Saturday, October 12, 2024

ಮದ್ರಾಸ್‌, ಮೈಸೂರು, ಕರ್ನಾಟಕ ರಾಜ್ಯ : ಕ್ಷೇತ್ರ ಮರು ವಿಂಗಡಣೆಯ ನಂತರ ರದ್ದಾದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ !

ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಹುಟ್ಟು ಮತ್ತು ಅದರ ಅಂತ್ಯ ಒಂದು ರೀತಿಯಲ್ಲಿ ಕುತೂಹಲವೇ ಸರಿ. ಮದ್ರಾಸ್‌, ಮೈಸೂರು ಹಾಗೂ ಕರ್ನಾಟಕ ರಾಜ್ಯಗಳ ಆಡಳಿತವನ್ನು ಕಂಡ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಈಗ ಅಸ್ತಿತ್ವದಲ್ಲಿ ಇರದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು.

2008ರಲ್ಲಿ ಕ್ಷೇತ್ರ ಮರು ವಿಂಗಡನೆಯ ನಂತರ ಬ್ರಹ್ಮಾವರ ವಿಧಾನಸಭಾ ಕ್ಷೇತ್ರವನ್ನು ನಿಷ್ಕ್ರೀಯಗೊಳಿಸಲಾಯಿತು. 1952ರಲ್ಲಿ ಮದ್ರಾಸ್‌ ರಾಜ್ಯದ ಭಾಗವಾಗಿದ್ದ ಈ ಕ್ಷೇತ್ರ ಒಂದು ವಿಧಾನಸಭಾ ಚುನಾವಣೆಯನ್ನು ಕಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. 1957ರಿಂದ 1997ರವರೆಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತಿದ್ದ ಬ್ರಹ್ಮಾವರ ಈ ಅವಧಿಯಲ್ಲಿ 9 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ.

ಮೈಸೂರು ರಾಜ್ಯದ ವ್ಯಾಪ್ತಿಗೆ ಒಳಪಡುತ್ತಿದ್ದ ಸಂದರ್ಭದ ಚುನಾವಣೆಯನ್ನು ನಾವು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಣುವುದಾದರೇ, 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಗಜೀವನ್‌ದಾಸ್ ಶೆಟ್ಟಿ ಗೆಲುವಿನ ನಗೆ ಬೀರಿದ್ದರು. ಪ್ರತಿಸ್ಪರ್ಧಿ ಪ್ರಜಾ ಸೋಷಲಿಸ್ಟ್ ಪಕ್ಷದ ಶೀನಪ್ಪ ಶೆಟ್ಟಿ ಅವರನ್ನು 6,535 ಮತಗಳಿಂದ ಸೋಲಿಸಿದ್ದರು.

1962ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಎಸ್‌.ಡಿ.ಸಾಮ್ರಾಜ್ಯ ಪ್ರಜಾ ಸೋಷಲಿಸ್ಟ್ ಪಕ್ಷದ ಶೀನಪ್ಪ ಶೆಟ್ಟಿ ಅವರನ್ನು 7,686 ಭಾರಿ ಮತಗಳ ಅಂತರದಿಂದ ಸೋಲಿಸಿದ್ದರು. 1967ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್‌.ಜೆ.ಶೆಟ್ಟಿ(ಸೌಕೂರು ಜಯಪ್ರಕಾಶ್‌ ಶೆಟ್ಟಿ) ಕಾಂಗ್ರೆಸ್‌ನ ಎಫ್‌ಎಕ್ಸ್‌ಡಿ ಪಿಂಟೋ ಅವರನ್ನು 12,642 ಮತಗಳ ಅಂತರದಿಂದ ಸೋಲಿಸಿದ್ದರು.

1972ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಈ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಜಯಪ್ರಕಾಶ್‌ ಎಸ್‌.ಕೊಳ್ಕೆಬೈಲ್‌ ಎನ್‌ಸಿಒ ಪಕ್ಷದ ಎಂ.ಎಂ.ಹೆಗ್ಡೆ ಅವರನ್ನು 14575 ಮತಗಳ ಅಂತರದಿಂದ ಸೋಲಿಸಿದ್ದರು.

