spot_img
Sunday, February 15, 2026
spot_img

ರೈತರ ಆದಾಯ ಗಣನೀಯ ಇಳಿಕೆ| 10 ವರ್ಷಗಳಲ್ಲಿ ರೈತರ ಸ್ಥಿತಿ ಇನ್ನಷ್ಟು ಶೋಚನೀಯ| ರೈತರ ಸಮಸ್ಯೆಗೆ ರಾಜಕೀಯ ವ್ಯವಸ್ಥೆಯೇ ಕಾರಣ-ಶಿವಸುಂದರ್

ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ

ಬ್ರಹ್ಮಾವರ, ಡಿ.23 (ಜನಪ್ರತಿನಿಧಿ ವಾರ್ತೆ) ರೈತರ ಆಧಾಯ ಇವತ್ತು 8 ಪಟ್ಟು ಕುಸಿದಿದೆ. ರಾಜಕೀಯ ವ್ಯವಸ್ಥೆಯ ಕಾರಣದಿಂದ ರೈತರ ಬದುಕು ಶೋಚನೀಯವಾಗಿದೆ. ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷವಾದರೂ ಕೂಡಾ ರೈತರ ಸ್ಥಿತಿಯಲ್ಲಿ ಅಂಥಹ ಬದಲಾವಣೆಯಾಗಿಲ್ಲ. ಸವಾಲುಗಳೆಂಬ ಶತ್ರುಗಳನ್ನು ಗುರುತಿಸುವಲ್ಲಿ ರೈತರಿಂದು ವಿಫಲರಾಗುತ್ತಿದ್ದಾರೆ. ರೈತ ಹೋರಾಟದ ಮನೋಭಾವ ಸ್ಪಷ್ಟ ಚಹರೆಯ ಗೊಂದಲದಲ್ಲಿದೆ. 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡರೂ ದೇಶಕ್ಕೂ ಜನರಿಗೂ ಸಂಬಂಧವೆ ಇಲ್ಲ ಎನ್ನುವ ಸ್ಥಿತಿ ಇಂದು ಭಾರತದಲ್ಲಿ ಇದೆ. ಹೀಗೆ ಮುಂದುವರಿದರೆ ಇನ್ನು 10 ವರ್ಷಗಳಲ್ಲಿ ರೈತರು ಇನ್ನಷ್ಟು ಹಿನ್ನೆಡೆ ಕಾಣುವ ಸಾಧ್ಯತೆ ಇದೆ ಎಂದು ಶಿವಸುಂದರ್ ಹೇಳಿದರು.

ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಡಿ.23ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದರು.

ಜಡತೆ, ವಿಭ್ರಂತಿ, ವಿಸ್ಮತಿ ಇವತ್ತು ರೈತರನ್ನು ಕಾಡುತ್ತಿದೆ, ಶತ್ರುವಿನ ಚಹರೆ ಸ್ಪಷ್ಟವಾದಾಗ ಹೋರಾಟ, ಚಳವಳಿಯೂ ನಡೆಯುತ್ತದೆ. ಕ್ಷಾಮ ಡಾಮರ ಬಂದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ತಮ್ಮ ಉತ್ಪಾದನೆಯ ಬಟ್ಟೆಗಳನ್ನು ಮಾತ್ರ ಮಾರಾಟವಾಗಬೇಕು ಎಂದು ತೆರಿಗೆ ಜಾಸ್ತಿ ಮಾಡಿದರ ವಿರುದ್ಧ ರೈತ ಚಳವಳಿ ಮಾಡಿದರು. ಅಲ್ಲಿ ಸಮಸ್ಯೆ ಎನ್ನುವ ಶತ್ರು ಸ್ಪಷ್ಟತೆಯಿತ್ತು ಎಂದರು.

