spot_img
Saturday, February 14, 2026
spot_img

ಡಾ. ಶಾಂತಾರಾಮ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಭೀಷ್ಮಾಚಾರ್ಯ : ಡಾ. ಎಚ್. ಎಸ್ ಬಲ್ಲಾಳ್ | ಸ್ವಪ್ನಶಿಲ್ಪಿ ಡಾ. ಹೆಚ್.‌ ಶಾಂತಾರಾಮರಿಗೆ ʼಭಾವಾಭಿನಂದನಾ ಸಮಾರಂಭʼ

ಜನಪ್ರತಿನಿಧಿ (ಕುಂದಾಪುರ) : ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಭೀಷ್ಮಾಚಾರ್ಯರು ಎಂದು ಡಾ. ಹೆಚ್. ಶಾಂತಾರಾಮ್ ಅವರಿಗೆ ಹೇಳಿದರೆ ಸಾರ್ಥಕವಾಗಿ ಒಪ್ಪುತ್ತದೆ. ಶಾಂತಾರಾಮರು ಬಹುಮುಖಿ ವ್ಯಕ್ತಿತ್ವವುಳ್ಳವರು. ಒಬ್ಬ ಸಮರ್ಥ ಆಡಳಿತಗಾರ. ಭಂಡಾರ್ಕಾರ್ಸ್ ಕಾಲೇಜು ಹೆಮ್ಮರವಾಗಿ ಬೆಳೆಯುವುದಕ್ಕೆ ಶಾಂತಾರಾಮ್ ಅವರ ಶ್ರಮ ಅಪಾರ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಅಧ್ಯಕ್ಷ  ಡಾ. ಎಚ್. ಎಸ್ ಬಲ್ಲಾಳ್ ಹೇಳಿದರು.

ಭಂಡಾರ್ಕಾರ್ಸ್ ಕಾಲೇಜು ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಸೋಮವಾರ((02/12/2024) ನಡೆದ ಸ್ವಪ್ನ ಶಿಲ್ಪಿ ಡಾ. ಹೆಚ್. ಶಾಂತಾರಾಮರಿಗೆ ‘ಭಾವಾಭಿನಂದನಾ’ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದ ಆಡಳಿತದಲ್ಲಿ ಬಹಳ ದೊಡ್ಡ ಕ್ರಾಂತಿ ಮಾಡಿದವರು ಡಾ. ಹೆಚ್. ಶಾಂತಾರಾಮರು. ಅವರ ನಿರ್ದೇಶನ, ಸಮರ್ಥ ಆಡಳಿತ, ವ್ಯಕ್ತಿತ್ವ ಆದರ್ಶನೀಯ. ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಭಂಡಾರ್ಕಾರ್ಸ್ ಕಾಲೇಜು ಯಾವುದೇ ಒಂದು ವಿಶ್ವವಿದ್ಯಾಲಯಕ್ಕೆ ಕಡಿಮೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಪ್ರಾಯೋಜಕತ್ವ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಡಾ. ಹೆಚ್. ಶಾಂತಾರಾಮ್ ಅವರ ಕೊಡುಗೆ ಇದೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ವಕೀಲ ಎ. ಎಸ್. ಎನ್ ಹೆಬ್ಬಾರ್, ಡಾ. ಹೆಚ್. ಶಾಂತಾರಾಮ್ ಅವರು ಪ್ರಾಂಶುಪಾಲರಾಗಿದ್ದ ಸಂದರ್ಭದಲ್ಲಿ ಮಾತ್ರವಲ್ಲದೇ ಅವರ ಅಧ್ಯಕ್ಷ ಅವಧಿಯಲ್ಲಿ ಕಾಲೇಜು ಸಂಪೂರ್ಣ ಅಭಿವೃದ್ಧಿ ಹೊಂದಿದೆ. ಅವರ ಸ್ಮರಣಶಕ್ತಿ, ಅವರ ಕನಸು, ಅವರಲ್ಲಿದ್ದ ಅಭಿರುಚಿ ಅನನ್ಯ. ಸಾಹಿತ್ಯ, ಲಲಿತಕಲೆ, ನಾಟಕ, ಗಮಕ, ಯಕ್ಷಗಾನ, ಫೋಟೋಗ್ರಫಿ ಸೇರಿ ಎಲ್ಲಾ ಕಲಾ ಪ್ರಕಾರಗಳಲ್ಲಿ ಅವರಿಗೆ ಅತೀವ ಆಸಕ್ತಿ, ಅಷ್ಟಲ್ಲದೆ ಅವರು ಸ್ವತಃ ಈ ಎಲ್ಲಾ ಚಟುವಟಿಕೆಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತಮ್ಮನ್ನು ತಾವು ದುಡಿಸಿಕೊಂಡವರು. ಅವರ ವ್ಯಕ್ತಿತ್ವ ಅನುಗಾಲಕ್ಕೂ ಆದರ್ಶ ಎಂದಿದ್ದಲ್ಲದೇ, ಶಾಂತಾರಾಮ್ ಅವರೊಂದಿಗಿನ ಕಳೆದ ದಿನಗಳನ್ನು ನೆನಪಿಸಿಕೊಂಡು ಅಭಿನಂದನೆ ಸಲ್ಲಿಸಿದರು.

