Thursday, November 21, 2024

ನಿರುಪಯೂಕ್ತ ವಸ್ತುಗಳಿಂದ ಉಪಯೂಕ್ತ ಪರಿಕರ ತಯಾರಿ| ಅಚ್ಛರಿ ಮೂಡಿಸುವ ಕುಂಭಾಶಿ ಮಾರುತಿ ರಾಮಚಂದ್ರ ಆಚಾರ್ಯರ ಚಿತ್ತ ಚಮತ್ಕಾರ

 

ಆಚಾರ್ಯರು ನಿರ್ಮಿಸಿರುವ ವಾಷಿಂಗ್ ಮೆಷಿನ್
ಆಚಾರ್ಯರು ನಿರ್ಮಿಸಿರುವ ವಾಷಿಂಗ್ ಮೆಷಿನ್
ಆಚಾರ್ಯರೇ ನಿರ್ಮಿಸಿರುವ ಶ್ರುತಿ ಪೆಟ್ಟಿಗೆ
ಆಚಾರ್ಯರೇ ನಿರ್ಮಿಸಿರುವ ಶ್ರುತಿ ಪೆಟ್ಟಿಗೆ

ನಿರ್ಮಿಸಿರುವ ವಸ್ತುಗಳೊಂದಿಗೆ ಆಚಾರ್ಯರು (ಹಳೆಯ ಪೋಟೋ)
ನಿರ್ಮಿಸಿರುವ ವಸ್ತುಗಳೊಂದಿಗೆ ಆಚಾರ್ಯರು               (ಹಳೆಯ ಪೋಟೋ)

ಸಾಧಿಸುವ ಛಲ, ಅಂತರ್ಗತವಾದ ಪ್ರತಿಭೆ, ವೈಜ್ಞಾನಿಕ ಮನೋದೃಷ್ಟಿ ಇದ್ದರೆ ವಿಶೇಷವಾದುದನ್ನು ಸುಲಭವಾಗಿ ಇರುವ ಇತಿಮಿತಿಯ ಒಳಗೆ ರೂಪಿಸಬಹುದು ಎನ್ನುವುದಕ್ಕೆ ಕುಂದಾಪುರ ತಾಲೂಕು ಕುಂಭಾಶಿಯ ಕಾಡಿನಕೆರೆ ಮಾರುತಿ ರಾಮಚಂದ್ರ ಆಚಾರ್ಯರೇ ಸಾಕ್ಷಿ.

ಒಂದು ಕಾಲದಲ್ಲಿ ಭಜನೆ ಎಂದರೆ ಮಾರುತಿ ರಾಮಚಂದ್ರ ಆಚಾರ್ಯರು ಬಹಳಷ್ಟು ಜನಪ್ರಿಯ. ಅವರು ಕುಟುಂಬವೇ ಭಜನೆಯಲ್ಲಿ ಪಳಗಿದೆ. ಬೇರೆ ಬೇರೆ ಕಡೆಗಳಲ್ಲಿ ಭಜನೆ ಕಾರ್ಯಕ್ರಮ ನೀಡಿ ಭಕ್ತಿಪ್ರಸಾರ ಮಾಡಿದ ಭಜಕ. ಆದರೆ ಇತ್ತೀಚೆಗೆ ಕಾಡಿದ ಅನಾರೋಗ್ಯ ಮೊದಲಿನಂತೆ ಭಜನೆ ಕಾರ್ಯಕ್ರಮ ನೀಡಲು ಆಗುತ್ತಿಲ್ಲವಾದರೂ ಸಾಧಕ ಆಚಾರ್ಯರು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಹೊಸ ಹೊಸತುಗಳನ್ನು ನಿರುಪಯೂಕ್ತ ವಸ್ತುಗಳ ಮೂಲಕ ತಯಾರಿಸಿ ಕಸದಿಂದ ರಸ ಎನ್ನುವ ಕಲ್ಪನೆಗೆ ಭಾಷ್ಯ ಬರೆದಿದ್ದಾರೆ.