ಭಾರತದ ಕೃಷಿ ಶಿಕ್ಷಣ ಇವತ್ತಿಗೂ ಆಮೇರಿಕಾದ ಒಕ್ಕಲು. ಅದೇ ಕಲಿಕಾ ವಿಧಾನವಿದೆ. ಸಂವಿಧಾನ ಜಾರಿಗೆ ಬಂದು 75 ವರ್ಷವಾದೂ ಬ್ರಿಟಿಷರು ಬಿಟ್ಟು ಹೋದ ಆರ್ಥಿಕ ನೀತಿಗಳು ಹಾಗೆ ಉಳಿದುಕೊಂಡಿದೆ. ಆಹಾರೋತ್ಪನ್ನ ಹೆಚ್ಚಳವಾದರೂ ಮಾರುಕಟ್ಟೆ, ಸರಕಾರವನ್ನು ಅವಲಂಬಿತವಾಗುವಂತೆ ಮಾಡಿತು. ಅಮೇರಿಕಾದಂತಹ ದೇಶಗಳು ಭಾರತದಂತಹ ದೇಶಗಳಲ್ಲಿ ಆಹಾರೋತ್ಪಾದನೆ ಹೆಚ್ಚಿಸಬೇಕು ಎನ್ನುತ್ತಿದೆ. ಇಡೀ ಜಗತ್ತಿಗೆ ಒಂದೇ ಬೆಳೆ ಒಂದೇ ಆಹಾರ ಎನ್ನುವ ಪರೋಕ್ಷ ಚಿಂತನೆಯ ಮೂಲಕ ರೈತರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಅವರು ಹೇಳಿದರು.

ಇವತ್ತು ರೈತ ಸಮಸ್ಯೆಗಳು ತಾಂತ್ರಿಕ ಸಮಸ್ಯೆಗಳಾಗಿ ಉಳಿದಿಲ್ಲ. ಇದು ರಾಜಕೀಯ ಸಮಸ್ಯೆಯಾಗಿದೆ. ಒಳಸುರಿ, ಉತ್ಪಾದನೆಗಳ ನಿಯಂತ್ರಣ ಇತ್ಯಾದಿ ವಿಚಾರಗಳು ಸರಕಾರದ ನೀತಿಗಳನ್ನು ತೋರಿಸುತ್ತದೆ. 1996ರಿಂದ 2015ರ ತನಕ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಕೃಷಿ ಕ್ಷೇತ್ರದಲ್ಲಿ ನಿರಾಸೆ ತಾಳಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಕೀಟನಾಶಗಳು ಕೀಟಗಳನ್ನು ಸಾಯಿಸಬೇಕು, ಆದರೆ ನಮ್ಮಲ್ಲಿ ಕ್ರಿಮಿನಾಶಗಳು ರೈತರನ್ನು ಸಾಯಿಸುತ್ತಿದೆ, ಇದು ನಮ್ಮ ದುರಂತ ಎಂದರು.

ಪ್ರಜಾಪ್ರಭುತ್ವ ಎಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯ ಸಮಾನತೆ ಅನುಭವಿಸುವಂತಾಗಬೇಕು. 1991ರ ನಂತರ ಕೃಷಿ ನೀತಿ ರೈತರನ್ನು ಸಬಲರನ್ನಾಗಿ ಮಾಡುವುದಕ್ಕಿಂತ ಅಬಲರನ್ನಾಗಿ ಮಾಡಿದೆ. ಬಹುರಾಷ್ಟ್ರೀಯ ಕಂಪೆನಿಗಳು ರೈತರನ್ನು ಒಪ್ಪಂದದ ಹೆಸರಲ್ಲಿ ಕೊನೆಯಲ್ಲಿ ಕೈ ಬಿಡುತ್ತದೆ. ರೈತರ ಹಿತಾಸಕ್ತಿ ಬದಿಗಿಟ್ಟು ಕಾರ್ಪೋರೇಟ್ ವಲಯ, ಉದ್ಯಮಿಗಳನ್ನು ಸರ್ಕಾರ ಪೋಷಿಸುತ್ತದೆ ಎಂದರು.

