Saturday, September 14, 2024

ಇಫ್ಕೋ ನಿರ್ದೇಶಕರಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವಿರೋಧ ಆಯ್ಕೆ

ಮಂಗಳೂರು: ಸಹಕಾರ ಕ್ಷೇತ್ರದ ಹಿರಿಯ ಅಪ್ರತಿಮ ನಾಯಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ನವದೆಹಲಿಯ ಇಂಡಿಯನ್ ಫಾರ್ಮರ್‍ಸ್ ಫರ್ಟಿಲೈಸರ್ ಕೋ-ಅಪರೇಟಿವ್ (ಇಫ್ಕೋ) ಸಂಸ್ಥೆಯ ನಿರ್ದೇಶಕರಾಗಿ ಸತತ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಇಫ್ಕೋ ಆಡಳಿತ ಮಂಡಳಿಯಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಲಗಳಿಂದ ಮೂವರು ನಿರ್ದೇಶಕರು ಸ್ಥಾನ ಪಡೆದಿದ್ದು, ಈ ಪೈಕಿ ಕರ್ನಾಟಕದಿಂದ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಉತ್ತರ ಪ್ರದೇಶದಿಂದ ವಾಲ್ಮೀಕಿ ತ್ರಿಪಾಠಿ ಹಾಗೂ ಆಂಧ್ರಪ್ರದೇಶದಿಂದ ಪಿ.ಪಿ.ನಾಗಿ ರೆಡ್ಡಿ ಆಯ್ಕೆಯಾಗಿದ್ದಾರೆ.

ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ಸಹಕಾರಿ ಕ್ಷೇತ್ರದಲ್ಲಿ ಸುಮಾರು ೪೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಕ್ಷೇತ್ರದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತಂದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಇದರ ಅಧ್ಯಕ್ಷರಾಗಿ ಈ ಸಂಸ್ಥೆಗಳ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಮಾತ್ರವಲ್ಲ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಈ ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದಾರೆ. ಮುಖ್ಯವಾಗಿರೈತಪರವಾದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಹಕಾರ ಕ್ಷೇತ್ರವನ್ನು ಇವರು ಅತ್ಯಂತ ಸದೃಢ ಗೊಳಿಸಿದ್ದಾರೆ.

ಇದೀಗ ಪ್ರತಿಷ್ಠಿತ ಇಫ್ಕೋ ಸಂಸ್ಥೆಯಲ್ಲಿ 2ನೇ ಅವಧಿಗೆ ನಿರ್ದೇಶಕರಾಗಿ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ಅವಿರೋಧವಾಗಿ ಆಯ್ಕೆಗೊಂಡಿರುವುದು ಜಿಲ್ಲೆಯ ಸಹಕಾರಿ ಬಂಧುಗಳಿಗೆ ಅತೀವ ಸಂತೋಷವನ್ನು ತಂದಿದೆ. ಭಾರತದಲ್ಲಿ ರಸಗೊಬ್ಬರಗಳ ಪೂರೈಕೆಯಲ್ಲಿ ಬಹುಘಟಕ ಸಹಕಾರ ಸಂಸ್ಥೆಯಾಗಿ 1967ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಇಂಡಿಯನ್ ಫಾರ್ಮರ್‍ಸ್ ಫರ್ಟಿಲೈಸರ್ ಕೋ-ಅಪರೇಟಿವ್ (ಇಫ್ಕೋ) ಸಂಸ್ಥೆ ಸಹಕಾರ ಕ್ಷೇತ್ರದಲ್ಲಿ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. 1954ರಲ್ಲಿ ಯು.ಎಸ್.ಎ. ಇಲ್ಲಿನ ಸಹಕಾರಿ ನಿಯೋಗ ಭಾರತ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ 1967ರ ನವೆಂಬರ್ 3ರಂದು ಇಫ್ಕೋ ಸಂಸ್ಥೆ ಸ್ಥಾಪನೆಗೊಂಡಿತು.

