Sunday, September 8, 2024

ದ್ರಾವಿಡ ರಾಜಕಾರಣದ ನೆಲದಲ್ಲಿ ಪ್ರಾಬಲ್ಯ ಬಯಸಿದ ಬಿಜೆಪಿ !

ತಮಿಳುನಾಡು : ಬಿಜೆಪಿಯ ಡಬಲ್‌ ಡಿಜಿಟ್‌ ಕನಸು | ಡಿಎಂಕೆ ಹಾಟ್‌ ಫೆವರೆಟ್‌ !

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ತಮಿಳುನಾಡು ಹೈವೋಲ್ಟೇಜ್‌ ಕಣ. ಹಲವು ಕಾರಣಗಳಿಗೆ ಪ್ರತಿ ಚುನಾವಣೆಯಲ್ಲಿ ಕುತೂಹಲ ಮೂಡಿಸುವ ತಮಿಳುನಾಡು ರಾಜಕಾರಣದಲ್ಲಿ ಈ ಬಾರಿ ಬಿಜೆಪಿ ಹೊಸ ಅಲೆ ಎಬ್ಬಿಸಿದೆ.

1984ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಾದ್ಯಂತ ಕೇವಲ ಎರಡು ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ, 1989ರ ಲೋಕಸಭಾ ಚುನಾವಣೆಯಲ್ಲಿ ಪುಟಿದೆದ್ದು ಒಮ್ಮಿಂದೊಮ್ಮೆಲೆ 85 ಕ್ಷೇತ್ರಗಳನ್ನು ಪಡೆದು ಇಡೀ ದೇಶವನ್ನೇ ಬಿಜೆಪಿಯತ್ತ ತಿರುಗಿ ನೋಡುವಂತೆ ಮಾಡಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಒಂದು ದೊಡ್ಡ ಇತಿಹಾಸವೇ ಸರಿ.

ತಮಿಳುನಾಡಿನಂತಹ ದ್ರಾವಿಡ ರಾಜಕಾರಣವಿರುವ ರಾಜ್ಯದಲ್ಲಿ ಬಿಜೆಪಿ ಹೇಳಹೆಸರಿಲ್ಲದ ಪಕ್ಷದಂತೆಯೇ ಇದ್ದಿತ್ತು. ಆದರೇ ಕಳೆದ ಎರಡು ಲೋಕಸಭಾ ಚನಾವಣೆಯಿಂದೀಚೆಗೆ ಬಾರಿ ಸದ್ದು ಮಾಡುತ್ತಿದೆ ಬಿಜೆಪಿ. 1984 ಮತ್ತು 1989 ರ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯ ಅಲೆ ದೇಶದೆಲ್ಲೆಡೆ ಎದ್ದಂತೆ ತಮಿಳುನಾಡಿನಲ್ಲಿಯೂ ಮರುಕಳಿಸಬಹುದೇ ಎಂಬ ಪ್ರಶ್ನೆಯೊಂದು ಮಂದಿದೆ. ಈಗಾಗಲೇ ಚುನಾವಣೆಯನ್ನು ಪೂರೈಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ತಮಿಳುನಾಡಿನ ರಾಜಕಾರಣದಲ್ಲಿ ಈ ಬಗೆಗಿನ ಕುತೂಹಲ ಸೃಷ್ಟಿಯಾಗಿದೆ.

1962ರ ಲೋಕಸಭಾ ಚುನಾವಣೆಯಿಂದ ಪ್ರವರ್ಧಮಾನಕ್ಕೆ ಬಂದ ದ್ರಾವಿಡ ರಾಜಕಾರಣ ಕಾಂಗ್ರೆಸ್‌ ಪಕ್ಷವನ್ನು ನೆಲಕಚ್ಚುವಂತೆ ಮಾಡಿತ್ತು. ಆಗಿನಿಂದಲೂ ಎರಡು ಪ್ರಾದೇಶಿಕ ಪಕ್ಷಗಳ ಹೋರಾಟದ ಕದನವಾಗಿದ್ದ ತಮಿಳುನಾಡು, ಇದೇ ಮೊದಲ ಬಾರಿಗೆ ಡಿಎಂಕೆ- ಎಐಎಡಿಎಂಕೆ- ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡಿದೆ.

