spot_img
Sunday, February 15, 2026
spot_img

ಸಿನೆಮಾ ವಿಮರ್ಶೆ : ಹೊಡೆದಾಟವೇ ಮಹಾಪೂರ, ರಿಯಾಲಿಟಿಗೆ ಚೂರೂ ಹತ್ತಿರವಿಲ್ಲದ ʼಮ್ಯಾಕ್ಸ್‌ʼ !

ಕಿಚ್ಚ ಸುದೀಪ್‌ ನಟನೆಯ ಬಗ್ಗೆ ಬಹುಶಃ ಯಾರೂ ಮಾತಾಡುವುದಕ್ಕೆ ಮುಂದಾಗಲ್ಲ. ಅಭಿನಯ ಚಕ್ರವರ್ತಿ ಎನ್ನುವ ಬಿರುದು ಕಿಚ್ಚ ಸುದೀಪ್‌ಗೆ ಸಾರ್ಥಕವಾಗಿ ಒಪ್ಪುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೇ, ʼಮ್ಯಾಕ್ಸ್‌ʼ ಸಿನೆಮಾ ಸುದೀಪ್‌ ಅವರನ್ನು ಪ್ರಶ್ನಿಸುವ ಹಾಗಿದೆ. ಸುದೀಪ್‌ ಇಂತಹ ಗಟ್ಟಿತನವಿಲ್ಲದ ಸಿನೆಮಾವನ್ನು ಯಾಕೆ ಒಪ್ಪಿಕೊಂಡರು ಎನ್ನುವುದು ಮೊದಲ ಪ್ರಶ್ನೆ. ರಿಯಾಲಿಟಿಗೆ ಸ್ವಲ್ಪವೂ ಹತ್ತಿರವಿಲ್ಲದ ಈ ಸಿನೆಮಾ ಮಾಡುವುದಕ್ಕೆ ಸುದೀಪ್‌ಗೆ ಹೇಗೆ ಮನಸ್ಸಾಯಿತು ಎನ್ನುವುದು ಎರಡನೇ ಪ್ರಶ್ನೆ. ಇದರ ಹೊರತಾಗಿ ಸುದೀಪ್‌ ʼನಟನೆʼ ಈ ಸಿನೆಮಾದಲ್ಲಿಯೂ ಮನೋಜ್ಙವಾಗಿಯೇ ಮೂಡಿ ಬಂದಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಸಿನೆಮಾ ರಿಲೀಸ್‌ ಆಗುವುದಕ್ಕೂ ಮುನ್ನಾ ಸ್ವತಃ ಸುದೀಪ್‌ ಅವರೇ ಸಿನೇಮಾದ ಬಗ್ಗೆ ʼರಂಜನೆ ಮಹಾಪೂರ, ಸಂದೇಶ ಕೊಂಚʼ ಎಂದು ಒಪ್ಪಿಕೊಂಡಿದ್ದರು. ಹಾಗಾಗಿ ಸಿನೆಮಾವನ್ನು ಆಳ ಅಗಲ ವಿಮರ್ಶೆ ಮಾಡುವುದಕ್ಕೆ ಅವರ ಈ ಮೇಲಿನ ಮಾತೇ ತಡೆ ಮಾಡುತ್ತದೆ.