ಆಚಾರ್ಯರ ಕಲ್ಪನೆ ಮತ್ತು ಆಲೋಚನೆಯಿಂದ ಸಾಂಪ್ರಾದಾಯಕ ಹಾಗೂ ವೈಜ್ಞಾನಿಕ ಆವಿಷ್ಕಾರಗಳು ಪಡಿಮೂಡಿವೆ. ವೈಜ್ಞಾನಿಕತೆಯ ಸಿದ್ಧಾಂತದ ತಳಹದಿಯಲ್ಲಿ ಇವರ ಯೋಚನಾ ಲಹರಿಗೆ ಬಟ್ಟೆ ತೊಳೆಯುವ ಯಂತ್ರ, ಹತ್ತಿ ಬಿಡಿಸುವ ಯಂತ್ರ, ಟೂ ಇನ್ ಒನ್ ಶ್ರುತಿ ಪೆಟ್ಟಿಗೆ, ವಿವಿಧ ಸಂಗೀತ ವಾದ್ಯಗಳು, ತಾಳವಾದ್ಯಗಳು, ಕೃಷಿ ಪರಿಕರಗಳು, ಗಾಳಿ ಶಕ್ತಿಯಿಂದ ಕಾರ್ಯನಿರ್ವಹಿಸುವ ಆಟಿಕೆಗಳು, ಅನ್ನ ಬಸಿಯುವ ಮುಚ್ಚಳ, ಒಂದೇ ವಸ್ತುವಿನಿಂದ ಮೂರ್ನಾಲ್ಕು ಕೆಲಸಗಳನ್ನು ಮಾಡಬಹುದಾದ ವಸ್ತುಗಳನ್ನು ತಯಾರಿಸಿದ್ದಾರೆ. ಇವರು ತನ್ನದೇಯಾದ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ವಸ್ತುಗಳ ಸಂಖ್ಯೆ 150ಕ್ಕೂ ದಾಟಿವೆ.
ಸಂಗೀತ ಸಾಧನಗಳು:
ನಿರುಪಯೂಕ್ತ ಎಂದು ಬಿಸಾಡುವ ವಸ್ತುಗಳನ್ನೇ ಬಳಸಿ ಕೆಲವೊಂದು ಸಂಗೀತವಾದನಗಳನ್ನು, ತಾಳ ವಾದ್ಯಗಳನ್ನು ಇವರೇ ರಚಿಸಿದ್ದಾರೆ. ಇವರ ಕಲ್ಪನೆಯ ಶ್ರುತಿ ಪೆಟ್ಟಿಗೆ ಮೂರು ಕೆಲಸಗಳನ್ನು ನಿರ್ವಹಿಸುತ್ತದೆ. ಹೀಗೆ ತಾಳ-ತಂಬೂರಿ, ಗಿಟಾರ್, ಜಲತಾಳ, ತೊಡೆಯಲ್ಲಿ ತಟ್ಟುವ ತಾಳ, ಕೈ ಗೆಜ್ಜೆ ಹೀಗೆ ಹಲವಾರು ಸಂಗೀತ ವಾದ್ಯಗಳನ್ನು ನಿರ್ಮಿಸಿದ್ದಾರೆ. ಮರ, ಗೆರಟೆಯನ್ನು ಬಳಸಿ ಅತ್ಯಂತ ನಾಜೂಕಾಗಿ ನಾರದ ಪಾತ್ರಗಳಲ್ಲಿ ಬಳಸುವ ತಂಬೂರಿಯನ್ನು ಸಿದ್ಧ ಪಡಿಸಿದ್ದಾರೆ.