370 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ದಕ್ಷಿಣದ ರಾಜ್ಯಗಳೇ ಟಾರ್ಗೆಟ್‌. ಕನಿಷ್ಠ 50 ರಿಂದ 60 ಕ್ಷೇತ್ರಗಳ ಮೇಲೆ ಗುರಿ ಇಟ್ಟಿರುವ ಬಿಜೆಪಿ, ತಮಿಳುನಾಡಿನಲ್ಲಿ ಕನಿಷ್ಠ 10 ಕ್ಷೇತ್ರಗಳನ್ನು ಗಳಿಸುವ ಇರಾದೆಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ರಾಜ್ಯದಲ್ಲಿ ಅನೇಕ ರ್ಯಾಲಿಗಳು ಮತ್ತು ರೋಡ್‌ ಶೋಗಳನ್ನು ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷವಾಗಿರುವ ಡಿಎಂಕೆ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಆಡಳಿತದ ಭದ್ರ ನೆಲೆ ಡಿಎಂಕೆ ಹಾಗೂ ಕಾಂಗ್ರೆಸ್‌ಗೆ ಪ್ಲಸ್‌ ಆದರೇ, ಬಿಜೆಪಿ ಸೃಷ್ಟಿಸಿದ ಆಡಳಿತ ವಿರೋಧ ಅಲೆಯೂ ಈ ಬಾರಿ ತುಸು ಡ್ಯಾಮೇಜ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 19 ರಂದು ಚುನಾವಣೆಯನ್ನು ಪೂರೈಸಿರುವ ತಮಿಳುನಾಡು, 2014 ರಿಂದೀಚೆಗೆ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ದಕ್ಷಿಣದಲ್ಲಿ ತನ್ನ ‘ಮಿಷನ್ 50’ ಅನ್ನು ಸಾಧಿಸಲು ರಾಜ್ಯದಲ್ಲಿ ಮಹತ್ತರ ಬಾಗಿಲು ತೆರೆಯುವ ಬಹಳ ದೊಡ್ಡ ವಿಶ್ವಾಸಲದಲ್ಲಿದೆ. ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಚುನಾವಣೆ ಮುಗಿದ ಮೇಲಂತೂ ಈ ಬಾರಿ ʼಡಬಲ್‌ ಡಿಜಿಟ್‌ʼನಲ್ಲಿ ಕ್ಷೇತ್ರಗಳು ಬಿಜೆಪಿಯ ಪಾಲಾಗುವುದು ನಿಶ್ಚಿತ ಎಂಬ ಹುರುಪಿನಲ್ಲಿದ್ದಾರೆ. ರಾಜ್ಯದಲ್ಲಿ ಎರಡು ಪ್ರಬಲವಾದ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಬದಲಾವಣೆ ಮತ್ತು ಮೂರನೇ ಶಕ್ತಿ ಬಯಸುವ ಮತದಾರರನ್ನು ಸೆಳೆಯುವ ಆಶಯದೊಂದಿಗೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯ ಪೂರ್ವವಾಗಿ ಕೆಲಸ ಮಾಡಿದೆ.

ಬಿಜೆಪಿ-ಎಐಎಡಿಎಂಕೆ: ಆನ್ ಅಂಡ್ ಆಫ್‌ :

ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಭಾಗವಾಗಿ ಡಿಎಂಕೆ ನೇತೃತ್ವದ ಬಣವು 2019 ರಲ್ಲಿ ತಮಿಳುನಾಡಿನಲ್ಲಿ 39 ಕ್ಷೇತ್ರಗಳಲ್ಲಿ 38 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಎಐಎಡಿಎಂಕೆ ಕೇವಲ ಒಂದು ಕ್ಷೇತ್ರದಲ್ಲಿ ತೃಪ್ತಿ ಪಟ್ಟುಕೊಂಡಿತ್ತು.

ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಪ್ರೀತಿ-ದ್ವೇಷದ ಸಂಬಂಧ ಇಂದಿಗೂ ಮುಂದುವರೆದಿದೆ. ಪಕ್ಷಗಳು 1998 ರಲ್ಲಿ ಒಟ್ಟಾಗಿ ಸ್ಪರ್ಧಿಸಿದವು, 1999 ರಲ್ಲಿ ಮೈತ್ರಿಯನ್ನು ಮುರಿದುಕೊಂಡವು, 2004 ರಲ್ಲಿ ಮತ್ತೆ ಕೈಜೋಡಿಸಿ, 2009ರಲ್ಲಿ ಮತ್ತೆ ಮೈತ್ರಿ ಕಡಿದುಕೊಂಡವು. 2014ರಲ್ಲಿ ನರೇಂದ್ರ ಮೋದಿಯವರೊಂದಿಗೆ ಜಯಲಲಿತಾ ಉತ್ತಮ ಬಾಂಧವ್ಯವನ್ನು ಬೆಸೆದುಕೊಂಡಿದ್ದರೂ, ಎಐಎಡಿಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸೇರಲಿಲ್ಲ. ಬದಲಿಗೆ,  ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತು. 39 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳನ್ನು ಗಳಿಸಿತ್ತು. ಆದಾಗ್ಯೂ, ಐದು ವರ್ಷಗಳ ನಂತರ, 2019 ರಲ್ಲಿ, ಪಕ್ಷವು ಎನ್‌ಡಿಎ ಸೇರಲು ನಿರ್ಧರಿಸಿದಾಗ ಹೀನಾಯ ಸೋಲು ಕಾಣಬೇಕಾಯಿತು. 2024ರ ಚುನಾವಣೆಗೂ ಮುನ್ನ ಮತ್ತೆ ಬೇರ್ಪಟ್ಟಿವೆ.

ಸೀಟ್ ಲೆಕ್ಕಾಚಾರಗಳು  

ಈ ಚುನಾವಣೆಯಲ್ಲಿ 39 ಕ್ಷೇತ್ರಗಳ ಪೈಕಿ ಬಿಜೆಪಿ 23, ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) 10, ಮಾಜಿ ಸಚಿವ ಜಿ.ಕೆ. ವಾಸನ್ ನೇತೃತ್ವದ ತಮಿಳ್ ಮಾನಿಲ ಕಾಂಗ್ರೆಸ್ (ಟಿಎಂಸಿ) ಮೂರು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಎರಡು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕ ಓ.ಪನ್ನೀರಸೆಲ್ವಂ ಸ್ಪರ್ಧಿಸಿದ್ದಾರೆ.

ಎಐಎಡಿಎಂಕೆಯು ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಆಡಳಿತರೂಢ ಡಿಎಂಕೆ ನೇತೃತ್ವದ ಗುಂಪು ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಮತ್ತು ಸಿಪಿಐ-ಮಾರ್ಕ್ಸಿಸ್ಟ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಿದೆ. ಏತನ್ಮಧ್ಯೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಎಐಎಡಿಎಂಕೆ ನೇತೃತ್ವದ ಬಣಕ್ಕೆ ತನ್ನ ಬೆಂಬಲ ನೀಡಿದೆ, ಇದು ಒಟ್ಟು ಜನಸಂಖ್ಯೆಯ ಶೇ. 6 ರಷ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಬಹುದು.

