Wednesday, September 11, 2024

ಟ್ವೆಂಟಿ -20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಹೆಮ್ಮೆಯ ಚಪ್ಪಾಳೆ

ಎಸ್ . ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ

ಜೂನ್ -29ರಂದು ಭಾರತೀಯರೆಲ್ಲರೂ ಬಹು ಸಂಭ್ರಮದ ದಿನ. ಕ್ರಿಕೆಟ್ ನಲ್ಲಿ ಭಾರತೀಯ ತಂಡ ವಿಶ್ವಕಪ್ ಗೆದ್ದ ದಿನ.1983ರ ಜೂನ್-25ರಂದು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್‌ನ್ನು ಗೆದ್ದು ಸಂಭ್ರವಿಸಿದ ಆ ಸ್ಮರಣೀಯ ದಿನದ 41ನೇ ವರ್ಷಾಚರಣೆಯ ಕೇವಲ ನಾಲ್ಕು ದಿನಗಳ ಬಳಿಕ ಭಾರತ ಕ್ರಿಕೆಟ್ ತಂಡ 2024ರ ಟ್ವೆಂಟಿ -20 ವಿಶ್ವಕಪ್‌ನ್ನು ಗೆದ್ದು ಸಂಭ್ರಮಿಸಿದ್ದು ಕಳೆದ ಜೂನ್ -29ರಂದು. ಒಂದು ಕಾಲದಲ್ಲಿ ಕ್ರಿಕೆಟ್ ದೈತ್ಯರಾಗಿ ಮೆರೆದಾಡಿದ ವೆಸ್ಟ್‌ಇಂಡೀಸ್‌ ನೆಲದಲ್ಲಿ ಇದೀಗ ಭಾರತೀಯ ಕ್ರಿಕೆಟ್ ತಂಡ ವಿಶ್ವ ಚಾಂಪ್ಯನ್ ಆಗಿ  ಮೆರೆದಾಡಿದ್ದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಚಾರ.

ಭಾರತೀಯ ಕ್ರಿಕೆಟ್ ತಂಡ ಎಷ್ಟೇ ಬಲಿಷ್ಟವಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸಿಸಿ ವಿಶ್ವಕಪ್‌ ಗೆಲ್ಲುವಲ್ಲಿ ಹಲವು ಬಾರಿ ಎಡವಿದೆ. 1974ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶ್ವಕಪ್ ಪಂದ್ಯಾಟಕ್ಕೆ ಆರಂಭ ದೊರೆತರೂ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಗೆದ್ದಿರುವುದು  ನಾಲ್ಕು ಬಾರಿ ಮಾತ್ರ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ ಗೆದ್ದ ನಂತರ ವಿಶ್ವಕಪ್‌ ಗೆದ್ದಿರುವುದು 2007ರಲ್ಲಿ . ಅಂದರೆ, ಬರೋಬ್ಬರಿ 24ವರ್ಷಗಳ ಬಳಿಕ. ಅದು ಕೂಡ ಟ್ವೆಂಟಿ-20 ಚೊಚ್ಚಲ ವಿಶ್ವಕಪ್.  ಮಹೇಂದ್ರ ಸಿಂಗ್ ಸಾರಥ್ಯದಲ್ಲಿ 2007ರಲ್ಲಿ  ಭಾರತೀಯ ಯುವ ತಂಡ ತೋರಿದ ಸರ್ವಾಂಗೀಣ ಪ್ರದರ್ಶನದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಟ್ವೆಂಟಿ-20 ವಿಶ್ವಕಪ್‌ ಪ್ರಾಪ್ತಿಯಾಯಿತು. ಇದಾದ ಬಳಿಕ 2011ರಲ್ಲಿ ಮತ್ತೊಮ್ಮೆ ಭಾರತ ತಂಡ ಏಕದಿನ ವಿಶ್ವಕಪ್‌ನ್ನು ಗೆದ್ದು ಬೀಗಿತು. ಆಗ ಕೂಡ ಭಾರತ ತಂಡವನ್ನು ಮುನ್ನಡೆಸಿದ್ದು ಮಹೇಂದ್ರ ಸಿಂಗ್ ಧೋನಿ. ಇದೀಗ ಸುಮಾರು ಹದಿಮೂರು ವರ್ಷಗಳ ಬಳಿಕ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ನಾಯಕತ್ವದಲ್ಲಿ ಮತ್ತೊಮ್ಮೆ  ವಿಶ್ವ ಚಾಂಪ್ಯನ್ ಪಟ್ಟವನ್ನು ಅಲಂಕರಿಸಿದೆ. ಭಾರತ  ತಂಡದ ಪಾಲಿಗೆ ಇದೊಂದು ಐತಿಹಾಸಿಕ ಸಾಧನೆ.

