spot_img
Thursday, December 5, 2024
spot_img

ಎ.23ರಂದು ಶಾನ್ಕಟ್ಟುವಿನಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ ತಾಲೂಕು ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನಮನೆ ಕುಟುಂಬಸ್ಥರ ಶ್ರೀ ಆದಿ ನಾಗದೇವರ ಸನ್ನಿಧಿಯಾದ ಕನ್ನಂತರ ನಾಗಬನದಲ್ಲಿ ಹರಕೆ ಸೇವೆಯಂತೆ ಏಪ್ರಿಲ್ 23 ಮಂಗಳವಾರ ಏಕ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಏಪ್ರಿಲ್ 22ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಏಪ್ರಿಲ್ 23ರಂದು ಮಂಗಳವಾರ ಬೆಳಿಗ್ಗೆ 7.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ.ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ದೀಪಾರಾಧನೆ, ಹಾಲಿಟ್ಟು ಸೇವೆ, ಸಂದರ್ಶನ, ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಮಂಗಲಪುಣ್ಯಾಹ, ಮಂತ್ರಾಕ್ಷತೆ ನಡೆಯಲಿದೆ.

ಪ್ರಧಾನ ಅರ್ಚಕರಾಗಿ ಕೆ.ವೇ.ಮೂ ಶ್ರೀಪತಿ ಭಟ್ಟ, ಕಂಬಿಕಲ್ಲು ಕಕ್ಕುಂಜೆ, ನಾಗಪಾತ್ರಿಗಳಾಗಿ ಎ.ರವಿರಾಜ ಭಟ್ಟರು ಅಂಪಾರು, ವೈದ್ಯರು-ಸರ್ವೋತ್ತಮ ವೈದ್ಯರು, ಗಣಪತಿ ವೈದ್ಯರು, ಅನಂದರಾಮ ವೈದ್ಯರು ಮತ್ತು ಬಳಗ ಅಂಪಾರು ಭಾಗವಹಿಸಲಿದ್ದಾರೆ. ಕುಲ ಪುರೋಹಿತರು ನಾಗರಾಜ ಅಡಿಗರು ಶಾನ್ಕಟ್ಟು, ನಾಗಬನದ ಸ್ಥಳದ ಯಜಮಾನರು ಶ್ರೀಪಾದ ಕನ್ನಂತರು ಶಾನ್ಕಟ್ಟು.