ಕೃಷಿ ಪರಿಕರಗಳ ನಿರ್ಮಾಣ:
ಮರದ ಕೆಲಸ ಬಲ್ಲ ಆಚಾರ್ಯರು ಮರದ ಮೂಲಕ ಹಲವು ಕಲಾತ್ಮಕ ವಿನ್ಯಾಸಗಳನ್ನು ನಿರ್ಮಿಸಿದ್ದಾರೆ. 3ನೇ ತರಗತಿಯ ಓದುವ ಸಂದರ್ಭದಲ್ಲಿ ಇವರ ಕರಚಮತ್ಕಾರದಲ್ಲಿ ಅರಳಿದ ಪುಟ್ಟ ಕಾಷ್ಠ ಕೆತ್ತನೆ ಈಗಲೂ ಅವರ ಬಳಿ ಇದೆ. ಅಂದರೆ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಬಾಲ್ಯದಿಂದ ಶೋಧ ಪ್ರವೃತ್ತಿ ಇವರಲ್ಲಿ ಹುಟ್ಟಿಕೊಂಡಿತ್ತು. ನೇಗಿಲು, ಗೋರಿ, ನೀರೆತ್ತುವ ದೊಟ್ಟಿ, ಸಂಬಳಿಕೆ, ಅವಲಕ್ಕಿ ಒರಳು, ತಾಂಬೂಲ ಪೆಟ್ಟಿಗೆ, ಧ್ವನಿ ಪೆಟ್ಟಿಗೆ, ಸಾಂಬಾರು ಪೆಟ್ಟಿಗೆ, ಉಪ್ಪಿನ ಮರಿಗೆ, ಹೀಗೆ ನೂರಾರು.
ತಂತ್ರಜ್ಞಾನದ ಜೊತೆ ಸರಸ:
ತಂತ್ರಜ್ಞಾನಕ್ಕೆ ಸವಾಲು ಎನ್ನುವಂತೆ ಇವರು ಬಟ್ಟೆ ಒಗೆಯುವ ಬ್ರಷ್, ಸೈಕಲ್ ರಿಮ್ ಬಳಸಿಕೊಂಡು ವಾಷಿಂಗ್ ಮೆಷಿನ್ ತಯಾರಿಸಿ ಬಳಸುತ್ತಿದ್ದಾರೆ. ಸೈಕಲ್ ರಿಮ್ ಒಳಗೆ ಎಕ್ಸ್ ಆಕಾರದಲ್ಲಿ ವಾಷಿಂಗ್ ಬ್ರ್ರಷ್ ಅಂಟಿಸಿ, ಮೋಟಾರ್ ಅಳವಡಿಸಿ, ಅದು ತಿರುಗುವಾಗ ಇತ್ತ ಸೋಪು ಉಜ್ಜಿದ ಬಟ್ಟೆ ನೀಡಿದರೆ ಸ್ವಚ್ಛವಾಗುತ್ತದೆ.ಇದು ಅವರದ್ದೇ ಕಲ್ಪನೆ. ಈ ಮಾದರಿಯನ್ನು ಅವರು ಬಳಸುತ್ತಿದ್ದಾರೆ. ವಿದ್ಯುತ್ ಇಲ್ಲದ ಸಂದರ್ಭ ಮನೆಯೊಳಗೆ ಬೆಳಕು ಮೂಡಿಸಲು ಕೂಡಾ ವೇಸ್ಟ್ ಬಿಸ್ಲರಿ ಬಾಟೆಲಿ ಬಳಸಿ ಒಂದು ಮಾದರಿ ಸಿದ್ಧ ಪಡಿಸಿದ್ದಾರೆ. ನಿರುಪಯೂಕ್ತ ಸೈಕಲ್ ಬಳಸಿ ವ್ಯಾಯಾಮ ಸೈಕಲ್, ಮರದಿಂದಲೇ ತಯಾರಿಸಲಾದ ಕಾಲಿಗೆ ಮಸಜ್ ಮಾಡುವ ಸಾಧನ, ಇಲಿ ಹಿಡಿಯುವ ಸಾಧನ, ಉಜಾಲ ಡಬ್ಬದಿಂದ ಸ್ವೀಚ್ ಬೋರ್ಡ್, ಸರಳವಾದ ಕೈಗಾಡಿ, ನೀರು ಶುದ್ದೀಕರಿಸುವ ಮಾದರಿ, ಗುಬ್ಬಿ ಗೂಡಿನ ಮಾದರಿ ಹೀಗೆ ಹಲವಾರು.

ಕಮ್ಮಾರಿಕೆಯಲ್ಲೂ ಕೈಯಾಡಿಸಿರುವ ಇವರು, ಕಳೆ ತೆಗೆಯುವ ಕತ್ತಿ, ಉದ್ದನೇಯ ಕತ್ತಿಗಳು, ಇಲಿ ಹಿಡಿಯುವ ಪೆಟ್ಟಿಗೆ, ಮಾವಿನ ಕಾಯಿ ಕೊಯ್ಯುವ ಕೊಕ್ಕೆ ಇನ್ನೂ ಮುಂತಾದ ಸರಳ ನಮೂನೆಗಳನ್ನು ಆವಿಷ್ಕರಿಸಿದ್ದಾರೆ.


