Sunday, September 8, 2024

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಭಾವಳಿಯಲ್ಲಿ ಕೆಳದಿ ಚಿಕ್ಕ ಸಂಕಣ್ಣ ನಾಯಕನ ಕಾಲದ ಶಾಸನ ಪತ್ತೆ

ಕುಂದಾಪುರ: ಕರ್ನಾಟಕದ ಕರಾವಳಿಯ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಬಸರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇರುವ ಪುರಾತನ ಕಂಚಿನ ಪ್ರಭಾವಳಿಯಲ್ಲಿ ಶಾಸನ ಇರುವುದು ಕಂಡು ಬಂದಿದೆ. ಪ್ರಭಾವಳಿಯ ಹಿಂಭಾಗದಲ್ಲಿ ಮೇಲೆ ಹಾಗೂ ಕೆಳಭಾಗದಲ್ಲಿ ಶಾಸನ ಇರುವುದು ಕಾಣುತ್ತದೆ. ಇನ್ನೂ ಶಾಸನಗಳಲ್ಲಿ ಈ ಮಹಾಲಿಂಗೇಶ್ವರ ಸನ್ನಿಧಿಯನ್ನು ನಖರೇಶ್ವರ ಎಂದು ಸಂಭೋದಿಸಿರುವುದನ್ನು ನಾವು ಇಲ್ಲಿ ಸ್ಮರಿಸಿ ಬೇಕಾಗುತ್ತದೆ. ಬಸರೂರಿನ ನಖರಾ ವ್ಯಾಪಾರಿ ಸಂಘ ಬಸರೂರು ಪಟ್ಟಣ ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. (ಕೆಳದಿ ಸಾಮ್ರಾಜ್ಯ, ಅಜಯ್ ಕುಮಾರ್ ಶರ್ಮಾ, ೨೦೨೩, ಪುಟ ಸಂಖ್ಯೆ ೧೭೪).

ಶಾಸನದ ಸಾರಾಂಶ:- ಸ್ವಸ್ತಿ ಶ್ರೀ ಶಕವರ್ಷ 1482ರ ಸಿದ್ದಾರ್ಥೀ ಸಂವತ್ಸರದಲ್ಲಿ ಅಂದರೆ ಇಂದಿನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 1559-1560 ರಲ್ಲಿ ಸದಾಶಿವ ನಾಯಕರು ತುಳುರಾಜ್ಯವನ್ನು ಆಳುತ್ತಿರುವಾಗ, ಬಸರೂರಿನ ಪಡುವ ಕೇರಿಯ (ಪಶ್ಚಿಮ ದಿಕ್ಕಿನಲ್ಲಿ ಇರುವ ಕೇರಿ) ಹಾಲರು ಧರ್ಮವನ್ನು ಪಾಲಿಸಿಕೊಂಡು ಬಂದಿದ್ದು, ಪಡುವ ಕೇರಿ ಹಾಲರು ಸೆಟ್ಟಿಕಾರರು (ವ್ಯಾಪಾರಸ್ಥರು) ದೇವರ ಪೀಠ, ಪ್ರಭಾವಳಿ ಮತ್ತು ಮೂರ್ತಿಯನ್ನು (ಉತ್ಸವ ಮೂರ್ತಿ) ಮಾಡಿಸಲು ನೀಡಿದ ಚಿನ್ನದ ವರಾಹಗಳ ತೂಕ 500. ಇನ್ನೂ ಈ ಕೆಲಸವನ್ನು ರಾಮಾಚಾರ್ ಎಂಬುವರು ಮಾಡಿದರೆ ಅಂದು ದೇವಾಲಯದ ಅಧ್ಯಕ್ಷರ ಸ್ಥಾನದಲ್ಲಿ ಇದ್ದದ್ದು ಬೆಂಮ್ಮರದ ಶಂಕರಲಿಂಗ ಸೆಟ್ಟಿ.

