Sunday, September 8, 2024

ಸೋರುತಿಹುದು ರಾಮ ಮಂದಿರದ ಮಾಳಿಗೆ ! | ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಆತಂಕ

ಜನಪ್ರತಿನಿಧಿ (ಅಯೋಧ್ಯೆ) : ಜನವರಿ 22 ರಂದು ಪ್ರಾಣ ಪ್ರತಿಷ್ಠೆಯಾಗಿ ಲೋಕಾರ್ಪಣೆಯಾದ ಅಯೋಧ್ಯೆ ಶ್ರೀ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಮಂದಿರ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಮ ಮಂದಿರ ಸಾರ್ವಜನಿಕರ ಪ್ರವೇಶಕ್ಕೆ ತೆರವಾದ ಬಳಿಕ ಸುರಿದ ಮೊದಲ ಭಾರಿ ಮಳೆಯ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ನೀರು ಸೋರುತ್ತಿದೆ. ಮಂದಿರದ ನಿರ್ಮಾಣದ ಕಾಮಗಾರಿಯ ಬಗ್ಗೆ  ಅನುಮಾನ ಮೂಡುವ ಹಾಗೆ ಆಗಿದ್ದು, ಕಾಮಗಾರಿಯ ವೇಳೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು, ಮಂದಿರದ ಆವರಣದಲ್ಲಿ ಬಿದ್ದ ಮಳೆನೀರು ಹರಿದುಹೋಗಲು ಸೂಕ್ತವಾದ ವ್ಯವಸ್ಥೆ ಇಲ್ಲ, ಮಂದಿರದ ಆಡಳಿತದ ಹೊಣೆ ಹೊತ್ತಿರುವವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಾಲರಾಮನ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಹಾಗೂ ಅತಿಗಣ್ಯ ವ್ಯಕ್ತಿಗಳು ದರ್ಶನಕ್ಕೆ ಬರುವ ಸ್ಥಳದಲ್ಲಿ ನೀರು ಸೋರುತ್ತಿತ್ತು ಎಂದು ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಮೇಲ್ಛಾವಣಿಯಿಂದ ನೀರು ಸೋರುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಮಂದಿರಕ್ಕೆ ಬಂದು ಮೇಲ್ಛಾವಣಿಯ ರಿಪೇರಿಗೆ ಸೂಚನೆ ನೀಡಿದರು ಎಂದು ಸುದ್ದಿ ಮೂಲಗಳು ಹೇಳಿವೆ.

ಮಂದಿರ ನಿರ್ಮಾಣದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸುದ್ದಿಗಾರರೊದಿಗೆ ಮಾತನಾಡಿದ ನೃಪೇಂದ್ರ ಮಿಶ್ರಾ ಅವರು, ಮೊದಲ ಮಹಡಿಯ ಕೆಲಸ ನಡೆಯುತ್ತಿದ್ದು, ಅದು ಜುಲೈ ಅಂತ್ಯದೊಳಗೆ ಮುಕ್ತಾಯ ಆಗಲಿದೆ ಎಂದರು. ಡಿಸೆಂಬರ್‌ ವೇಳೆಗೆ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಎಲ್ಲೆಡೆಗಳಿಂದ ಬಂದಿರುವ ಎಂಜಿನಿಯರ್‌ಗಳು ರಾಮ ಮಂದಿರವನ್ನು ನಿರ್ಮಿಸುತ್ತಿದ್ದಾರೆ. ಜನವರಿ 22ರಂದು ಮಂದಿರ ಲೋಕಾರ್ಪಣೆಯಾಗಿದೆ. ಆದರೆ ಮಳೆ ಸುರಿದಾಗ ಮೇಲ್ಛಾವಣೆಯಿಂದ ನೀರು ಸೋರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ವಿಶ್ವವಿಖ್ಯಾತ ಮಂದಿರ ಸೋರುತ್ತಿರುವುದು ಆಶ್ಚರ್ಯಕರ. ಇದು ಆಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ

.ಶನಿವಾರ ರಾತ್ರಿ ಸುರಿದ ಮಳೆಯ ಕಾರಣದಿಂದಾಗಿ ರಾಮಪಥ ರಸ್ತೆಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಬೀದಿಗಳಲ್ಲಿ ನೀರು ಭಾರಿ ಪ್ರಮಾಣದಲ್ಲಿ ನಿಂತಿತ್ತು. ಈ ಪ್ರದೇಶದ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ರಾಮಪಥ ರಸ್ತೆ ಹಾಗೂ ಹೊಸದಾಗಿ ನಿರ್ಮಿಸಲಾದ ಕೆಲವು ರಸ್ತೆಗಳು ಅಲ್ಲಲ್ಲಿ ಕುಸಿದಿವೆ.

ಇನ್ನು,ಈ ವಿಷಯ ರಾಜಕೀಯವಾಗಿಯೂ ತಿರುವು ಪಡೆದುಕೊಂಡಿದ್ದು ಮಂದಿರ ನಿರ್ಮಾಣದಲ್ಲಿ ಹಾಗೂ ಅಯೋಧ್ಯೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಬಿಜೆಪಿ ಭ್ರಷ್ಟಾಚಾರ ಎಸಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಹುತಾತ್ಮರ ಶವಪೆಟ್ಟಿಗೆ ಇರಲಿ, ದೇವಸ್ಥಾನವೇ ಇರಲಿ ಬಿಜೆಪಿಗೆ ಇವೆಲ್ಲವೂ ಭ್ರಷ್ಟಾಚಾರ ಎಸಗಲು ಒಂದು ಅವಕಾಶವಾಗಿ ಸಿಗುತ್ತವೆ. ನಂಬಿಕೆ ಮತ್ತು ಪಾವಿತ್ರ್ಯದ ಸಂಕೇತಗಳು ಕೂಡ ಅವರಿಗೆ ಲೂಟಿ ಮಾಡಲು ಒಂದು ಅವಕಾಶ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಗಂಭೀರವಾಗಿ ಟೀಕಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!