Thursday, November 14, 2024

ನಾಗಾರಾಧನೆ ನಮ್ಮ ಬಾಂಧವ್ಯಕ್ಕೆ ಸಂಬಂಧಿಸಿದ ಭಕ್ತಿಯ ಸಂಕೇತ-ಪ್ರತಾಪಚಂದ್ರ ಶೆಟ್ಟಿ

ಹಳನಾಡು ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆ

ಕುಂದಾಪುರ: ಧಾರ್ಮಿಕವಾಗಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ನಾಗಾರಾಧನೆಯನ್ನು ವೈಜ್ಞಾನಿಕ ನೆಲೆಯಲ್ಲಿ ಸಾಭಿತುಪಡಿಸಲು ಸಾಕಷ್ಟು ಅಂಶಗಳು ಸ್ವಾಭಾವಿಕವಾಗಿ ಅಡಗಿದೆ. ನಾಗಾರಾಧನೆ ಎಂದರೆ ಅದು ನಮ್ಮ ದೃಢವಾದ ನಂಬಿಕೆ, ನಮ್ಮ ಬಾಂಧವ್ಯಕ್ಕೆ ಸಂಬಂಧಿಸಿದ್ದು, ಭಕ್ತಿಯ ಪ್ರತೀಕ. ಆದರೆ ನಾಗಾರಾಧನೆಯ ಕವಲುಗಳನ್ನು ವಿಜ್ಞಾನದ ಕಣ್ಣಿನಿಂದ ನೋಡುವುದು ಬಹಳ ಅಪಾಯಕಾರಿ ಬೆಳವಣಿಗೆ. ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಧಾರ್ಮಿಕ ನಂಬಿಕೆಯನ್ನು ಗರ್ಭೀಕರಿಸಿಗೊಂಡಿರುವ ಶಕ್ತಿ, ಪರಂಪರೆ. ಭಯವೇ ಭಕ್ತಿಯ ಮೂಲ. ನಾಗ ಭಕ್ತಿಯ ಸಂಕೇತವೂ ಹೌದು, ಭಯದ ಸಂಕೇತವೂ ಹೌದು ಎಂದು ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪ್ ಚಂದ್ರ ಶೆಟ್ಟಿ ಹಳನಾಡು ಹೇಳಿದರು.

ಕುಂದಾಪುರ ತಾಲೂಕು ಹಳನಾಡು ಗ್ರಾಮದ ಸಮಸ್ತ ದೇವರಮನೆ ಕುಟುಂಬಸ್ಥರ ಸೇವೆಯಾಗಿ ಅರ್ಭಕಧಾರಕ, ಸಹಿತ ಸಹ ಪರಿವಾರ ಶ್ರೀ ಹೊಳ್ಳಾಡಿ ಅಮ್ಮ ದೈವಸ್ಥಾನ ಹಳನಾಡು ಇಲ್ಲಿ ನಡೆದ ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ನಾಗ ದೇವರು ಹೌದು, ದೈವವೂ ಹೌದು. ಈಶ್ವರ, ಗಣಪತಿ ದೇವರ ಜೊತೆಗೂ ನಾಗನ ನೋಡುತ್ತೇವೆ. ದೈವಗಳ ಜೊತೆಯಲ್ಲಿಯೂ ನಾಗನ ಆರಾಧನೆ ನೋಡುತ್ತೇವೆ. ವಿಗ್ರಹ ರೂಪದಲ್ಲಿಯೂ ನಾಗನ ಪೂಜಿಸುತ್ತೇವೆ, ನಿರಾಕಾರ ಸ್ವರೂಪದಲ್ಲಿಯೂ ನಾಗ ಆರಾಧಿಸುತ್ತೇವೆ. ಗುಡಿಯ ಒಳಗೂ ನಾಗ ಪೂಜೆ ಮಾಡಲಾಗುತ್ತದೆ. ಬಯಲಲ್ಲೂ ನಾಗಾರಾಧನೆ ನಡೆಯುತ್ತದೆ. ಮಾನವ ವಿಕಾಸದೊಂದಿಗೆ ನಾಗಾರಾಧನೆಯೂ ಆರಂಭವಾಯಿತು. ಸುಮಾರು ೭೬೦೦ಕ್ಕೂ ಹೆಚ್ಚು ವರ್ಷ ಚರಿತ್ರೆ ನಾಗಾರಾಧನೆಗೆ ಇದೆ. ಜೀವ ನಾಗರಿಕತೆಯ ಕಾಲಘಟ್ಟದಲ್ಲಿಯೂ ನಾಗ ಆರಾಧನೆ ಗಮನಿಸಬಹುದು ಎಂದರು.

ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಪರಿಸರಸಹ್ಯವಾದ ಜೀವನ ಕ್ರಮ ನಮ್ಮದಾಗಬೇಕು. ನಾಗಾರಾಧನೆಯಲ್ಲಿಯೂ ಕೂಡಾ ಪರಿಸರದ ಮಹತ್ವಿಕೆಯಿದೆ. ಪರಿಸರವನ್ನು ರಕ್ಷಿಸುವ ಶ್ರದ್ದೆಯನ್ನು ಬೆಳೆಸಿಕೊಳ್ಳಬೇಕು. ಕೃಷಿಯನ್ನು ಉಳಿಸಿಕೊಂಡು, ಜಾನುವಾರುಗಳನ್ನು ಸಲಹಿಕೊಂಡು ಬದುಕು ನಡೆಸುವಂತಾಗಬೇಕು ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ನಾಗ ಪ್ರಕೃತಿಯ ದೇವರು. ನಾಗಾರಾಧನೆಯಿಂದ ಸಂತತಿ, ಸಂಪತ್ತು, ಆರೋಗ್ಯ ಲಭಿಸುತ್ತದೆ. ಶ್ರದ್ದಾಭಕ್ತಿಯಿಂದ ನಾಗ ಆರಾಧಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನಾಗಾರಾಧನೆಗೆ ವ್ಯಯಿಸಿದ ಸಂಪತ್ತು ವರ್ಷದೊಳಗೆ ಎರಡರಷ್ಟು ವೃದ್ಧಿಯಾಗುತ್ತದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮಾತನಾಡಿ, ಉತ್ಸವ ಬೇರೆ ಜಾತ್ರೆ ಬೇರೆ.ದೇವರಿಗೆ ನಡೆಯುವುದು ಉತ್ಸವ. ಮಂಡಲೋತ್ಸವ ದೇವರಿಗೆ ಮಾತ್ರ ನಡೆಯುವುದು. ನಾಗಮಂಡಲೋತ್ಸವದಂತಹ ಶ್ರೇಷ್ಠ ಆರಾಧನೆಯಲ್ಲಿ ಶ್ರದ್ದೆ ಭಕ್ತಿಯಿಂದ ಪಾಲ್ಗೊಳ್ಳುವುದರಿಂದಲೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಹಳನಾಡು ದೊಡ್ಮನೆಯ ಎಚ್.ಬೋಜರಾಜ್ ಶೆಟ್ಟಿ, ಮೊಕ್ತೇಸರರಾದ ಎಚ್.ಸದಾಶಿವ ಶೆಟ್ಟಿ, ಎಚ್.ಕೆ ದೇವಾನಂದ ಶೆಟ್ಟಿ ಹಳನಾಡು, ಹೋಟೆಲ್ ಉದ್ಯಮಿ ಹರೀಶ್ ಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಳ್ನಾಡು, ಹರಿ ಓಂ ರತ್ನಾಕರ ಶೆಟ್ಟಿ, ಮಹಾಬಲ ಶೆಟ್ಟಿ ದೇವರುಮನೆ, ಪ್ರದೀಪ ಶೆಟ್ಟಿ, ಕೈಗಾರಿಕಾ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಬಿ.ರಾಜೇಂದ್ರ ಕುಮಾರ್ ಬಸ್ರೂರು ಭಾಗವಹಿಸಿದ್ದರು.

