Sunday, September 8, 2024

ವ್ಯಸನ, ವಿಕೃತ ಮನರಂಜನೆಗಳಿಗೆ ಸಾರ್ವಜನಿಕ ಆಸ್ತಿಗಳು ವೇದಿಕೆಯಲ್ಲ : ಡಾ. ವಿದ್ಯಾಕುಮಾರಿ

ಮಕ್ಕಳ ಹಬ್ಬ – ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು

ಜನಪ್ರತಿನಿಧಿ ವಾರ್ತೆ (ಕೆರಾಡಿ) : ಶಾಲೆಗಳ ಸುತ್ತಮುತ್ತಅಪಾಯಕಾರಿ ವಾತಾವರಣ ಮುಕ್ತ ವಲಯನ್ನಾಗಿ ಸೃಷ್ಟಿಸುವ ತುರ್ತು ಅಗತ್ಯವಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವ್ಯವಸ ಹಾಗೂ ವಿಕೃತ ಮನರಂಜನೆಗಳಿಗೆ ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳು ವೇದಿಕೆ ಅಲ್ಲ. ನಾಗರಿಕನೊಬ್ಬ ಜವಾಬ್ದಾರಿಯಿಂದ ಇರುವುದರಿಂದಲೇ ಊರಿನ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು  ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.  

ತಾಲೂಕು ಪಂಚಾಯತ್‌, ಕುಂದಾಪುರ, ಗ್ರಾಮ ಪಂಚಾಯತ್‌ ಕೆರಾಡಿ ಹಾಗೂ ಸಿಡಬ್ಲ್ಯೂಸಿ ನಮ್ಮ ಭೂಮಿ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಬ್ಬ- 2024 ಮಕ್ಕಳ ವಿಶೇಷ ಗ್ರಾಮ ಪಂಚಾಯತ್‌ ಸಭೆಯನ್ನು ಬಲೂನ್‌ ಹಾರಿಸಿ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು ಸಲ್ಲಿಸಿದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮಹತ್ವವಾದ ವಿಷಯಗಳನ್ನು ಮಕ್ಕಳು ಅಹವಾಲುಗಳಲ್ಲಿ ಪ್ರಾಶಸ್ತ್ಯ ನೀಡಿ ಎತ್ತಿ ತೋರಿಸಿದ್ದಾರೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಇಂತಹದ್ದೊಂದು ಪರಿಕಲ್ಪನೆಯ ಬಗ್ಗೆ ತಿಳಿಹೇಳುವಂತಹ ಮಕ್ಕಳ ಗ್ರಾಮಸಭೆ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಬಗ್ಗೆ ಅರಿವು ಮತ್ತು ಜವಾಬ್ದಾರಿ ಮೂಡಿಸುವಂತದ್ದು ಶ್ಲಾಘನೀಯ ಎಂದು ಹೇಳಿದರು.

ಮಕ್ಕಳು ಅಹವಾಲಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತುರ್ತಾಗಿ ಜಿಲ್ಲಾಡಳಿತದಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ರಾಜ್ಯದ ಹಣಕಾಸು ಆಯೋಗದಿಂದ ಬರುವ ಹಣದ ಒಂದು ಭಾಗವನ್ನು ಊರಿನ ಅಭಿವೃದ್ಧಿ ಹಾಗೂ ಶಾಲೆಗಳಿಗೆ ಬೇಕಾದ ಅಗತ್ಯ ಪರಿಹಾರಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯತ್‌ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.  