2017ರಲ್ಲಿ ಕೃಷಿಕರ ಆದಾಯ ದ್ವಿಗುಣ ಮಾಡುತ್ತೇವೆ ಎಂದ ಕೇಂದ್ರ ಸರ್ಕಾರ, 2023ರ ಅಂಕಿ ಅಂಶಗಳನ್ನು ಗಮನಿಸಿದರೆ 8 ಪಟ್ಟು ಕಡಿಮೆಯಾಗಿದೆ ದ್ವಿಗುಣ ಅಲ್ಲ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಇದು ಒಬ್ಬೊಬ್ಬ ರೈತರರ ಕಷ್ಟವಲ್ಲ, ಇಡೀ ದೇಶದ ರೈತರ ಕಷ್ಟವಿದು. ಹಸಿವು, ಬದುಕು, ದೇಶ ವಿಚಾರಗಳ ಬಗ್ಗೆ ಗೊಂದಲವಿದೆ. ರಾಷ್ಟ್ರೀಯ ವಿಚಾರಗಳ ನಡುವೆ ರೈತರ ವಿಚಾರಗಳು ಇವತ್ತು ಗೌಣವಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಯುವಜನತೆ ಕೃಷಿಯ ವಿಚಾರದಲ್ಲಿ ನಿರಾಸಕ್ತಿ ವಹಿಸುತ್ತಿರುವುದು ದುರಾದೃಷ್ಟಕರ. ಪರಿವರ್ತನೆ ಜಗದ ನಿಯಮ, ನಾವು ಮೊದಲು ಪರಿವರ್ತನೆಯಾಗಬೇಕು, ಸರಿಯಾದ ದಾರಿಯಲ್ಲಿ ನಾವು ಸಾಗಬೇಕು, ನಮ್ಮ ಹಕ್ಕುಗಳನ್ನು ಕೇಳುವ, ಪ್ರಶ್ನಿಸುವ ಮನಸ್ಥಿತಿ ನಮ್ಮಿಂದ ದೂರಾಗುತ್ತಿರುವುದು ವಿಪರ್ಯಾಸ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರಿಗೆ ಹಣಪಾವತಿ ಬಾಕಿಯಾದರೂ ಪ್ರತಿಭಟಿಸದೆ ಸುಮ್ಮನುಳಿದ ಈ ಜಿಲ್ಲೆ ಇವತ್ತು ನೀರಾವರಿ ಉದ್ದೇಶಕ್ಕಾಗಿಯೇ ಆರಂಭಗೊಂಡ ವಾರಾಹಿ ನೀರಾವರಿ ಯೋಜನೆ ಬೇರೆ ಬೇರೆ ವಿಷಯಗಳಲ್ಲಿ ಬಳಕೆಯಾಗಿ ಮೂಲ ಯೋಜನೆ ಹಳ್ಳ ಹಿಡಿಯತ್ತಿದ್ದರೂ ರೈತರು ಮೌನವಾಗಿರುವುದು ದುರಂತ. ಕೃಷಿಕರನ್ನು ಕಡೆಗಣಿಸುವ ಪ್ರವೃತ್ತಿ ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳಲ್ಲಿಯೂ ಇದೆ. ಇವತ್ತು ರಾಷ್ಟ್ರೀಯ ರೈತ ದಿನಾಚರಣೆಯ ಸಂದರ್ಭದಲ್ಲಿ ರೈತರೊಂದಿಗೆ ಇರಬೇಕಾದ ಕೃಷಿಕೇಂದ್ರದ 12 ಮಂದಿ ಕೃಷಿ ವಿಜ್ಞಾನಿಗಳು ರಜೆ ಮಾಡಿರುವುದು ಆಶ್ಚರ್ಯ ಮೂಡಿಸುತ್ತದೆ ಎಂದರು.

ನಮಗೆ ಸಮಸ್ಯೆಯಾದಾಗ ಪ್ರತಿಭಟಿಸುವ ಮನಸ್ಥಿತಿ ಬೆಳೆಸಿಕೊಳ್ಳದೆ ಹೋದರೆ ಮುಂದೆ ದೊಡ್ಡ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಕಸ್ತೂರಿ ರಂಗನ್ ವರದಿ ಅನುಷ್ಟಾನ ವಿಚಾರದಲ್ಲಿ ಹತ್ತು ವರ್ಷದ ಹಿಂದೆಯೇ ಪ್ರತಿಭಟನೆಯಾಗಿದೆ, ಮನವಿ ನೀಡಿದ್ದಾರೆ. ರಾಜ್ಯ ಸರಕಾರ ಸಾರಸಗಟಾಗಿ ತಿರಸ್ಕಾರ ಮಾಡಿದ್ದೇವೆ ಎನ್ನುತ್ತಿದೆ. ಆತ್ತ ಕೇಂದ್ರ ಸರಕಾರ ಅನುಷ್ಟಾನ ಮಾಡಲು ಮುಂದಾಗುತ್ತಿದೆ. ಭೌತಿಕ ಸರ್ವೇ ಮಾಡಲು ಮುಂದಾಗುತ್ತಿಲ್ಲ. ಅಧಿಕಾರಿಗಳ ಅಸಹಕಾರದಿಂದ ಹೀಗೆಲ್ಲಾ ಆಗುತ್ತಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾರಾಟದ ಬಹುಕೋಟಿ ಹಗರಣದ ತನಿಖೆ ಇನ್ನುವ ಆಮೆಗತಿಯಲಿದೆ. ತನಿಖೆ ಆರಂಭಗೊಂಡು ಒಂದುವರೆ ವರ್ಷವಾದರೂ ವರದಿ ಕೊಡುತ್ತೇವೆ ಎನ್ನುತ್ತಿದೆ, ಇನ್ನೂ ಚಾರ್ಜ್‌ಶೀಟ್ ಹಾಕಲಾಗಿಲ್ಲ, ಹೀಗೆ ಮುಂದುವರಿದರೆ ಉಡುಪಿ ಜಿಲ್ಲಾ ರೈತ ಸಂಘ ನಿರ್ಣಯಕ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದರು.

