Thursday, November 21, 2024

ಕನ್ಯಾನ: ಸಾರ್ವಜನಿಕ ರಸ್ತೆ ಅತಿಕ್ರಮಣ, ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ತೆರವು

 

ರಸ್ತೆಗೆ ಅಡ್ಡ ಕಂದಕ ತೋಡಿ ಬಂದ್ ಮಾಡಿರುವುದು.
ರಸ್ತೆಗೆ ಅಡ್ಡ ಕಂದಕ ತೋಡಿ ಬಂದ್ ಮಾಡಿರುವುದು.


ಕುಂದಾಪುರ, ಸೆ.11: ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯಿಂದ ತೋಟಬೈಲು, ಗಾಣಿಗರಕೇರಿಗೆ ಹೋಗುವ ಅನಾದಿ ಕಾಲದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿ, ಬಂದ್ ಮಾಡಿದ್ದರು. ಆ ಭಾಗದ ಸಾರ್ವಜನಿಕರು ಸಹಾಯಕ ಆಯುಕ್ತರಿಗೆ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಬಂದ್ ಮಾಡಿರುವ ಬಗ್ಗೆ ದೂರು ನೀಡಿರುವುದರಿಂದ ಸೆ.11 ರಂದು ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ಬಂದ್ ಮಾಡಲಾದ ರಸ್ತೆಯನ್ನು ತೆರವುಗೊಳಿಸಿ, ಸಾರ್ವಜನಿಕ ಸಂಪರ್ಕಕ್ಕೆ ಮುಕ್ತಗೊಳಿಸಲಾಯಿತು.

ತೋಟಬೈಲು ಪ್ರದೇಶ, ಗಾಣಿಗರಕೇರಿ, ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನರು, ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಮುಖ್ಯರಸ್ತೆಗೆ ಬರಬೇಕು. ಹಟ್ಟಿಯಂಡಿ ಗ್ರಾಮ ಪಂಚಾಯತ್ 14ನೇ ಹಣಕಾಸಿನಲ್ಲಿ ಇತ್ತೀಚೆಗೆ ರಸ್ತೆಯನ್ನು ಅಭಿವೃದ್ದಿ ಪಡಿಸಿತ್ತು. ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ರಸ್ತೆಯಿಂದ ತೋಟಬೈಲು ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಜಾಗದ ನಕ್ಷೆಯಲ್ಲಿ ಸ್ಪಷ್ಟವಾಗಿ ನಮೊದಿಸಿದರೂ ಕೂಡಾ ಪಕ್ಕದ ಸ್ಥಳದವರು ರಸ್ತೆಯ ಸಂಪರ್ಕವನ್ನು ಎರಡು ಕಡೆಗಳಿಂದ ಬಂದ್ ಮಾಡಿ, ಅತಿಕ್ರಮಿಸಿಕೊಂಡಿದ್ದರು. ಪಂಚಾಯತ್ ಹಾಗೂ ಸಂಬಂಧಪಟ್ಟವರು ಸಂಪರ್ಕ ರಸ್ತೆಯನ್ನು ಸಂಪರ್ಕಕ್ಕೆ ಮುಕ್ತಗೊಳಿಸುವಂತೆ ಎಚ್ಚರಿಸಿದರೂ ಕೂಡಾ ರಸ್ತೆಯ ಮುಕ್ತಗೊಳಿಸದೇ ಇರುವುದರಿಂದ ಇಂದು ಬೆಳಿಗ್ಗೆ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು, ಪಂಚಾಯತ್ ಮಾಜಿ ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರ ಮೂಲಕ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ನಿರೀಕ್ಷಕರಾದ ರಾಘವೇಂದ್ರ ಡಿ ಅವರು ಕನ್ಯಾನ ಗ್ರಾಮದ ತೋಟಬೈಲು ಭಾಗದ ಸಾರ್ವಜನಿಕರು ಈ ಬಗ್ಗೆ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದು, ಇಂದು ಸ್ಥಳ ಪರಿಶೀಲನೆ ಮಾಡಿದಾಗ ಉರ್ಜಿತದಲ್ಲಿರುವ ರಸ್ತೆಯನ್ನು ಬಂದ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರಸ್ತೆಯನ್ನು ಅಲ್ಲಲ್ಲಿ ಟ್ರಂಚ್ ಮಾಡಿ, ಮರದ ತುಂಡುಗಳನ್ನು ಅಡ್ಡ ಹಾಕಲಾಗಿದೆ. ಹಲವಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಸಾರ್ವಜನಿಕರ ಮೂಲಕ ತೆರವು ಮಾಡಿದ್ದೇವೆ. ಈ ಜಾಗವೂ ಕೂಡಾ ದರ್ಖಾಸ್ತು ಆಗಿದ್ದು ಅಕ್ರಮ ಸಕ್ರಮ ಮಂಜೂರಾತಿಯ ನಕ್ಷೆಯಲ್ಲಿ ರಸ್ತೆಯನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಈ ರಸ್ತೆಯನ್ನು ಬಂದ್ ಮಾಡಲು ಅವಕಾಶ ಇರುವುದಿಲ್ಲ. ಮುಂದೆ ಇದು ಪುನರಾವರ್ತಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ, ಮಾಜಿ ಗ್ರಾ.ಪಂ ಸದಸ್ಯರಾದ ಸಂತೋಷ ಶೆಟ್ಟಿ ತೋಟಬೈಲು, ಕನ್ಯಾನ ಗ್ರಾಮ ಕರಣಿಕರಾದ ಮಹೇಶ, ಕಟ್‍ಬೇಲ್ತೂರು ಗ್ರಾಮಕರಣಿಕರಾದ ಸೋಮಪ್ಪ ಹಾಗೂ ಗ್ರಾಮ ಸಹಾಯಕರು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!