ರಾಜಕೀಯ ಷಡ್ಯಂತ್ರ, ರಾಜಕೀಯ ಮೇಲಾಟ, ಅತ್ಯಾಚಾರ, ಗಾಂಜಾ/ಡ್ರಗ್ಸ್,  ಗ್ಯಾಂಗಸ್ಟರ್‌ ಇಂತಹ ವಿಷಯಗಳ ಸುತ್ತಲೇ ಸುತ್ತುವ ʼಮ್ಯಾಕ್ಸ್‌ʼ, ನಿಜಕ್ಕೂ ಒಂದು ಉತ್ತಮ ಕಂಟೆಂಟ್‌ ಆಗಬಹುದಿತ್ತು. ಆದರೇ, ಅದು ಆಗಿಲ್ಲ ಎನ್ನುವುದೇ ಬೇಸರ. ಥಿಯೇಟರ್‌/ಟಾಕೀಸ್‌ ಒಳಗೆ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವುದಕ್ಕೆ ಬೇಕಾಗಿ ಮನರಂಜನೆ ಕೊಡುವುದರಲ್ಲಿ ಯಾವ ದಿಕ್ಕಿನಿಂದಲೂ ಸಿನೆಮಾ ಕಡಿಮೆಯಾಗಿಲ್ಲ ಎನ್ನುವುದೇನೋ ನಿಜ. ಆದರೆ, ಸುದೀಪ್‌ ನಟನೆಯ ಸಿನೆಮಾ ಆಗಿರುವ ಕಾರಣಕ್ಕೆ ಪೂರ್ತಿಯಾಗಿ ಸಿನೆಮಾವನ್ನು ಒಪ್ಪಿಕೊಂಡು ಬರುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕನ್ನಡದ ಬಿಗ್‌ಬಾಸ್‌ ಶೋನಲ್ಲಿ ಸುದೀಪ್‌ ಆಡುವ ಒಂದೊಂದು ಮಾತಿಗೂ ಅಪಾರ ಬೆಲೆಯಿದೆ. ಅವರಾಡುವ ಮಾತು ಎಷ್ಟೋ ಜನರಿಗೆ ಸ್ಪೂರ್ತಿಯಾಗಿದೆ. ಅಂತಹ ಒಬ್ಬ ನಾಯಕನನ್ನು ಈ ರೀತಿಯಲ್ಲಿ ಸಿನೆಮಾದಲ್ಲಿ ಕಾಣುವುದಕ್ಕೆ ಬಹುಶಃ ಅಭಿಮಾನಿಗಳು ಒಪ್ಪುವುದಿಲ್ಲ ಎಂದೇ ಅನ್ನಿಸುತ್ತದೆ.

ʼಮನುಷ್ಯನ ರೂಪದಲ್ಲಿರುವ ರಾಕ್ಷಸʼ ಎಂಬ ಹಿನ್ನೆಲೆ ಧ್ವನಿಯ ಮೂಲಕವೇ ಸಿನೆಮಾದಲ್ಲಿ ಸುದೀಪ್‌ ಕಾಣಿಸಿಕೊಳ್ಳುವುದಕ್ಕೆ ಆರಂಭಿಸುತ್ತಾರೆ. ಒಬ್ಬ ಪತ್ರಿಕಾ ವರದಿಗಾರ ಬೇಧಿಸಿದ ಅಕ್ರಮ ಜಾಲ ಮತ್ತು ಅವನ ಕೊಲೆಯ ಸುತ್ತ ಕಥೆ ಹೆಣೆದುಕೊಳ್ಳುವುದಕ್ಕೆ ಶುರುವಾಗುತ್ತದೆ. ಸಿನೆಮಾ ಆರಂಭವಾಗುವುದೇ ಗ್ಯಾಂಗ್‌ಸ್ಟರ್‌, ಹೊಡೆದಾಟ, ಲಾಂಗ್‌, ಮಚ್ಚು, ರಕ್ತ, ಹೊಡಿಬಡಿ ಕೊಚ್ಚು ಕೊಲ್ಲು ಎಂಬ ಮಾತುಗಳಿಂದಲೇ. ಆರಂಭದಿಂದ ಕೊನೆಯವರೆಗೂ ಹೊಡೆದಾಟವೇ ಈ ಸಿನೆಮಾ. ಸಿನೆಮಾದಲ್ಲಿ ಸುದೀಪ್‌ ಒಬ್ಬ ಎಸಿಪಿ.‌ ಆದರೇ, ಒಂದೇ ಒಂದು ದೃಶ್ಯದಲ್ಲಿ ಪೊಲೀಸ್‌ ಡ್ರೆಸ್‌ನಲ್ಲಿ ಸುದೀಪ್‌ ಕಾಣಿಸಿಕೊಳ್ಳುವುದಿಲ್ಲ. ದಾಸ ಎನ್ನುವ ಒಬ್ಬ ಕಾನ್ಸ್ಟೇಬಲ್‌ ತನ್ನ ಹೈಯರ್‌ ಪೋಸ್ಟ್‌ ನಲ್ಲಿರುವ ಪೊಲೀಸರುಗಳಿಗೇ ಎದರುರುತ್ತರ ಕೊಡುವ, ಕೈ, ಬಾಯಿ ಮಾಡುವುದು ತೀರಾ ಅಸಹಜವೇ ಸರಿ. ಅಮಾನತುಗೊಂಡಿದ್ದ ಎಸಿಪಿ ಅರ್ಜುನ್‌ ಮಹಾಕ್ಷಯ್‌ ಮತ್ತೆ ಮರಳಿ ಡ್ಯೂಟಿಗೆ ಹಾಜರಾಗುವ ದಿನದ ಹಿಂದಿನ ರಾತ್ರಿ ಬೆಳಗಾಗುವುದರೊಳಗೆ ನಡೆಯುವ ಗಲಾಟೆ, ಗೌಜು, ಗದ್ದಲ, ಕೊಲೆ, ಮಚ್ಚು, ಕೊಚ್ಚುಗಳ ನಡುವಿನ ಕಥೆಯೇ ಈ ಸಿನೆಮಾ.

