Saturday, September 14, 2024

ಭಾಷೆಯೆಂದರೆ ಸಂಸ್ಕೃತಿ, ಸಂಸ್ಕಾರಗಳ ಜೀವ ವಾಹಿನಿ : ಪಿ.ಎನ್‌. ಐತಾಳ್‌  

ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ʼಸಮನ್ಯುʼ

ಜನಪ್ರತಿನಿಧಿ (ಪಾರಂಪಳ್ಳಿ) : ಕನ್ನಡದ ನೆಲದಲ್ಲೇ ಕನ್ನಡ ಅನಾಥವಾಗುತ್ತಿದೆ. ಮಾತಿನ ನಡುವೆ ಆಂಗ್ಲ ಭಾಷಾ ಪದಗಳನ್ನು ತುರುಕುವುದೇ ಪ್ರೌಢಿಮೆಯ ಸಂಕೇತವಾಗುತ್ತಿದೆ. ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳುವ ವ್ಯಕ್ತಿಗಳು ಶ್ರೇಷ್ಠರಾಗುತ್ತಿದ್ದಾರೆ. ದೂರದರ್ಶನದಲ್ಲಿ, ಸಮಾರಂಭಗಳಲ್ಲಿ ನಿರೂಪಕರ ಕೋಡಂಗಿ ಭಾಷೆ ಸಾಮಾನ್ಯವಾಗುತ್ತಿದೆ ಎಂದು ಬ್ರಹ್ಮಾವರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ʼಸಮನ್ಯುʼ ಇದರ ಸರ್ವಾಧ್ಯಕ್ಷ ಪಾರಂಪಳ್ಳಿ ಸರಸಿಂಹ ಐತಾಳ್‌ ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಸರ್ವಾಧ್ಯಕ್ಷರ ನೆಲೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಗಳಿಗೆ ನೀಡುತ್ತಿರುವ ಹೆಸರು ಮತ್ತು ಅದರೊಂದಿಗೆ ನೀಡುವ ವಿವರಣೆಯಲ್ಲಿಯೂ ಆಂಗ್ಲ ಭಾಷೆಗೆ ಮಣೆ ಹಾಕಲಾಗುತ್ತಿದೆ. ಇನ್ನು ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಕನ್ನಡಕ್ಕೆ ಶಾಶ್ವತ ಸಮಾಧಿ ನಿರ್ಮಿಸಲು ಸಕಲ ವ್ಯವಸ್ಥೆಗಳು ಆಗಿವೆ ಅನ್ನಿಸುತ್ತಿದೆ ಎಂದರು.

ಭಾಷೆಯೆಂದರೆ ಬರಿಯ ಭಾಷೆಯಲ್ಲ, ಅದು ಸಂಸ್ಕೃತಿ ಮತ್ತು ಸಂಸ್ಕಾರಗಳ ಜೀವ ವಾಹಿನಿ ಎಂಬುದರ ಅರಿವಾಗಬೇಕು. ಮೆಟ್ರಿಕ್ಯುಲೇಷನ್ ವರೆಗಿನ ಶಿಕ್ಷಣ ಮಾತ್ರ ಭಾಷೆಯಲ್ಲಿ ಇರಬೇಕು ಎಂಬ ರಾಷ್ಟ್ರಪಿತನ ಆಶಯದ ಸಾಕ್ಷಾತ್ಕಾರವಾಗಬೇಕು. ಇದಕ್ಕಿರುವ ಕಾನೂನಿನ ತೊಡಕುಗಳು ದೂರವಾಗಬೇಕು. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ಕನ್ನಡದ್ದು. ನಾವು ಕನ್ನಡವನ್ನು ಪ್ರೀತಿಸಬೇಕು ಇದರರ್ಥ ನಾವು ಆಂಗ್ಲ ಭಾಷೆಯನ್ನು ದ್ವೇಷಿಸಬೇಕೆಂದಲ್ಲ. ಸರಿಯಾಗಿ ಯೋಚಿಸಿದರೆ ಒಂದು ಭಾಷಾಜ್ಞಾನ ಇನ್ನೊಂದು ಭಾಷೆಯ ಕಲಿಕೆಗೆ ಪೂರಕ ಎಂದು ಅವರು ಅಭಿಪ್ರಾಯಪಟ್ಟರು.