ಚುನಾವಣೆಯ ರಾಷ್ಟ್ರೀಯ ಸ್ವರೂಪವನ್ನು ಗಮನಿಸಿದರೆ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ತನ್ನನ್ನು ಪ್ರಮುಖ ವಿರೋಧ ಪಕ್ಷವಾಗಿ ನಿಲ್ಲಲು ಪ್ರಯತ್ನಿಸಿ ಚುನಾವಣೆ ಎದುರಿಸಿದೆ. ಡಿಎಂಕೆಗೆ ಪರ್ಯಾಯ ಎಂಬಷ್ಟು ಪ್ರಭಾವ ಬೀರದೇ ಇದ್ದರೂ ಎಐಎಡಿಎಂಕೆ ಮತ ಮೂಲವನ್ನು ಕೆಡಿಸುವ ಪ್ರಯತ್ನವನ್ನಂತೂ ಮಾಡಿದ ಲಕ್ಷಣ ಚುನಾವಣಾ ಪೂರ್ವದಲ್ಲಿಯೂ, ಚುನಾವಣೆಯ ಆದಮೇಲೂ ಕಾಣಿಸುತ್ತಿದೆ ಎನ್ನುವುದು ಅಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ವಾಸ್ತವವಾಗಿ, ಪ್ರತಿಪಕ್ಷದ ಜಾಗವನ್ನು ವಶಪಡಿಸಿಕೊಳ್ಳಲು ಮತ್ತು ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲು ಅಕ್ಷರಶಃ ಪ್ರಯತ್ನಿಸಿದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಎಐಎಡಿಎಂಕೆ ಜೊತೆಗಿನ ಒಡಕಿಗೆ ಪ್ರಮುಖ ಕಾರಣ ಎನ್ನುವುದು ಉಲ್ಲೇಖಾರ್ಹ.

ತಮಿಳುನಾಡಿನ ಜಾತಿ ಲೆಕ್ಕಚಾರ :

ತಮಿಳುನಾಡಿನಲ್ಲಿ ಜಾತಿ ನಿರ್ಣಾಯಕ ಅಂಶ, ಒಬಿಸಿ ಮತ್ತು ಎಸ್‌ಸಿ/ಎಸ್‌ಟಿ  ಕ್ರಮವಾಗಿ ಜನಸಂಖ್ಯೆಯ ಶೇ.68 ಮತ್ತು ಶೇ.21 ರಷ್ಟಿದ್ದಾರೆ. ಸಾಂಪ್ರದಾಯಿಕವಾಗಿ, ಎಐಎಡಿಎಂಕೆಯು ಮೇಲ್ಜಾತಿಗಳು, ವನ್ನಿಯಾರ್‌ ಸಮುದಾಯ, ದಲಿತರು, ಗೌಂಡರ್‌ ಮತ್ತು ತೇವರ್‌ ಸಮುದಾಯದ ಬಲವಾದ ಬೆಂಬಲ ಹೊಂದಿದೆ. ಆಡಳಿತಾರೂಢ ಡಿಎಂಕೆಯ ನಿಷ್ಠಾವಂತ ಮತಗಳು ವೆಲ್ಲಲರ್ ಸಮುದಾಯ, ಮುದಲಿಯಾರ್‌, ಉದಯರ್‌ಗಳು, ನಾಡಾರ್‌, ನಾಯ್ಡು ಮತ್ತು ಮುಸ್ಲಿಮ್ ಸಮುದಾಯಗಳ ಮತಗಳ ಪ್ರಬಲ ಬೆಂಬಲ ಹೊಂದಿದೆ.