ಕರ್ನಾಟಕ ರಾಜ್ಯವಾದ ಬಳಿಕದ ವಿಧಾನಸಭಾ ಚುನಾವಣೆಯನ್ನು ಗಮನಿಸುವುದಾದರೇ, 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಆನಂದ ಕುಂದ ಹೆಗ್ಡೆ ಜನತಾ ಪಕ್ಷದ ವಿ.ಎಸ್‌.ಆಚಾರ್ಯ ಅವರನ್ನು 2863 ಮತಗಳಿಂದ ಸೋಲಿಸಿದ್ದರು.‌

1983ರ ಚುನಾವಣೆಯು ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಗೆ ಕಾರಣವಾಗಿತ್ತು. ಮೊದಲ ಬಾರಿಗೆ ಬ್ರಹ್ಮಾವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿಯ ಬಿ.ಬಿ.ಶೆಟ್ಟಿ ಕಾಂಗ್ರೆಸ್‌ನ ಬಸವರಾಜು ವಿರುದ್ಧ 954 ಮತಗಳ ಆಯಾಸದ ಗೆಲುವು ಕಂಡಿದ್ದರು.

1985ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಗೆಲುವಿನ ಹಳಿಗೆ ಬಂತು. ಅಭ್ಯರ್ಥಿ ಬಸವರಾಜ್ ಜನತಾ ಪಕ್ಷದ ಜಯಪ್ರಕಾಶ್ ಹೆಗ್ಡೆ ಅವರನ್ನು 7,578 ಮತಗಳಿಂದ ಸೋಲಿಸಿದರು.

1989ರ ಚುನಾವಣೆಯಲ್ಲೂ ಜನತಾದಳದಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಮಣಿಸಿ ಕಾಂಗ್ರೆಸ್‌ನ ಬಸವರಾಜ್‌ ಎರಡನೇ ಬಾರಿಗೆ ಶಾಸಕರಾದರು.

ಕ್ಷೇತ್ರದಿಂದ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಕೆ. ಜಯಪ್ರಕಾಶ್ ಹೆಗ್ಡೆ 1994ರಲ್ಲಿ ಮೊದಲ ಜಯದ ಸಿಹಿ ಕಂಡರು. ಕಾಂಗ್ರೆಸ್‌ನ ಬಸವರಾಜ್ ಅವರನ್ನು 12,876 ಮತಗಳಿಂದ ಸೋಲಿಸಿ ಶಾಸಕರಾದರು. 1999ರ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಸರಳಾ ಕಾಂಚನ್ ಅವರನ್ನು 4,763 ಮತಗಳಿಂದ ಪರಾಭವಗೊಳಿಸಿ ಎರಡನೇ ಬಾರಿಗೆ ಶಾಸಕರಾದರು.

