Monday, November 11, 2024

ಕಸ್ತೂರಿ ರಂಗನ್‌ ವರದಿ | ಜಡ್ಕಲ್‌ ನಲ್ಲಿ ಭುಗಿಲೆದ್ದ ಆಕ್ರೋಶ : ವಿಶೇಷ ಗ್ರಾಮ ಸಭೆಯಲ್ಲಿ ಖಂಡನಾ ನಿರ್ಣಯ

ಜನಪ್ರತಿನಿಧಿ (ಜಡ್ಕಲ್‌) : ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್ ಗ್ರಾಮ ಪಂಚಾಯತ್‌ ವಠಾರದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಜಡ್ಕಲ್, ಮುದೂರು ವ್ಯಾಪ್ತಿಯ ಸಹಸ್ರಾರು ಗ್ರಾಮಸ್ಥರು ಜಡ್ಕಲ್ ಮತ್ತು ಮುದೂರು ಗ್ರಾಮವನ್ನು ಪರಿಸರ ಅರಣ್ಯ ಸೂಕ್ಷ್ಮ ಪ್ರದೇಶದಿಂದ ಕೈ ಬಿಡುವಂತೆ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು. ಮನುಷ್ಯನ ಮೂಲಭೂತ ಹಕ್ಕಾಗಿರುವ ಬದುಕುವ ಹಕ್ಕನ್ನು ಕಸಿಯುವ ಇಂತಹ ವರದಿಗಳು ಯಾವ ಕಾಲಕ್ಕೂ ಪ್ರಸ್ತುತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವರದಿಯ ಶಿಫಾರಾಸಿನಲ್ಲಿ ಜಡ್ಕಲ್, ಮುದೂರು, ಕೊಲ್ಲೂರು ಗ್ರಾಮವನ್ನು ಮುಂದುವರಿಸಿದ್ದೇ ಆದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದರು.

ಮನುಷ್ಯನ ಮೂಲಭೂತ ಹಕ್ಕಾಗಿರುವ ಬದುಕುವ ಹಕ್ಕನ್ನು ಕಸಿಯುವ ಇಂತಹ ವರದಿಗಳು ಯಾವ ಕಾಲಕ್ಕೂ ಪ್ರಸ್ತುತವಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮಸ್ಥರ ಮೇಲೆ ಬಲವಂತವಾಗಿ ಕಸ್ತೂರಿ ರಂಗನ್‌ ವರದಿಯನ್ನು ಹೇರಲಾಗುತ್ತಿದೆ.  ವರದಿಯ ಶಿಫಾರಾಸಿನಲ್ಲಿ ಜಡ್ಕಲ್, ಮುದೂರು ಗ್ರಾಮವನ್ನು ಕೈ ಬಿಡುವಂತೆ ಆಗ್ರಹಿಸಿದ್ದಲ್ಲದೇ, ಒಂದು ವೇಳೆ ವರದಿಯಿಂದ ಗ್ರಾಮವನ್ನು ಕೈಬಿಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾನೂನು ತಜ್ಞರಾದ ಬೆಳ್ತಂಗಡಿಯ ರೇವ್.‌ ಡಾ ಸಲೀನ್‌ ಜೋಸೇಫ್‌, ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಸ್ತೂರಿ ರಂಗನ್‌ ವರದಿ ಜಾರಿಯಾಗುವ ಎಲ್ಲಾ ಸೂಚನೆಗಳು ಬಂದಿವೆ. ಈಗಾಗಲೇ ಆರನೇ ಅಧಿಸೂಚನೆಯನ್ನು ನೀಡಲಾಗಿದೆ. ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ವರದಿಯಲ್ಲಿ ಹೇಳಲಾಗಿದೆ. ಉಡುಪಿ ಜಿಲ್ಲೆಯ ೩೫ ಗ್ರಾಮಗಳು ವರದಿಯಡಿಯಲ್ಲಿವೆ. ಕಸ್ತೂರಿ ರಂಗನ್‌ ಸಮಿತಿಯಲ್ಲಿ ಯಾರೂ ದಕ್ಷಿಣ ಭಾರತದವರಿಲ್ಲ ಎನ್ನುವುದು ಕೂಡ ವಿಷಾದನೀಯ. ಜನವಸತಿ ಹೊಂದಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಖಂಡನೀಯ. ಇದು ವಸ್ತುಸ್ಥಿತಿ ಪರಿಗಣಿಸದೇ ಮಾಡಿರುವ ತಪ್ಪು.  ಜನರು ಧ್ವನಿ ಎತ್ತಬೇಕಿದೆ. ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ವರದಿ ಜಾರಿ ಮಾಡಿದ್ದಲ್ಲಿ ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗುವುದು ಸ್ಪಷ್ಟ. ಹೀಗಾದರೇ, ಕೋವಿಡ್‌ ಕಾಲಘಟ್ಟದ ಪರಿಸ್ಥಿತಿಗಿಂತಲೂ ಬದುಕು ಚಿಂತಾಜನಕವಾಗಲಿದೆ ಎಂದರು.

