Sunday, September 8, 2024

ರಾಜ್ಯ ಸರ್ಕಾರ ಜಿಎಸ್‌ಟಿ ಸಂಗ್ರಹದಲ್ಲಿ ವಾರ್ಷಿಕವಾಗಿ 45,000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ : ಕಂದಾಯ ಸಚಿವ ಕೃಷ್ಣ ಬೈರೇಗೌಡ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ವಾರ್ಷಿಕವಾಗಿ 45,000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಹಣಕಾಸು ಆಯೋಗದ ಮುಂದೆ ನಮ್ಮ ವಾದ ಏನಿರಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಉದ್ದೇಶದಿಂದ ಸಮಿತಿಯನ್ನು ರಚನೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಲಹಾ ಸಮಿತಿಯಲ್ಲಿ ಹಣಕಾಸು ತಜ್ಞರಾದ ಗೋವಿಂದ ರಾವ್, ಶ್ರೀನಿವಾಸ್ ಮೂರ್ತಿ ಹಾಗೂ ನರೇಂದ್ರ ಪಾಣಿ ಸೇರಿ ತಜ್ಞರ ಸಲಹಾ ಸಮಿತಿ ಮಾಡುತ್ತೇವೆ. ಹಣಕಾಸು ಆಯೋಗದ ಮುಂದೆ ಏನು ವಾದ ಮಾಡಬೇಕು ಎಂಬ ಬಗ್ಗೆ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ” ಎಂದು ಅವರು ತಿಳಿಸಿದ್ದಾರೆ.

ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯ ಕರ್ನಾಟಕ. ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ನಮ್ಮ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ, ಅದರಲ್ಲಿ ರಾಜ್ಯಕ್ಕೆ 60-70 ಸಾವಿರ ಕೋಟಿ ಮಾತ್ರ ನಮಗೆ ವಾಪಸ್ ಬರುತ್ತಿದೆ.

ಐಟಿ, ಬಿಟಿ ವಲಯದಿಂದ ವರ್ಷಕ್ಕೆ 3.50 ಲಕ್ಷ ಕೋಟಿ ರೂ.ಗಳಷ್ಟು ನಮ್ಮ ರಾಜ್ಯದಿಂದ ರಫ್ತಾಗುತ್ತಿದೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ನಾವು ದೇಶದ ಅಭಿವೃದ್ಧಿ ಕೊಡುಗೆ ನೀಡುತ್ತಿದ್ದರೂ ನಮಗೆ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತ ಪಡಿಸಿದರು.

14ನೆ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಕೊಡುವ ತೆರಿಗೆಯಲ್ಲಿ ಶೇ.4.71ರಷ್ಟು ಪಾಲು ಕೊಡುತ್ತಿತ್ತು. ಆದರೆ, 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಇದು ಶೇ.3.64ಕ್ಕೆ ಇಳಿಕೆಯಾಗಿದೆ. ಇದರಿಂದ ಶೇ.20ರಷ್ಟು ತೆರಿಗೆ ಪಾಲು ಕಡಿಮೆಯಾಗಿದೆ. ಇದರಿಂದಾಗಿ, ರಾಜ್ಯಕ್ಕೆ ವರ್ಷಕ್ಕೆ 14 ಸಾವಿರ ಕೋಟಿ ರೂ.ನಷ್ಟವಾಗುತ್ತಿದೆ.

2020-21 ರಿಂದ 2025-26 ಅಂದರೆ 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಐದು ವರ್ಷಗಳಿಗೆ ಲೆಕ್ಕ ಹಾಕಿದರೆ 62 ಸಾವಿರ ಕೋಟಿ ರೂ.ನಮಗೆ ನಷ್ಟ ಆಗುತ್ತದೆ. 15ನೆ ಹಣಕಾಸು ಆಯೋಗದ ಶಿಫಾರಸು ಮಾಡಿರುವುದು ಕೇಂದ್ರಕ್ಕೆ ಬರುತ್ತಿರುವ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.41ರಷ್ಟು ಮರುಕಳುಹಿಸಬೇಕು. ಆದರೆ, ಅವರು ಮಾಡುತ್ತಿರುವುದು ಕೇವಲ ಶೇ.30 ಮಾತ್ರ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸರಕಾರವು ತೆರಿಗೆಯನ್ನು ಕರ(ಸೆಸ್, ಸರ್‍ಚಾರ್ಜ್) ಎಂದು ಹೆಸರು ಬದಲಾಯಿಸಿ ತೆರಿಗೆ ಎಂದು ತೋರಿಸುತ್ತಿಲ್ಲ. ಇದರಿಂದಾಗಿ, ರಾಜ್ಯಗಳಿಗೆ ಪಾಲು ಸಿಗುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಶೇ.8-9ರಷ್ಟು ಇದ್ದ ಸೆಸ್, ಸರ್‍ಚಾರ್ಜ್ ಈಗ 2022-23ರಲ್ಲಿ ಶೇ.23ಕ್ಕೆ ತಲುಪಿದೆ. ಸೆಸ್ ಸರ್‍ಚಾರ್ಜ್ ಮೂಲಕ 2017-18ರಲ್ಲಿ 2.18 ಲಕ್ಷ ಕೋಟಿ ರೂ.ಆದಾಯ ಇತ್ತು. ಈಗ 5.50 ರಿಂದ 6 ಲಕ್ಷ ಕೋಟಿ ರೂ.ಅಂದಾಜು ಮಾಡಿದ್ದಾರೆಂದು ತಿಳಿಸಿದರು.