ಎಸ್.ಡಿ.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ ಶೆಟ್ಟಿ ಮೂಡುಬಗೆ ಪ್ರಾರ್ಥನೆ ಮಾಡಿದರು. ಜಿ.ಪಂ.ಮಾಜಿ ಸದಸ್ಯ ಎಚ್.ದೇವಾನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಎಚ್.ದಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಅಧ್ಯಾಪಕ ವಿಶ್ವನಾಥ ಶೆಟ್ಟಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಬಿ.ರಾಜೇಂದ್ರ ಕುಮಾರ್ ಬಸ್ರೂರು ಇವರಿಂದ ಸುಗಮ ಸಂಗೀತ ಭಕ್ತಿ ಗಾಯನ, ವಿಶ್ವನಾಥ ಶೆಟ್ಟಿ ಹಳನಾಡು, ಶಂಕರ್ ಶ್ರೀಯಾನ್, ಹಳನಾಡು, ಮಂಜುನಾಥ ಎಚ್. ಎನ್ ಹಳನಾಡು, ಉಮೇಶ್ ಮಲ್ಯಾಡಿ, ರಘು ಕುಲಾಲ್ ಹೊಸಂಗಡಿ, ಪೂರ್ಣಿಮಾ ಪೆರ್ಡೂರು, ವಿಶ್ವನಾಥ ಜನ್ಸಾಲೆ, ಜನಾರ್ದನ್ ಕುಂಭಾಶಿ ಇವರಿಂದ ಭಜನಾ ದಾಸ ಸಂಕೀರ್ತನ ದ್ವಂದ್ವ ಹಾಡುಗಾರಿಕೆ, ನಾಟ್ಯಾಂಜಲಿ ಕಲಾ ನಿಕೇತನ ಬಸ್ರೂರು ಇಲ್ಲಿನ ವಿದ್ಯಾರ್ಥಿಗಳಿಂದ ಭರತನಾಟ್ಯ, ಡಾ.ಎಸ್.ಪಿ ಗುರುದಾಸ್ ಮಂಗಳೂರು ಹಾಗು ಬಳಗದವರಿಂದ ಶ್ರೀದೇವಿ ಮಹಾತ್ಮೆ ಹರಿಕಥಾ ಸತ್ಸಂಗ ಪ್ರಸ್ತುತಗೊಂಡಿತು.

ಧಾರ್ಮಿಕ ಕಾರ್ಯಕ್ರಮ:
ಮಾ.3ರಂದು ಆದಿತ್ಯವಾರ ಬೆಳಿಗ್ಗೆ ೬.೩೦ರಿಂದಲೇ ನಾಗಮಂಡಲೋತ್ಸವದ ಧಾರ್ಮಿಕ ಕರ್ಮಾಂಗಗಳು ಪ್ರಾರಂಭಗೊಂಡು ಸಂದರ್ಶನ, ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ರಂಗ ಪೂಜೆ ಅಷ್ಟಾವಧಾನ ಸೇವೆ, ಹಾಲಿಟ್ಟು ಸೇವೆ, ರಾತ್ರಿ ಮಂಡಲ ಪೂಜಾ, ಚತುಃಪವಿತ್ರ ನಾಗಮಂಡಲ ಸೇವೆ ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಂಡಿತು.

ಚತುಃಪವಿತ್ರ ನಾಗಮಂಡಲೋತ್ಸವವು ವೇ.ಮೂ.ವಿನಾಯಕ ಭಟ್ ಹಳನಾಡು, ವೇ.ಮೂ.ಯಜ್ಞನಾರಾಯಣ ಭಟ್ ಹಳನಾಡು, ವೇ,.ಮೂ.ಪ್ರಕಾಶ್ ಭಟ್ ಹಳನಾಡು ಇವರ ಅರ್ಚಕತ್ವದಲ್ಲಿ ವೇ.ಮೂ.ಬಿ.ಗಣೇಶ್ ಭಟ್ ಬನ್ನಾಡಿ, ವೇ.ಮೂ.ಮಂಜುನಾಥ ಅಡಿಗರು ತೌಡ್ಕಲ್ಲು ಮತ್ತು ಬಳಗದವರ ಪ್ರಧಾನ ಪೌರೋಹಿತ್ಯದಲ್ಲಿ ನಾಗಪಾತ್ರಿಗಳಾಗಿ ವೇ.ಮೂ. ಸುದರ್ಶನ ಉಡುಪರು (ಹರ್ಕಾಡಿ) ಗೋಪಾಡಿ ಕೋಟೇಶ್ವರ, ವೇ,ಮೂ. ಸುಬ್ರಹ್ಮಣ್ಯ ಅಡಿಗರು ನೈಕರಮಠ ಕುಮ್ರಗೋಡು, ವೈದ್ಯರ ಬಳಗದಲ್ಲಿ ಸರ್ವೋತ್ತಮ ವೈದ್ಯರು, ಗಣಪತಿ ವೈದ್ಯರು, ಆನಂದರಾಮ ವೈದ್ಯರು ಮತ್ತು ಬಳಗ ಅಂಪಾರು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!