spot_img
Wednesday, January 22, 2025
spot_img

ತ್ರಾಸಿಯಲ್ಲಿ ಕಾಂಗ್ರೆಸ್‌ ಬೃಹತ್‌ ಕಾರ್ಯಕರ್ತರ ಸಭೆ | ಮಾಜಿ ಶಾಸಕರಿಬ್ಬರೂ ಜೊತೆಗೂಡಿದ್ದು ಆನೆ ಬಲ ಬಂದಂತಾಗಿದೆ : ಗೀತಾ ಶಿವರಾಜ್‌ಕುಮಾರ್‌

ಜನಪ್ರತಿನಿಧಿ (ಬೈಂದೂರು) : ಜನರ ಸಂಪರ್ಕ ಮಾಡುವುದಕ್ಕೆ ನನಗೆ ಈ ಭಾರಿ ಸಾಕಷ್ಟು ಸಮಯಾವಕಾಶವಿದೆ. ಜನರ ಧ್ವನಿಯಾಗಿ ಇರುವುದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಇಲ್ಲಿನ ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ. ಬೈಂದೂರಿನಲ್ಲಿ ಮಾಜಿ ಶಾಸರಾದ ಗೋಪಾಲ ಪೂಜಾರಿ ಅವರು ಹಾಗೂ ಸುಕುಮಾರ ಶೆಟ್ಟಿ ಅವರು ಜೊತೆಗೂಡಿದ್ದು ಆನೆ ಬಲ ಬಂದಂತಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಹಾಗೂ ಬ್ಲಾಕ್ ಕಾಂಗ್ರೆಸ್ ಬೈಂದೂರು ಇದರ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ಮುಖಂಡರುಗಳ ಪ್ರಯತ್ನ, ರಾಜ್ಯ, ದೇಶದ ನಾಯಕರ ಕೊಡುಗೆ ಇಲ್ಲಿಗೆ ಬಹಳಷ್ಟಿದೆ. ಇಲ್ಲಿನ ಜನರ ಧ್ವನಿ ಆಗಿ ಇರುವುದಕ್ಕೆ ಬಯಸುತ್ತೇನೆ. ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಮನೆಮನೆಗೂ ನಮ್ಮ ಸರ್ಕಾರದ ಗ್ಯಾರಂಟಿಗಳು ತಲುಪಿವೆ. ಕಾಂಗ್ರೆಸ್‌ ಎಂದಿಗೂ ಜನರನ್ನು ತಲುಪುವ ಯೋಜನೆಗಳನ್ನೇ ತಂದಿದೆ. ಬಿಜೆಪಿಯವರೂ ಕೂಡ ಕಾಂಗ್ರೆಸ್‌ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಭಾರಿ ಚುನಾವಣೆಯಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ವ್ಯಕ್ತಪಡಿಸಿದರು.

ಮಾತು ಅಮುಖ್ಯ, ಕೆಲಸ ಮುಖ್ಯ : ಡಾ. ಶಿವರಾಜ್‌ ಕುಮಾರ್‌

ಕರಾವಳಿ ಕರ್ನಾಟಕಕ್ಕೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರ ಪ್ರೀತಿ ಅಪಾರವಾದದ್ದು. ಎಲ್ಲಿತನಕವೆಂದರೇ ಮೀನು ತಂದುಕೊಡುವಷ್ಟರ ಮಟ್ಟಿಗೆ ಇಲ್ಲಿನ ಜನ ಪ್ರೀತಿ ನೀಡುತ್ತಾರೆ ಎಂದು ಸಭೆಯನ್ನು ಉದ್ದೇಶಿಸಿ ಹ್ಯಾಟ್ರಿಕ್‌ ಹೀರೋ ಖ್ಯಾತಿಯ ಡಾ. ಶಿವರಾಜ್‌ ಕುಮಾರ್‌ ಮಾತನಾಡಿದರು.