“ನನ್ನ ಖುಷಿಗಾಗಿ, ಯೋಚನಾ  ಸಾಮರ್ಥ್ಯಕ್ಕೆ ತಕ್ಕಂತೆ ಮಾಡಿದ್ದೇನೆ. ಮಾರುಕಟ್ಟೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾಡಿಲ್ಲ. ಈಗ ಆರೋಗ್ಯದ ಸಮಸ್ಯೆಯಿಂದ ಭಜನೆಗೆ ಹೋಗಲು ಆಗುತ್ತಿಲ್ಲ. ಆಗ ಭಜನೆಗೆ ಪೂರಕವಾದ ಸಂಗೀತ ವಾದ್ಯಗಳ ಸಮಸ್ಯೆ ಕಾಡಿದಾಗ ನಾನೇ ತಯಾರಿಸಿಕೊಳ್ಳಲು ಮುಂದಾದೆ. ಇದು ಮನಸ್ಸಿಗೆ ಖುಷಿ ಕೊಟ್ಟಿದೆ” -ಮಾರುತಿ ರಾಮಚಂದ್ರ ಆಚಾರ್ಯ.


1956ರಲ್ಲಿ ರಾಮಚಂದ್ರ ಆಚಾರ್ಯ ಮತ್ತು ಜಾನಕಿ ಆಚಾರ್ಯರ ಪುತ್ರರಾಗಿ ಭಟ್ಕಳದಲ್ಲಿ ಜನಿಸಿದ ಇವರು, 3ನೇ ತರಗತಿ ತನಕ ನಾವುಂದ ಬಡಾಕೆರೆಯಲ್ಲಿ ಪಡೆದರು. ಉದ್ಯೋಗ ಅರಸಿ ಮುಂಬಯಿಗೆ ತೆರಳಿ ಅಲ್ಲಿ ಫ್ಲೈವುಡ್  ವರ್ಕ್ಸ್ ನಲ್ಲಿ  20 ವರ್ಷ ಕೆಲಸ ಮಾಡಿದರು. ನಂತರ ಊರಿಗೆ ಮರಳಿದ ಅವರು ಕುಂಭಾಶಿಯಲ್ಲಿ ದ್ದು ತಮ್ಮ ಸಂಸಾರದ್ದೇ ಭಜನಾ ತಂಡ ರೂಪಿಸಿದರು. ಸುಶ್ರಾವ್ಯವಾದ ಕಂಠಸಿರಿ ಹೊಂದಿರುವ ಇವರು ದಾಸರ ಕೀರ್ತನೆಗಳನ್ನು ಅದ್ಭುತವಾಗಿ ಹಾಡಬಲ್ಲರು. ನೂರಾರು ಭಜನೆಗಳು ಇವರ ಕಂಠಸ್ಥಾಯಿಯಾಗಿವೆ. ಪತ್ನಿ ಸವಿತಾ ಆಚಾರ್ಯ ಕೂಡಾ ಸುಶ್ರಾವ್ಯವಾಗಿ ಭಜನೆಯನ್ನು ಹೇಳಬಲ್ಲರು. ಪುತ್ರರಾದ ಲೋಕೇಶ, ವಿಶ್ವೇಶ ತಂದೆಯ ಕೌಶಲ್ಯದ ಜೊತೆ ತಮ್ಮದೇಯಾದ ಸೃಷ್ಟಿಶೀಲತೆಯನ್ನು ಅನಾವರಣಿಸಬಲ್ಲರು. ಪುತ್ರಿ ವಿದ್ಯಾಶ್ರೀ ಭರವಸೆಯ ಸಂಗೀತ ಪ್ರತಿಭೆ. ತಂದೆಯ ಬಗ್ಗೆ ಮಕ್ಕಳಿಗೆ ಅತೀವ ಹೆಮ್ಮೆ.

ಮಾರುತಿ ರಾಮಚಂದ್ರ ಆಚಾರ್ಯರ ಕೌಶಲ್ಯತೆ ಅನಾವರಣ ಇನ್ನೂ ಕೂಡಾ ಸಾರ್ವಜನಿಕವಾಗಿ ಪ್ರದರ್ಶನವಾಗಿಲ್ಲ. ಇವರ ಸೃಷ್ಟಿ-ಪ್ರತಿಸೃಷ್ಟಿಯ ಮಾದರಿಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನವಾದರೆ ಇವರ ಸುಪ್ತ ಪ್ರತಿಭೆ ಪ್ರಕಾಶಮಾನವಾಗಬಲ್ಲದು. ಆ ಮೂಲಕ ಇವರ ಕರಚಮತ್ಕಾರವನ್ನು ಗುರುತಿಸುವ, ಗೌರವಿಸುವ ಕಾರ್ಯ ಆಗಬೇಕಾಗಿದೆ.

♦ನಾಗರಾಜ್ ವಂಡ್ಸೆ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!