷಿ ಪದ್ದತಿಗೆ ಒತ್ತು ನೀಡಿಲ್ಲ. ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಹಳೆಯ ಅಡಿಕೆ ತೋಟದಲ್ಲಿ ಕಾಳು ಮೆಣಸು ಹಾಕಿದ್ದಾರೆ. ತೋಟದ ನಡುವೆ ಜೇನು ಪೆಟ್ಟಿಗೆ ಇಟ್ಟಿದ್ದಾರೆ. 50 ತೆಂಗಿನ ಮರಗಳು ಇವೆ. ಹೊಸತಾಗಿ ಗೇರು ಕೃಷಿಯನ್ನು ಆರಂಭಿಸಿದ್ದಾರೆ. ಕೃಷಿಗೆ ಪೂರಕವಾಗಿ ಹೈನುಗಾರಿಕೆಯೂ ಇದೆ. ಮಿಶ್ರತಳಿ ಹಸುಗಳನ್ನು ಸಾಕುತ್ತಿದ್ದಾರೆ. ಬೇಸಿಗೆಯಲ್ಲಿ ತರಕಾರಿ ಕೃಷಿ ಮಾಡುತ್ತಾರೆ. ಮುಂಗಾರು ಹಂಗಾಮಿನಲ್ಲಿ ಭತ್ತ ಬೇಸಾಯವನ್ನು ಮಾಡುತ್ತಾರೆ. ಅಲ್ಲಲ್ಲಿ ವೆನಿಲ್ಲಾ, ಪತ್ರೆ, ಮಾವು, ಪಪ್ಪಾಯಿಯೂ ಇದೆ.

ರವಿ ಪೂಜಾರಿಯವರದ್ದು ಸದಾ ವೃತ್ತಿ-ಪ್ರವೃತ್ತಿಯಲ್ಲಿ ಬ್ಯುಸಿ. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಗ್ರಾಹಕರ ಪ್ರೀತಿ ಸಂಪಾದಿಸಿದ್ದಾರೆ. ಹಾಗಾಗಿ ಯಾವಾಗಲೂ ಬ್ಯುಸಿ ಇರುತ್ತಾರೆ. ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಕೆಲವೊಂದು ರಾತ್ರಿ ಸಮಯದಲ್ಲಿ ಅನಾರೋಗ್ಯ ಪೀಡಿತರನ್ನು ತನ್ನ ರಿಕ್ಷಾದಲ್ಲಿ ಕುಂದಾಪುರದ ಆಸ್ಪತ್ರೆಗೆ ಕರೆತಂದಿದ್ದಾರೆ. ಕೃಷಿಯ ಬಗ್ಗೆ ನಿರಂತರ ಕಲಿಯುವ ಆಸಕ್ತಿ, ಕೃಷಿ ಸಂಬಂಧಿ ಪುಸ್ತಕಗಳ ಓದುವ ಹವ್ಯಾಸ, ಅನುಭವಿ ಕೃಷಿಕರ ಮಾರ್ಗದರ್ಶನ, ಕೃಷಿ ಮೇಳಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಅನುಭವ ಪಡೆದುಕೊಂಡಿದ್ದಾರೆ.

ಹೊಸ ಅಡಿಕೆ ತೋಟಗಳಿಗೆ ವೈಜ್ಞಾನಿಕ ರೀತಿಯಲ್ಲಿ ರೂಪುರೇಷೆ ತಯಾರಿ, ನೀರಾವರಿ ವಿಧಾನ ಅಳವಡಿಕೆ, ಹನಿ ನೀರಾವರಿ, ತುಂತುರು ನೀರಾವರಿ ವಿಧಾನಗಳ ಅಳವಡಿಕೆ, ಅಡಿಕೆ ಸಸಿಗಳ ತಯಾರಿ, ಅಡಿಕೆಗೆ ಸಸ್ಯ ಸಂರಕ್ಷಣ ವಿಧಾನಗಳ ಬಳಕೆ ಹೀಗೆ ಅನುಭವ ಹೊಂದಿದ್ದಾರೆ.
ಸುಧಾರಿತ ಅಡಿಕೆ ಸಸಿಗಳನ್ನು ಸರಿಯಾಗಿ ಆರೈಕೆ ಮಾಡಿದರೆ 3 ವರ್ಷಕ್ಕೆ ಇಳುವರಿ ಆರಂಭವಾಗುತ್ತದೆ ಎನ್ನುವುದನ್ನು ತನ್ನ ತೋಟದ ಮೂಲಕವೇ ಸಾಕ್ಷಿಕರೀಸುತ್ತಾರೆ. ಮರದ ಬೆಳವಣಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ನೀರು ನಿರ್ವಹಣೆ, ಸಸ್ಯ ಸಂರಕ್ಷಣೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ತೋಟಗಾರಿಕೆ ನಷ್ಟವಾಗದು ಎನ್ನುವುದು ಇವರ ಅಭಿಪ್ರಾಯ.

