Friday, November 8, 2024

ಕ್ರಿಕೆಟ್‌ ಇತಿಹಾಸದ “ಧ್ರುವತಾರೆ”  ಡೆರೆಕ್  ಅಂಡರ್‌ವುಡ್‌

@ ಎಸ್. ಜಗದೀಶ್ಚಂದ್ರ ಅಂಚನ್
—————
ಕ್ರಿಕೆಟ್ ಇತಿಹಾಸದ ಇತಿಹಾಸದಲ್ಲಿ ಡೆರೆಕ್  ಅಂಡರ್‌ವುಡ್‌ ಅವರ ಹೆಸರು ಅಜರಾಮರ. ಕ್ರಿಕೆಟ್‌  ಮೇಲೆ ಅವರ ಪ್ರಭಾವವು ಮುಂದಿನ ಪೀಳಿಗೆಗೆ ಅನುಕರಣೀಯವೂ ಆಗಿತ್ತು. ಅವರ  ಸಾಟಿಯಿಲ್ಲದ ಕೌಶಲ್ಯತೆ ಹಾಗೂ  ಅವರ ದಣಿವರಿಯದ ಪ್ರಯತ್ನಗಳು ಪರಂಪರೆಯ ಕ್ರಿಕೆಟಿನಲ್ಲಿ ನಿರ್ವಿವಾದವಾಗಿದೆ. ಹಾಗಾಗಿ, ಅವರು ಲೆಜೆಂಡ್ ಬೌಲರ್ ಆಗಿ ಕ್ರಿಕೆಟ್ ಜಗತ್ತಿನಲ್ಲಿ ಈಗಲೂ ಗುರುತಿಸಿಕೊಂಡಿದ್ದಾರೆ. ಹೌದು ,’ ಡೆಡ್ಲಿ ‘ ಎಂಬ ಅಡ್ಡ ಹೆಸರಿನಲ್ಲಿ ಕರೆಸಿಕೊಂಡ  ಡೆರೆಕ್  ಅಂಡರ್‌ವುಡ್‌  ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಸ್ಪಿನ್ ಬೌಲರ್ ಎಂದು ಹೇಳಬಹುದು. ಹಿಂದಿನ ಐಸಿಸಿ  ಪುರುಷರ ಟೆಸ್ಟ್ ಬೌಲರ್ ಶ್ರೇಯಾಂಕಗಳ ಪ್ರಕಾರ, ಅಂಡರ್‌ವುಡ್ ಸೆಪ್ಟೆಂಬರ್ 1969 ರಿಂದ ಆಗಸ್ಟ್ 1973 ರವರೆಗೆ ವಿಶ್ವದ ನಂ.1 ಬೌಲರ್ ಆಗಿದ್ದರು. ಇಂತಹ ಮಹಾನ್ ಬೌಲರ್ ತನ್ನ ಜೀವನ ಪಯಣವನ್ನು ಮುಗಿಸಿ ತನ್ನ ಅಸಾಧಾರಣ ಕೌಶಲ್ಯ ಮತ್ತು ಅಚಲವಾದ ಸಮರ್ಪಣೆಯೊಂದಿಗೆ ಕ್ರಿಕೆಟ್ ಜಗತ್ತಿನಲ್ಲಿ  ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ.


ಸುಮಾರು 15 ವರ್ಷಗಳ ಕಾಲ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ದಂತಕಥೆ ಸ್ಪಿನ್ನರ್ ಅಂಡರ್‌ವುಡ್ ಕ್ರಿಕೆಟಿನ ನಿಜವಾದ ಐಕಾನ್ ಆಗಿದ್ದರು. ಐಸಿಸಿ ಹಾಲ್ ಆಫ್ ಫೇಮರ್ ಆಗಿದ್ದ ಅವರು ಇಂಗ್ಲೆಂಡ್  ದೇಶೀಯ ಕ್ರಿಕೆಟ್‌ ಜೀವನದಲ್ಲಿ,  ಕೆಂಟ್‌ಗಾಗಿ ಮಾತ್ರ ಆಡಿದ್ದರು. ಅವರು 1963ರಲ್ಲಿ 17 ವರ್ಷದವರಾಗಿದ್ದಾಗ ಕೌಂಟಿ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದ್ದರು. ಅಲ್ಲಿಂದ ಅವರನ್ನು  ಈ ದೇಶವು ನಿರ್ಮಿಸಿದ ಅತ್ಯುತ್ತಮ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿ ನೆನಪಿಸಿಕೊಂಡಿದೆ. ಮತ್ತು ಅವರ ಗಮನಾರ್ಹ ದಾಖಲೆಯು ಅವರ ನಿರಂತರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕೆಂಟ್ ಕ್ರಿಕೆಟಿಗನಾಗಿ ಮೂರು ಕೌಂಟಿ ಚಾಂಪಿಯನ್‌ಶಿಪ್‌ಗಳು, ಎರಡು ಏಕದಿನ ಕಪ್‌ಗಳು, ಮೂರು ರಾಷ್ಟ್ರೀಯ ಲೀಗ್‌ಗಳು ಮತ್ತು ಮೂರು ಬೆನ್ಸನ್ ಮತ್ತು ಹೆಡ್ಜಸ್ ಕಪ್‌ಗಳನ್ನು ಗೆದ್ದುಕೊಂಡಿರುವ ಅಂಡರ್‌ವುಡ್ ಕ್ರಿಕೆಟ್‌ ಜಗತ್ತು ಮೆಚ್ಚಿಕೊಂಡಿರುವ ಅಪರೂಪದ  ಬೌಲರ್.