ದೀಪ ಪ್ರಜ್ವಲನೆ ಮಾಡುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ, ಕನ್ನಡ ಉಳಿಸಬೇಕು, ಬೆಳೆಸಬೇಕು ಎನ್ನುವ ಮಾತುಗಳಷ್ಟೇ ಹೆಚ್ಚಾಗಿ ಕೇಳಿಬರುತ್ತದೆ. ಆದರೇ ಅದಕ್ಕೆ ದುಡಿಯುವವರು ವಿರಳ. ಸರ್ಕಾರ ಮಟ್ಟದಲ್ಲಿ ಹಾಗೂ ಕಸಾಪ ಮಟ್ಟದಲ್ಲಿ, ಕನ್ನಡ ಕಟ್ಟುವ ಸಂಘಟನೆ ಮೂಲಕ ಕನ್ನಡ ಉಳಿಸಿ, ಬೆಳೆಸುವ ಕೆಲಸ ಬಹಳಷ್ಟು ಪ್ರಯತ್ನಗಳಾಗಿವೆ, ಇನ್ನಷ್ಟು ಆಗಬೆಕಿದೆ. ಗ್ರಾಮ ಮಟ್ಟದಲ್ಲೂ ಕನ್ನಡ ಮನಸ್ಸುಗಳನ್ನು ಒಟ್ಟುಗೂಡಿಸುವ ದೆಸೆಯಲ್ಲಿ ಕೆಲಸ ಆಗಬೇಕಿದೆ. ಕನ್ನಡ ಗ್ರಾಮಗ್ರಾಮಗಳಲ್ಲಿ ಅನುರಣಿಸಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹ ನಿರ್ದೇಶಕರಾದ ಪೂರ್ಣಿಮಾ, ಕರಾವಳಿ ಭಾಗದಲ್ಲಿ ಬಹಳಷ್ಟು ಪ್ರಾದೇಶಿಕ ಭಾಷೆಗಳಿವೆ. ಪ್ರಾದೇಶಿಕ ಭಾಷೆಗಳ ನಡುವೆ ನಾಡು ನುಡಿಯ ಭಾಷೆಯ ಬಳಕೆ ಬಹಳ ಮುಖ್ಯ ಎಂದರು.

ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯ ಕಾರಣದಿಂದ ಕನ್ನಡ ಬಳಕೆ ಕಡಿಮೆಯಾಗಿದೆ. ಮಗು ಬದುಕಿಗೆ ತೆರೆದುಕೊಳ್ಳುವ ಮೊದಲೇ ಮಾತೃಭಾಷೆಯನ್ನು, ಕನ್ನಡ ಭಾಷೆಗಳನ್ನು ಅರಿಯದೆ ವಂಚನೆಗೆ ಒಳಗಾಗುವ ವಾತಾವರಣ ಸೃಷ್ಟಿಯಾಗಿದೆ. ಮನೆಮನೆಗಳಲ್ಲಿ ಕನ್ನಡ ಉಳಿಸುವ, ಬೆಳೆಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಮಾತ್ರವಲ್ಲದೇ, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿಗಳ ವಿಚಾರದಲ್ಲಿ ಬಹಳಷ್ಟು ಮುಂದಿದೆ. ಕನ್ನಡ ಕಟ್ಟುವ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು ಇಲ್ಲಿನ ಭಾಷೆ ಸಂಸ್ಕೃತಿಗಳ ಬೆಳೆಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ಮಾಡಿವೆ. ಎಳೆಯರನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಜಗದೀಶ್‌ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಕನ್ನಡ ಸಾಹಿತ್ಯ ಪರಿತ್ತಿನ ಧ್ವಜ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪಡೆದ ಕಸಾಪ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಡಾ. ವಿಷ್ಣುಮೂರ್ತಿ ಐತಾಳ್‌, ಗೌರವ  ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ, ಗೌರವ ಕೋಶಾಧ್ಯಕ್ಷ ಮನೋಹರ ಪಿ, ಕಸಾಪ ಬ್ರಹ್ಮಾವರ ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್‌, ಕಸಾಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್‌ ಹೆಚ್‌ಪಿ ಸೇರಿ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ಬಳಿಕ ಸಂಶೋಧಕ ಹಾಗೂ ನಿವೃತ್ತ ಪ್ರಚಾರ್ಯ ಡಾ.ಅನಿಲ್‌ ಕುಮಾರ್‌ ಶೆಟ್ಟಿ  ʼಬ್ರಹ್ಮಾವರದ ವಿಶೇಷಗಳು : ಒಂದು ಬೀಸು ನೋಟʼ ಎನ್ನುವ ವಿಶೇಷ ಉಪನ್ಯಾಸವನ್ನು ನೀಡಿದರು. ಬಳಿಕ ನೃತ್ಯ ವೈವುಧ್ಯ, ಕನ್ನಡ ಗೀತ ಗಾಯನ, ಬಹುವಿಧಗೋಷ್ಠಿ, ಯಕ್ಷ-ಲಯ-ವಿನ್ಯಾಸ: ತೆಂಕು-ಬಡಗುಗಳ ಸಮನ್ವಯ, ಅಧ್ಯಕ್ಷರೊಂದಿಗೆ ಮಾತುಕತೆ(ಥೆ) ನಡೆಯಿತು.

ಕನ್ನಡದ ಕಸುವನ್ನು ಉಳಿಸಲುದಾರಿ ? : ಐತಾಳ್‌
ಕನ್ನಡದ ಉಳಿವಿಗಾಗಿ, ಅಭಿವೃದ್ಧಿಗಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಕಾವಲು ಸಮಿತಿ ಮೊದಲಾದ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ನಿರೀಕ್ಷಿತ ಪರಿಣಾಮವನ್ನು ಕಾಣಲಾಗುತ್ತಿಲ್ಲ ಏಕೆ? ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವುದು ಆ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡದ ಕಸುವನ್ನು ಉಳಿಸಲುದಾರಿ ಯಾವುದಯ್ಯ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

-ಪಾರಂಪಳ್ಳಿ ನರಸಿಂಹ ಐತಾಳ್‌
ಸಮ್ಮೇಳನದ ಸರ್ವಾಧ್ಯಕ್ಷರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!