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್.‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳು ಗ್ರಾಮ ಪಂಚಾಯತ್‌ನ ಸದಸ್ಯರು ಅಲ್ಲದೇ ಇರಬಹುದು, ಗ್ರಾಮ ಸಭೆಗಳಲ್ಲಿ ಬಂದು ಅವರು ಅಹವಾಲು ಮಂಡಿಸದೇ ಇರಬಹುದು. ಆದರೇ, ಮಕ್ಕಳು ಅಹವಾಲಿನಲ್ಲಿ ಹೇಳಿರುವ ಎಲ್ಲಾ ಸಮಸ್ಯೆಗಳು ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಾಗಿರುವ ಸಮಸ್ಯೆಗಳೆ ಆಗಿವೆ. ಮಕ್ಕಳು ಪ್ರಸ್ತಾಪಿಸಿದ ಸಾಕಷ್ಟು ಸಮಸ್ಯೆಗಳಿಗೆ ನರೇಗಾ ಯೋಜನೆಯಡಿಯಲ್ಲಿ ಪರಿಹಾರ ಒದಗಿಸುವ ಅವಕಾಶಗಳು ಪಿಡಿಒ ಹಾಗೂ ಗ್ರಾಮ ಪಂಚಾಯತ್‌ಗೆ ಇದೆ. ಅದನ್ನು ಅನುಷ್ಠಾನ ಮಾಡಬೇಕು ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಮಾತನಾಡಿ, ಮಕ್ಕಳಿಗೆ ಇಂತಹ ಪರಿಕಲ್ಪನೆಯೊಂದನ್ನು ಈ ಹಂತದಲ್ಲಿ ಒದಗಿಸುತ್ತಿರುವುದು ಸ್ತುತ್ಯಾರ್ಹ. ಸರ್ಕಾರದಿಂದ ಪಡೆದುಕೊಳ್ಳಬೇಕಾದ ಎಲ್ಲಾ ಸವಲತ್ತುಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಅರಿವು ಮೂಡಿಸುವಂತದ್ದಾಗಬೇಕು, ಅದು ದೊರಕದೇ ಹೋದಲ್ಲಿ ಸರಿಯಾದ ರೀತಿಯಲ್ಲಿ ಪ್ರಶ್ನೆ ಮಾಡುವ ಧೈರ್ಯವನ್ನೂ ಮೂಡಿಸುವಂತಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಾದ ಮಾರುತಿ, ಕೆರಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಕುಸುಮಾ, ಶಿಕ್ಷಣ ಫೌಂಡೇಶನ್‌ ಉಡುಪಿಯ ರೀನಾ ಹೆಗ್ಡೆ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ವಂಡ್ಸೆಯ ಪರಶುರಾಮ ಮತ್ತಪ್ಪಗೋಳ, ನಮ್ಮ ಭೂಮಿ ಸಂಸ್ಥೆಯ ಕೃಪಾ ಎಂ ಎಂ, ಬೆಳ್ಳಾಲದ ಮಕ್ಕಳ ಮಿತ್ರ ಭಾಸ್ಕರ ಮೊಗವೀರ, ನಾಗಪ್ಪ ಕೊಠಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆರಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಬಿ. ಆರ್‌ ಸುದರ್ಶನ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿ ಸಂಸ್ಥೆಯ ಸಂಯೋಜಕರಾದ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮಕ್ಕಳ ಮಿತ್ರ ಕೆರಾಡಿಯ ರಾಘವೇಂದ್ರ ಕೊಠಾರಿ ಸ್ವಾಗತಿಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದ ಶಾಲಾ ಮಕ್ಕಳು