ಸಾರ್ವಕಾಲಿಕ ಶ್ರೇಷ್ಠ ಬೌಲರ್‌ : ಅಂಡರ್‌ವುಡ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕು ಗಮನಾರ್ಹವಾಗಿತ್ತು . ಅವರು 86 ಟೆಸ್ಟ್ ಪಂದ್ಯಗಳು ಮತ್ತು 26 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಆಗ ಅವರು  ದೇಶದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬೆರಗುಗೊಳಿಸುವ 297 ವಿಕೆಟ್‌ಗಳೊಂದಿಗೆ ಸಮಕಾಲೀನ ಬೌಲರುಗಳಲ್ಲಿ ಅವರು ಬಹಳ ಜನಪ್ರಿಯರಾಗಿದ್ದರು. ಇದು ಇಂಗ್ಲೆಂಡ್‌ನಲ್ಲಿ ಯಾವುದೇ ಸ್ಪಿನ್ನರ್‌ನ ಅತಿ ಹೆಚ್ಚು ವಿಕೆಟ್‌ಗಳನ್ನು  ಹೊಂದಿರುವ ದಾಖಲೆಯಾಗಿದೆ.

ನಿಖರ ಹಾಗೂ ಅಪಾಯಕಾರಿ : ಅಂಡರ್‌ವುಡ್, ಚೆಂಡಿನೊಂದಿಗೆ ಅತ್ಯಂತ ನಿಖರತೆಯಿಂದ ಬೌಲಿಂಗ್‌ ನಡೆಸುತ್ತಿದ್ದರು. ಟೆಸ್ಟ್‌ ಕ್ರಿಕೆಟಿನ ಜೊತೆಗೆ 24 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಪ್ರಭಾವಶಾಲಿ ಬೌಲರ್ ಆಗಿದ್ದರು.  ಈ ಎಡಗೈ ಸ್ಪಿನ್ನರ್‌ 676 ಪಂದ್ಯಗಳಿಂದ 2465 ವಿಕೆಟ್‌ಗಳನ್ನು ಪಡೆದಿದ್ದರು. 411  ಲಿಸ್ಟ್-ಎ ಕ್ರಿಕೆಟಿನಲ್ಲಿ 572 ವಿಕೆಟ್‌ಗಳನ್ನು ಪಡೆದಿರುವ ಇವರು   ಏಕದಿನ ಕ್ರಿಕೆಟಿನಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ.  ಅವರು ಒಟ್ಟಾರೆಯಾಗಿ  3000ಕ್ಕೂ ಹೆಚ್ಚು  ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ 60 ಮತ್ತು 70 ರ ದಶಕದ ಪಂದ್ಯಗಳಲ್ಲಿ ಅಂಡರ್‌ವುಡ್ ಜೊತೆ  ಆಡುವುದು ಅಪಾಯಕಾರಿ ಆಗಿತ್ತು. ಅವರು ತುಂಬಾ ನಿಖರವಾಗಿ ಬೌಲ್ ಮಾಡುತ್ತಿದ್ದರು ಮತ್ತು ಚೆಂಡನ್ನು ಸ್ಟಂಪ್‌ನಲ್ಲಿ ಮಾತ್ರ ಎಸೆಯುತ್ತಿದ್ದರು. ಅವರು ಬಯಸಿದಾಗಲೆಲ್ಲಾ ಅವರು ಚೆಂಡನ್ನು ವೇಗವಾಗಿ ಬೌಲ್ ಮಾಡುತ್ತಿದ್ದರು. ಹಾಗಾಗಿ ಅವರು ಅತ್ಯಂತ ಕಠಿಣ ಬೌಲರ್‌ ಅಗಿದ್ದರು.