ಆರನೇ ಬಾರಿ ವರದಿಯ ಬಗ್ಗೆ ಗ್ರಾಮಸ್ಥರಿಂದಲೇ ಅಭಿಪ್ರಾಯವನ್ನು ಕೇಳಿದೆ. ಸ್ಥಳಿಯಾಡಳಿತ ಗ್ರಾಮಸ್ಥರ ಅಭಿಪ್ರಾಯ ಕ್ರೋಢಿಕರಿಸಿ ವರದಿಯಿಂದ ಗ್ರಾಮವನ್ನು ಕೈಬಿಡುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಬೇಕಿದೆ. ರಾಜ್ಯ ಸರ್ಕಾರ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವಲ್ಲಿ ಮುತುವರ್ಜಿ ವಹಿಸಬೇಕು. ಗ್ರಾಮಸ್ಥರು ತಮ್ಮ ಬದುಕಿನ ಅಸ್ತಿತ್ವಕ್ಕೆ ಬಂದ ಸಂಕಷ್ಟವನ್ನು ಒಟ್ಟಾಗಿ ಒಂದಾಗಿ ಧ್ವನಿ ಏರಿಸುವ ಮೂಲಕ ಈ ವರದಿಯಿಂದ ಗ್ರಾಮವನ್ನು ಕೈಬಿಡುವಂತೆ ಆಗ್ರಹಿಸಿದರೇ ಖಂಡಿತ ಎಲ್ಲವೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಮಗ್ರ ಗ್ರಾಮೀಣ ಆಶ್ರಮ ಕಾಪು ಇದರ ಅಧ್ಯಕ್ಷರಾದ ಅಶೋಕ್‌ ಕುಮಾರ್‌ ಶೆಟ್ಟಿ, ಕಸ್ತೂರಿ ರಂಗನ್‌ ವರದಿ ಹಾಗೂ ಮಾಧವ ಗಾಡ್ಗೀಳ್‌ ವರದಿಯ ಬಗ್ಗೆ ತಿಳಿಸಿಕೊಟ್ಟರು. ಪರಿಸರ ಸೂಕ್ಷ್ಮ ಪ್ರದೇಶ ಉಳಿಸುವಿಕೆ ನಿಟ್ಟಿನಲ್ಲಿ ಅಭಿವದ್ಧಿ ಚಟುವಟಿಕೆಗಳಿಗೆ ನಿರ್ಬಂಧ, ಹಸಿರುಬೆಳೆ ಉತ್ತೇಜಿಸುವುದು, ನೈಸರ್ಗಿಕ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ ಮತ್ತು ರೂಪಿಸುವಿಕೆ, ಪಶ್ಚಿಮಘಟ್ಟಗಳಲ್ಲಿ ಮೇಲ್ವಿಚಾರಣಾ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಪಶ್ಚಿಮಘಟ್ಟ ಸಂರಕ್ಷಣೆಗೆ ಬೇಕಾದ ಮಹತ್ವಪೂರ್ಣ ಶಿಫಾರಾಸುಗಳನ್ನು ವರದಿಯಲ್ಲಿ ದಾಖಲಿಸಿದೆ. ಗೋವಾ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ವರದಿಯ ಶಿಫಾರಾಸಿಗೆ ಒಳಪಟ್ಟಿವೆ. ಜನರನ್ನು ಒಕ್ಕಲೆಬ್ಬಿಸುವಂತೆ ಎಲ್ಲಿಯೂ ವರದಿಯಲ್ಲಿ ಉಲ್ಲೇಖಿಸಿಲ್ಲ. ಕೆಂಪು ಪಟ್ಟಿ, ಕಿತ್ತಳೆ ಪಟ್ಟಿಗಳ ನಿಷೇದ ಮತ್ತು ಗ್ರಾಮ ಸಭೆಯ ಷರತ್ತುಬದ್ಧ ನಿಯಮಗಳ ಅನುಮತಿಯ ಮೇರೆಗೆ ಕಿರು ಜಲ ವಿದ್ಯುತ್ ಯೋಜನೆಗಳಿಗೆ ಅವಕಾಶವಿದ್ದರೂ, ಶೇ. 30ರಷ್ಟು ಅದರಲ್ಲಿ ನೀರು ಕಾಯ್ದಿರಿಸಿಕೊಳ್ಳಬೇಕು. ಹಂತಹಂತವಾಗಿ ಐದು ವರ್ಷಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಕೈಗಾರಿಕೆಗಳು, ಗಣಿಗಾರಿಕೆಗಳು ತೆರವುಗೊಳಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಜಡ್ಕಲ್‌ ಮುದೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷೆ ಭಾರತಿ ಶೆಟ್ಟಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸತೀಶ್‌ ತೋಳಾರ್‌, ಕಾರ್ಯದರ್ಶಿ ಶಂಕರ್‌ ಆಚಾರ್ಯ, ಮಾಜಿ ಅಧ್ಯಕ್ಷೆ ವನಜಾಕ್ಷಿ ಸೇರಿ ಜಡ್ಕಲ್‌, ಮುದೂರು ಗ್ರಾಮ ಪಂಚಾಯತ್‌ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ ಸದಸ್ಯ ದೇವದಾಸ್‌ ಪ್ರಸ್ತಾವಿಸಿ ಸ್ವಾಗತಿಸಿದರು.

ಅಂತಿಮವಾಗಿ ಈ ಸಂಬಂಧಿಸಿ ವಿಶೇಷ ಸಮಿತಿಯ ಮೂಲಕ ಜಡ್ಕಲ್‌ ಮುದೂರು ಗ್ರಾಮವನ್ನು ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದಿಂದ ಕೈ ಬಿಡುವ ನಿರ್ಣಯ ಮಂಡಿಸಿ ರಾಜ್ಯ ಸರ್ಕಾರಕ್ಕೆ ಹಾಗೂ ವರದಿಯ ರಾಜ್ಯ ತಜ್ಞರ ಸಮಿತಿಗೆ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!