ಸಸ್ಪೆನ್ಸ್‌, ಥ್ರಿಲ್ಲರ್‌ ಸಿನೆಮಾ ಕಟ್ಟಿಕೊಡುವುದಕ್ಕೆ ಹೋಗಿ ನಿರ್ದೇಶಕ ವಿಜಯ್‌ ಕಾರ್ತಿಕೇಯ, ಸಮಾಜಕ್ಕೆ ಯಾವ ಸಂದೇಶ ಕೊಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಮತ್ತೆ ಸಿಗುವ ಉತ್ತರ, ಅದೇ ಹೊಡಿಬಡಿ, ಮಚ್ಚುಕೊಚ್ಚು, ಲಾಂಗ್‌, ಗ್ಯಾಂಗ್‌ಸ್ಟರ್‌, ರಕ್ತ, ಬೆಂಕಿ, ಕಾಣಿಸಿದ್ದೆಲ್ಲವೂ ಪುಡಿ ಪುಡಿಯಾಗುವ ರಿಯಾಲಿಟಿಗೆ ಚೂರೂ ಹತ್ತಿರವಿಲ್ಲದ ಮಾಸ್‌ ಆಡಿಯನ್ಸ್‌ಗಷ್ಟೇ ಇಷ್ಟವಾಗುವ, ಕೇಕೆ ಚಪ್ಪಾಳೆ ಶಿಳ್ಳೆಗಳಿಗಷ್ಟೇ ಸಿಮಿತವಾಗಿರುವ ಒಂದು ಸಿನೆಮಾವನ್ನು ಅಷ್ಟೆ.

ಸುಧಾ ಬೆಳವಾಡಿ ಸುದೀಪ್‌ ತಾಯಿಯಾಗಿ ಈ ಸಿನೆಮಾದಲ್ಲಿ ನಟಿಸಿದ್ದಾರೆ. ತಾಯಿಯ ಸೆಂಟಿಮೆಂಟ್ಸ್‌ ಸಿನೆಮಾದಲ್ಲಿವೆಯಾ ಕೇಳಿದರೇ, ಇಲ್ಲ. ಸುಧಾ ಬೆಳವಾಡಿ ಅಂತಹ ಹಿರಿಯ ಅನುಭವಿ ನಟಿಗೆ ಇಲ್ಲಿ ನಟನೆಗೆ ಅವಕಾಶವೇ ಇಲ್ಲ. ಲವ್‌, ಕಾಮಿಡಿ, ಸಂದೇಶಗಳನ್ನು ಬಿಡಿ, ಈ ಸಿನೆಮಾದಲ್ಲಿ ಮನಸ್ಸಿನಲ್ಲಿ ಉಳಿಯುವ ಟೈಟಲ್‌ ಸಾಂಗ್‌ ಆದರೂ ಇದೆಯೇ ? ಅದೂ ಈ ಸಿನೆಮಾದಲ್ಲಿ ಇಲ್ಲ. ಈ ಸಿನೆಮಾದ ಗೌಜು, ಗದ್ದಲ, ಬಲವಿಲ್ಲದ ಕಥೆ, ಹೊಡಿಬಡಿ, ರಕ್ತ, ಲಾಂಗ್‌ ಮಚ್ಚುಗಳ ನಡುವೆ ಅಲ್ಲಲ್ಲಿ ಕಾಣುವುದಕ್ಕೆ ಸಿಗುವುದು ಸುದೀಪ್‌ ಅವರ ಮನೋಜ್ಙ ಅಭಿನಯವನ್ನಷ್ಟೆ ಬಿಟ್ಟರೇ ಮತ್ತೇನೂ ಇಲ್ಲ.

ಒಟ್ಟಿನಲ್ಲಿ ʼಕಾನೂನಿಗೆ ಏನೂ ಬಲವಿಲ್ಲʼ, ʼಕಾನೂನನ್ನೂ ಮೀರಿ ಒಬ್ಬ ಪೊಲೀಸ್‌ ಅಧಿಕಾರಿ ತಾನೂ ಕೂಡ ರೌಡಿಸಂ ಗೆ ಇಳಿದರಷ್ಟೇ ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಹುದುʼ ಎಂಬ ಕೆಟ್ಟ ಚಿಂತನೆಯನ್ನು ತುಂಬುವ ಕಥೆಯುಳ್ಳ ʼಮ್ಯಾಕ್ಸ್‌ʼ ಭಾರತೀಯ ಸಿನೆಮಾ ಲೋಕದ ಸಿನೆಮಾಗಳ ಪಟ್ಟಿಗೆ ಸೇರಿಕೊಳ್ಳುವುದರಲ್ಲಿ ಯಶಸ್ವಿಯಾಯಿತು ಎಂದೇ ಹೇಳಬಹುದು.

