spot_img
Wednesday, January 22, 2025
spot_img

ಕುಂದಾಪುರ ‘ಗಾಂಧಿ ಪಾರ್ಕಿನ ಹೊಸ ಹೂಗಳು’ ವ್ಯಾಪಾರ ಮಳಿಗೆ ತೆರೆದರು!

ಕುಂದಾಪುರ, ಎ.20: (ಜನಪ್ರತಿನಿಧಿ ವಾರ್ತೆ) ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ನೇತೃತ್ವದಲ್ಲಿ ಕುಂದಾಪುರದ ಮಹಾತ್ಮಾ ಗಾಂಧಿ ಪಾರ್ಕ್‌ನ ಬಾಲಭವನದಲ್ಲಿ ನಡೆಯುತ್ತಿರುವ ರಂಗರಂಗು ಮಕ್ಕಳ ರಜಾಮೇಳದಲ್ಲಿ ಎ.20ರಂದು ಮಕ್ಕಳ ಸಂತೆ-2024 ನಡೆಯಿತು.

ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಗಾಂಧಿ ಪಾರ್ಕಿನ ಹೊಸ ಹೂಗಳು ಮಕ್ಕಳ ಸೃಜನಶೀಲ ಬರವಣಿಗೆಗಳ ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಿನಿಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅನಾವರಣಗೊಳಿಸಿ, ಸಮುದಾಯ ಸಾಂಸ್ಕೃತಿಕ ಸಂಘಟನೆ ರಂಗರಂಗು ಎನ್ನುವ ವಿಶಿಷ್ಠವಾದ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತಿದೆ. ಕಲೆ, ಸಂಸ್ಕೃತಿ, ಸಾಂಸ್ಕೃತಿಕೆ, ಕೌಶಲ್ಯ, ಅಭಿನಯ, ವ್ಯವಹಾರ ಜ್ಞಾನ ಹೀಗೆ ಎಲ್ಲವನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗುತ್ತಿದೆ ಎಂದು ಹೇಳಿದ ಅವರು, ಕನ್ನಡವೆಂದರೆ ಅದು ಶಕ್ತಿ. ಕನ್ನಡದ ಅಕ್ಷರಗಳಲ್ಲಿ ಅದ್ಬುತವಾದ ಸಾಮರ್ಥ್ಯವಿದೆ. ನಾನು ಕನ್ನಡದ ಪುಸ್ತಕಗಳನ್ನು ಓದುತ್ತಲೇ ಬೆಳೆದವ. ಕೇವಲ ಕನ್ನಡ ಒಂದೇ ಭಾಷೆಯ ಪ್ರಭುತ್ವದಿಂದ ವಿಶ್ವದ ಹಲವಾರು ದೇಶಗಳನ್ನು ಸಂಚರಿಸಿದೆ. ನಮ್ಮ ಮಾತೃಭಾಷೆ ಕನ್ನಡವನ್ನು ಕಡೆಗಣಿಸಬಾರದು ಎಂದರು.

ಕುಂದಾಪುರದ ಶೇಟ್ ಜ್ಯುವೆಲ್ಲರ್‍ಸ್‌ನ ಸುಧೀಂದ್ರ ಶೇಟ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಾಂಧಿ ಪಾರ್ಕಿನ ಹೊಸ ಹೂಗಳು ಪುಸ್ತಕ ನಿರ್ಮಾಣದಲ್ಲಿ ಸಹಕರಿಸಿದ ತಿಮ್ಮಪ್ಪ ಗುಲ್ವಾಡಿ, ಗಣೇಶ ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಾನಂದ ಬೈಂದೂರು, ಜಿ.ವಿ ಕಾರಂತ, ವಾಸುದೇವ ಗಂಗೇರ, ಸಮುದಾಯದ ಸದಸ್ಯರು, ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಉದಯ ಶೆಟ್ಟಿ ಪಡುಕೆರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.

ಖರೀದಿಯ ಮೂಲಕವೇ ಸಂತೆಗೆ ಚಾಲನೆ:
ಮಕ್ಕಳ ಸಂತೆಗೆ ಅತಿಥಿಗಳು ಖರೀದಿಯ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಪ್ರತಿಯೊಂದು ಮಕ್ಕಳ ಸ್ಟಾಲ್‌ಗಳಿಗೂ ಅತಿಥಿಗಳು ಭೇಟಿ ನೀಡಿ ಮಕ್ಕಳನ್ನು ಹುರಿದುಂಬಿಸಿದರು. 10 ದಿನಗಳ ಕಾಲ ನಡೆಯುವ ರಂಗರಂಗು ಶಿಬಿರದ ೯ನೇ ದಿನದ ವಿಶೇಷವೇ ಮಕ್ಕಳ ಸಂತೆ. ಅದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅತಿಥಿಗಳು, ಸಾರ್ವಜನಿಕರು, ಶಿಬಿರಾರ್ಥಿ ಮಕ್ಕಳ ಪೋಷಕರು ಬಾಲ ವ್ಯಾಪಾರಿಗಳನ್ನು ಹುರಿದುಂಬಿಸುತ್ತಾರೆ. ಮಕ್ಕಳಲ್ಲಿನ ಸಂಕೋಚವನ್ನು ಸರಿಸಿ ವ್ಯವಹಾರಿಕ ಸಂವಹನ ಕೌಶಲ್ಯ ಬೆಳೆಸಿಕೊಳ್ಳುವಂತೆ ಪ್ರೇರೆಪಿಸುತ್ತಾರೆ.

