Sunday, September 8, 2024

ಕ್ಷಮಿಸಿ ಬಿಡಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು!

ಯಾರೋ ಒಬ್ಬರ ಮೇಲೆ ಬಹಳ ನಂಬಿಕೆ ಇರಿಸಿದ್ದೆವು ,ಅವರು ಮೋಸ ಮಾಡಿದ್ರು,ಅದನ್ನೇ ನಾವು ನೆನಪಿಸಿ ಅವರನ್ನು ಬೈದುಕೊಳ್ಳುತ್ತೇವೆ,ಪ್ರತಿದಿನ ಅವರು ಮಾಡಿದ “ಕೆಲಸ “ ನೆನಪಿಸಿಕೊಳ್ಳುತ್ತೇವೆ,ನಮ್ಮನ್ನು ನಾವು ಶಪಿಸಿಕೊಳ್ಳುತ್ತೇವೆ,ಅವರ ಮೇಲೆ ನಂಬಿಕೆ ಇರಿಸಿದಕ್ಕೆ.

ಅವರಿಗೆ ಒಳ್ಳೆಯದಾದಾಗಲೆಲ್ಲ ಅವರ ಆ ಕೆಲಸ ನೆನೆಸಿಕೊಂಡು,ಅವರನ್ನು ಬೈದು,ಗೊಣಗಿಕೊಂಡುಜೀವನ ಮಾಡುತ್ತೇವೆ. ಆದರೆ ಮನೋವಿಜ್ಞಾನದ ಪ್ರಕಾರ” ಕ್ಷಮೆ “ಒಂದು ಬಹಳ ಬಲವಾದ ಪ್ರಕ್ರಿಯೆ , ನಮ್ಮ ಮನಸ್ಸಿನಲ್ಲಿ ಇರುವ,ನಕಾರಾತ್ಮಕ ಭಾವನೆಗಳನ್ನು ಬಿಡುಗಡೆ ಮಾಡುತ್ತದೆ ಈ “ಕ್ಷಮೆ”,ದ್ವೇಷ ,ಅಸೂಯೆಗಳಿಂದ ನಮ್ಮನ್ನು ಇದು ಮುಕ್ತ ಮಾಡುತ್ತದೆ ಅಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೂಡ ಒಳ್ಳೆಯದು ಈ “ಕ್ಷಮಾ “ಗುಣ.

ಕ್ಷಮಿಸುವುದು ಅಂದರೆ ಇದೊಂದು ಮನಸ್ಸಿನ ಬಹುಮುಖಿ ಆಂತರಿಕ ಪ್ರಕ್ರಿಯೆ, ಇಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಯಾರೋ ಒಬ್ಬರು ನೋವುಂಟುಮಾಡುವ ಕೆಲಸ ಮಾಡಿದ್ದರೋ ಅದರಿಂದ ನಮ್ಮಲ್ಲಿ ಒಂದು ನಕಾರಾತ್ಮಕ ಭಾವನೆಗಳು ಮನಸ್ಸಿಗೆ ಬಂದಿತ್ತೋ ಅದನ್ನು  ಬಿಡುಗಡೆ ಮಾಡಲು ಆಯ್ಕೆ ಮಾಡಿಕೊಳ್ಳುವುದು “ಕ್ಷಮೆ” ಯ ಮೂಲಕ. ಇದು ಅವರ ನಡವಳಿಕೆಯನ್ನು ಕ್ಷಮಿಸುವುದು, ಅವರನ್ನು ಕ್ಷಮಿಸುವುದು ಅಥವಾ ಏನಾಯಿತು ಎಂಬುದನ್ನು ಮರೆತುಬಿಡುವುದು ಅಲ್ಲ. ಇಲ್ಲಿ ನಾವು ಆಂತರಿಕ ಶಾಂತಿಯನ್ನು ಕಂಡುಕೊಳ್ಳುವುದು ಮತ್ತು ಅಸಮಾಧಾನ, ಕೋಪ ಮತ್ತು ಕಹಿ  ಭಾವನೆಗಳ ಸಂಕೋಲೆಗಳಿಂದ ನಮ್ಮನ್ನು ಮುಕ್ತಗೊಳಿಸುವುದು.

ಕ್ಷಮೆ ಮತ್ತು ಮಾನಸಿಕ ಆರೋಗ್ಯ:ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿ” ಕ್ಷಮೆ “ ದೂರಗಾಮಿ ಪ್ರಯೋಜನಗಳನ್ನು ಉಂಟು ಮಾಡುತ್ರದೆ.