ಈ ಶಾಸನದಲ್ಲಿ ಪ್ರಸ್ತಾಪ ಆಗಿರುವ ಕಾಲಮಾನ 1559-1560 ಮತ್ತು ಅಂದು ತುಳುರಾಜ್ಯವನ್ನು ಆಳುತ್ತಿದ್ದಿದ್ದು ಸದಾಶಿವ ನಾಯಕರು. ಇನ್ನೂ ಕೆಳದಿಯ ಇತಿಹಾಸವನ್ನು ಹೇಳಲು ಇರುವ ಎರಡು ಪ್ರಮುಖ ಕೃತಿಗಳಾದ ಶ್ರೀ ಶಿವತತ್ವರತ್ನಾಕರ ಮತ್ತು ಕೆಳದಿನೃಪವಿಜಯಂ ಅನ್ನು ಗಣನೆಗೆ ತೆಗೆದುಕೊಂಡರೆ ಶ್ರೀ ಸದಾಶಿವ ನಾಯಕರು ಆಳ್ವಿಕೆ ಮಾಡಿದ ಕಾಲಘಟ್ಟ 1513 ರಿಂದ 1545. ಇನ್ನೂ ಶಾಸನದಲ್ಲಿ ಉಲ್ಲೇಖಿಸಿರುವ ಕಾಲಘಟ್ಟದಲ್ಲಿ ಅಂದರೆ 1559-1560ರಲ್ಲಿ ಚಿಕ್ಕಸಂಕಣ್ಣ ನಾಯಕರು ತುಳುರಾಜ್ಯದ ಮೇಲೆ ಆಳ್ವಿಕೆಯನ್ನು ಮಾಡುತ್ತಿರುತ್ತಾರೆ. ಇನ್ನೂ ನಮಗೆ ಕರಾವಳಿ ಮತ್ತು ಮಲೆನಾಡಿನ ಕೆಲವು ಕಡೆ ಸಿಕ್ಕ ಶಾಸನಗಳನ್ನು ಗಮನಿಸಿದಾಗ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ನಾಯಕರ ಆಳ್ವಿಕೆಯ ಕಾಲದಲ್ಲಿ ಅವರ ತಂದೆಯಾದ ಸದಾಶಿವ ನಾಯಕರ ಹೆಸರು ಶಾಸನಗಳಲ್ಲಿ ಕಂಡುಬರುತ್ತದೆ.