ಈ ಸ್ಮರಣೀಯ ಅದ್ಬುತ ಗೆಲುವಿನ ಬಗ್ಗೆ ಎಷ್ಟೋ ಚರ್ಚೆಗಳು ಈಗಲೂ ನಡೆಯುತ್ತಿದೆ.ಇದೊಂದು ಮುಗಿಯದ ಅಧ್ಯಾಯ. ಇನ್ನೊಂದು ವಿಶ್ವಕಪ್ ಬರುವವರೆಗೂ ಭಾರತ ತಂಡದ ಈ ಮಹತ್ಸಾಧನೆ ಮತ್ತೆ  ಮತ್ತೆ ಮೆಲುಕು ಹಾಕುವಂತದ್ದು.  ಈ ಗೆಲುವಿನಲ್ಲಿ  ಪ್ರತಿಯೊಬ್ಬ ಆಟಗಾರ ಕೂಡ ಒಂದಲ್ಲ ಒಂದು ರೀತಿಯಲ್ಲಿ ಈ ಐತಿಹಾಸಿಕ ಗೆಲುವಿನಲ್ಲಿ  ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಎಲ್ಲರಲ್ಲೂ ಗೆಲುವಿನ ಕೆಚ್ಚು ಇತ್ತು. ಯುವ ಆಟಗಾರರಂತೂ ಜಿದ್ದಿಗೆ ಬಿದ್ದವರಂತೆ ಆಡಿರುವುದನ್ನು ಕಂಡಿದ್ದೇವೆ. ಐಪಿಎಲ್‌ ಪಂದ್ಯಾಟ ನಡೆದ ಬೆನ್ನಲ್ಲೇ ಭಾರತ ತಂಡ ಅಮೇರಿಕಾ ಹಾಗೂ ವೆಸ್ಟ್‌ಇಂಡೀಸ್‌ ಜಂಟಿ ಆಯೋಜನೆಯ ಈ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಗ್ಗಟ್ಟಿನಲ್ಲಿ  ಆಡಿತು. ಐಪಿಎಲ್‌ನಲ್ಲಿ ಬೇರೆ ಬೇರೆ ಫ್ರಾಂಚೈಸಿ ತಂಡಗಳಿಗೆ ಆಡಿದ ಆಟಗಾರರು ನಂತರ ಒಮ್ಮೆಲೇ  ಭಾರತ ತಂಡದಲ್ಲಿ ಆಡುವಾಗ ಸ್ವಲ್ಪ ಎಡರುತೋಡರು ಆದರೂ ಅದೆಲ್ಲವನ್ನು ಮೆಟ್ಟಿ ನಿಂತ ಭಾರತೀಯ ಆಟಗಾರರು ಒಗ್ಗಟ್ಟಿನ ಹೋರಾಟ ನಡೆಸಿ ಟ್ವೆಂಟಿ -20 ವಿಶ್ವಕಪ್‌ ಗೆದ್ದಿರುವುದು ಚಾರಿತ್ರಿಕ ಸಾಧನೆ.