ಬಿ. ಪಿ. ವರದರಾಯ ಪೈ, ಮಾಜಿ ಸಚಿವ, ಮೂಡುಬಿದಿರೆಯ ಮಹಾವೀರ ಕಾಲೇಜಿನ ಅಧ್ಯಕ್ಷ ಅಭಯಚಂದ್ರ ಜೈನ್,  ಭಂಡಾರ್ಕಾರ್ಸ್ ಪದವಿ ಪೂರ್ವ  ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ ಗೊಂಡ ಅವರು ಡಾ. ಹೆಚ್. ಶಾಂತಾರಾಮ್ ಕುರಿತು ಮಾತುಗಳನ್ನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಡಾ. ಹೆಚ್. ಶಾಂತಾರಾಮ್ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ಕಾಲೇಜಿನ ಉಪನ್ಯಾಸಕಿ ಪ್ರಫುಲ್ಲ ಬಿ. ಅವರ ಗೀತ ರಚನೆ, ಸ್ವರ ಸಂಯೋಜನೆಯ, ಸಂಗೀತ ಸಂಯೋಜನೆಯುಳ್ಳ ಅಭಿನಂದನಾ ಗೀತೆಯನ್ನು ಹಾಡಿ ಡಾ. ಹೆಚ್.‌ ಶಾಂತಾರಾಮ್‌ ಅವರನ್ನು ಗೌರವಿಸಲಾಯಿತು.

ಡಾ‌. ಹೆಚ್. ಶಾಂತಾರಾಮ್ ಅವರಿಗೆ ಭಾವಾಭಿನಂದನಾ ಸನ್ಮಾನ ನಡೆಯಿತು. ಬಳಿಕ ವಿಶ್ವಸ್ಥರು, ಆಡಳಿತ ಮಂಡಳಿ ಸದಸ್ಯರು, ಸಾರ್ವಜನಿಕ ಅಭಿಮಾನಿಗಳು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರಿಂದ ಡಾ. ಹೆಚ್. ಶಾಂತಾರಾಮ್ ಅವರಿಗೆ ಗೌರವಾರ್ಪಣೆ ನಡೆಯಿತು.

