Tuesday, October 8, 2024

ಈಶ್ವರಪ್ಪನವರಿಗೆ ನಮ್ಮ ಸಂಸದರನ್ನು ಪ್ರಶ್ನಿಸುವ ನೈತಿಕತೆ ಇಲ್ಲ-ದೀಪಕ್ ಕುಮಾರ್ ಶೆಟ್ಟಿ

ಬೈಂದೂರು : ಸಂಸದರಾದ ಬಿ.ವೈ. ರಾಘವೇಂದ್ರ ಅವರಿಂದ ಎಲ್ಲ ರೀತಿಯ ಅನುಕೂಲ ಪಡೆದವರೆ ಇದೀಗ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದೂ ತಿಳಿದಿದೆ. ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ನಮ್ಮ ಸಂಸದರನ್ನು ಪ್ರಶ್ನಿಸುವ ನೈತಿಕತೆ ಕೆ.ಎಸ್.ಈಶ್ವರಪ್ಪ ಅವರಿಗೆ ಇಲ್ಲ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಬೈಂದೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಬಗ್ಗೆ ನಮಗೆ ಗೌರವವಿದೆ. ಆದರೂ ಕೆಲವೊಂದು ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ಅದ್ಭುತವಾದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಮತ್ತು ನಮ್ಮ ಕಾರ್ಯಕರ್ತರನ್ನು ಅಷ್ಟೇ ಗೌರವಯುತವಾಗಿ ನಡೆಸಿಕೊಂಡು ಬಂದಿದ್ದಾರೆ. ಬೈಂದೂರಿನಲ್ಲಿ ತಿರುಗಾಡಿದ ತಕ್ಷಣ ಈಶ್ವರಪ್ಪ ಅವರಿಗೆ ಯಾವುದೇ ಮತ ಬರುವುದಿಲ್ಲ. ಹಣ ಅಥವಾ ಯಾವುದೇ ಆಮಿಷಕ್ಕೂ ಯಾರೂ ಮರಳಾಗುವುದಿಲ್ಲ. ನಮ್ಮ ಕಾರ್ಯಕರ್ತರು ಯಾರೂ ಅವರೊಂದಿಗೆ ಇಲ್ಲ ಮತ್ತು ಮತದಾರರಲ್ಲೂ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ನಲ್ಲಿ ಸುತ್ತಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅವರ ಮಕ್ಕಳು ಎನ್ನುವ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿಲ್ಲ. ಅವರು ಮಾಡಿದ ಅಭಿವೃದ್ಧಿ ಕಾರ್ಯ ಗಮನಿಸಿ ಟಿಕೆಟ್ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅಥವಾ ಅವರ ಮಕ್ಕಳು ಹಿಂದುತ್ವ ವಿಚಾರ ಬಂದಾಗ ಸದಾ ಸಂಘಟನೆ ಜತೆಗೆ ಇರುತ್ತಾ ಬಂದಿದ್ದಾರೆ. ಬಿ.ವೈ. ರಾಘವೇಂದ್ರ ಅವರು ಕೂಡ ಮಾಜಿ ಮುಖ್ಯಮಂತ್ರಿ ಮಗ ಎಂದು ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸಿಲ್ಲ. ಕ್ಷೇತ್ರದಲ್ಲಿದ್ದು, ಜನರ ಮಧ್ಯೆಯೇ ಓಡಾಡಿಕೊಂಡಿದ್ದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು

ಸಂಸದರಾಗಿ ರಾಘವೇಂದ್ರ ಅವರು ಮಾಡಿದ ಅಭಿವೃದ್ಧಿ ಕಾರ್ಯದ ಆಧಾರದಲ್ಲಿ ಕಳೆದ ಬಾರಿ ಕ್ಷೇತ್ರದ ಜನತೆ ೭೪ ಸಾವಿರ ಲೀಡ್ ನೀಡಿದ್ದು, ಈ ಬಾರಿ ೧ ಲಕ್ಷ ಲೀಡ್ ನೀಡುವ ಉತ್ಸಾಹದಲ್ಲಿದ್ದಾರೆ. ಮೀನುಗಾರಿಕೆ, ಪ್ರವಾಸೋದ್ಯಮ, ಕಿಂಡಿ‌ಅಣೆಕಟ್ಟು, ಸಮುದಾಯಗಳ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಂಸದರು ಆದ್ಯತೆ ನೀಡಿದ್ದಾರೆ ಎಂದರು.

ಸಮುದಾಯ ಭವನ ಆಗಲಿದೆ:
ದೇವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಈ ಹಿಂದೆ ಬಂದಿದ್ದ ೧ ಕೋಟಿ ರೂ. ತಾಂತ್ರಿಕ ಕಾರಣದಿಂದ ವಾಪಸ್ ಹೋಗಿದೆ. ನಂತರ ಮತ್ತೊಮ್ಮೆ ಬಿಡುಗಡೆಯಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ನೀಡಿಲ್ಲ. ಮುಂದೆ ಖಂಡಿತ ಸಂಸದರು ದೇವಾಡಿಗರ ಭವನ ಮಾಡಿಸಲಿದ್ದಾರೆ. ದೇವಾಡಿಗ ಸಮುದಾಯಕ್ಕೆ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ ಎಂದರು.

ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ, ದೇವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಬಿಜೆಪಿ ಸರಕಾರ ನೀಡಿರುವ ಅನುದಾನ ಬಗ್ಗೆ ನಾನೇನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರಿಗೂ ಉತ್ತರ ನೀಡಲು ಸಾಧ್ಯವಿಲ್ಲ. ಆದರೆ, ಹಿರಿಯರಾದ ಗೌರಿ ದೇವಾಡಿಗ ಅವರು ನನ್ನ ಅಮ್ಮನ ಹೆಸರು ಹೇಳಿದ್ದರಿಂದ ಉತ್ತರ ಕೊಡಲೇ ಬೇಕು. ಗೌರಿ ದೇವಾಡಿಗ ಅವರನ್ನು ಜಿ.ಪಂ., ತಾ.ಪಂ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿಸಿದ್ದು ಬಿಜೆಪಿ, ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋದರು. ಅವರಿಂದ ನನಗೆ ರಾಜಕೀಯ ಪಾಠದ ಅಗತ್ಯವಿಲ್ಲ. ಗೋಪಾಲ ಪೂಜಾರಿಯವರು ಕಾಂಗ್ರೆಸ್‌ಗೆ ಬರುವ ಮೊದಲೇ ನನ್ನ ಅಮ್ಮ ಕಾಂಗ್ರೆಸ್‌ನಲ್ಲಿದ್ದರು. ೩೦ ವರ್ಷ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದರು. ಬೇರೆ ಪಕ್ಷದಿಂದ ಕಾಂಗ್ರೆಸ್ ಬಂದಿದ್ದ ಗೋಪಾಲ್ ಪೂಜಾರಿಯವರನ್ನು ಶಾಸಕರನ್ನಾಗಿಸಲು ಶಾರದಾ ಬಿಜೂರು ಕೆಲಸ ಮಾಡಿದ್ದಾರೆ. ಹೀಗಾಗಿ ಶಾರದಾ ಬಿಜೂರ್ ಅವರ ಮೇಲೆ ಗೋಪಾಲ ಪೂಜಾರಿ ಋಣ ಇಲ್ಲ ಎಂದರು.

ನಾವ್ಯಾರೂ ರೊಟ್ಟಿ, ಇಡ್ಲಿಗಾಗಿ ರಾಜಕೀಯಕ್ಕೆ ಬಂದಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಉದ್ಯೋಗಸ್ಥರು ನಮಗೆ ಪಕ್ಷದ ಋಣ ಇದೆಯೇ ಹೊರತು ಯಾವ ವ್ಯಕ್ತಿಯ ಋಣ ಇಲ್ಲ. ಪ್ರಾಧ್ಯಾಪಕನಾದವನಿಗೆ ತಾನು ಯಾವ ಪಕ್ಷಕ್ಕೂ ಬಹಿರಂಗ ಬೆಂಬಲ ನೀಡಬಾರದು ಎಂಬ ಸಾಮಾನ್ಯ ಪರಿಜ್ಞಾನ ಇರಬೇಕು ಎಂದು ತೀಕ್ಷ್ಮ ಪ್ರತಿಕ್ರಿಯೆ ನೀಡಿದರು.

ನಕಾರಾತ್ಮಕ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಸಿದ್ಧರಿದ್ದೆವೆ. ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಯಾವ ವ್ಯಕ್ತಿಯನ್ನು ವೈಯಕ್ತಿಕ ನೆಲೆಯಲ್ಲಿ ಟೀಕೆ ಮಾಡುವವರು ನಾವಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಟೀಕೆಗಳನ್ನು ಮಾತ್ರ ಮಾಡುತ್ತೇವೆ. ಆದರೆ, ಗೌರಿ ದೇವಾಡಿಗ ಅವರು ವೈಯಕ್ತಿಕವಾಗಿ ಟೀಕಿಸಿದ್ದರಿಂದ ಅವರಿಗೆ ಈ ಪ್ರಶ್ನೆ, ಗೋಪಾಲ್ ಪೂಜಾರಿಯವರು ಇತ್ತೀಚಿಗೆ ನೀಡಿದ ಹೇಳಿಕೆ ಬಗ್ಗೆ ನಿಮ್ಮ ನಿಲುವೇನು? ಕಾಂಗ್ರೆಸ್ ಪಕ್ಷದಿಂದ ನಿಮ್ಮ ಬೆನ್ನಿಗೆ ಬುಲೆಟ್ ಇಟ್ಟು ಹೇಳಿಕೆ ನೀಡುವಂತೆ ಮಾಡಿದವರು ಯಾರು ಎಂಬುದನ್ನು ಹೇಳಿ ಬಿಡಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ನಿಮ್ಮ ನಿಲುವೇನು? ಎಂದು ಪ್ರಶ್ನಿಸಿದರು.

ಹಿಂದೂಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಮಂಡಲ ಖಜಾಂಚಿ ಗಣೇಶ್ ಗಾಣಿಗ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!