ಮಕ್ಕಳಲ್ಲಿ ವ್ಯವಹಾರ ಪ್ರಜ್ಞೆ ಮೂಡಿಸಿದ ಮಕ್ಕಳ ಸಂತೆ:
ರಂಗರಂಗು ಮಕ್ಕಳ ರಜಾಮೇಳ ಬೇಸಿಗೆ ಶಿಬಿರದಲ್ಲಿ ಪ್ರತಿವರ್ಷವೂ ಮಕ್ಕಳ ಸಂತೆ ಎನ್ನುವ ವಿಶಿಷ್ಟವಾದ ವಿಷಯವಿರುತ್ತದೆ. ವಾಣಿಜ್ಯ ಪ್ರಪಂಚವನ್ನು ಮಕ್ಕಳು ತಿಳಿದುಕೊಳ್ಳುವುದು ಇದರ ಉದ್ದೇಶ. ಇಲ್ಲಿ ಮಕ್ಕಳು ವಿವಿಧ ರೀತಿಯ ವ್ಯಾಪಾರದ ಮಳಿಗೆಗಳನ್ನು ತೆರೆದಿರುತ್ತಾರೆ. ಸಾರ್ವಜನಿಕರು ಖರೀದಿಸುವ ಮೂಲಕ ಬಾಲ ವ್ಯಾಪಾರಿಗಳನ್ನು ಪ್ರೋತ್ಸಾಹಿಸುತ್ತಾರೆ.

ಈ ಬಾರಿಯೂ ಕೂಡಾ ಬಾಲ ವ್ಯಾಪಾರಿಗಳು ಬಹು ಉತ್ಸಾಹದಿಂದಲೇ ಪಾಲ್ಗೊಂಡಿರುವುದು ಕಂಡು ಬಂತು. ಪುಟ್ಟ ಪುಟ್ಟ ಮಕ್ಕಳು ಕೂಡಾ ಅಂಗಡಿ ತೆರೆದಿರುವುದು ವಿಶೇಷ. ಗೋಲಿ ಸೋಡ, ಪೆನ್ನು ಪೆನ್ಸಿಲ್ ಬರವಣಿಗೆ ಪರಿಕರಗಳ ಅಂಗಡಿ, ಪಾನಿಪುರಿ ಸ್ಟಾಲ್, ಮಂಡಕ್ಕಿ ಉಪ್ಕರಿ, ಹಲಸು, ಮಾವು, ಕಿತ್ತಳೆ, ಕಲ್ಲಂಗಡಿ, ಪನ್ನೇರಳೆ, ಪಪ್ಪಾಯ ಹಣ್ಣುಗಳ ಅಂಗಡಿ, ಸೊಪ್ಪು ತರಕಾರಿ ಅಂಗಡಿ, ಸಿಹಿ ತಿಂಡಿಗಳ ಅಂಗಡಿ, ಅಕ್ವೇರಿಯಂ ಮೀನುಮರಿ ಮಾರಾಟ, ಹಪ್ಪಳ, ಉಪ್ಪಿನಕಾಯಿ, ಮುಖವಾಡಗಳು, ಬಳೆ ಅಂಗಡಿ, ವಿವಿಧ ರೀತಿಯ ತಂಪು ಪಾನೀಯಗಳು, ತೆಂಗಿನ ಕಾಯಿ ಮೊದಲಾದ ಸ್ಟಾಲ್ ಗಳು ಗಮನ ಸಳೆದವು.

ಗಿಡಗಳ ಮಾರಾಟ:
ಮಕ್ಕಳ ಸಂತೆಯಲ್ಲಿ ಗಿಡಗಳ ಮಾರಾಟವೂ ಗಮನ ಸಳೆಯಿತು. ಕಾಕಡ, ಮಲ್ಲಿಗೆ ಗಿಡಗಳನ್ನು ಪುಟಾಣಿಯಬ್ಬಳು ಮಾರಾಟಕ್ಕೆ ಇಟ್ಟಿದ್ದಳು. ಆಕೆಯ ಸಸ್ಯಪ್ರೇಮ, ಗ್ರಾಹಕರತ್ತ ಗಿಡಗಳನ್ನು ಎತ್ತಿಕೊಂಡು ಹೋಗಿ ಗಿಡಗಳ ಮಹತ್ವ ತಿಳಿಸುವುದು ಕಂಡು ಬಂತು. ಇಬ್ಬೊಬ್ಬ ಶಿಬಿರಾರ್ಥಿವೂ ಕೂಡಾ ವಿವಿಧ ಹೂವಿನ ಗಿಡಗಳನ್ನು ಮಾರಾಟಕ್ಕೆ ಇಟ್ಟು ಗ್ರಾಹಕರನ್ನು ಕರೆಯುತ್ತಿರುವುದು ಗಮನ ಸಳೆಯಿತು.