ಸಭೆಯಲ್ಲಿ ಕೆರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ನಂದ್ರೊಳ್ಳಿ, ಬೆಳ್ಳಾಲ, ಕೆರಾಡಿ, ಹಯ್ಯಂಗಾರ್‌, ಕಾರೇಬೈಲು, ಹೆಮ್ಮಕ್ಕಿ, ಮೂಡುಮಂದ, ಹೊಸೂರು, ಕುಲ್ಲಂಬಳ್ಳಿ, ನೂಜು ಬಂಟ್ರಾಡಿ, ಮೋರ್ಟು ಶಾಲೆಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಎದುರು ಕಾಡು ಪ್ರಾಣಿಗಳಿಂದ ಆಗುವ ಬೆಳೆನಾಶ, ಶಾಲಾ ಸುತ್ತ ಮುತ್ತಲಿನ ವಾತಾವರಣವನ್ನು ತಂಬಾಕು ಮುಕ್ತ ವಲಯವನ್ನಾಗಿ ಸೃಷ್ಟಿಸುವುದು, ಪ್ಲಾಸ್ಟಿಕ್‌ ಮುಕ್ತ ವಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ, ಸುಸಜ್ಜಿತವಾದ ಸಂಕ ವ್ಯವಸ್ಥೆ, ಬಸ್ಸಿನ ವ್ಯವಸ್ಥೆ, ಶಾಲೆಯ ದುರಸ್ತಿ, ಶಾಲೆಯ ಆವರಣೆ ಗೋಡೆ ಇತ್ಯಾದಿಗಳನ್ನು ಒಳಗೊಂಡು ಊರಿನ ಹತ್ತು ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಹಾಗೂ ಪಂಚಾಯತ್‌ ಅಧ್ಯಕ್ಷರಿಗೆ ಅಹವಾಲು ಸಲ್ಲಿಸಿದರು.

ಜಾನಪದ ಕಲೆ ಹೌದರಾಯನ ವಾಲ್ಗ ಹಾಗೂ ದರ್ಶನದ ಮೂಲಕ ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ಅಹವಾಲು ಸಲ್ಲಿಸಿದ್ದು ವಿಶೇಷವಾಗಿತ್ತು.

ಉಚಿತ ಸೈಕಲ್‌ ಕೊಡಿ : ವಿದ್ಯಾರ್ಥಿಗಳ ಒತ್ತಾಯ

ಪಂಚಾಯತ್‌ ವ್ಯಾಪ್ತಿಗೆ ಸೇರುವ ಕುಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ದೂರದೂರಿನ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದ ವಾತವರಣದಲ್ಲೇ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಓಡಾಡುವಂತಹ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಮಾತ್ರವಲ್ಲದೇ, ಈ ಹಿಂದೆ ಸರ್ಕಾರ ನೀಡುತ್ತಿದ್ದ ಉಚಿತ ಸೈಕಲ್‌ ನೀಡುವ ಯೋಜನೆಯನ್ನು ಮುಂದುವರಿಸುವಂತೆ ರಾಜ್ಯ  ಸರ್ಕಾರದ ಗಮನಕ್ಕೆ ತರುವಂತೆ ಮಾಡಿ ಎಂದು ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಾಡು ಪ್ರಾಣಿಗಳ ಹಾವಳಿಗೆ ಅನಧಿಕೃತ ಒತ್ತುವರಿ ಕಾರಣ

ಪ್ರಾಣಿಗಳ ನಿಯಂತ್ರಣ ಹಾಗೂ ಬೆಳೆಯ ರಕ್ಷಣೆಯ ಬಗ್ಗೆ ಪಾರಂಪರಿಕ ಹಾಗೂ ವೈಜ್ಞಾನಿಕ ಪ್ರಯೋಗಗಳು ರಾಜ್ಯದ ಹಲವೆಡೆ ಮಾಡಲಾಗಿದೆ. ಕಾಡು ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ ಎನ್ನುವುದರ ಬಗ್ಗೆ ಅರಿವಿದೆ. ಆದರೆ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸರಕಾರ ಹಾಗೂ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿಲ್ಲ ಎಂದರ್ಥವಲ್ಲ. ಸರ್ಕಾರ ಹಾಗೂ ಅರಣ್ಯ ಇಲಾಖೆ ಮಾಡುವ ಪ್ರಯತ್ನ ಮಾಡುತ್ತಿವೆ. ಕಾಡನ್ನು ಅನಧಿಕೃತ ಒತ್ತುವರಿ ಮಾಡುವುದರಿಂದ ಕಾಡಿನ ಪ್ರಾಣಿಗಳು ಊರಿಗೆ ಬರುತ್ತವೆ. ಕಾಡನ್ನು ಉಳಿಸಿಕೊಂಡು ಊರು ಬೆಳೆಯಬೇಕಿದೆ.  

ಡಾ. ವಿದ್ಯಾಕುಮಾರಿ

ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!