spot_img
Sunday, February 15, 2026
spot_img

ಕೋಟ: ಉಡುಪ-ಹಂದೆ ಪ್ರಶಸ್ತಿಗೆ ಆಯ್ಕೆ

ಜನಪ್ರತಿನಿಧಿ ವಾರ್ತೆ (ಕೋಟ) ಐವತ್ತರ ಸಂಭ್ರಮದ ಸುವರ್ಣ ಪರ್ವವನ್ನು ಆಚರಿಸುತ್ತಿರುವ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ, ಲೇಖಕರೂ, ಯಕ್ಷಗಾನ ನಾಟಕ ಕಲಾವಿದರೂ ಆಗಿರುವ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆಯವರ ಹೆಸರಿನ 2025 ರ ಸಾಲಿನ ಉಡುಪ-ಹಂದೆ ಪ್ರಶಸ್ತಿಗೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟೀಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಭಾಜನರಾಗಿದ್ದಾರೆ.

ಕುಂದಾಪುರ ತಾಲೂಕಿನ ನಾಗೂರಿನ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರು, ತಂದೆ ವೆಂಕಟರಮಣ ಗಾಣಿಗರಿಂದ ಬಳುವಳಿಯಾಗಿ ಬಂದ ಯಕ್ಷ ಸಂಪತ್ತನ್ನು ವಿಸ್ತರಿಸಿಕೊಳ್ಳುವಲ್ಲಿ ಡಾ. ಶಿವರಾಮ ಕಾರಂತರ ನಿರ್ದೇಶನದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ, ಗುರು ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರ ಗರಡಿಯಲ್ಲಿ ಪಳಗಿ, ಯಕ್ಷಾನದ ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಾಧನೆಗೈದವರು. ಡಾ. ಶಿವರಾಮ ಕಾರಂತರ ಯಕ್ಷ ಬ್ಯಾಲೆ ತಂಡದ ಮೂಲಕ ರಷ್ಯ, ಲಂಡನ್, ಪ್ರಾನ್ಸ್, ಕುವೈತ್ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದವರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಾಕುಂತಲ ನೃತ್ಯನಾಟಕಕ್ಕೆ ಯಕ್ಷ ನೃತ್ಯವನ್ನು ನಿರ್ದೇಶಿಸದವರು. ಅಮೃತೇಶ್ವರಿ ಮೇಳದಲ್ಲಿ ನರಸಿಂಹ ದಾಸರ ಸಹಚರ್ಯದಿಂದ ಪ್ರಭಾವಿತರಾಗಿ ದಾಸ ಪರಂಪರೆಯೊಂದಿಗೆ ಸ್ವಂತಿಕೆಯನ್ನು ಮೆರೆದವರು. ಮಾರಣಕಟ್ಟೆ, ಕಮಲಶಿಲೆ, ಮಂದರ್ತಿ, ಸಾಲಿಗ್ರಾಮ, ಶಿರಸಿ, ಸೌಕೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳಲ್ಲಿ ಸೈ ಎನಿಸಿಕೊಂಡವರು.

ಮೂಲತಃ ಉತ್ತರ ಕನ್ನಡದ ಧಾರೇಶ್ವರದ ಡಾ. ಶ್ರೀಪಾದ ಭಟ್ ಅವರು ಪ್ರೌಢ ಶಾಲಾ ಅಧ್ಯಾಪನದೊಂದಿಗೆ ಸುಮಾರು ನಲ್ವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿದವರು. ಜನಪದ ರಂಗ ಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗ ಭೂಮಿಯ ಕುರಿತಾದ ಸಂಶೋಧನೆಗಾಗಿ ಪಿ.ಎಚ್.ಡಿ. ಪದವಿ ಪಡೆದವರು. ಮಕ್ಕಳ ನಾಟಕ, ಬೀದಿ ನಾಟಕ, ಪ್ರೊಸೀನಿಯಂ ನಾಟಕ, ಕಾವ್ಯ ನಾಟಕ ಮೊದಲಾದ ಪ್ರಕಾರಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ ಇವರ ನಿರ್ದೇಶನದ ನೂರಾರು ನಾಟಕಗಳು ದೇಶದಾದ್ಯಂತ ಪ್ರಯೋಗಗೊಂಡಿವೆ., ಶಿಕ್ಷಣ ಮತ್ತು ರಂಗಭೂಮಿಯ ಸಮಾಸಕ್ಕಾಗಿ ನಿರಂತರ ಪ್ರಯತ್ನಿಸಿದವರು. ನಾಟಕ ಅಕಾಡೆಮಿಯ ಸದಸ್ಯರಾಗಿ, ಹಂಪಿ ವಿ.ವಿ.ಯ ಅಧ್ಯಯನ ಮಂಡಳಿಯ ಸದಸ್ಯರಾಗಿ, ರಂಗ ಸಮಾಜದ ಸದಸ್ಯರಾಗಿ, ಉತ್ತರ ಕನ್ನಡದ ಚಿಂತನ ರಂಗ ಅಧ್ಯಯನ ಕೇಂದ್ರ, ಹಾವೇರಿಯ ಶೇಷಗಿರಿ ಕಲಾತಂಡ, ಸಮುದಾಯ ಕರ್ನಾಟಕ, ನಿರ್ದಿಗಂತ ಮೊದಲಾದ ಸಂಸ್ಥೆಗಳಲ್ಲಿ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಇವರಿಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದಲ್ಲದೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೋಟದ ಪಟೇಲರ ಮನೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ನಡೆಯುವ ಎರಡು ದಿವಸದ ಕಲೋತ್ಸವದ ಸಂದರ್ಭ ಗೌರಾವಾನ್ವಿತ ಅಭ್ಯಾಗತರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿರುವುದು ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!