ಕಾಲೇಜಿನ ಏಳ್ಗೆಗೆ ಅನೇಕರ ಶ್ರಮವಿದೆ : ಶಾಂತಾರಾಮ್‌ ಭಾವುಕ ನುಡಿ

ಒಬ್ಬ ವ್ಯಕ್ತಿಯ ಕಾರಣದಿಂದ ಮಾತ್ರ ಒಂದು ಸಂಸ್ಥೆ ಈ ಮಟ್ಟಿಗೆ ಬೆಳೆದಿದೆ ಎಂದು ಹೊಗಳಿದರೆ ಅದು ಖಂಡಿತ ಒಪ್ಪಿತವಲ್ಲ. ನನ್ನೊಂದಿಗೆ ಅನೇಕರ ಶ್ರಮವಿದೆ. ಪ್ರಾಕ್ತನ ಪ್ರಾಂಶುಪಾಲರು, ವಿದ್ಯಾರ್ಥಿಗಳ ಯೋಗದಾನವಿದೆ ಎಂದು ಭಾವಾಭಿನಂದನೆಯನ್ನು ಸ್ವೀಕರಿಸಿ ಡಾ. ಹೆಚ್. ಶಾಂತಾರಾಮ್ ಭಾವುಕವಾಗಿ ಮಾತನಾಡಿದರು.

ಒಬ್ಬ ವ್ಯಕ್ತಿಯಿಂದ ಒಂದು ಸಂಸ್ಥೆಯ ಆಡಳಿತವನ್ನು ಸಮರ್ಥವಾಗಿ ನಡೆಸಲು ಸಾಧ್ಯವಿಲ್ಲ. ಭಂಡಾರ್ಕಾರ್ಸ್‌ ಕಾಲೇಜು ಕುಂದಾಪುರದ ಕಾಲೇಜು, ಊರಿನವರ ಕಾಲೇಜು, ಕಾಲೇಜಿನ ಅಭಿವೃದ್ಧಿಗೆ ಊರವರ, ಪೋಷಕರ ಕೊಡುಗೆ ಅಪಾರ. ನಾನು ನಿಮಿತ್ತ ಮಾತ್ರ. ಈ ಕಾಲೇಜು ಅಮೃತ ಮಹೋತ್ಸವ, ಶತಮಾನೋತ್ಸವ ಅದ್ಧೂರಿಯಾಗಿ ಆಚರಿಸಿಕೊಳ್ಳಲಿ. ಅಕಾಡೆಮಿಯ ಅಧಿಕಾರಿಯಾಗಿ ಎಲ್ಲಾ ಸಂಸ್ಥೆಗಳಿಗೆ ಸರಿಸಮವಾಗಿ ಸೇವೆ ಸಲ್ಲಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಕಾಲೇಜು ಅಜರಾಮರವಾಗಿ ಬೆಳೆಯಲಿ ಎಂದು ಹಾರೈಸಿದರು.  

ಇನ್ನು, ಬೃಹತ್ ಶೈಕ್ಷಣಿಕ ವಸ್ತು ಪ್ರದರ್ಶನದ ಕುರಿತು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಯು.ಎಸ್.ಶೆಣೈ ಮಾಹಿತಿ ನೀಡಿದರು.

ಡಾ. ಹೆಚ್. ಶಾಂತಾರಾಮ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಶಾಂತಾರಾಮ್ ಸೇರಿ ವಿಶ್ವಸ್ಥರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಸೇರಿ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಹಿರಿಯ ವಿಶ್ವಸ್ಥರಾದ ಶಾಂತಾರಾಮ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಿತಾ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನಾ ಬೃಹತ್‌ ವಿಜ್ಞಾನ, ವಾಣಿಜ್ಯ, ಕಲೆ, ಪರಿಸರ, ಸಾಮಾನ್ಯ ಜ್ಞಾನ ಮತ್ತು ಶೈಕ್ಷಣಿಕ ವಸ್ತು ಪ್ರದರ್ಶನದ ಅಂಗವಾಗಿ ಪುರವಣಿಗೆಗೆ ಕುಂದಾಪುರ ತಾಲೂಕಿನ ತಹಶೀಲ್ದಾರರಾದ ಶೋಭಾಲಕ್ಷ್ಮೀ ಚಾಲನೆ ನೀಡಿದರು. ಪುರಸಭೆ ಕುಂದಾಪುರದ ಅಧ್ಯಕ್ಷ ಮೋಹನ್‌ದಾಸ್‌ ಶೆಣೈ ಇದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!