ಮಾತು ಮುಖ್ಯವಲ್ಲ, ಕೆಲಸ ಮುಖ್ಯ. ಗೀತಾ ಅವರಿಗೆ ಅವಕಾಶ ಕೊಟ್ಟು ನೋಡಿ, ಗೀತಾ ಗೆದ್ದು ನಿಮ್ಮ ಪರವಾಗಿ ಕೆಲಸ ಮಾಡಿಲ್ಲ ಅಂತಾದರೇ ನನ್ನನ್ನು ಕೇಳಿ. ಜನರದ್ದು ಗೆಲ್ಲಿಸುವುದಷ್ಟೆ ಕೆಲಸವಲ್ಲ. ಗೆದ್ದ ಅಭ್ಯರ್ಥಿಯಿಂದ ಕೆಲಸ ಮಾಡಿಸುವುದೂ ಮುಖ್ಯ. ಈ ಭಾರಿ ನಿಮ್ಮ ಅಭ್ಯರ್ಥಿ ಗೀತಾ ಅವರನ್ನು ಬಹುಮತದಿಂದ ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ. ಗೀತಾ ಜನರ ನಂಬಿಕೆ ಉಳಿಸಿಕೊಳ್ಳುತ್ತಾರೆ ಎನ್ನುವ ದೃಢವಾದ ನಂಬಿಕೆ ಎಂದು ಎಂದು ಅವರು ಹೇಳಿದರು.

ನಾನು ಸುಕುಮಾರ್‌ ಶೆಟ್ಟಿಯವರು ಒಂದಾಗಿ ಕೆಲಸ ಮಾಡುತ್ತೇವೆ | ಶ್ರೀನಿವಾಸ ಪೂಜಾರಿಗೆ ಲೋಕಸಭೆಗೆ ಹೋಗುವ ಅರ್ಹತೆಯಿಲ್ಲ : ಗೋಪಾಲ ಪೂಜಾರಿ

ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ. ಗೋಪಾಲ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ನಾನು ಸುಕುಮಾರ್ ಶೆಟ್ಟಿ ಅವರು ಸೇರಿ ಒಟ್ಟಾಗಿ ಒಂದೇ ಕುಟುಂಬದ ಹಾಗೆ ಪಕ್ಷವನ್ನು ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ  ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ದುಡ್ಡಿನ ದರ್ಪ ಇನ್ನು ನಡೆಯುವುದಿಲ್ಲ. ಕಾಂಗ್ರೆಸ್ ನ ಯೋಜನೆಗಳು ಕೆಲಸ ಮಾಡುತ್ತವೆ. ಎಸ್ ಬಂಗಾರಪ್ಪ ಅವರು ಕೊಟ್ಟ ಯೋಜನೆಗಳನ್ನು ಇಲ್ಲಿನ ಜನರು ನೆನಪಿಸಿಕೊಳ್ಳುವ ಅಗತ್ಯವಿದೆ. ಹಕ್ಕು ಪತ್ರ ಬಂಗಾರಪ್ಪ ಅವರ ಕೊಡುಗೆ, ಭೂಸುಧಾರಣೆಯ ಅಂತಹ ಯೋಜನೆಗಳನ್ನು ಕೊಟ್ಟಿದ್ದಿದ್ದರೇ ಅದು ಕಾಂಗ್ರೆಸ್ ಎಂದು ಹೇಳಿದರು.

ಇನ್ನು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೆ. ಜಯಪ್ರಕಾಶ್ ಹೆಗ್ಡೆ  ಅವರ ವಿರುದ್ಧ ಸ್ಪರ್ಧಿಸುತ್ತಿರುವುದು ಮಹಾನ್ ಸುಳ್ಳುಗಾರ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.

ಅಧಿಕಾರಕ್ಕಾಗಿ ಬಿಲ್ಲವರು ಬೇಕು. ಹುದ್ದೆ ಸಿಕ್ಕಿದ ಮೇಲೆ ಶ್ರೀನಿವಾಸ ಪೂಜಾರಿಯವರಿಗೆ ಬಿಲ್ಲವರ ನೆನಪೇ ಇಲ್ಲ. ಪಾರ್ಲಿಮೆಂಟ್ ಗೆ ಹೋಗುವ ಯಾವ ಅರ್ಹತೆ ಶ್ರೀನಿವಾಸ ಪೂಜಾರಿಗೆ ಇಲ್ಲ ಎಂದು ಅವರು ಗುಡುಗಿದರು.