ಕೆಳದಿಯ ಸದಾಶಿವ ನಾಯಕರು ಕರ್ಣಾಟ (ವಿಜಯನಗರ) ಸಾಮ್ರಾಜ್ಯದ ಹಲವಾರು ಯುದ್ಧಗಳಲ್ಲಿ ತೋರಿಸಿದ ಅಪ್ರತಿಮ ಸಾಹಸದಿಂದಾಗಿ ಅವರಿಗೆ ಆರಗದ ರಾಜ್ಯಪಾಲರ ಹುದ್ದೆಯ ಜೊತೆಗೆ ನಾಯಕ ಎಂಬ ಪಟ್ಟವನ್ನು ರಾಯರು ಕರುಣಿಸುತ್ತಾರೆ. ಈ ಹುದ್ದೆಯ ಪ್ರಯುಕ್ತ ಸದಾಶಿವ ನಾಯಕರು ಆರಗ ೧೮ ಕಂಪಣ, ಚಂದ್ರಗುತ್ತಿ 18 ಕಂಪಣ, ತುಳು ರಾಜ್ಯ, ಬಾರಕೂರು, ಮಂಗಳೂರು ರಾಜ್ಯಗಳ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಕರಾವಳಿಯ ಅರಸರು ಮತ್ತು ಕರ್ಣಾಟ ಸಾಮ್ರಾಜ್ಯದ ಮಧ್ಯೆ ಕೊಂಡಿಯಾಗಿ ಸದಾಶಿವ ನಾಯಕರು ಕಾರ್ಯವನ್ನು ನಿರ್ವಹಿಸುತ್ತಾರೆ. ಸದಾಶಿವ ನಾಯಕರು ತಮ್ಮ ಕಾರ್ಯದಲ್ಲಿ ತೋರಿದ ನಿಷ್ಠೆಯಿಂದ ಅವರಿಗೆ ದೊರೆತ ರಾಜ್ಯಪಾಲರ ಹುದ್ದೆ ಮತ್ತು ನಾಯಕ ಪಟ್ಟ ಕೆಳದಿ ರಾಜಮನೆತನವು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಹೋಗಲು ಹಂಪೆಯ ರಾಯರು ಕರುಣಿಸುತ್ತಾರೆ. ಸದಾಶಿವ ನಾಯಕರು ಕರಾವಳಿಯ ಉದ್ದಕ್ಕೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮುಖಾಂತರ ಅಲ್ಲಿಯ ಜನಸ್ತೋಮರ ಎದೆಯಲ್ಲಿ ಶಾಶ್ವತವಾಗಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಾರೆ. ಸದಾಶಿವ ನಾಯಕರು ತಮ್ಮ ಆಳ್ವಿಕೆಯ ಕಾಲದಲ್ಲಿ ಕರಾವಳಿಯ ಸಪ್ತ ಮುಕ್ತಿ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿ ಅಲ್ಲಿರುವ ದೇವಾಲಯಗಳಿಗೆ ಸಾಕಷ್ಟು ದಾನಧರ್ಮವನ್ನು ಮಾಡುತ್ತಾರೆ. ತಮ್ಮ ತಂದೆ ಚೌಡಪ್ಪ ಮತ್ತು ತಾಯಿ ತಿರುಮಮ್ಮ ಅವರಿಗೆ ಕೈಲಾಸ ಪ್ರಾಪ್ತಿ ಆಗಲೆಂದು ಶಂಕರನಾರಾಯಣ ಕ್ಷೇತ್ರದಲ್ಲಿ ವಿರೂಪಾಕ್ಷ ದೇವರ ಹೆಸರಿನಲ್ಲಿ ಮಠವನ್ನು ಸ್ಥಾಪಿಸುತ್ತಾರೆ. ಶಂಕರನಾರಾಯಣ ದೇವರ ಪರಮಭಕ್ತಾರದ ಸದಾಶಿವ ನಾಯಕರು ತಮ್ಮ ಇಬ್ಬರೂ ಮಕ್ಕಳಿಗೆ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ಎಂದು ನಾಮಕರಣ ಮಾಡುತ್ತಾರೆ. ಇಲ್ಲಿ ಸಂಕಣ್ಣ ಎಂಬುವುದು ಶಂಕರಣ್ಣ ಎಂಬುದರ ರೂಪಾಂತರ. ಮೇಲ್ಕಂಡ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಶಾಸನಗಳಲ್ಲಿ ಕಂಡುಬರುವ ಸದಾಶಿವ ನಾಯಕರ ಹೆಸರನ್ನು (೧೫೪೫ರ ನಂತರದಲ್ಲಿ) ನೋಡಿದಾಗ ನಮಗೆ ತಿಳಿದುಬರುವ ವಿಷಯ ಏನೆಂದರೆ ಸದಾಶಿವ ನಾಯಕರ ಮಕ್ಕಳಾದ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ನಾಯಕರು ತಮ್ಮ ಆಡಳಿತಾವಧಿಯಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಶಾಸನಗಳನ್ನು ಬರೆಸಿರುವುದು ಕಂಡುಬರುತ್ತದೆ. ಇದಕ್ಕೆ ಮೂರು ಅರ್ಥವನ್ನು ನಾವು ಕಲ್ಪಿಸಬಹುದು