ಇಫ್ಕೋ ಸಂಸ್ಥೆ ರೈತ ಒಡೆತನದ ಸಂಸ್ಥೆಯಾಗಿದೆ. ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ, ಗುಣಮಟ್ಟದ ರಸಗೊಬ್ಬರವನ್ನು ಉತ್ಪಾದಿಸುವ ಮತ್ತು ಅವುಗಳ ಸಮತೋಲಿತ ಬಳಕೆಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇಂದು 36,000 ಸದಸ್ಯ ಸಹಕಾರಿ ಸಂಘಗಳೊಂದಿಗೆ 135 ಲಕ್ಷ ಮೆಗಾಟನ್ ರಸಗೊಬ್ಬರ ಉತ್ಪಾದನೆ ಮತ್ತು 60,000 ಕೋಟಿ ವಹಿವಾಟಿನಿಂದ ವಿಶ್ವದಲ್ಲೇ ಇಫ್ಕೋ ಸಂಸ್ಥೆ ಸಹಕಾರ ವಲಯದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಕಳೆದ 55 ವರ್ಷಗಳಿಂದ ಇಫ್ಕೋ ರೈತರ ಹಾಗೂ ಸಹಕಾರಿಗಳ ಸೇವೆಯಲ್ಲಿ ನಿರತವಾಗಿದೆ.

ರಾಸಾಯಿನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆಮಾಡಲು ಇಫ್ಕೋ ಸಂಸ್ಥೆ ಪರ್ಯಾಯ ಗೊಬ್ಬರಗಳ ಅನ್ವೇಷಣೆಯಲ್ಲಿ ತೊಡಗಿಸಿ ಇಫ್ಕೋ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ‌ಎಪಿ (ದ್ರವ) ಕಂಡು ಹಿಡಿದು ಇದನ್ನು ಕಳೆದ ಆರೇಳು ವರ್ಷಗಳಿಂದ ಕಠಿಣ ಪರಿಶ್ರಮ ಮತ್ತು ಮೌಲ್ಯ ಮಾಪನ ನಂತರ ರಸಗೊಬ್ಬರ ನಿಯಂತ್ರಣ ಕಾಯಿದೆಯಡಿಯಲ್ಲಿ ಭಾರತ ದೇಶದಲ್ಲಿ 8 ಕೋಟಿ ನ್ಯಾನೋ ಯೂರಿಯ ಗೊಬ್ಬರಗಳನ್ನು ರೈತರಿಗೆ ಪರಿಚಯಿಸುವ ಮೂಲಕ 35 ಲಕ್ಷ ಮೆಗಾಟನ್ ಯೂರಿಯಾ ಪ್ರಯೋಗಿಸಿ ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ಸರಕಾರದ ಮೇಲೆ ಬೀಳುವ ಸಬ್ಸಿಡಿಯ ಹೊರೆಯನ್ನು ಕಡಿಮೆ ಮಾಡಿದೆ. ಕರ್ನಾಟಕದಲ್ಲಿ ಈಗಾಗಲೇ 30 ಲಕ್ಷ ನ್ಯಾನೋ ಯೂರಿಯ ಬಾಟಲ್‌ಗಳನ್ನು ರೈತರಿಗೆ ತಲುಪಿಸಲಾಗಿದ್ದು, ಇದರಿಂದ 1.4 ಲಕ್ಷ ಮೆಗಾ ಟನ್ ಹರಳು ರೂಪದ ಯೂರಿಯದ ಬಳಕೆಯನ್ನು ಕಡಿಮೆ ಮಾಡುವಲ್ಲಿ ಮೊದಲ ಹೆಜ್ಜೆಯನ್ನು ಇಡಲಾಗಿದೆ. ಕೃಷಿಯಲ್ಲಿ ಡ್ರೋನ್ ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಅನೇಕ ಲಾಭಗಳಿರುವುದನ್ನು ಪರಿಗಣಿಸಿ ಅದನ್ನು ಕೂಡ ಇಫ್ಕೋ ಸಂಸ್ಥೆ ಪರಿಚಯಿಸಿದೆ. ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ವಿನೂತನ ಯೋಜನೆಯನ್ನು ಇಫ್ಕೋ ಸಂಸ್ಥೆ ರೂಪಿಸಿ ಇದೀಗ ಯಶಸ್ವಿಯಾಗಿದೆ. ದೇಶದಲ್ಲಿ ೨೫೦೦ ಡ್ರೋನ್ ಪರಿಚಯಿಸಿದ್ದು ಇದನ್ನು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶವಾಗಿ ಸಹ ಇಫ್ಕೋ ಸಂಸ್ಥೆ ನೀಡುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!