ರಾಜ್ಯದ ರಾಜಕೀಯ ರಂಗಕ್ಕೆ ಎಂಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ಉದಯವು ನಾಯ್ಡು ಸಮುದಾಯಕ್ಕೆ ಹೆಚ್ಚುವರಿ ಆಯ್ಕೆಯನ್ನು ಮುಂದಿಟ್ಟಿದೆ. ಎಸ್‌ಸಿಗಳು ಮತ್ತು ವನ್ನಿಯಾರ್‌ ಸಮುದಾಯಗಳ ಮತಗಳು ಡಿಎಂಕೆ ಕಡೆಗೆ ವಾಲಿದ್ದು ಚುನಾವಣೆ ನಂತರದಲ್ಲಿ ಕಂಡುಬಂದಿದೆ ಎಂದು ಡೇಟಾ ಸೂಚಿಸುತ್ತದೆ. ಅಣ್ಣಾಮಲೈ ಗೌಂಡರ್‌ ಸಮುದಾಯದಿಂದ ಬಂದವರು. ತೇವರ್‌  ಮತ್ತು ನಾಡಾರ್‌ ಸಮುದಾಯಗಳು ಬಿಜೆಪಿಗೆ ಬೆಂಬಲಿಸಿವೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ರಾಷ್ಟ್ರೀಯ ಚುನಾವಣಾ ಅಧ್ಯಯನದ ಸಮೀಕ್ಷೆಯ ಪ್ರಕಾರ, ತಮಿಳುನಾಡಿನಲ್ಲಿ ಸುಮಾರು ಶೇ.20ರಷ್ಟು ತೇವರ್ ಮತ್ತು ಗೌಂಡರ್‌ ಸಮುದಾಯದ ಮತದಾರರು 2019 ರಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಅಂಶವನ್ನೂ ನಾವು ಇಲ್ಲಿ ತಿಳಿಯಬಹುದಾಗಿದೆ.

ಪಿಎಂ ಮೋದಿ ಮತ್ತು ಅಣ್ಣಾಮಲೈ ಇಬ್ಬರ ಕಠಿಣ ಪರಿಶ್ರಮದ ಹೊರತಾಗಿಯೂ, ತಮಿಳುನಾಡಿನಲ್ಲಿ ಯೋಗ್ಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲುವುದು 2019ರಲ್ಲಿ ಸಾಧ್ಯವಾಗಿಲ್ಲ. ಅಷ್ಟೇಕೆ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ಬಿಜೆಪಿಗೆ ಈ ಬಾರಿಯ ಚುನಾವಣೆಯ ಒಂದು ಸವಾಲಾಗಿತ್ತು. ವಾಸ್ತವವಾಗಿ, ಪಕ್ಷದ ಅತ್ಯುತ್ತಮ ಸಾಧನೆ ಎಂದರೇ, 1999 ರಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ನಾಲ್ಕು ಕ್ಷೇತ್ರಗಳನ್ನು ಗೆದ್ದಿತ್ತು. ಈ ಕಾರಣಕ್ಕಾಗಿಯೇ ಬಿಜೆಪಿ ಈ ಬಾರಿ ತನ್ನ ಮತಗಳ ಪಾಲನ್ನು ಸುಧಾರಿಸಲು ಮತ್ತು ಭವಿಷ್ಯದ ಲಾಭಕ್ಕಾಗಿ ಪ್ರಬಲ ಅಡಿಪಾಯವನ್ನು ಸ್ಥಾಪಿಸಲು ಹೆಚ್ಚಿನ ಗಮನಹರಿಸಿ ಚುನಾವಣೆಯನ್ನು ಎದುರಿಸಿದೆ. ಬಿಜೆಪಿ ವಹಿಸಿದ ಶ್ರಮ ಫಲವಾಗಿ ಪರಿಣಮಿಸಿದೆಯೇ ಎನ್ನುವುದು ಫಲಿತಾಂಶ ಬಂದ ಮೇಲೆ ತಿಳಿದುಬರಬೇಕು.

ತಮಿಳುನಾಡು ʼಮತಗಳ ಸ್ವಿಂಗ್‌ ಪದ್ಧತಿʼಗೆ ಹೆಸರುವಾಸಿ. ದೊಡ್ಡ ಪ್ರಮಾಣದ ಸ್ವಿಂಗ್ ಮತಗಳು ತನ್ನ ಪರವಾಗಿ ಒಲಿದಿರಬಹುದು ಎನ್ನುವುದು ಚುನಾವಣೆಯ ನಂತರದ ವಾತಾವರಣದಲ್ಲಿ ಬಿಜೆಪಿ ವಿಶ್ವಾಸದಲ್ಲಿದೆ.