ಈ ಬಾರಿಯ ಗೆಲುವಿನಲ್ಲಿ ಬೌಲರುಗಳು ಮತ್ತು ಬ್ಯಾಟರುಗಳು ಸಮಾನ ರೀತಿಯ ಪ್ರದರ್ಶನ ನೀಡಿದ್ದಾರೆ. ಭಾರತ ತಂಡ ಸಾಧಾರಣ ಮೊತ್ತವನ್ನು ಮುಂದಿಟ್ಟುಕೊಂಡು ಎದುರಾಳಿ ತಂಡವನ್ನು ಸದೆಬಡಿದಿದೆ. ಫೈನಲ್ ಪಂದ್ಯದಲ್ಲಂತ್ತೂ ಭಾರತೀಯ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು ಸದೆಬಡಿದ ರೀತಿ ಇನ್ನೂ ರೋಮಾಂಚಕ ಆಗಿತ್ತು. ಘಟಾನುಘಾಟಿಗಳ ಬ್ಯಾಟಿಂಗ್‌ ಲೈನ್ ಅಪ್ ಹೊಂದಿರುವ ಆಫ್ರಿಕನ್ನರಿಗೆ 176ರನ್ ಲೆಕ್ಕವೇ ಅಲ್ಲ. ಆದರೆ, ಭಾರತೀಯ  ಬೌಲರ್‌ಗಳು ತೋರಿದ ಪ್ರಬುದ್ಧತೆಯ ಪರಾಕ್ರಮ  ಆಫ್ರಿಕನ್ನರನ್ನು  ನಡುಗಿಸಿ  ಬಿಟ್ಟಿತು. ಪಂದ್ಯಾಟದಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ ನೇತೃತ್ವದ ಬೌಲಿಂಗ್ ಪಡೆ ಆಫ್ರಿಕನ್ನರಿಗೆ ನುಂಗಲಾರದ ತುತ್ತಾಯಿತು. ಆಫ್ರಿಕನ್ನರ ಅಟ್ಟಹಾಸಕ್ಕೆ ಸರಿಯಾದ ಹೊತ್ತಿನಲ್ಲಿ ಬ್ರೇಕ್ ಹಾಕಿದ ಭಾರತೀಯ ಬೌಲರುಗಳು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು.