ಸುದೀಪ್‌ ಬಹುಶಃ ಸಿನೆಮಾ ಲೋಕದಲ್ಲಿ ಅಸಮಾನ್ಯ ಎತ್ತರಕ್ಕೆ ಏರಿದ್ದಾರೆ. ಅವರೊಬ್ಬ ಒಳ್ಳೆಯ ನಟ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಅವರು ನಟಿಸಿರುವ  ಈ ಹಿಂದಿನ ಸಿನೆಮಾಗಳೇ ಉತ್ತಮ ಸಾಕ್ಷಿಯಾಗಿ ನಿಲ್ಲುತ್ತವೆ. ಸುದೀಪ್ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಟ್ರೆಂಡ್‌ ಸೆಟ್ಟರ್‌ ಆಗಿ ಸುದೀಪ್‌ ಕಾಣಿಸಿಕೊಂಡವರು. ಅವರು ನಟನೆ, ಕಥೆಗಳ ಆಯ್ಕೆಗಳಲ್ಲಿ ಟ್ರೆಂಟ್‌ ಸೆಟ್ಟರ್‌ ಆಗಿಯೇ ಉಳಿಯಬೇಕಿತ್ತು. ಬರೀ ಹೊಡೆದಾಟವೇ ತುಂಬಿರುವ ಈ ಸಿನೆಮಾವನ್ನು ನಿರ್ದೇಶಕರು ತಂದಾಗ ಸುದೀಪ್‌ ಅದನ್ನು ನಿರಾಕರಿಸಿದ್ದಿದ್ದರೇ ಬಹುಶಃ ಎಲ್ಲಾ ಥರದ ಸಿನೆಮಾ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಹೀರೋ ಆಗಿ ಉಳಿಯುತ್ತಿದ್ದರೇನೋ, ಆದರೇ ಈ ಸಿನೆಮಾ ಮಾಡುವ ಮೂಲಕ ನೂರು ಜನಕ್ಕೆ ಹೊಡೆಯುವ ಒಬ್ಬ ತೀರಾ ಸಾಮಾನ್ಯ ಸಿನೆಮಾ ಹೀರೋದಂತೆ ನೂರಲ್ಲಿ ಒಬ್ಬರಾಗಿಯೇ ಕಾಣಿಸಿಕೊಂಡರು.

ಇನ್ನು, ಸಿನೆಮಾದಲ್ಲಿ ಡ್ರಗ್ಸ್‌, ಗಾಂಜಾ ವ್ಯಸನಿಗಳು, ಉಳ್ಳವರು ಯಾವ ಕ್ರೌರ್ಯಕ್ಕೂ ಹಿಂದಾಗುವುದಿಲ್ಲ ಎನ್ನುವುದನ್ನು ಹೇಳಲಾಗಿದೆ. ಆದರೇ, ಇಷ್ಟು ರಿಯಾಲಿಟಿಗೆ ದೂರವಾಗಿ ನಿಂತು ಹೇಳಿರುವುದೇ ವಿಮರ್ಶೆಗೆ ಕಾರಣ. ಇದೇ ವಿಷಯಗಳನ್ನು ಇಟ್ಟುಕೊಟ್ಟು ಪರಿಣಾಮಕಾರಿಯಾಗಿ ನಿರ್ದೇಶಕರು ತೋರಿಸಿಕೊಡಬಹುದಿತ್ತು. ಆ ಸಾಧ್ಯತೆಗಳ ಬಗ್ಗೆ ನಿರ್ದೇಶಕರು ಪ್ರಯತ್ನಿಸುವಲ್ಲಿ ಸೋತಿದ್ದಾರೆ.