ಕಾಂಗ್ರೆಸ್ ನ ಗ್ಯಾರಂಟಿಗಳು ಮನೆಮನೆಗೆ ತಲುಪಿವೆ. ಬಿಜೆಪಿಯವರ ಭ್ರಷ್ಟಾಚಾರದ ದುಡ್ಡು ನಿಮ್ಮ ಮನೆಗೆ ಬಂದರೇ ಮುಲಾಜಿಲ್ಲದೇ ಎಸೆಯಿರಿ. ದುಡ್ಡಿನ ದರ್ಪಗಳೆಲ್ಲಾ ಇನ್ನು ಮುಂದೆ ನಡೆಯುವುದಿಲ್ಲ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.  

ಬಿಜೆಪಿಯನ್ನು ಇಲ್ಲಿಂದ ಖಾಲಿ ಮಾಡ್ತೇನೆ : ಸುಕುಮಾರ್‌ ಶೆಟ್ಟಿ

ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದೆ. ಕಾರಣಾಂತರದಿಂದ ಬಿಜೆಪಿಗೆ ಸೇರಿ ಕಾಂಗ್ರೆಸ್‌ನನ್ನು ಇಲ್ಲಿ ಖಾಲಿ ಮಾಡಿಸಿದ್ದೇನೆ. ಈಗ ಮತ್ತೆ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ, ಈಗ  ಬಿಜೆಪಿಯನ್ನು ಖಾಲಿ ಮಾಡಿ ಕಾಂಗ್ರೆಸ್ ನನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬೈಂದೂರು ಸುಕುಮಾರ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಪ್ರತಿ ವರ್ಷ ಸುಮಾರು 65 ಸಾವಿರ ಸಿಗುತ್ತಿದೆ. ಕಾಂಗ್ರೆಸ್‌ ಯೋಜನೆಗಳ ಬಗ್ಗೆ ಅಪಪ್ರಚಾರವನ್ನು ತಡೆಯಬೇಕಿದೆ. ಕಾಂಗ್ರೆಸ್‌ ಸದಾ ಜನರ ಪರವಾಗಿ ನಿಂತಿದೆ. ಹೊಟ್ಟೆಗೆ ಊಟ ಕೊಟ್ಟಿದ್ದು ಸಿದ್ದಾರಮಯ್ಯ ಅವರ ಸರ್ಕಾರ. ಬರೀ ರಾಮನಿಂದ ಏನೂ ಸಾಧ್ಯವಿಲ್ಲ. ಸರ್ಕಾರಗಳು ಅಭಿವೃದ್ಧಿ ಪರವಾಗಿ ಇರಬೇಕು, ಜನರ ಪರವಾಗಿ ಇರಬೇಕು. ರಾಜ್ಯಕ್ಕೆ, ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಗೋಪಾಲ ಪೂಜಾರಿ ಅವರ ಜೊತೆ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ. ಗೀತಾ ಶಿವರಾಜ್ ಕುಮಾರ್ ಅವರಿಗೆ ಮೂಕಾಂಬಿಕೆಯ ಸಂಪೂರ್ಣ ಅನುಗ್ರಹ ಇರಲಿದೆ ಎಂದರು.

ಮೋದಿ ಸರ್ಕಾರದಿಂದ ಜನರಿಗೆ ಏನು ಜಮೆಯಾಗಿದೆ ಎಂಬುವುದನ್ನು ಜನ ಪ್ರಶ್ನಿಸಿಕೊಳ್ಳಲಿ : ಕಿಮ್ಮನೆ ರತ್ನಾಕರ್‌