ನೀರಾವರಿಗೆ ಪ್ರಧಾನ ಆದ್ಯತೆ:
ತೋಟಕ್ಕೆ ನೀರು ನಿರ್ವಹಣೆ ಅಗತ್ಯವಾದ್ದರಿಂದ ಎರಡು ತೆರೆದ ಬಾವಿ ಇದ್ದರೂ ಕೂಡಾ ನೀರಿನ ಕೊರತೆಯಾಗಬಾರದು ಎನ್ನುವ ಕಾರಣದಿಂದ ಪರಿಸರದ ಏಳುಜನ ಸಹಭಾಗಿತ್ವದೊಂದಿಗೆ 4 ಕಿ.ಮೀ ದೂರದಿಂದ ಹೊಳೆಯ ನೀರನ್ನು ತೋಟಕ್ಕೆ ತರಿಸಲಾಗಿದೆ. ಒಂದು ಮರಕ್ಕೆ ವಾರಕ್ಕೆ 4 ಗಂಟೆ ನೀರು ಬೇಕಾಗುತ್ತದೆ ಎನ್ನುವ ರವಿ, ತೆರೆದ ಬಾವಿಯ ಮೇಲ್ಬಾಗದಲ್ಲಿ ವಿದ್ಯುತ್ ಬಲ್ಬ್ ಹಾಕಿ ಇಡುವ ಮೂಲಕ ತೆಂಗಿನ ಮರಕ್ಕೆ ಕಾಡುವ ದುಂಬಿಯ ನಿರ್ವಹಣೆ ಸಾಧ್ಯ ಎನ್ನುತ್ತಾರೆ.

ತನ್ನ ಕೃಷಿ ಆಸಕ್ತಿಗೆ ಪ್ರೇರಣೆ-ಸ್ಪೂರ್ತಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎನ್ನುವ ರವಿ, ಹಿಂದೆ ಪ್ರಗತಿಬಂಧು ತಂಡದಲ್ಲಿ ಇರುವಾಗ ಒಕ್ಕೂಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಗತಿಬಂಧು ಸ್ವಸಹಾಯ ಸಂಘದ ಮೂಲಕ ತೋಟದ ಅಭಿವೃದ್ದಿಯಲ್ಲಿ ಶ್ರಮ ವಿನಿಮಯದ ಮೂಲಕ ಯಶ ಕಂಡಿದ್ದಾರೆ. ಪ್ರಗತಿನಿಧಿಯ ಮೂಲಕ ಯೋಜನೆಯ ಸಹಕಾರವೂ ಸಿಕ್ಕಿದೆ, ನಮಗೆ ಕೃಷಿಯ ಬಗ್ಗೆ ಇನ್ನಷ್ಟು ಉತ್ತೇಜನ ನೀಡುತ್ತಿರುವ ಕೃಷಿ ಅಧಿಕಾರಿ ಚೇತನ್ ಕುಮಾರ್, ಸಕಾಲಕ್ಕೆ ಮಾರ್ಗದರ್ಶನ ನೀಡುತ್ತಿರುವ ವಲಯ ಮೇಲ್ವಿಚಾರಕ ದೀಪಕ್ ಅವರ ಸಹಕಾರವೂ ಅಮೂಲ್ಯವಾದುದು. ಹಾಗು ಮನೆಯವರ ಸಹಕಾರ, ಬೆಂಬಲದಿಂದ ಯಶಸ್ಸು ಸಾಧ್ಯವಾಗುತ್ತಿದೆ ಎನ್ನುತ್ತಾರೆ.ಕುಗ್ರಾಮದಲ್ಲಿ ಸದ್ದಿಲ್ಲದೆ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ರವಿ ಪೂಜಾರಿ ಯುವ ಕೃಷಿಕರಿಗೆ ಮಾದರಿಯಾಗಿ ಬೆಳೆಯುತ್ತಿದ್ದಾರೆ.

