spot_img
Sunday, February 15, 2026
spot_img

ಅವೈಜ್ಞಾನಿಕ ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) ಅವೈಜ್ಞಾನಿಕವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಹಾಗೂ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಮೀನುಗಾರಿಕೆ ಹಾಗೂ ಮೀನುಗಾರರನ್ನು ಉಳಿಸುವ ಕಾರ್ಯ ಮಾಡಬೇಕು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿದ್ದು, ಅವೈಜ್ಞಾನಿಕ ಮೀನುಗಾರಿಕೆ ನಡೆಸುವುದರಿಂದ ನಾಳೆ ಸಮಸ್ಯೆಯಾಗುತ್ತದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮತ್ಸ್ಯಕ್ಷಾಮ ಎದುರಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ತ್ರಾಸಿಯ ಕಡಲ ತೀರದಲ್ಲಿ ಅವೈಜ್ಞಾನಿಕ ಲೈಟ್ ಫಿಶಿಂಗ್ (ಬೆಳಕು ಮೀನುಗಾರಿಕೆ), ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅವೈಜ್ಞಾನಿಕವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಬಗ್ಗೆ ಕ್ರಮಕೈಗೊಳ್ಳಲು ಮೀನುಗಾರರು ನೀಡಿರುವ ಗಡುವು ಮುಗಿಯುವುದರ ಒಳಗೆ ಕ್ರಮಕೈಗೊಳ್ಳಬೇಕು. ಸರಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಮೀನುಗಾರರ ಬಂಧುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಲಾಜಿಲ್ಲದೆ ಮೀನುಗಾರರ ಜೊತೆ ಸೇರಿ ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೇಡಿಕೆಯನ್ನು ಸರಕಾರ, ಜಿಲ್ಲಾಡಳಿತ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಸರಕಾರದ ಆದೇಶ ಇಲ್ಲದೆ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿರುವುದನ್ನು ಈಗಾಗಲೇ ಸಚಿವರು ಹಾಗೂ ಸರಕಾರದ ಗಮನಕ್ಕೆ ತರಲಾಗಿದೆ. ಸೀಮೆ‌ಎಣ್ಣೆ ಸಬ್ಸಿಡಿ ಹೆಚ್ಚಳ ಮಾಡುವ ಬಗ್ಗೆ ಬಜೆಟ್ ಮುಂಚಿತವಾಗಿ ಮುಖ್ಯಮಂತ್ರಿ ಮತ್ತು ಸಚಿವರು ಒಟ್ಟಿಗೆ ಇದ್ದಾಗ ಮನವಿ ಮಾಡಿಕೊಳ್ಳಲಾಗುವುದು. ಸಾಂಪ್ರದಾಯಿಕ ಮೀನುಗಾರರಿಗೆ ಆಗುತ್ತಿರುವ ಅನ್ಯಾಯ ಹಾಗೂ ನೋವನ್ನು ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ ಹಾಗೂ ಮೀನುಗಾರರ ರಕ್ಷಣೆಗೆ ನಿಲ್ಲುತ್ತೇವೆ ಎಂದು ಹೇಳಿದರು.

ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಉತ್ತರ ಕನ್ನಡ ಜಿಲ್ಲಾ ಒಕ್ಕೂಟದ ಸೋಮನಾಥ ಮೊಗೇರ ಮಾತನಾಡಿ, ಅಧಿಕಾರಿಗಳು ಮೀನುಗಾರರ ಕಷ್ಟ ಅರಿಯದೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಮೀನುಗಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಮೀನುಗಾರರ ಮನೆಗೆ ಭೇಟಿ ಅವರ ಜೀವನವನ್ನು ನೋಡಬೇಕು. ರಾಜ್ಯ ಉಚ್ಛ ನ್ಯಾಯಾಲಯದ ಮತ್ತು ಸರಕಾರದ ಆದೇಶವನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮನೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಮಾತನಾಡಿ, ಹೀಗೆ ಮುಂದುವರಿದರೆ ಮೀನುಗಾರರು ಮನೆಯಲ್ಲೇ ಉಳಿದುಕೊಳ್ಳುವ ದಿನಗಳು ದೂರ ಉಳಿದಿಲ್ಲ. ಸರಕಾರ ಮತ್ತು ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ವಸಂತ ಸುವರ್ಣ, ಒಕ್ಕೂಟದ ಗೌರವ ಸಲಹೆಗಾರ ನವೀನಚಂದ್ರ ಉಪ್ಪುಂದ ಮತ್ತು ಮದನ್ ಕುಮಾರ್ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಮಾತನಾಡಿ, ಕಾನೂನು ಪ್ರಕಾರ ಅಗತ್ಯ ಕ್ರಮವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿಪಡಿಸುವ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಚಿಸಲಾದ ಟಾಸ್ಕ್‌ಫೋರ್ಸ್ ಸಮಿತಿ ವರದಿ ನೀಡಿದೆ. ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸಿದವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದರು.

ಮೀನುಗಾರ ಮುಖಂಡರಾದ ಅಶ್ವಥ ಕಾಂಚನ್ ಮಂಗಳೂರು, ಕೃಷ್ಣ ಮುರ್ಡೇಶ್ವರ, ಬಲೀಂದ್ರ ಶಿರೂರು, ಅಜೀಜ್ ಗಂಗೊಳ್ಳಿ, ಸುರೇಶ ಖಾರ್ವಿ ಮರವಂತೆ, ವೆಂಕಟರಮಣ ಖಾರ್ವಿ ಉಪ್ಪುಂದ, ರಾಮ ಖಾರ್ವಿ, ಪ್ರವೀಣ ಕುಮಟಾ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಹಾಗೂ ಮೂರು ಜಿಲ್ಲೆಗಳ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪದಾಧಿಕಾರಿಗಳು, ಮೀನುಗಾರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ಧಯ್ಯ, ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈ‌ಎಸ್‌ಪಿ ಬೆಳ್ಳಿಯಪ್ಪ, ಪೊಲೀಸ್ ವೃತ್ತ ನಿರೀಕ್ಷಕರಾದ ಸವಿತ್ರತೇಜ, ಜಯರಾಮ ಗೌಡ, ಸಹಾಯಕ ನಿರ್ದೇಶಕರಾದ ಅಂಜನಾದೇವಿ, ಸುಮಲತಾ, ದಿವಾಕರ ಖಾರ್ವಿ ಉಪಸ್ಥಿತರಿದ್ದರು.

ಕೆಲಕಾಲ ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದು ಪ್ರತಿಭಟನೆ ನಡೆಸಿದ ಮೀನುಗಾರರು ನ್ಯಾಯಕ್ಕಾಗಿ ಆಗ್ರಹಿಸಿದರು. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಸಾವಿರಕ್ಕೂ ಮಿಕ್ಕಿ ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗಂಗೊಳ್ಳಿ, ಮರವಂತೆ, ಉಪ್ಪುಂದ ಭಾಗದ ನಾಡದೋಣಿ ಮೀನುಗಾರರು ನೂರಾರು ನಾಡದೋಣಿಯಲ್ಲಿ ಬಂದು ತ್ರಾಸಿ ಕಡಲ ತೀರದಲ್ಲಿ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!