Sunday, September 8, 2024

ಕತೆಗಾರ ಮನುಷ್ಯ ಲೋಕದಲ್ಲಿ ಕಳೆದುಹೋದಾಗಲೇ, ವಿಚಾರಗಳು ಜೀವಪೋಷಕವಾಗಿ ಬೆಳೆಯುತ್ತವೆ : ಚಿತ್ರ ಸಾಹಿತಿ, ಕತೆಗಾರ ಜಯಂತ ಕಾಯ್ಕಿಣಿ

ಸತೀಶ್‌ ಶೆಟ್ಟಿ ವಕ್ವಾಡಿ ಅವರ ʼಕೊನೆಯ ಎರಡು ಎಸೆತಗಳುʼ ಕಥಾ ಸಂಕಲನ ಬಿಡುಗಡೆ ಸಮಾರಂಭ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) “ಕತೆ ಇರುವುದೇ ಮನುಷ್ಯನ ಬಗ್ಗೆ. ಲೇಖಕ ಯಾವುದೇ ಭಾಗದಲ್ಲೇ ಇರಲಿ ಅವನು ಕತೆಗಳನ್ನೇ ಹುಡುಕುತ್ತಿರುತ್ತಾನೆ. ಇನ್ನು ಒಬ್ಬ ಕತೆಗಾರ ಬೇರೆ ಬೇರೆ ಪಾತ್ರಗಳ ಮೂಲಕ ತನ್ನ ಕತೆಗಳ ಪಾತ್ರಗಳನ್ನೇ ಬದುಕುತ್ತಾನೆ. ಕಾರಂತರು ತಮ್ಮ 45 ಕಾದಂಬರಿಗಳ ಮೂಲಕ 45 ಬಾರಿ ಹುಟ್ಟಿ ಬದುಕಿ ಬಂದಿದ್ದಾರೆ. ಈ ಜಗದಲ್ಲಿ ಒಂದು ಕತೆ ಹಲವು ಹುಟ್ಟು ಪಡೆದು ಬದುಕುತ್ತದೆ. ಅದಕ್ಕೆ ಜಗತ್ತೇ ಒಂದು ಕತೆ ಎನ್ನಬಹುದು. ನಮ್ಮೆಲ್ಲಾ ಕತೆಗಾರರೂ ಉಪಕತೆಗಳನ್ನು ಬರೆಯುತ್ತಾರೆ. ಕತೆ ಎಂದಿಗೂ ಪೂರ್ಣವಾಗುವುದಿಲ್ಲ ಎಂದು ಚಿತ್ರ ಸಾಹಿತಿ, ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು.

ಇಲ್ಲಿನ ಸುಚಿತ್ರ ಫಿಲ್ಮ್ ಸೊಸೈಟಿಯ ಪುರವಂಕರ ಸಭಾಂಗಣದಲ್ಲಿ 2024 ಫೆಬ್ರವರಿ 04ರ ಭಾನುವಾರದಂದು ಬುಕ್‌ ಬ್ರಹ್ಮ ಪಬ್ಲಿಕೇಷನ್ಸ್‌ ಹೊರತಂದ ಕಥೆಗಾರ ಸತೀಶ್‌ ಶೆಟ್ಟಿ ವಕ್ವಾಡಿಯವರ ʻಕೊನೆಯ ಎರಡು ಎಸೆತಗಳುʼ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ನಾಳೆ ಏನು ಎಂಬುವುದು ನಮಗೆ ಗೊತ್ತಿಲ್ಲದೇ ಇರುವುದೇ ನಮ ಬದುಕಿಗೆ ಪ್ರೇರಣೆ. ಅದಕ್ಕೆ ಕತೆಗಾರರು ಕತೆಯ ಮೊರೆ ಹೋಗುತ್ತಾರೆ. ಕತೆಗಾರ ಕಥೆಗಳನ್ನು ಬರೆದ ಮೇಲೆ, ತನ್ನ ಕತೆಯ ಕುರಿತು ಮಾತನಾಡಲೇ ಬಾರದು, “ಒಬ್ಬ ಸಂಗೀತಗಾರ ಹೇಗೆ ತನ್ನ ಸಂಗೀತದಲ್ಲಿ ಕಳೆದುಹೋಗುತ್ತಾನೋ ಹಾಗೆಯೇ ಕತೆಗಾರ ಮನುಷ್ಯ ಲೋಕದಲ್ಲಿ ಕಳೆದುಹೋಗಬೇಕು. ಆಗ ಮಾತ್ರ ವಿಚಾರಗಳು ನಮ್ಮಲ್ಲಿ ಜೀವಪೋಷಕವಾಗಿ ಬೆಳೆಯುತ್ತದೆ. ಇದು ಓದುಗನಿಗೂ ಕತೆಗಳನ್ನು ಓದಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

“ಕತೆಗಾರರು ಮ್ಯಾಗಜಿನ್ ಗಳಿಗೆ ಋಣಿಯಾಗಿರಬೇಕು. ಏಕೆಂದರೆ ಕತೆ ಬೆಳೆದದ್ದೇ ಅಲ್ಲಿಂದ. ಮ್ಯಾಗಜಿನ್ ಒಳಗಿನ ಕತೆಗಳು ಕಲೆಕ್ಟಿವ್ ಆದಂತಹ ಜಾಗವನ್ನು ಕೊಡುತ್ತದೆ. ಇನ್ನು ಬದುಕು ಎನ್ನುವುದು ದ್ವಂದ್ವಗಳ ಸರಮಾಲೆ. ಆ ದ್ವಂದ್ವವನ್ನು ಜನಮಾನಸದಲ್ಲಿ ಮೊಳಗಿಸುವುದು ಕತೆಗಾರನ ಕರ್ತವ್ಯ” ಎಂದು ಅವರು ಅಭಿಪ್ರಾಯ ಪಟ್ಟರು.

ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, “ಜಾಗತೀಕರಣ ಆರಂಭವಾದ ಈ ಕಡೆಯಿಂದ ಎಲ್ಲ ಲೇಖಕ ಲೇಖಕಿಯರ ಕೃತಿಯನ್ನು ನಾನು ಓದುತ್ತಾ ಬಂದಿದ್ದೇನೆ. ಅದರ ಪ್ರಕಾರ ಹೇಳುವುದಾದರೆ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳ ಸಾಹಿತ್ಯ ಕೃಷಿ ಕಡಿಮೆ. ಮೂರು ದಶಕಗಳ ಇಚೇಗೆ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಓದುವ ವಿದ್ಯಾರ್ಥಿಗಳು ಬೇಕಾದಷ್ಟು ಜನ ವಿದ್ವಾಂಸರಾಗಿದ್ದಾರೆ. ಆದರೆ ಕೃತಿಯನ್ನು ಹೊರತಂದಿರುವುದು ಕಡಿಮೆ. ಆದರೆ ಕನ್ನಡ ಸಾಹಿತ್ಯದಿಂದ ಹೊರಗಡೆ ಇರುವ ತಾಂತ್ರಿಕವಾದ ವಿದ್ಯಾರ್ಥಿಗಳೇ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಸೃಜನಶೀಲವಾದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಷಾದದ ಸಂಗತಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಪದವಿಗಷ್ಟೇ ಮೀಸಲಾಗಿದ್ದು, ಬರವಣಿಗೆಯಲ್ಲಿ ಸೃಜನಶೀಲರಾಗಿ ತೊಡಗಿಸಿಕೊಂಡಿಲ್ಲ. ಇದು ಸಮಕಾಲೀನ ಕನ್ನಡ ಸಾಹಿತ್ಯದ ಚಿತ್ರಣ, ಎಂದು ಹೇಳಿದರು.

“ಶೋಷಣೆ ಅನ್ನುವಂತಹ ಪದ ಕನ್ನಡ ಸಾಹಿತ್ಯದಲ್ಲಿ ಹಳೆಯದಾಯಿತು. ಜಗತ್ತು ಎಷ್ಟೇ ಅಭಿವೃದ್ಧಿ ಆದರೂ ಬೆಳೆವಣಿಗೆ ಆದರೂ ಕೂಡ ಜಗತ್ತು ಶೋಷಣೆಯನ್ನು ಬಿಡುವುದಿಲ್ಲ. ಅದು ಮಹಿಳೆಯ ಮೇಲೆ ಆಗಿರಲಿ ಅಥವಾ ಬಡವನ ಮೇಲೆಯೇ ಆಗಿರಲಿ, ಎಂದರು.

ಇನ್ನು, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, “ಬುಕ್ ಬ್ರಹ್ಮ ಸಂಸ್ಥೆಯ ಅಂಗಸಂಸ್ಥೆಯಾಗಿ ಬಿಬಿ ಪಬ್ಲಿಕೇಷನ್ಸ್ ಕೆಲಸಮಾಡುತ್ತಿದೆ. ಲೇಖಕ ಹಾಗೂ ಓದುಗನ ಕೊಂಡಿಯಾಗಿ ಬುಕ್ ಬ್ರಹ್ಮ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಮಾಹಿತಿ ಮತ್ತು ಐದು ಸಾವಿರಕ್ಕೂ ಹೆಚ್ಚು ಲೇಖಕರ ಮಾಹಿತಿಯನ್ನು ಓದುಗ ಜಗತ್ತಿಗೆ ಈಗಾಗಲೇ ನೀಡಿದೆ ಎಂದರು.

ಕುಂದಾಪ್ರ ಕನ್ನಡದ ರಾಯಭಾರಿ ಖ್ಯಾತಿಯ ಮನು ಹಂದಾಡಿ ಮಾತನಾಡಿ ಕುಂದಾಪುರ ಕನ್ನಡದ ಸೊಗಸನ್ನು ಉಣಬಡಿಸಿ, ಕೃತಿಕಾರರಿಗೆ ಶುಭ ಹಾರೈಸಿದರು.  

ಕತೆಗಾರ ಶ್ರೀಧರ ಬನವಾಸಿ ಅವರು ಕೃತಿಕಾರ ಸತೀಶ್ ಶೆಟ್ಟಿ ವಕ್ವಾಡಿ ಅವರೊಂದಿಗೆ ಎರಡನೇಯ ಕೃತಿಯ ಹುಟ್ಟು, ಕುಂದಾಪುರ ಭಾಷೆಯ ಸೊಗಡು, ಕರಾವಳಿಯ ಚಿತ್ರಣ, ಭಾಷಾ ವೈಖರಿ, ಕೃತಿಯಲ್ಲಿ ಬಳಸಿದ ಶಬ್ಧ, ಕತೆಯ ಹುಟ್ಟು, ಮೂಲ ಆಶಯ ಹೀಗೆ ಹಲವು ವಿಚಾರದ ಕುರಿತು ಸಂವಾದ ನಡೆಸಿಕೊಟ್ಟರು.

ಲೇಖಕಿ ರೇವತಿ ಶೆಟ್ಟಿ ಕೋಟ ಕಾರ್ಯಕ್ರಮ ನಿರ್ವಹಿಸಿ, ಬುಕ್‌ ಬ್ರಹ್ಮದ ಹಿರಿಯ ಉಪ ಸಂಪಾದಕಿ ಪ್ರಜ್ಞಾ ಬಾರ್ಯ ತಂತ್ರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!