ಸರ್ಕಾರದ ಸುಪರ್ದಿಯಲ್ಲಿರುವ ಪೊಲೀಸ್ ಸ್ಟೇಷನ್‌ ಧಗಧಗ ಹೊತ್ತಿ ಉರಿಯುವಂತೆ, ಪೊಲೀಸ್‌ ಅಧಿಕಾರಿಯೊಬ್ಬ ರೌಡಿಯಾಗಿ ನೂರಾರು ಮಂದಿಯನ್ನು ಕೊಲ್ಲುವಂತೆ, ಕಾನೂನು ಇಷ್ಟು ಬಲಿಷ್ಠವಾಗಿರುವಾಗ ಹಿಂಸೆ, ಕ್ರೌರ್ಯ ರಾಜಾರೋಷವಾಗಿ ನಡೆಯುತ್ತದೆ ಎಂದು ತೋರಿಸುವಂತೆಯೇ ಎಲ್ಲರೂ ಸಿನೆಮಾ ಮಾಡಿ ತೋರಿಸುತ್ತಾರೆ ಎನ್ನುವುದಾದರೇ, ಕಾನೂನು, ಪೊಲೀಸ್‌ ಇಲಾಖೆ, ನ್ಯಾಯ, ಶಿಕ್ಷೆ ಇವೆಲ್ಲದರ ಬಗ್ಗೆ ಅರಿವು ಮೂಡಿಸುವುದು ಯಾರು ? ಸಿನೆಮಾ ರಂಜನೆಗಷ್ಟೆ ಮಾಧ್ಯಮವೆ ? ಕ್ರೌರ್ಯವನ್ನು ತೋರಿಸುವುದಷ್ಟೇ ರಂಜನೆಯೇ ? ಸಿನೆಮಾಗಳಿಗೆ ಸಾಮಾಜಿಕ ಕಳಕಳಿ, ಜವಾಬ್ದಾರಿಗಳಿಲ್ಲವೇ ? ಎನ್ನುವುದನ್ನು ಈ ಸಿನೆಮಾ ತಂಡ ಮತ್ತು ಇಂತಹ ಸಿನೆಮಾವನ್ನೇ ಮಾಡುವುದಕ್ಕೆ ಮುಂದಾಗುತ್ತಿರುವ ಸಿನೆಮಾ ತಂಡಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ತುರ್ತಿದೆ.

ಇಷ್ಟು ಹೇಳಿದ ಮೇಲೆ ಸಿನೆಮಾ ತಂಡ ಸಮಜಾಯಿಷಿ, ಸಮರ್ಥನೆಯನ್ನು ಯಾವ ಮಟ್ಟಕ್ಕೆ ಬೇಕಾದರೂ ತೆಗೆದುಕೊಳ್ಳಬಹುದು. ಅದು ಎರಡನೇ ಹಂತ. ಮೊದಲನೇ ಹಂತ ಸಿನೆಮಾ. ಸಿನೆಮಾದಲ್ಲಿ ಏನು ಮಾಡಿದ್ದಾರೆ ಎನ್ನುವುದೇ ಕೊನೆಗೆ ಮುಖ್ಯವಾಗಿ ಕಾಣಿಸುತ್ತದೆ.

ತಾಂತ್ರಿಕವಾಗಿ ಸಿನೆಮಾ ಗಮನ ಸೆಳೆಯುತ್ತಿದೆ ಎನ್ನುವುದು ಅಕ್ಷರಶಃ ಸತ್ಯ. ಸಾಹಸ(ಫೈಟಿಂಗ್‌) ತೀರಾ ಅಸಹಜ ಅನ್ನಿಸಿದರೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ. ಸಿನೆಮಾಟೋಗ್ರಫರ್‌ ಶೇಖರ್‌ ಚಂದ್ರ, ಸಂಕಲನಕಾರ ಎಸ್.‌ ಆರ್‌ ಗಣೇಶ್‌ ಶ್ಲಾಘನೆಗೆ ಅರ್ಹರು.

ಸುದೀಪ್‌ ನಟನೆಗೆ ಮೆಚ್ಚಲೇ ಬೇಕು. ನಟಿ ವರಲಕ್ಷ್ಮೀ ಶರತ್‌ ಕುಮಾರ್ ಹೀರೋಯಿನ್‌ ಎನ್ನಿಸಿಕೊಳ್ಳದೇ ವಿಲನ್‌ ಆಗಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸುಧಾ ಬೆಳವಾಡಿ, ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ, ಉಗ್ರಂ ಮಂಜು, ಶರತ್‌ ಲೋಹೀತಾಶ್ವ, ಸುನೀಲ್‌, ಪ್ರಮೋದ್‌ ಶೆಟ್ಟಿ ಸೇರಿ ಇತರರು ಸಿಕ್ಕ ಅವಕಾಶವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಮತ್ತೇನನ್ನು ಹೇಳಬಹುದು ? ಸಿನೆಮಾ ನೋಡಿ. ಚೆನ್ನಾಗಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!