ಅಜ್ಜಿ ಮಾಡಿದ ಉಪ್ಪಿನಕಾಯಿ:
ಒಬ್ಬಳು ಪುಟಾಣಿ ಒಂದಿಷ್ಟು ಪುಟ್ಟ ಪುಟ್ಟ ಡಬ್ಬಗಳಲ್ಲಿ ಅಜ್ಜಿ ಮಾಡಿದ ಉಪ್ಪಿನಕಾಯಿಯನ್ನು ಮಾರಾಟಕ್ಕಿಟ್ಟಿದ್ದಳು. ಉಪ್ಪಿನಕಾಯಿ ಹೆಸರೇ ಅಜ್ಜಿ ಮಾಡಿದ ಉಪ್ಪಿನಕಾಯಿ ಈ ಹೆಸರು ಎಲ್ಲರ ಗಮನ ಸಳೆಯಿತು.

ಗರಚಿನ ಕಾಯಿ ವ್ಯಾಪಾರ:
ಮತ್ತೊಬ್ಬ ಪುಟಾಣಿ ಶುದ್ಧ ಗ್ರಾಮೀಣ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದ. ಬಾಲ್ಯದ ಹಾಡಿಹಕ್ಕಲನ್ನು ನೆನಪಿಸುವ ಗರಚಿನ ಕಾಯಿ, ಹಸಿ ಗೇರುಬೀಜವನ್ನೇ ಮಾರಾಟಕ್ಕೆ ಇಟ್ಟಿದ್ದ. ಶಿಬಿರದ ಸಣ್ಣ ಪ್ರಾಯದ ಬಾಲಕ ಈ ಅಂಗಡಿ ಮಾಲಿಕ. ತನ್ನ ಮುಗ್ದ ಮಾತುಗಳಿಂದಲೇ ಗ್ರಾಹಕರ ಮನ ಗೆದ್ದುಬಿಟ್ಟ.

ಗದ್ದಲ ಗಲಾಟೆ ಗಡಿಬಿಡಿ-ಅದುವೇ ಸಂತೆ!
ಸಂತೆ ಅಂದರೆ ಹಾಗೆಯೇ ಅದು ಗದ್ದಲ, ಗಲಾಟೆ, ಕೂಗಾಟ, ಅರಚಾಟ! ತಮ್ಮ ತಮ್ಮ ಉತ್ಪನ್ನಗಳ ಮಾರಾಟ ಮಾಡಲು ಸ್ಪರ್ಧೆ. ಕೂಗಿ ಕೂಗಿ ಗ್ರಾಹಕರನ್ನು ತಮ್ಮತ್ತ ಸಳೆಯುವುದು ಸರ್ವೇಸಹಜ. ಮಕ್ಕಳ ಸಂತೆ ಕೂಡಾ ಅದಕ್ಕೆ ಹೊರತಾಗಿಲ್ಲ. ಮಕ್ಕಳ ಪಕ್ಕಾ ವ್ಯಾಪಾರಸ್ಥರಾಗಿ ಬಿಟ್ಟಿದ್ದರು. ಗಟ್ಟಿ ಧ್ವನಿಯಲ್ಲಿ ಗ್ರಾಹಕರನ್ನು ಕರೆಯುತ್ತಿರುವುದು, ವ್ಯಾಪಾರಕ್ಕೆ ಹುರುಪುಗೊಳಿಸುತ್ತಿದ್ದರು.

ಲೆಕ್ಕಚಾರದಲ್ಲೂ ಮಕ್ಕಳು ಸಾಕಷ್ಟು ಅನುಭವ ಪಡೆದುಕೊಂಡರು. ಬೇರೆ ಕಡೆಯಿಂದ ಖರೀದಿಸಿ ತಂದ ಉತ್ಪನ್ನವನ್ನು ಲಾಭವಿಟ್ಟು ಮಾರಾಟ ಮಾಡುವ ಜಾಣ್ಮೆ, ಪರಸ್ಪರ ಸಂವಹನಯನ್ನು ಪ್ರಾಯೋಗಿಕವಾಗಿ ಕಲಿತರು. ಸಾರ್ವಜನಿಕರು ಕೂಡಾ ಮಕ್ಕಳ ಉತ್ಸಾಹ, ಹೊಸ ಪ್ರಯತ್ನಕ್ಕೆ ಸಾಥ್ ನೀಡಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!