ಚಿಂತಕ ಪತ್ರಕರ್ತ ರಾಜಾರಾಂ ತಲ್ಲೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕಳೆದ 4-5 ವರ್ಷಗಳಿಂದ ಹೃದಯಾಘಾತ, ಕುಸಿದು ಬಿದ್ದು ಸಾಯುವುದು, ಮೆದುಳಿನ ಸಮಸ್ಯೆಯಿಂದ ಸಾಯುವುದು ಇತ್ಯಾದಿ ದುರ್ಘಟನೆಗಳು ಹೆಚ್ಚಳವಾಗುತ್ತಿವೆ. ಇವುಗಳಿಗೆ ಕಾರಣ ಏನು? ಈ ಬಗ್ಗೆ ಪ್ರಶ್ನೆ ಮಾಡುವ ಪ್ರಖರತೆ ಕಾಣುತ್ತಿಲ್ಲ. ನೆಲ, ಜಲ, ಆಕಾಶ ಎಲ್ಲವೂ ಖಾಸಗೀಕರಣವಾಗಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ರೈತರ ಸ್ಥಿತಿ ಷೇರು ಮಾರುಕಟ್ಟೆಯಂತೆ ಆಗಬಹುದು. ಮಾತ್ರವಲ್ಲ ತಮ್ಮ ಭೂಮಿ ಎಲ್ಲಿದೆ ಎಂದು ಹುಡುಕಬೇಕಾದ ದಿನಗಳು ಬರಬಹುದು ಎನ್ನುವುದು ಕಳವಳಕಾರಿ ಸಂಗತಿ ಎಂದರು.

ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಸೋಮ ಪೂಜಾರಿ ಸಕ್ಕಟ್ಟು, ನರಸಿಂಹ ನಾಯ್ಕ ಕುಚ್ಚೂರು, ಸಿ.ಬಿ ಚಿತ್ತೂರು ಅವರಿಗೆ ಕೃಷಿ ಸಾಧಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಅಧ್ಯಕ್ಷರಾದ ಸೀತಾರಾಮ ಗಾಣಿಗ, ಉಡುಪಿ ಜಿಲ್ಲೆ ಕಿಸಾನ್ ಘಟಕ ಉಡುಪಿ ಜಿಲ್ಲೆ ಅಧ್ಯಕ್ಷರಾದ ಶಶಿಧರ ಶೆಟ್ಟಿ ಎಲ್ಲೂರು, ಕೆ.ಪಿ.ಆರ್.ಎಸ್ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಂಶೋಧನಾ ಸಹನಿರ್ದೇಶಕರಾದ ಡಾ.ಧನಂಜಯ ಸಮಗ್ರ ಕೃಷಿ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಪ್ರದೀಪ್ ಬಲ್ಲಾಳ್, ಖಜಾಂಚಿ ಭೋಜು ಕುಲಾಲ್, ಬ್ರಹ್ಮಾವರ ವಲಯ ಸಂಚಾಲಕ ರೋಹಿತ್ ಕುಮಾರ್ ಶೆಟ್ಟಿ, ರೈತ ಸಂಘದ ವಲಯಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ವಂಡ್ಸೆ, ಶರತ್ಚಂದ್ರ ಶೆಟ್ಟಿ, ವಸಂತ ಹೆಗ್ಡೆ, ಕೃಷ್ಣದೇವ ಕಾರಂತ, ಸದಾನಂದ ಶೆಟ್ಟಿ ಕೆದೂರು, ಕೃಷ್ಣರಾಜ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮರಾತ್ತೂರು, ಕಿರಣ್ ತೋಳಾರ್, ಸದಾಶಿವ ಶೆಟ್ಟಿ, ರೈತ ಸಂಘದ ವಿಶೇಷ ಆಹ್ವಾನಿತರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಸಂಪಿಗೇಡಿ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ ಕಿಣಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಂಡ್ಸೆ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!