ಆದರೆ, ಆ ಗುಂಪಿನ ಎರಡು ಪಕ್ಷಗಳಾದ ಡಿಎಂಡಿಕೆ ಮತ್ತು ಎಂಡಿಎಂಕೆ ಈಗ ಮೈತ್ರಿಯಿಂದ ಹೊರಬಂದಿವೆ. ಬಿಜೆಪಿ ಎಸ್. ರಾಮದಾಸ್ ಅವರ ಪಿಎಂಕೆ ರಚನೆಯಾದಾಗಿನಿಂದ ಸತತವಾಗಿ ಶೇ.5-6 ರಷ್ಟು ಮತಗಳನ್ನು ಪಡೆಯುತ್ತಿದೆ. ಉತ್ತರ ತಮಿಳುನಾಡಿನಲ್ಲಿ ಹೆಚ್ಚಿರುವ ವನ್ನಿಯಾರ್ ಸಮುದಾಯವನ್ನು ಸೆಳೆಯುವಲ್ಲಿ ಪ್ರಯತ್ನಿಸಿದೆ. ದಕ್ಷಿಣ ಮತ್ತು ಪಶ್ಚಿಮದಲ್ಲಿ ಮತ್ತು ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿಯೂ ಬಿಜೆಪಿ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಣ್ಣಾಮಲೈ, ಟಿಟಿವಿ ದಿನಕರನ್ ಮತ್ತು ಒಪಿಎಸ್ ಅವರಂತಹ ಪ್ರಬಲ ನಾಯಕರು ತಮಿಳುನಾಡಿನಲ್ಲಿ ಬಿಜೆಪಿ ವರ್ಚಸ್ಸನ್ನು ವೃದ್ಧಿಸಲು ಪ್ರಯತ್ನ ಮಾಡಿದ್ದಾರೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಕೊಯಮತ್ತೂರು(ದಕ್ಷಿಣ) ಮತ್ತು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಾಗರಕೋವಿಲ್, ತಿರುನೆಲ್ವೇಲಿ, ಮೊಡಕುರಿಚ್ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಶಕ್ತಿಯ ಸ್ತಂಭಗಳಾಗಿವೆ.

ಆರೋಪ ಪ್ರತ್ಯಾರೋಪಗಳು :

ಡಿಎಂಕೆ ರಾಜ್ಯದಲ್ಲಿ ಎಐಎಡಿಎಂಕೆ ಕಾಲಿಡದಂತೆ ತಡೆಯಲು ಆ ಪಕ್ಷವನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ʼಇಂಡಿಯಾ;ʼ ಬಣವು ಉತ್ತರ ಮತ್ತು ದಕ್ಷಿಣ ಭಾರತವೆಂದು ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಬಿಜೆಪಿಯೊಂದಿಗೆ ಎಐಎಡಿಎಂಕೆ ರಹಸ್ಯ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದಾರೆ.ಸ್ಟಾಲಿನ್ ತೆರಿಗೆ ಹಂಚಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿಗೆ ವಂಚಿಸುತ್ತಿದೆ ಎಂಬ ವಿಚಾರವನ್ನು ಎತ್ತಿದ್ದಾರೆ ಮತ್ತು ಬಿಜೆಪಿಯು ಫೆಡರಲ್ ರಚನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ತಮಿಳಿನ ಪ್ರಾದೇಶಿಕತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಬಿಜೆಪಿಯನ್ನು ‘ಹೊರಗಿನ’ ಪಕ್ಷ ಎಂದು ಬಿಂಬಿಸಲು ಡಿಎಂಕೆ ಪ್ರಯತ್ನಿಸಿದೆ. ಈ ಆರೋಪ ಪತ್ಯಾರೋಪಗಳು ಮತದಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದನ್ನು ಫಲಿತಾಂಶದ ದಿನವೇ ನೋಡಬೇಕು.

ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಫಲಿತಾಂಶ ಬರಬೇಕಿದೆ. ದ್ರಾವಿಡ ಪಕ್ಷದ ಕೋಟೆಯನ್ನು ಕೆಡವಲು ಬಿಜೆಪಿಗೆ ಸಾಧ್ಯವೇ? ಮುಂದಿನ ಕೆಲವು ವಾರಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!