Sunday, October 13, 2024

ನಕಲಿ ಪರಶುರಾಮ ವಿವಾದ : ಕೃಷ್ಣ ನಾಯ್ಕ್‌ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ ! | ಅಕ್ರಮ ಹಣ ವರ್ಗಾವಣೆಯ ದಾಖಲೆ ಸಲ್ಲಿಸಿದ ದೂರುದಾರರ ಪರ ವಕೀಲರು !

ಜನಪ್ರತಿನಿಧಿ (ಬೆಂಗಳೂರು) : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್‌ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಶಿಲ್ಪಿ ಹಾಗೂ ಕ್ರಿಷ್‌ ಆರ್ಟ್‌ ವಲ್ಡ್‌ ಮುಖ್ಯಸ್ಥ ಕೃಷ್ಣ ನಾಯಕ್‌ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು(ಮಂಗಳವಾರ) ವಿಚಾರಣೆ ನಡೆಸಿತು.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅರ್ಜಿದಾರರ ಪರ ವಕೀಲ ಎಂ. ಅರುಣ್‌ ಶ್ಯಾಮ್‌ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಥೀಂ ಪಾರ್ಕ್‌ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಖಾರವಾಗಿ ನುಡಿದರು.

ಪ್ರತಿಮೆಯ ನಿರ್ಮಾಣಕ್ಕೆ ಕಂಚನ್ನು ಬದಲಾಗಿ ಬೇರೆ ಸಾಮಾಗ್ರಿಯನ್ನು ಬಳಸಿದ್ದು ಏಕೆ ಎಂದು ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲ ಎಂ. ಅರುಣ್‌ ಶ್ಯಾಮ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿದ್ದಕ್ಕೆ, ಕಂಚಾಗಿ ಪರಿವರ್ತಿಸಲು ಹಿತ್ತಾಳೆ ಮತ್ತು ತಾಮ್ರ, ಸತುವನ್ನು ಬಳಸಲಾಗಿದೆ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರು.ನಾಗಪ್ರಸನ್ನ ಅವರು ೩೫ ಅಡಿ ಎತ್ತರದ ಪ್ರತಿಮೆಯ ಕಳಪೆ ಕಾಮಗಾರಿಯ ಬಗ್ಗೆ ಮರು ಪ್ರಶ್ನಿಸಿದರು. ಒಂದು ಕೋಟಿ ಇಪ್ಪತ್ತು ಲಕ್ಷ ಸಂದಾಯ ಆಗಿರುವುದರ ಬಗ್ಗೆಯೂ ಪ್ರಶ್ನೆ ಮಾಡಿದರು.

ಥೀಂ ಪಾರ್ಕ್‌ ಉದ್ಘಾಟನೆಯ ಬಳಿಕ ಮರು ವಿನ್ಯಾಸ ಮಾಡುವ ಒಪ್ಪಂದದ ಮೇಲೆಯೇ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆ ಒಪ್ಪಂದದಂತೆಯೇ ಪ್ರತಿಮೆಯನ್ನು ತೆಗೆಯಲಾಗಿದೆ ಎಂದು ಅರುಣ್‌ ಶ್ಯಾಮ್‌ ಸಮರ್ಥಿಸಿಕೊಂಡರು. ಪೂರ್ಣ ಪ್ರತಿಮೆಯನ್ನು ಕಂಚಿನಿಂದಲೇ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು.

ಫಿರ್ಯಾದಿದಾರರ ಪರ ವಕೀಲರು, ‘ಪರಶುರಾಮ ಪ್ರತಿಮೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಂಚನೆ ಮತ್ತು ವರ್ಕೌ ಆರ್ಡರ್‌ ನೀಡದೆ, ಅಂದಾಜು ಖರ್ಚಿನ ಲೆಕ್ಕಚಾರ ನೀಡದೆ ನಿರ್ಮಿತಿ ಕೇಂದ್ರದ ಖಾತೆಯಿಂದ ಅಕ್ರಮವಾಗಿ ಅರ್ಜಿದಾರರ ಖಾತೆಗೆ ಹಣ ವರ್ಗಾವಣೆ  ಆಗಿರುವುದರ ಬಗ್ಗೆ ಪ್ರಸ್ತಾಪಿಸಿದರು. ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಅಂದಾಜು ಖರ್ಚಿನ ಲೆಕ್ಕಚಾರ ಪತ್ರ ಹಾಗೂ ಅರ್ಜಿದಾರರ ಖಾತೆಗೆ ಅಕ್ರಮ ಹಣ ವರ್ಗಾವಣೆ ಆಗಿರುವ ಬ್ಯಾಂಕ್‌ ಸ್ಟೇಟ್‌ಮೆಂಟ್ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಕೆ ಮಾಡಿದರು.

ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್‌ ವೈ ಅವರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಪ್ರಸ್ತಾಪಿಸಿ ನ್ಯಾಯಪೀಠದ ಗಮನ ಸೆಳೆದರು.

ಅರ್ಜಿದಾರರ ಪರ ವಕೀಲರು ದಾಖಲೆಗಳು, ಪರಶುರಾಮನ ನಿರ್ಮಾಣ ಹಂತದಲ್ಲಿರುವ ಪ್ರತಿಮೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಫೋಟೋಗ್ರಾಫ್‌ ಹಾಗೂ ಇತರೆ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವಾದ ಪ್ರತಿವಾದವನ್ನು ಪರಿಶೀಲಿಸಿದ ನ್ಯಾಯಪೀಠ ವಿಚಾರಣೆಯನ್ನು ನಾಳೆಗೆ(ಬುಧವಾರ) ಮುಂದೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನಾಳೆ ಹೊರಬರಲಿದೆ ಎಂಬ ನಿರೀಕ್ಷೆಯಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!