ಆಫ್ರಿಕನ್ನರ ಪಾಲಿಗೆ ಕಗ್ಗಂಟಾದ ಕೊನೆಯ 5 ಓವರ್ : ಆಫ್ರಿಕನ್ನರ ಪಾಲಿಗೆ ಕೊನೆಯ 5 ಓವರ್‌ಗಳು ಕಗ್ಗಂಟಾಗಿತ್ತು. ಅದರಲ್ಲೂ ಜಸ್ಪ್ರೀತ್  ಬುಮ್ರಾ ಎಸೆದ ಆ 2 ಓವರ್‌ಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದವು. ಗೆಲುವಿನತ್ತ ಮುಖ ಮಾಡಿದ್ದ ಆಫ್ರಿಕನ್ನರಿಗೆ ಆಗ ಕೊನೆಯ 30 ಎಸೆತಗಳಲ್ಲಿ ಬೇಕಿದದ್ದು ಕೇವಲ 30 ರನ್ ಗಳು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ 16ನೇ ಓವರಿನಲ್ಲಿ ನೀಡಿದ್ದು ಕೇವಲ 4 ರನ್. ಬುಮ್ರಾ ಆಫ್ರಿಕನ್ನರ ಮೇಲೆ ಒತ್ತಡ ಹೇರಿದರಿಂದ ಕ್ಲಾಸ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 17ನೇ ಓವರ್‌ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಆ ಓವರ್‌ನಲ್ಲಿಯೂ ಪಾಂಡ್ಯ ನೀಡಿದ್ದು ಕೇವಲ 4 ರನ್. ನಂತರ 18ನೇ ಓವರ್‌ಗೆ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ , ಮಾರ್ಕೊ ಯಾನ್ಸೆನ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಓವರ್‌ನಲ್ಲೂ ಬುಮ್ರಾ ನೀಡಿದ್ದು ಕೇವಲ 2 ರನ್. ಆಗಲೇ ನೋಡಿ ಮ್ಯಾಚ್ ಟರ್ನ್ ಆಗಿದ್ದು.  ಹೀಗೆ ಆಫ್ರಿಕನ್ನರ  ಪಾಲಿಗೆ ನಿರ್ಣಾಯಕವಾಗಿದ್ದ ಕೊನೆಯ ಎರಡು ಓವರ್‌ಗಳಲ್ಲಿ  ಜಸ್ಪ್ರೀತ್ ಬುಮ್ರಾ ಕೇವಲ 6 ರನ್ ಗಳನ್ನು ಮಾತ್ರ ಮಾತ್ರ ನೀಡಿದ್ದರು.  ಇದರ ಪರಿಣಾಮ  ಆಫ್ರಿಕನ್ನರ ಗುರಿ ಅಂತಿಮ 2 ಓವರ್‌ನಲ್ಲಿ 20 ರನ್‌ಗಳಿಗೆ ಬಂದು ನಿಂತಿತು. ಅರ್ಷದೀಪ್ ಎಸೆದ 19ನೇ ಓವರ್‌ನಲ್ಲಿ ನೀಡಿದ್ದು 4 ರನ್ ಮಾತ್ರ . ಹಾಗಾಗಿ ಕೊನೆಯ ಓವರ್‌ಗೆ 16 ರನ್ ಬೇಕಿತ್ತು. ಆಫ್ರಿಕನ್ನರಿಗೆ ಡೇವಿಡ್ ಮಿಲ್ಲರ್ ಗೆಲುವಿನ ಭರವಸೆ ಮೂಡಿಸಿದ್ದರೂ, ಹಾರ್ದಿಕ್ ಪಾಂಡ್ಯ ಎಸೆದ 20ನೇ ಓವರ್‌ನ  ಮೊದಲ ಎಸೆತದಲ್ಲಿ ಬೌಂಡರಿ ಲೈನ್ ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಟ್ ನಿಂದಾಗಿ ಡೇವಿಡ್ ಮಿಲ್ಲರ್ ಔಟಾದರು. ಆ ಓವರ್‌ನಲ್ಲಿ ಹಾರ್ದಿಕ್  ಆಫ್ರಿಕನ್ನರಿಗೆ ಬಿಟ್ಟುಕೊಟ್ಟಿದ್ದು ಕೇವಲ 8 ರನ್. ಹೀಗಾಗಿ ಭಾರತ ತಂಡ 7 ರನ್‌ಗಳಿಂದ ಗೆಲುವು ಸಾಧಿಸಿತು. 4 ಓವರ್‌ಗಳಲ್ಲಿ  ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿ ಟೀಂ ಇಂಡಿಯಾದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು.

ಸೂರ್ಯ ಹಿಡಿದ ಕ್ಯಾಚ್ ವಿಶ್ವಕಪ್ ಗೆಲ್ಲಿಸಿತು:  ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ 20 ನೇ ಓವರ್​ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದೊಂದು ಅದ್ಭುತ ಕ್ಯಾಚ್ ಭಾರತ ತಂಡವನ್ನು ಚಾಂಪಿಯನ್ ಮಾಡಿತು ಎಂಬುದರಲ್ಲಿ ಸಂದೇಹವಿಲ್ಲ.ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ರೋಹಿತ್ ಪಡೆ ಆ ಕ್ಯಾಚ್ ನಿಂದ ವಿಶ್ವಕಪ್  ಗೆಲ್ಲುವಲ್ಲಿ ಕೊನೆಗೂ ಯಶಸ್ವಿಯಾಯಿತು. ಹಾರ್ದಿಕ್ ಪಾಂಡ್ಯಾ ಎಸೆದ 20ನೇ ಓವರಿನ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್‌ಗಟ್ಟಲು ಪ್ರಯತ್ನಿಸಿದರು. ಆದರೆ ಸೂರ್ಯಕುಮಾರ್ ಸಿಕ್ಸರ್​ ಅನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಆ ಚೆಂಡು ಬೌಂಡರಿಯಿಂದ ಹೊರಹೋಗುತ್ತದೆ ಎಂಬುದನ್ನು ಅರಿತ ಅವರು ಮೊದಲು ಚೆಂಡನ್ನು ಹಿಡಿದು, ಮೇಲಕ್ಕೆ ಎಸೆದು, ಬೌಂಡರಿ ಗೆರೆಯಿಂದ ಆಚೆ ಹೋಗಿ ಮತ್ತೆ ಒಳಕ್ಕೆ ಬಂದು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಮಿಲ್ಲರ್ ಔಟಾಗುತ್ತಿದ್ದಂತೆಯೇ ಭಾರತದ ಗೆಲುವು ಖಚಿತವಾಯಿತು. ಸೂರ್ಯಕುಮಾರ್ ಹಿಡಿದ ಆ ಕ್ಯಾಚ್  ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಕ್ಯಾಚ್​ಗಳ ಪಟ್ಟಿಯಲ್ಲಿ ದಾಖಲಾಯಿತು.