ಗವಾಸ್ಕರ್  12 ಬಾರಿ ಔಟ್ : ಅಂಡರ್‌ವುಡ್ ಅವರ ಕ್ರಿಕೆಟ್ ಬದುಕಿನಲ್ಲಿ ಸಂಖ್ಯೆಗಳು ಕಥೆಯ ಒಂದು ಭಾಗವನ್ನು ಮಾತ್ರ ಹೇಳುತ್ತವೆ.1977ರಲ್ಲಿ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ  29 ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್‌ಗೆ ಐದು ಪಂದ್ಯಗಳ ಸರಣಿಯಲ್ಲಿ  3-1 ಅಂತರದ ಗೆಲುವು ತಂದುಕೊಟ್ಟದ್ದು ಅವರ ಸಾಧನೆಯ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ನಿಖರ ಮತ್ತು ಸ್ಟಂಪ್‌ನಲ್ಲಿ ಬೌಲ್ ಮಾಡುವ ಇವರ ಬೌಲಿಂಗ್ ಕೌಶಲ್ಯಕ್ಕೆ  ಭಾರತದ ಅಪ್ರತಿಮ ಬ್ಯಾಟರ್ ಸುನಿಲ್  ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಬಾರಿ ಬಲಿಯಾಗಿದ್ದರು. ಅದರಲ್ಲೂ ಭಾರತದ  ವಿರುದ್ಧ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಅಂಡರ್‌ವುಡ್ ಭಾರತದ ವಿರುದ್ಧ 20 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 62 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಅವರ ಅದ್ಭುತ ಪ್ರಯತ್ನವಾಗಿತ್ತು,

ವಿವಾದಾತ್ಮಕ ಕೆರ್ರಿ ಪ್ಯಾಕರ್ ಸರಣಿಯಲ್ಲಿ ಬಾಗಿ : ಅಂಡರ್‌ವುಡ್ ಪ್ರಾಥಮಿಕವಾಗಿ ಬೌಲರ್ ಆಗಿದ್ದರೂ , ಕೆಳ ಕ್ರಮಾಂಕದಲ್ಲಿ ಒಬ್ಬ ಪ್ರಬುದ್ಧ ಬ್ಯಾಟರ್ ಆಗಿದ್ದರು. ಅವರು ತಮ್ಮ ಕಾಲದ ಕೆಲವು ಉಗ್ರ ವೇಗಿಗಳ ವಿರುದ್ಧ ತಮ್ಮ ದೇಹವನ್ನು ರಕ್ಷಿಸಿ ಮಾತ್ರವಲ್ಲ ವಿಶೇಷವಾಗಿ ನೈಟ್‌ವಾಚ್‌ಮನ್ ಆಗಿ ಮೈದಾನಕ್ಕಿಳಿದು ಯಶಸ್ವಿಯಾಗಿದ್ದರು. ಕೆರ್ರಿ ಪ್ಯಾಕರ್ ಅವರ ವಿಶ್ವ ಕ್ರಿಕೆಟ್‌ ಸರಣಿಯಲ್ಲಿ ಅಂಡರ್ ವುಡ್ ಆಡಿ ಎರಡು ವರ್ಷಗಳ ಟೆಸ್ಟ್ ವೃತ್ತಿಜೀವನವನ್ನು ಕಳೆದುಕೊಂಡರು. ಅವರ ಕ್ರಿಕೆಟ್‌ ವೃತ್ತಿಜೀವನದಲ್ಲಿ ವಿವಾದಗಳ ಸಾಲುಗಳಿವೆ. ಅವರನ್ನು 1981ರಲ್ಲಿ ಇಂಗ್ಲೆಂಡ್ ಬಂಡಾಯ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ನಿಷೇಧಿಸಲಾಯಿತು.

ಹಾಲ್ ಆಫ್ ಫೇಮ್‌ಗೆ ಸೇರ್ಪಡೆ : ಅಂಡರ್‌ವುಡ್ ತನ್ನ ಆಟದ ದಿನಗಳನ್ನು ಮೀರಿ ಕ್ರಿಕೆಟ್‌ಗೆ ವಿಶೇಷವಾದ ಕೊಡುಗೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಅವರು 2006 ರಲ್ಲಿ ಕೆಂಟ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿ, 2008 ರಲ್ಲಿ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಕ್ರಿಕೆಟ್‌ ಜೀವನದ ಸಾಧನೆ ಮತ್ತು ಕ್ರಿಕೆಟ್‌ ಆಟದ ಅಭಿವೃದ್ಧಿ ಮತ್ತು ಆಡಳಿತ ಪ್ರಭುತ್ವವನ್ನು ಗುರುತಿಸಿ ಅವರನ್ನು 2009ರಲ್ಲಿ ಐಸಿಸಿ  ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲಾಗಿದೆ. ಆಟಗಾರರ ಮತ್ತು ಅಭಿಮಾನಿಗಳ ಪೀಳಿಗೆಗೆ ಸಮಾನ ಸ್ಪೂರ್ತಿ ನೀಡಿದ ಈ ದಿಗ್ಗಜ ಸ್ಪಿನ್ನರ್ 2024ರ ಏಪ್ರಿಲ್ -15ರಂದು  ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.ಡೆರೆಕ್ ಅಂಡರ್‌ವುಡ್‌ ಅವರ ನಿಧನವು  ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸಿದೆ. ಅವರು ಕ್ರಿಕೆಟ್ ಇತಿಹಾಸದ ‘ಧ್ರುವತಾರೆ’ ಆಗಿದ್ದಾರೆ. ಅವರ ನೆನಪು ಕ್ರಿಕೆಟ್ ಜಗತ್ತಿನಲ್ಲಿ ಮರೆಯಲಾಗದು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!