ಶಾನ್ಕಟ್ಟು ಕೆಳಗಿನಮನೆ ಇತಿಹಾಸ:
ಕುಂದಾಪುರ ತಾಲೂಕಿನ, ಅಂಪಾರು ಗ್ರಾಮದ ಶಾನ್ಕಟ್ಟು ಪುಟ್ಟ ಹಳ್ಳಿ. ಬಿಲ್ಲಾಡಿ ಗ್ರಾಮದ ನೈಲಾಡಿ ಕೆಳಗೆ ಮನೆ ಕುಟುಂಬಸ್ಥರು, 150 ಕ್ಕೂ ಅಧಿಕ ವರ್ಷದ ಹಿಂದೆ ನೈಲಾಡಿಯಿಂದ ವಲಸೆ ಬಂದ ಕುಟುಂಬ ಎನ್ನುವ ಇತಿಹಾಸವಿದೆ. ನೈಲಾಡಿ ಮೇಲ್ಮನೆ ಮತ್ತು ಕೆಳಮನೆ ಎನ್ನುವ ಬಂಟ ಸಮುದಾಯದ ಪ್ರತಿಷ್ಠಿತ ಕುಟುಂಬ, ಅಂದಿನ ಹಿರಿಯರು ಅನ್ಯ ಕಾರಣಗಳಿಂದ ನೈಲಾಡಿ ಕೆಳಗಿನ ಮನೆ ಕುಟುಂಬದವರು, ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿಗೆ ಬಂದು ವಾಸವಾದರು. ಆದ್ದರಿಂದ ಈ ಕುಟುಂಬಗಳಿಗೆ ಶಾನ್ಕಟ್ಟು ಕೆಳಗಿನಮನೆ ಕುಟುಂಬದವರೆಂದೆ ಕರೆಯಲ್ಪಡುತ್ತಾರೆ. ನೈಲಾಡಿಯಿಂದ ಇವರು ಮೂರು ಕುಟುಂಬ ವಲಸೆ ಬಂದಿರುತ್ತಾರೆ, ಒಂದು ಕುಟುಂಬ ತೊಂಭಟ್ಟುವಿನಲ್ಲ್ಲಿ ನೆಲೆಸಿದ್ದಾರೆ. ಎರಡು ಕುಟುಂಬಗಳು ಶಾನ್ಕಟ್ ಎಂಬಲ್ಲಿ ನೆಲೆಸುತ್ತಾರೆ, ಆದರೆ ಇತ್ತೀಚಿಗೆ ಇನ್ನೊಂದು ಕುಟುಂಬವು ಕೂಡ ಈ ಕುಟುಂಬಕ್ಕೆ ಹೊಂದಿಕೊಳ್ಳುತ್ತಾರೆ ಇವರು ಕೂಡ ಶಾನ್ಕಟ್ಟಿನಲ್ಲಿ ವಾಸವಾಗಿದ್ದರೆ, ಆದರೆ ಈಗ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಮೊದಲು, ಮೂಲ ನಾಗಬನ ಮತ್ತು ದೈವದಮನೆ ನೈಲಾಡಿಯಲ್ಲಿ ಇರುವುದರಿಂದ ಪ್ರಥಮ ಸೇವೆ ಅಲ್ಲಿ ಸಮರ್ಪಿಸಿದ ನಂತರವೇ ಈಗ ಇರುವ ಶಾನ್ಕಟ್ಟಲ್ಲಿ ಮಾಡಬೇಕಾಗುತ್ತದೆ, ಈ ಕುಟುಂಬದವರು ನೈಲಾಡಿಯಲ್ಲಿ ಮೇಲ್ಮನೆ ಮತ್ತು ಕೆಳಗಿನ ಮನೆಯೆಂದು ಎರಡು ಮನೆಯವರಂತೆ, ಅಲ್ಲಿಂದ ಬರುವಾಗ ಇವರು ದೈವದ ಹಲಗೆಯನ್ನು ತೆಗೆದುಕೊಂಡು ಬಂದಿದ್ದು, ಹೈಗೂಳಿ ದೈವವನ್ನು ಆರಾಧಿಸುತ್ತಾರೆ. ನಂತರದಲ್ಲಿ ದೈವಸ್ಥಾನ ನಿರ್ಮಿಸಿ ಆ ಹಲಗೆ ಜೊತೆ ಪಂಜುರ್ಲಿ ದೈವವನ್ನು ಪೂಜಿಸುತ್ತಾರೆ.

ನಾಗಮಂಡಲಕ್ಕೆ ಮೂಲ ಕಾರಣ, ಕೃಷ್ಣಮ್ಮ ಶೆಡ್ತಿ ಮತ್ತು ಮಂಜೇಶ್ ಶೆಟ್ಟಿ ಎನ್ನುವವರಿಗೆ ಸುಬ್ಬಣ್ಣ ಶೆಟ್ಟಿ ಮತ್ತು ನಾಗಪ್ಪ ಶೆಟ್ಟಿಯನ್ನು ಇಬ್ಬರು ಗಂಡು ಮಕ್ಕಳು, ಇವರಿಗೆ ಹೆಣ್ಣು ಸಂತಾನ ಇಲ್ಲ ಎನ್ನುವ ಕಾರಣಕ್ಕೆ ಹೆಣ್ಣು ಮಗು ಜನಿಸಿದರೆ ನಾವು ನಾಗಮಂಡಲ ಸೇವೆ ನೀಡುತ್ತೇವೆ ಎಂದು ನಾಗದೇವರ ಮೊರೆ ಹೋಗುತ್ತಾರೆ. ಅದೇ ಕಾರಣಕ್ಕೆ ಹುಟ್ಟಿದ ಮಗು ನಾಗಮ್ಮ. ಇದೇ ನಾಗಮ್ಮನ ಮೊಮ್ಮಕ್ಕಳಿಂದಲೇ ಈ ನಾಗಮಂಡಲ ಕಾರ್ಯ ಎನ್ನುತ್ತಾರೆ ನಾಗಮಂಡಲ ಸೇವೆಯ ಜವಾಬ್ದಾರಿ ನಿರ್ವಹಿಸುತ್ತಿರುವ ದಿವಾಕರ ಶೆಟ್ಟಿ ಅವರು.