ಪೆಟ್ರೋಲ್, ಡಿಸೇಲ್ ಮೂಲಕ ಸಂಗ್ರಹಿಸುವ ಸೆಸ್ ಸರ್‍ಚಾರ್ಜ್‍ನಲ್ಲಿ ಶೇ.95ರಷ್ಟು ಆದಾಯ ಕೇಂದ್ರ ಸರಕಾರ ತನ್ನ ಬಳಿ ಇರಿಸಿಕೊಳ್ಳುತ್ತದೆ. ಇದರಿಂದ ಕರ್ನಾಟಕ ಒಂದು ರಾಜ್ಯಕ್ಕೆ 8200 ಕೋಟಿ ರೂ.ಸೆಸ್‍ನಿಂದಲೇ ನಷ್ಟ ಆಗುತ್ತಿದೆ. ಸೆಸ್ ಸರ್‍ಚಾರ್ಜ್ ಯಾವ ಉದ್ದೇಶಕ್ಕೆ ಸಂಗ್ರಹ ಮಾಡಲಾಗುತ್ತದೆಯೋ ಅದೇ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂದು ಸಿಎಜಿಯವರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಎಸ್ ಟಿ ಜಾರಿಯಾಗುವ ಮುನ್ನ ರಾಜ್ಯದಲ್ಲಿ ನಮ್ಮ ವಾಣಿಜ್ಯ ತೆರಿಗೆ ಶೇ.14, 15, 16ರಷ್ಟು ಸರಾಸರಿ ಬೆಳವಣಿಗೆ ಇತ್ತು. ಜಿಎಸ್ ಟಿ ಬಂದಾಗ ಯಾವ ರಾಜ್ಯಗಳಿಗೆ ನಷ್ಟ ಆಗುತ್ತದೆ ಅವರಿಗೆ ನಷ್ಟ ಪರಿಹಾರ ನೀಡುವುದಾಗಿ ಹೇಳಿತ್ತು. 2022ರ ಜೂನ್ ನಲ್ಲಿ ಪರಿಹಾರ ನಿಲ್ಲಿಸಿದ್ದಾರೆ. ನಮ್ಮ ಹಿಂದಿನ ಶೇ.14ರಷ್ಟು ಬೆಳವಣಿಗೆ ಕಾಯ್ದುಕೊಂಡಿದ್ದರೆ, ಈಗ ಬರುತ್ತಿರುವ ತೆರಿಗೆ ಪಾಲು ಹೋಲಿಕೆ ಮಾಡಿದರೆ ಪ್ರತಿ ವರ್ಷ 25-30 ಸಾವಿರ ಕೋಟಿ ರೂ.ನಮಗೆ ಕಡಿಮೆಯಾಗುತ್ತಿದೆ. ಆದುದರಿಂದ, ಸೆಸ್ ಹಾಗೂ ಸರ್‍ಚಾರ್ಜ್‍ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು ಎಂದು ನಾವು ಬೇಡಿಕೆ ಇಡುತ್ತೇವೆ ಎಂದರು.

15ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಮೂರು ವಿಶೇಷ ಅನುದಾನಗಳನ್ನು ಶಿಫಾರಸು ಮಾಡಿದ್ದಾರೆ. ಅದು ಒಟ್ಟು 11,495 ಕೋಟಿ ರೂ.ಶಿಫಾರಸು ಮಾಡಿದ್ದಾರೆ. ಅದನ್ನೂ ಕೇಂದ್ರ ಸರಕಾರ ನಮಗೆ ನೀಡಿಲ್ಲ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!