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ನಮ್ಮ ಬೂತ್ ಮಟ್ಟದಲ್ಲಿ ಬಿಜೆಪಿಗಿಂತ ಕನಿಷ್ಠ ನೂರು ಮತವನ್ನು ಜಾಸ್ತಿ ತರುವ ಶಪಥವನ್ನು ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತರು, ನಾಯಕರು ಮಾಡಬೇಕಿದೆ. ನಾಯಕರ ಜೊತೆಗೆ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಗಾಂಧಿ ಹಾಗೂ ಅಂಬೇಡ್ಕರ್ ತತ್ವಗಳಿಂದ ಹುಟ್ಟಿದ ಪಕ್ಷ ಕಾಂಗ್ರೆಸ್. ಈ ದೇಶದಲ್ಲಿ ಎಲ್ಲಾ ಜಾತಿ ಹಾಗೂ ಧರ್ಮಗಳನ್ನು ಒಟ್ಟುಗೂಡಿಸಿಕೊಂಡು ಹೋಗುವ ಏಕೈಕ ಪಕ್ಷ ಎಂದರೇ ಅದು ಕಾಂಗ್ರೆಸ್.  ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳಿಂದ ಮನೆ  ಮನೆಗೆ ತಲುಪಿದೆ. ಹತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರದಿಂದ ಬಡವರ ಪಾಲಿಗೆ ಏನು ಜಮಾ ಆಗಿದೆ ಎನ್ನುವುದನ್ನು ಜನ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಮತದಾನ ಮಾಡಬೇಕು. ಪ್ರಣಾಳಿಕೆಯಲ್ಲಿನ ಒಂದೇ ಒಂದು ಭರವಸೆ ಬಿಜೆಪಿ ಸರ್ಕಾರ ಈಡೇಸಿಲ್ಲ ಎಂದು ಬಿಜೆಪಿ ವಿರುದ್ಧ ಅವರು ಕಿಡಿ ಕಾರಿದರಲ್ಲದೇ, ಮಾತೆತ್ತಿದರೇ ಹಿಂದುತ್ವ, ಗೋ ರಕ್ಷಣೆ ಎಂದು ಹೇಳಿ ಜನರನ್ನು ಭಾವನಾತ್ಮಕವಾಗಿ ಓಲೈಸಿಕೊಳ್ಳುತ್ತಾರೆ. ಗೋಮಾಂಸ ರಫ್ತು ಮಾಡುವ ಎಲ್ಲಾ ಕಂಪೆನಿಗಳ ಮಾಲೀಕರು ಬಿಜೆಪಿಯವರೇ ಆಗಿದ್ದಾರೆ. ಹೇಳುವುದು ಒಂದು ಮಾಡುವುದು ಮತ್ತೊಂದು ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದಿದರು.

ಸಚಿವ ಮಧು ಬಂಗಾರಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರಿಗೆಗೆ ಯಾವತ್ತು ಮೀಡಿಯೇಟರ್ ಆಗುವುದಿಲ್ಲ. ಗೀತಾ ಶಿವರಾಜ್ ಕುಮಾರ್ ಅವರೇ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ನಮ್ಮ ಅಭ್ಯರ್ಥಿ ಈ ಸಾರ್ತಿ ಗೆದ್ದೇ ಗೆಲ್ಲುವ ಎಲ್ಲಾ ಲಕ್ಷಗಳು ಕಾಣುತ್ತಿವೆ ಎಂದು ಅವರು ಹೇಳಿದರು.

ಇಲ್ಲಿನ ಜನರ ವಿಶ್ವಾಸವನ್ನು ಗೀತಾ ಶಿವರಾಜ್ ಕುಮಾರ್ ಖಂಡಿತ ಉಳಿಸಿಕೊಳ್ಳುತ್ತಾರೆ. ಬಡವರ ಪಾಲಿನ ಬದುಕು ಹಸನಾಗಿದೆ ಎಂದರೇ ಅದು ಈ ದೇಶಕ್ಕೆ, ರಾಜ್ಯಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆ ಎನ್ನುವುದಕ್ಕೆ ಹೆಮ್ಮೆ ಇದೆ ನಮಗೆ ಎಂದು ಅವರು ಹೇಳಿದರು.