ಈ ನಾಗಮಂಡಲ ಉತ್ಸವ ಕಾರ್ಯಕ್ರಮದ ಮೊದಲು, ಬಿಲ್ಲಾಡಿ ಗ್ರಾಮದ ನೈಲಾಡಿ ಮನೆಗೆ ಹೋಗಿ ಮೂಲ ನಾಗಬನದಲ್ಲಿ ಶುದ್ಧಕಳಸ, ಮತ್ತು ತನು ಹಾಕಿ, ದೈವದ ಮನೆಗೆ ಪೂಜೆ ನೀಡಿ, ಬಂದು ಇಲ್ಲಿ ಉಳಿದ ಕಾರ್ಯಗಳನ್ನು ನೆರವೇರಿಸಲಾಗಿದೆ.
ನಾಗಮಂಡಲ ಸೇವೆಯನ್ನು ಅಪೂರ್ವ ಶ್ರದ್ಧೆ, ನಿಷ್ಠೆಯಿಂದ ಮಾಡಲು ತಮ್ಮ ಎಲ್ಲಾ ಕುಟುಂಬದ ಸದಸ್ಯರು, ಗ್ರಾಮಸ್ಥರನ್ನು ಒಳಗೊಂಡು, ನಿರಂತರ ಎರಡು ತಿಂಗಳಿಂದ ನಾಗಮಂಡಲ ಸೇವೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೊರೆ ಕಾಣಿಕೆ ಸಮರ್ಪಣೆ
ನಾಗಮಂಡಲೋತ್ಸವದ ಯಶಸ್ಸಿಗೆ ಕುಟುಂಬ ಸದಸ್ಯರು ಊರ, ಪರವೂರ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ವಿಜೃಂಭಣೆಯಿಂದ ನಾಗಮಂಡಲೋತ್ಸವ ನೆರವೇರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಏ.23ರಂದು ಶಾನ್ಕಟ್ಟುವಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಇದು ಗ್ರಾಮಸ್ಥರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಏಕಪವಿತ್ರ ನಾಗಮಂಡಲೋತ್ಸದ ಪವಿತ್ರ ಕಾರ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ ಏಪ್ರಿಲ್ 21 ಮತ್ತು 22ರಂದು ನಡೆಯಲಿದೆ. ಹೊರೆ ಕಾಣಿಕೆ ಸಲ್ಲಿಸುವವರು ಈ ಎರಡು ದಿನಗಳ ಕಾಲ ಶ್ರೀ ನಾಗಸನ್ನಿಧಿಯಲ್ಲಿ ಸಲ್ಲಿಸಬಹುದೆಂದು ಎನ್ನುತ್ತಾರೆ ಚಂದ್ರ ಜೋಗಿ.

ಅಂಪಾರು-ಸಿದ್ಧಾಪುರ ರಸ್ತೆಯ ಶಾನ್ಕಟ್ಟು ಬಸ್ ನಿಲ್ದಾಣದಿಂದ ನಾಗಮಂಡಲ ಸ್ಥಳಕ್ಕೆ ಪ್ರವೇಶ ನಿರ್ಗಮನ ಎರಡು ಪ್ರತ್ಯೇಕ ರಸ್ತೆಗಳಿವೆ. ತೆಂಗು-ಕಂಗಿನ ತೋಟದ ನಡುವೆ ಸುಂದರ ಭತ್ತ ಬೆಳೆಯುವ ಹಸನಾದ ಗದ್ದೆಯಲ್ಲಿ ಈ ನಾಗಾರಾಧನೆ ನಡೆಯಲಿದೆ. ಮೂಲ ನಾಗಬನದ ಹತ್ತಿರ ನಾಗಮಂಡಲೋತ್ಸವಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ.

10ಸಾವಿರಕ್ಕೂ ಮಿಕ್ಕಿ ಜನರಿಗೆ ಅನ್ನಸಂತರ್ಪಣೆ
ನಾಗಮಂಡಲ ಕಾರ್ಯದಲ್ಲಿ ಅನ್ನಸಂತರ್ಪಣೆಗೆ ಹೆಚ್ಚಿನ ಮಹತ್ವಿಕೆ ಇದ್ದು ಇಲ್ಲಿ 10ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಆರಂಭವಾಗಲಿದೆ. ಅತ್ಯಂತ ವ್ಯವಸ್ಥಿತವಾಗಿ ನಾಗಮಂಡಲೋತ್ಸವ ಕಾರ್ಯಕ್ರಮ ನಡೆಸಲು ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

(-ದಿನಕರ ಶೆಟ್ಟಿ ಮುಂಬಾರು)

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!