ನಂತರದ ಚುನಾವಣೆಯಲ್ಲೂ ಜೆಪಿ ಹೆಗ್ಡೆ ಅವರ ಗೆಲುವಿನ ನಾಗಾಲೋಟ ಮುಂದುವರಿಯಿತು. 2004ರಲ್ಲಿ ಕಾಂಗ್ರೆಸ್‌ನ ಯುವ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು 12,173 ಮತಗಳಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ಪಡೆದರು. 2004ರ ಚುನಾವಣೆಯೇ ಬ್ರಹ್ಮಾವರ ಕ್ಷೇತ್ರಕ್ಕೆ ನಡೆದ ಕೊನೆಯ ವಿಧಾನಸಭಾ ಚುನಾವಣೆಯಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕ್ಷೇತ್ರ ಮರು ವಿಂಗಡಣೆಯ ನಂತರ ವಿಧಾನಸಭಾ ಕ್ಷೇತ್ರ ಸ್ಥಾನ ಕಳೆದುಕೊಂಡ ಬ್ರಹ್ಮಾವರ ನೆರೆಯ ವಿಧಾನಸಭಾ ಕ್ಷೇತ್ರಗಳೊಂದಿಗೆ ವಿಲೀನಗೊಂಡಿದೆ. ಬ್ರಹ್ಮಾವರದ ಹೆಚ್ಚಿನ ಕ್ಷೇತ್ರಗಳು ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟವು. 11 ಪಂಚಾಯಿತಿಗಳು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟವು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ. ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಕಳೆದುಕೊಂಡ ಬ್ರಹ್ಮಾವರ ಪ್ರತ್ಯೇಕ ತಾಲ್ಲೂಕು ಸ್ಥಾನ ಮಾನ ಹೊಂದಿರುವುದರಿಂದ ಇಲ್ಲಿನ ರಾಜಕೀಯ ಚಿತ್ರಣವನ್ನೇ ಅಡಿಮೇಲಾಗಿಸುವವಷ್ಟು ಪ್ರಬಲವಾಗಿದೆ ಎನ್ನುವುದನ್ನೂ ನಾವಿಲ್ಲಿ ಅಲ್ಲಗಳೆಯುವಂತಿಲ್ಲ.

ಮದ್ರಾಸ್‌ ರಾಜ್ಯದ ಸಂದರ್ಭದಲ್ಲಿ ಈ ಕ್ಷೇತ್ರದ ವಿಧಾನಸಭಾ ಸದಸ್ಯರು :

ವರ್ಷ                                      ಸದಸ್ಯರು                                 ಪಕ್ಷ

1952                                ಎಸ್‌.ಎಸ್‌ ಕೊಳ್ಕೇಬೈಲ್‌        ಕಿಸಾನ್‌ ಮಜ್ದೂರ್‌ ಪ್ರಜಾ ಪಾರ್ಟಿ

 

ಮೈಸೂರು ರಾಜ್ಯದ ಸಂದರ್ಭದಲ್ಲಿ ಈ ಕ್ಷೇತ್ರದ ವಿಧಾನಸಭಾ ಸದಸ್ಯರು :

ವರ್ಷ                                      ಸದಸ್ಯರು                              ಪಕ್ಷ

1957                            ಜಗಜೀವನ್‌ದಾಸ್ ಶೆಟ್ಟಿ                     ಕಾಂಗ್ರೆಸ್‌

1962                             ಎಸ್‌ ಡಿ ಸಾಮ್ರಾಜ್ಯ                        ಕಾಂಗ್ರೆಸ್‌

1967                            ಸೌಕೂರು ಜಯಪ್ರಕಾಶ್‌ ಶೆಟ್ಟಿ            ಸ್ವತಂತ್ರ

1972                            ಜಯಪ್ರಕಾಶ್‌ ಎಸ್‌ ಕೊಳ್ಕೆಬೈಲ್‌         ಕಾಂಗ್ರೆಸ್‌

 

ಕರ್ನಾಟಕ ರಾಜ್ಯವಾದ ಬಳಿಕ ಈ ಕ್ಷೇತ್ರದಿಂದ ಆಯ್ಕೆಯಾದ ವಿಧಾನಸಭಾ ಸದಸ್ಯರು :

ವರ್ಷ                                      ಸದಸ್ಯರು                         ಪಕ್ಷ

1978                                ಆನಂದ ಕುಂದ ಹೆಗ್ಡೆ              ಕಾಂಗ್ರೆಸ್‌

1983                                ಬಿಬಿ ಶೆಟ್ಟಿ                           ಬಿಜೆಪಿ

1985,1989                       ಪಿ. ಬಸವರಾಜು                    ಕಾಂಗ್ರೆಸ್‌

1994, 1999                     ಕೆ. ಜಯಪ್ರಕಾಶ್‌ ಹೆಗ್ಡೆ            ಜನತಾದಳ

2004                               ಕೆ. ಜಯಪ್ರಕಾಶ್‌ ಹೆಗ್ಡೆ            ಸ್ವತಂತ್ರ

 

ಸಂಗ್ರಹ : ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!