ಇನ್ನು,ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಬೈಂದೂರಿನ ವಿರೋಧ ಪಕ್ಷದ ಪ್ರಮುಖ ನಾಯಕರೆಲ್ಲಾ ಕಾಂಗ್ರೆಸ್ ಗೆ ಇಂದು ಸೇರ್ಪಡೆಗೊಂಡಿದ್ದಾರೆ. ವಿರೋಧ ಪಕ್ಷದ ನಾಯಕತ್ವ ಇಲ್ಲಿ ಈ ಮೂಲಕ ಖಾಲಿ ಆದಂತಾಗಿದೆ. ಇನ್ನು ಉಳಿದ ದಿನಗಳಲ್ಲಿ ವಿರೋಧ ಪಕ್ಷದ ಕಾರ್ಯಕರ್ತರನ್ನೂ ಬದಲಾಯಿಸುವ ಹಾಗೆ ನಮ್ಮ ಯೋಜನೆಗಳನ್ನು ತಲುಪಿಸಬೇಕಿದೆ. ಬೈಂದೂರಿನಲ್ಲಿ ಮತ್ತೆ ಮರಳಿ ಕೋಟಿ ಚೆನ್ನಯ್ಯ (ಗೋಪಾಲ ಪೂಜಾರಿ, ಸುಕುಮಾರ ಶೆಟ್ಟಿ) ಜೊತೆಯಾಗಿದ್ದಾರೆ. ಗೆಲ್ಲುವ ವಿಶ್ವಾಸ ನಮಗೆ ನೂರಕ್ಕೆ ನೂರರಷ್ಟು ಇದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಅಯೋಧ್ಯೆ ರಾಮ ಮಂದಿರ ಇನ್ನೂ ಸಂಪೂರ್ಣ ಆಗಿಲ್ಲ. ಜನರ ಭಾವನೆ ಕೆರಳಿಸುವ ಉದ್ದೇಶದಿಂದ, ಚುನಾವಣೆಯ ಉದ್ದೇಶದಿಂದ ಬಿಜೆಪಿ ಅಯೋಧ್ಯೆಯಲ್ಲಿ ಅಪೂರ್ಣ ಮಂದಿರವನ್ನು ಕಟ್ಟಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಅವರು ಕಿಡಿ ಕಾರಿದರು.

ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾಲ್ಕುವರೆ ವರ್ಷ ಆಗುವವರೆಗೆ ಬಿ. ವೈ ರಾಘವೇಂದ್ರ ಜನರ ಸಂಪರ್ಕದಲ್ಲೇ ಇರುವುದಿಲ್ಲ. ಚುನಾವಣೆಗೆ ನಾಲ್ಕೈದು ತಿಂಗಳಿರುವಾಗ ಮನೆಯಿಂದ ಹೊರಗೆ ಬರುತ್ತಾರೆ. ಧರ್ಮಾಧಾರಿತ ರಾಜಕೀಯ ಇನ್ನು ಮುಂದೆ ನಡೆಯುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭಾವುಟ ಹಾರಿಸಿಯೇ ತೀರುತ್ತೇವೆ ಎಂದು ಹೇಳಿದರು.

ಸಚಿವ ಮಂಕಾಳ್‌ ವೈದ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಂಗ್ರೆಸ್‌ ಯೋಜನೆಗಳಿಂದ ಈ ಬಾರಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಗೀತಾ ಶಿವರಾಜ್‌ ಕುಮಾರ್‌ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದು ಬರಲಿ ಎನ್ನುವುದು ಎಲ್ಲಾ ಕಾರ್ಯಕರ್ತರ ಆಶಯ ಎಂದು ಅವರು ಹೇಳಿದರು.

ಮಾಜಿ ಸಚಿವ ಅಭಯ್ ಚಂದ್ರ ಜೈನ್, ಶಿರಶಿಯ ಶಾಸಕ ಭಿಮಣ್ಣ ನಾಯ್ಕ್‌, ಎಂ. ಎ ಗಫೂರ್, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿ ಬ್ಲಾಕ್‌ ಕಾಂಗ್ರೆಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿಜೆಪಿಯಿಂದ ಹಲವಾರು ಮಂದಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.  ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ ಧನ್ಯವಾದ ಸಮರ್ಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!