ಕೊಹ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ : ಈ ಬಾರಿಯ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ನಿರಾಸೆಯನ್ನು ತಂದರೂ ಕೂಡ  ಫೈನಲ್‌ನಲ್ಲಿ ಮಾತ್ರ ಅವರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದರು. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ವಿರಾಟ್ ಕೊಹ್ಲಿ ಆಟ ಮನಮೋಹಕವಾಗಿತ್ತು.ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮೂಲಕ ಫಾರ್ಮ್ ಗೆ  ಮರಳಿದ ಕೊಹ್ಲಿ ಕವರ್ ಡ್ರೈವ್, ಸ್ಟ್ರೈಟ್ ಡ್ರೈವ್ ಮತ್ತು ಡೀಪ್ ಫೈನ್-ಲೆಗ್‌  ಫ್ಲಿಕ್ ಶಾಟ್ ಗಳು ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 39ನೇ ಅರ್ಧಶತಕ ದಾಖಲಿಸಿದರು. ಈ ಮೂಲಕ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ.

ಅಂತೂ ಟ್ವೆಂಟಿ -20 ವಿಶ್ವಕಪ್ ಟೂರ್ನಿಯ  ಒಂದಲ್ಲ ಒಂದು ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರರ ಪಾಲು ಬಹು ಪ್ರಮುಖವಾಗಿತ್ತು. ಆಟಗಾರರ ಸಂಘಟಿತ ಪ್ರದರ್ಶನವೇ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಟ್ವೆಂಟಿ-20 ವಿಶ್ವಕಪ್ ನಲ್ಲಿ ಅಜೇಯ ತಂಡವಾಗಿ ಫೈನಲ್‌ ಪಂದ್ಯಕ್ಕೆ ಮುನ್ನುಗ್ಗಿದ ಟೀಂ ಇಂಡಿಯಾ ಅಜೇಯವಾಗಿಯೇ ವಿಶ್ವಕಪ್ ಟ್ರೋಫಿ ಗೆದ್ದು ಹೊಸ ಇತಿಹಾಸ ಬರೆದಿದೆ. ಭಾರತ ತಂಡದ ಈ ಸಾಧನೆಗೆ ನಮ್ಮೆಲ್ಲರ ಹೆಮ್ಮೆಯ ಚಪ್ಪಾಳೆ.

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ₹ 125 ಕೋಟಿ : ಐಸಿಸಿ ಟ್ವೆಂಟಿ -20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಬಾರ್ಬಡೋಸ್​​ನಲ್ಲಿ ವಿಶ್ವಕಪ್​ನ ಫೈನಲ್​ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡವು ಐಸಿಸಿ ವಿಶ್ವಕಪ್ ಗಾಗಿ 13 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಅಲ್ಲದೇ ಎರಡನೇ ಬಾರಿ ಟ್ವೆಂಟಿ-20 ವಿಶ್ವ ಕಪ್​ ಗೆದ್ದುಕೊಂಡಿತು. 2007ರಲ್ಲಿ ಎಂ. ಎಸ್. ಧೋನಿ ನೇತೃತ್ವದಲ್ಲಿ ಭಾರತ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್​ ಗೆದ್ದುಕೊಂಡಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!