(೧) ಸದಾಶಿವ ನಾಯಕರಿಗೆ ಕರಾವಳಿಯಲ್ಲಿ ಇದ್ದ ವರ್ಚಸ್ಸನ್ನು ಉಪಯೋಗಿಸಿ ಅದನ್ನು ಮುಂದುವರಿಸಿಕೊಂಡು ಹೋಗಲು ಅವರ ಮರಣಾಂತರವು ಅವರ ಹೆಸರಿನಲ್ಲಿ ಶಾಸನಗಳನ್ನು ಬರೆಯಲಾಗಿದೆ.
(೨) ತಮ್ಮ ತಂದೆಯ ಗೌರವಾರ್ಥ ದೊಡ್ಡ ಮತ್ತು ಚಿಕ್ಕ ಸಂಕಣ್ಣ ನಾಯಕರು ಶಾಸನಗಳಲ್ಲಿ ತಮ್ಮ ತಂದೆಯ ಹೆಸರನ್ನು ಬರೆಸಿರಬಹುದು.
(೩) ಕರಾವಳಿ ಪ್ರದೇಶದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ದೊಡ್ಡ ಮತ್ತು ಚಿಕ್ಕ ಸಂಕಣ್ಣ ನಾಯಕರು ಆಡಳಿತವನ್ನು ಮುಂದುವರಿಸಿಕೊಂಡು ಹೋಗಿರ ಬಹುದು.
ಬಸರೂರಿನ ಈ ಪ್ರಭಾವಳಿ ಶಾಸನ ಹೊಸ ಅಧ್ಯಯನಕ್ಕೆ ಸಾಕಷ್ಟು ಅವಕಾಶವನ್ನು ನೀಡಿದೆ. ಐತಿಹಾಸಿಕ ತಾಳಿಕೋಟೆ ಯುದ್ಧದ (೧೫೬೫) ತರುವಾಯ ಕೆಳದಿಯ ಹಿರಿಯ ವೆಂಕಟಪ್ಪ ನಾಯಕರ ಕಾಲಘಟ್ಟದಲ್ಲಿ ದಕ್ಷಿಣ ಗೋವೆಯಿಂದ ಕೇರಳದ ನೀಲೇಶ್ವರದ ವರೆಗೂ ಕೆಳದಿ ಸಾಮ್ರಾಜ್ಯದ ಪಶ್ಚಿಮದ ಗಡಿಯಾಗಿ ಮಾರ್ಪಾಡಾಗುತ್ತದೆ. ಹಿರಿಯ ವೆಂಕಟಪ್ಪ ನಾಯಕರಿಂದ ಪ್ರಾರಂಭಗೊಂಡು ಕೊನೆಯ ಕೆಳದಿಯ ರಾಣಿ ವೀರಮ್ಮಾಜಿಯವರೆಗು ಕೆಳದಿಯ ಅರಸರು ಕರಾವಳಿಯಲ್ಲಿ ತಮ್ಮ ಹೆಸರಿನಲ್ಲಿಯೇ ಶಾಸನಗಳನ್ನು ಬರೆಸುತ್ತಾರೆ.

ಈ ಶಾಸನವನ್ನು ಪ್ರದೀಪ ಕುಮಾರ್ ಬಸ್ರೂರು ಜಿಲ್ಲಾ ಸಂಚಾಲಕರು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮಹೇಶ್ ಮೆಂಡನ್ ಸಹಕಾರ ದಲ್ಲಿ ಪತ್ತೆ ಹಚ್ಚಿದ್ದು, ಇವರಿಗೆ ಅಧ್ಯಯನ ಕ್ಕೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ರಾಜ್ಯ ಸದಸ್ಯರು ಅಜಯ್ ಕುಮಾರ ಶರ್ಮಾ ಶಿವಮೊಗ್ಗ ಹಾಗೂ ಶ್ರೀಪತಿ ಆಚಾರ್ಯ ಮಂಗಳೂರು ಇವರು ಸಹಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!