ತೋಟದಲ್ಲಿ ಬಸಿಗಾಲುವೆ ನಿರ್ಮಾಣ:
ರವಿ ಪೂಜಾರಿಯವರ ಹೊಸ ತೋಟದಲ್ಲಿ ಮಳೆಗಾಲದಲ್ಲಿ ನೀರು ತುಂಬಿರುವ ಪ್ರದೇಶವಾಗಿತ್ತಂತೆ. ಇಲ್ಲಿ ತೋಟ ಸಾಧ್ಯವಿಲ್ಲ ಎಂದು ಎಷ್ಟು ಜನ ಹೇಳಿದ್ದರಂತೆ. ಆದರೆ ರವಿ ಸವಾಲಾಗಿ ಸ್ವೀಕರಿಸಿ, ಪ್ರತೀ ಎರಡು ಸಾಲಿಗೆ ಒಂದು ಆಳವಾದ ಬಸಿಗಾಲುವೆ ನಿರ್ಮಿಸಿದ್ದಾರೆ. ಮಳೆಗಾಲದಲ್ಲಿ ನೀರು ಇಳಿದು ಹೋಗುತ್ತದೆ. ಬಸಿಗಾಲುವೆ ಇರುವುದರಿಂದ ಅಡಿಕೆ ಮರದ ಬೇರುಗಳು ಹೊರಮುಖಕ್ಕೆ ಬರುತ್ತವೆ. ಬೇರುಗಳಿಗೆ ಗಾಳಿ ಬೆಳಕು ಸಿಗುತ್ತದೆ. ಮರದ ಬೆಳವಣಿಗೆಗೂ ಪೂರಕವಾಗುತ್ತದೆ. ಮಳೆಗಾಲದಲ್ಲಿ ನೀರು ಸಂಪೂರ್ಣ ಬಸಿದು ಹೋಗುತ್ತದೆ.

ಬಾಗವತಿಕೆಗೂ ಸೈ:
ರವಿ ಪೂಜಾರಿ ಹವ್ಯಾಸಿ ಭಾಗವತ. ಶಾಸ್ತ್ರೀಯವಾಗಿ ಭಾಗವತಿಗೆ ಅಭ್ಯಾಸ ಮಾಡಿದ್ದಾರೆ. ಒಳ್ಳೆಯ ಕಂಠವೂ ಇದೆ. ಪೌರಾಣಿಕ ಪ್ರಸಂಗಗಳ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. ಸಾಕಷ್ಟು ವೇದಿಕೆಗಳಲ್ಲಿ ಭಾಗವತಿಕೆ ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ. ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿದ್ದಾರೆ.
ರವಿ ಪೂಜಾರಿ ಅವರ ದೂರವಾಣಿ ಸಂಖ್ಯೆ: 9632665301


ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಯುವಕರು ಕೃಷಿಯಲ್ಲಿ ತೋಡಗಿಸಿಕೊಳ್ಳುತ್ತಿರುವುದು ಬಹಳ ಸಂತೋಷದ ವಿಚಾರ. ರವಿಯವರು ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರಾಗಿ ಅಲ್ಲಿಂದ ಕೃಷಿಯಲ್ಲಿ ಪ್ರೇರಣೆಗೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ನಮ್ಮ ಯೋಜನೆಯ ತರಬೇತಿ ಹಾಗೂ ಇತರ ಪ್ರಗತಿಪರ ಕೃಷಿಕರಿಂದ ಮಾಹಿತಿಯನ್ನು ಪಡೆದು ತಾವೇ ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಯಶಸ್ಸು ಕಾಣುತ್ತಿದ್ದಾರೆ ‘                                                -ಚೇತನಕುಮಾರ್, ತಾ|ಕೃಷಿ ಅಧಿಕಾರಿ , ಧ,ಗ್ರಾ ಯೋಜನೆ


“ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಲ್ಲಿ ಅಧಿಕ ಲಾಭ ಪಡೆಯಬಹುದು. ಯೋಜನೆ ಕೂಡಾ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದೆ. ಕೃಷಿಕರ ಅಭಿವೃದ್ದಿ, ಪ್ರಗತಿಗೆ ಸೂಕ್ತ ಸಹಕಾರ ನೀಡುತ್ತಿದ್ದೇವೆ”
-ದೀಪಕ್, ಅಮಾಸೆಬೈಲು ವಲಯ ಮೇಲ್ವಿಚಾರಕರು.

(ಲೇಖನ-ನಾಗರಾಜ್ ವಂಡ್ಸೆ)

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!