spot_img
Wednesday, January 22, 2025
spot_img

ಮಹಿಳಾ ಧ್ವನಿಯಾಗಿ ಸಂಸತ್ ಪ್ರವೇಶಿಸಲು ಅವಕಾಶ ನೀಡಿ-ಗೀತಾ ಶಿವರಾಜ ಕುಮಾರ್

ನಾಡ, ಆಲೂರು, ನಾವುಂದ, ಕಾಲ್ತೋಡು, ಕಂಬದಕೋಣೆ, ತ್ರಾಸಿಯಲ್ಲಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬೈಂದೂರು: ಎ.7: ನಾನು ತಂದೆ ಬಂಗಾರಪ್ಪನನವರ ಸೇವಾವಲಯದಲ್ಲಿ ಬೆಳೆದವಳು. ಜನಸೇವೆಯ ಆಸಕ್ತಿ ಬೆಳೆಸಿಕೊಂಡವಳು. ನಮಗೆ ಸಮಾಜಸೇವೆ ರಕ್ತಗತವಾಗಿ ಬಂದಿದೆ. ಬಂಗಾರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿ ಈ ನಾಡಿಗೆ ನೀಡಿದ ಗ್ರಾಮೀಣ ಕೃಪಾಂಕ, ಆಶ್ರಯ, ಆರಾಧನ, ಕೃಷಿಗೆ ಉಚಿತ ವಿದ್ಯುತ್ ಮೊದಲಾದ ಯೋಜನೆಗಳು ೩೨ ವರ್ಷಗಳಾದರೂ ಇನ್ನೂ ಪ್ರಚಲಿತದಲ್ಲಿದೆ. ಅದೇ ರೀತಿ ನನಗೂ ಕೂಡಾ ಶಿವಮೊಗ್ಗ ಕ್ಷೇತ್ರದಲ್ಲಿ ಜನಸೇವೆ ಮಾಡಲು ಅವಕಾಶ ನೀಡಿ. ಬದಲಾವಣೆ ಅಪೇಕ್ಷಿಸಿ ನೀವು ನೀಡುವ ಅವಕಾಶದಿಂದ ಸಂಸತ್ ಪ್ರವೇಶಿಸಿ ಮಹಿಳಾ ಧ್ವನಿಯಾಗಿ ಕೆಲಸ ಮಾಡುವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜ್ಯಾರಿಗೊಳಿಸಿದೆ. ಪ್ರತಿ ಮನೆಯನ್ನು ಈ ಯೋಜನೆಗಳು ತಲುಪಿವೆ. ಚುನಾವಣಾ ಬಳಿಕ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಬಗ್ಗೆ ಯೋಚನೆಗಳನ್ನು ಹೊಂದಿದೆ ಎಂದು ಹೇಳಿದರು.

ಚಿತ್ರನಟ ಶಿವರಾಜ್ ಕುಮಾರ್ ಮಾತನಾಡಿ, ಕರಾವಳಿ ಪ್ರಕೃತಿಯ ಅದ್ಭುತ ವಾತಾವರಣ. ಈ ನೆಲದಲ್ಲಿ ಬದಲಾವಣೆ ಬಂದರೆ ಇನ್ನೂ ಚೆನ್ನಾಗಿರುತ್ತದೆ. ಸಂಸದೆಯಾಗಿ ದೆಹಲಿಗೆ ಹೋಗುವುದೆಂದರೆ ಸುಲಭವಲ್ಲ. ಗೀತಾ ಅವರು ಆ ಧೈರ್ಯವನ್ನು ಹೊಂದಿದ್ದಾರೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ, ಒಂದು ಅವಕಾಶ ನೀಡಿ, ನನ್ನನ್ನು ಸ್ಟಾರ್ ಆಗಿ ಹೇಗೆ ರೂಪಿಸಿದ್ದೀರೋ ಅದೇ ರೀತಿ ನನ್ನ ಪತ್ನಿ ಗೀತಾ ಅವರಿಗೆ ಅವಕಾಶ ನೀಡಿ, ಧನಾತ್ಮಕವಾದ ಬದಲಾವಣೆಯನ್ನು ಬಳಿಕ ನೀವು ಗುರುತಿಸುತ್ತಿರಿ. ಬಳಿಕ ನೀವು ನೀಡಿದ ತೀರ್ಪು ಸರಿಯಾಗಿದೆ ಎನ್ನುವ ಭಾವನೆ ಬರುವಂತೆ ಅವರು ಕೆಲಸ ಮಾಡುತ್ತಾರೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕ ಕೆ,ಗೋಪಾಲ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರದ ಈ ಹಿಂದೆ ನುಡಿದಂತೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ಪ್ರತಿಮನೆಗೂ ವರ್ಷ ೬೦ ಸಾವಿರಕ್ಕೂ ಮಿಕ್ಕಿ ಹಣ ಸಿಗುತ್ತಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ಸೋಲಿಸಿದರು. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಈ ಲೋಕಸಭಾ ಚುನಾವಣೆಯಲ್ಲಿ ಹಾಗಾಗಬಾರದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಾಗಿದೆ ಎಂದರು.

ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಬಿಜೆಪಿ ಪಕ್ಷ ಕೇವಲ ಸುಳ್ಳನ್ನು ಹೇಳಿಕೊಂಡು ಬಂದಿದೆ. ಇಲ್ಲಿನ ಸಂಸದರು ೧೫ ವರ್ಷಗಳಿಂದ ಏನು ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಗಂಗೊಳ್ಳಿ ಕುಂದಾಪುರ ಸೇತುವೆ ಮಾಡಿಸುವಂತೆ ಸಾಕಷ್ಟು ಸಲ ಒತ್ತಾಯ ಮಾಡಿದೆ. ಕೇವಲ ಪ್ರಚಾರ ಪಡೆಯುವ ಕೆಲಸ ಮಾಡಿದರೆ ಹೊರತು ಸೇತುವೆ ಆಗಲೇ ಇಲ್ಲ, ಗಂಗೊಳ್ಳಿ, ಮರವಂತೆ ಬಂದರು ಅಭಿವೃದ್ಧಿ ಮಾಡಿಸುವಂತೆ ಒತ್ತಾಯಿಸಿದೆ ಪ್ರಯೋಜನವಾಗಲಿಲ್ಲ, ಬಿಜೆಪಿ ಬಡವರಿಗೆ ಪ್ರಯೋಜನವಿಲ್ಲ, ಅದು ಮೇಲ್ಮಟ್ಟದವರು ಪಕ್ಷ ಎಂದು ಕೆಂಡ ಕಾರಿದ ಅವರು, ನಾನು ಒರಿಜಿನಲ್ ಹಿಂದು, ಡುಪ್ಲಿಕೇಟ್ ಹಿಂದುತ್ವ ನಮಗೆ ಬೇಕಾಗಿಲ್ಲ, ಬಿಜೆಪಿಯ ಧೋರಣೆಯಿಂದ ಬೇಸೆತ್ತು ನಾನು ಮಾತೃಪಕ್ಷಕ್ಕೆ ಮರಳಿದ್ದೇನೆ. ಬಿಜೆಪಿಯ ನಾಟಕೀಯ ಮಾತುಗಳಿಗೆ ಬೆಲೆ ಕೊಡಬೇಡಿ, ಗೀತಾ ಶಿವರಾಜ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಬದಲಾವಣೆ ತರೋಣ, ಬಳಿಕ ಬದಲಾವಣೆಯ ಫಲಿತಾಂಶ ನೋಡೋಣ ಎಂದರು.

ಸಭೆಯಲ್ಲಿ ಚುನಾವಣಾ ಉಸ್ತುವಾರಿ ಜಿ.ಎ ಬಾವ, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಎಚ್. ವಿಜಯ ಕುಮಾರ್ ಶೆಟ್ಟಿ, ಮದನ್ ಕುಮಾರ್ ರಘುರಾಮ ಶೆಟ್ಟಿ, ಶಂಕರ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
ಅಣ್ಣಪ್ಪ ಶೆಟ್ಟಿ ಸ್ವಾಗತಿಸಿದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಚಿಕ್ಕಯ್ಯ ಶೆಟ್ಟಿ ವಂದಿಸಿದರು.

ದಿನವಿಡಿ ಬಿರುಸಿನ ಕಾರ್ಯಕ್ರಮ:
ಆದಿತ್ಯವಾರ ಇಡೀ ದಿನ ಬೈಂದೂರು ಕ್ಷೇತ್ರದಲ್ಲಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ನಾಡ, ಆಲೂರು, ನಾವುಂದ, ಕಂಬಂದಕೋಣೆ, ತ್ರಾಸಿಗಳಲ್ಲಿ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!