Sunday, September 8, 2024

ಭಾರತದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು’ವನ್ನು ಉದ್ಘಾಟಿಸಲಿರುವ ಮೋದಿ !

ಜನಪ್ರತಿನಿಧಿ ವಾರ್ತೆ (ಮಹಾರಾಷ್ಟ್ರ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಶುಕ್ರವಾರ) ಮಹಾರಾಷ್ಟ್ರದಲ್ಲಿ ಸುಮಾರು 17,840 ಕೋಟಿ ರೂಪಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತುವನ್ನು ಉದ್ಘಾಟಿಸಲಿದ್ದಾರೆ. ದೇಶದ ಅತಿ ಉದ್ದದ ಸೇತುವೆ ಹಾಗೂ ಉದ್ದದ ಸಮುದ್ರ ಸೇತುವೆಯಾಗಿದೆ.

ಮುಂಬೈ ಟ್ರಾನ್ಸ್‌ಹಾರ್ಬರ್ ಲಿಂಕ್ (MTHL) ನ್ನು ಈಗ ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು’ ಎಂದು ಹೆಸರಿಸಲಾಗಿದೆ. ನಗರ ಸಾರಿಗೆ ಮೂಲಸೌಕರ್ಯ ಹಾಗೂ ಸಂಪರ್ಕವನ್ನು ಬಲಪಡಿಸುವ ಮೂಲಕ ನಾಗರಿಕರ ಚಲನಶೀಲತೆಯ ಸುಲಭತೆಯನ್ನು ಸುಧಾರಿಸುವುದು ಮೋದಿಯವರ ದೃಷ್ಟಿಕೋನವಾಗಿದೆ.

ಡಿಸೆಂಬರ್ 2016 ರಲ್ಲಿ ಸೇತುವೆಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. 21.8 ಕಿಮೀ ಉದ್ದದ ಆರು ಪಥದ ಸೇತುವೆಯನ್ನು ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ., ಸಮುದ್ರದ ಮೇಲೆ 16.5 ಕಿಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿಮೀ ಉದ್ದ ಈ ಸೇತು ಕ್ರಮಿಸುತ್ತದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಕಲ್ಪಿಸುವ ಈ ಸೇತುವೆ ಭಾರತದ ಅತಿ ಉದ್ದದ ಸೇತುವೆ ಮತ್ತು ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸುಮಾರು 2 ಗಂಟೆ ತಗಲುತ್ತಿದ್ದ ಮುಂಬೈ ಹಾಗೂ ನವಿ ಮುಂಬೈ ನಡುವಿನ  ಪ್ರಯಾಣದ ಅಂತರವನ್ನು ಕೇವಲ 20 ನಿಮಿಷಗಳಿಗೆ ಈ ಸೇತುವೆ ಇಳಿಸಿದೆ.

ಇನ್ನು, ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಕಾರುಗಳಿಗೆ ಏಕಮುಖ ಸಂಚಾರಕ್ಕೆ 250 ರೂಪಾಯಿ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದ್ದು,  ಈಗಿರುವ ಟೋಲ್ ಸಂಗ್ರಹದ ನಿಯಮಗಳ ಪ್ರಕಾರ ಅರ್ಧದಷ್ಟು ಮೊತ್ತವನ್ನು ಮಾತ್ರ ವಿಧಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪುಟ ನಿರ್ಧರಿಸಿದೆ. 

ಪ್ರಯಾಣಿಕ ಕಾರಿಗೆ ಏಕಮುಖ ಟೋಲ್ ಆಗಿ 250 ರೂಪಾಯಿ ವಿಧಿಸಲಾಗುತ್ತದೆ, ಹಿಂದಿರುಗುವ ಪ್ರಯಾಣಕ್ಕೆ ಮತ್ತು ದೈನಂದಿನ ಮತ್ತು ಆಗಾಗ್ಗೆ ಸಂಚರಿಸುವ ಪ್ರಯಾಣಿಕರಿಗೆ ಶುಲ್ಕಗಳು ಪ್ರಯಾಣದ ಆಧಾರದಲ್ಲಿ ಭಿನ್ನವಾಗಿರುತ್ತದೆ. 17,840 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು, 15 ಸಾವಿರ ಕೋಟಿ ರೂಪಾಯಿ ಸಾಲವಾಗಿದೆ.

ಕ್ಯಾಬಿನೆಟ್ ಪ್ರಸ್ತಾವನೆಯಲ್ಲಿ ರಾಯಗಡ ಜಿಲ್ಲೆಯ ಪನ್ವೇಲ್‌ನಿಂದ ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವು 15 ಕಿಲೋಮೀಟರ್‌ಗಳಷ್ಟು ಕಡಿತಗೊಳ್ಳಲಿದೆ, ಪ್ರಯಾಣದ ಸಮಯವು ಸುಮಾರು ಎರಡು ಗಂಟೆಗಳಿಂದ 15 ರಿಂದ 20 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಪ್ರತಿ ಪ್ರಯಾಣಕ್ಕೆ ಇಂಧನ ವೆಚ್ಚದಲ್ಲಿ ಸುಮಾರು 500 ರೂಪಾಯಿ ಉಳಿತಾಯವಾಗಲಿದೆ. ನವಿ ಮುಂಬೈನಲ್ಲಿ 12,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಈಸ್ಟರ್ನ್ ಫ್ರೀವೇ ಆರೆಂಜ್ ಗೇಟ್‌ನಿಂದ ಮರೈನ್ ಡ್ರೈವ್‌ಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 9.2 ಕಿ.ಮೀ ಸುರಂಗವನ್ನು 8,700 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು.

ಮುಂಬೈನಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯಾಗಲಿದ್ದು, ಆರೆಂಜ್ ಗೇಟ್ ಮತ್ತು ಮರೈನ್ ಡ್ರೈವ್ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ.

ಅಟಲ್ ಸೇತು ವಿಶೇಷ :  500 ಬೋಯಿಂಗ್ ವಿಮಾನಗಳ ತೂಕಕ್ಕೆ ಸರಿ ಸಮನಾದ ಉಕ್ಕನ್ನು ಹಾಗೂ ಐಫೆಲ್ ಟವರ್‌ನ ತೂಕದ 17 ಪಟ್ಟು ತೂಕವನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ. ಮಾತ್ರವಲ್ಲದೇ, 177,903 ಮೆಟ್ರಿಕ್ ಟನ್ ಉಕ್ಕು ಹಾಗೂ 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.

ಸೇತುವೆಯು ಮುಂಬೈ ಮತ್ತು ಪುಣೆ ಎಕ್ಸ್‌ಪ್ರೆಸ್‌ವೇ ನಡುವಿನ ಪ್ರಯಾಣದ ಅಂತರವನ್ನು ಕಡಿತಗೊಳಿಸುತ್ತದೆ. ಪ್ರತಿದಿನ ಸುಮಾರು 70,000 ವಾಹನಗಳು ಸೇತುವೆಯನ್ನು ಬಳಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!