ಒಂದು ವಿಷಯವನ್ನು ನಾವು ಮೋಸ ಎಂದು ತಿಳಿದು ಮನಸ್ಸಿನ ಮೇಲೆ ಒಂದು ದೊಡ್ಡ ಹೊರೆಯ ಹೊತ್ತು ಅದನ್ನೇ ಯೋಚಿಸಿ ಕುಳಿತಾಗ ಮನಸ್ಸಿಗೆ ಒತ್ತಡ ಉಂಟಾಗುತ್ತದೆ. ಕ್ಷಮೆ ಆ ಕಾರಣದಿಂದ ಉಂಟಾದ ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ. ನಾವು ಋಣಾತ್ಮಕತೆಯನ್ನು ಬಿಟ್ಟಾಗ, ನಾವು ಸಕಾರಾತ್ಮಕತೆಗೆ ಜಾಗವನ್ನು ನೀಡುತ್ತೇವೆ. ಕ್ಷಮೆ ಭರವಸೆಯನ್ನು ಬೆಳೆಸುತ್ತದೆ, ಆಶಾವಾದಿ ಚಿಂತನೆಯನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚಿನ ಸಂತೋಷ ಮತ್ತು ಯೋಗಕ್ಷೇಮಕ್ಕೆ ಕಾರಣವಾಗುತ್ತದೆ.

ಕ್ಷಮೆ ಮತ್ತು ದೈಹಿಕ ಆರೋಗ್ಯ :ಸಂಶೋಧನೆಯು ಕ್ಷಮೆ ದೈಹಿಕ ಆರೋಗ್ಯವನ್ನೂ ಕೂಡ ಸುಧಾರಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು  ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.ರೋಗನಿರೋಧಕ ಶಕ್ತಿ ಜಾಸ್ತಿ ಮಾಡುತ್ತದೆ.

ಕ್ಷಮೆ ಮತ್ತು ಸಂಬಂಧ ಸುಧಾರಣೆ: ಹಲವೊಮ್ಮೆ ಸಂಬಂಧಗಳಲ್ಲಿ ಉಂಟಾದ ಬಿರುಕು ಸುಧಾರಿಸಲು ಈ” ಕ್ಷಮಾ” ಗುಣ  ಸಹಾಯಕಾರಿ.ಕ್ಷಮೆಯು ಸಮನ್ವಯಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಹಾನಿಗೊಳಗಾದ ಸಂಬಂಧಗಳಲ್ಲಿ ನಂಬಿಕೆಯನ್ನು ಮರುನಿರ್ಮಾಣ ಮಾಡುತ್ತದೆ.ಆರೋಗ್ಯಕರ ಗಡಿಗಳನ್ನು ಇಟ್ಟು ಕೊಂಡು ನಡೆದು ಹೋದ ಘಟನೆಯ ಹೊರತಾಗಿಯೂ ಇತರರೊಂದಿಗೆ ಸಕಾರಾತ್ಮಕ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. “ಕ್ಷಮಿಸುವ ಮುನ್ನ ..ನಡೆದು ಹೋದ ಘಟನೆಯಿಂದ ನಿಮಗೆಉಂಟಾದ ನೋವು ,ಬೇಸರ ಇವುಗಳನ್ನು ಮುಕ್ತವಾಗಿ ಆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಸೂಕ್ತ.ಅವರು ಮಾಡಿದ ಕೆಲಸ ನೀವು ಸಮರ್ಥಿಸದಿದ್ದರೂ, ಆ ಕೆಲಸದ ಹಿಂದಿನ ಸಂದರ್ಭ ಮತ್ತು ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳುವುದು ಸಹಾನುಭೂತಿಯನ್ನು ಉಂಟುಮಾಡಬಹುದು ಮತ್ತು  ಕ್ಷಮಿಸಲು ಮನಸ್ಸು ಮಾಡಲು ಸಹಕರಿಸಬಹುದು. ಕ್ಷಮಿಸಲು ಪ್ರಜ್ಞಾಪೂರ್ವಕ ಆಯ್ಕೆ ಮಾಡಿ: ಕ್ಷಮಿಸುವುದು ಸಕ್ರಿಯ ನಿರ್ಧಾರವಾಗಿದೆ, ನಿಷ್ಕ್ರಿಯ ಸ್ವೀಕಾರವಲ್ಲ. ಅವರು ಕ್ಷಮೆಯಾಚಿಸದಿದ್ದರೂ ಸಹ, ನಕಾರಾತ್ಮಕತೆಯನ್ನು ಬಿಡುಗಡೆ ಮಾಡಲು ಇದು ಆಯ್ಕೆಮಾಡುತ್ತಿದೆ. ನೆನಪಿಡಿ, ಇದು ನಿಮ್ಮ ಸಲುವಾಗಿಯೇ ಹೊರತು ಅವರಿಗಾಗಿ ಅಲ್ಲ ಅವರು ಬಂದು ಕ್ಷಮೆ ಕೇಳಬೇಕು ಎಂದು ಕಾಯಬೇಡಿ. ಆಧುನಿಕ ಮನೋವಿಜ್ಞಾನ ಇಂದು ಸ್ವಯಂ ಸಹಾನುಭೂತಿಯನ್ನು ಅಭ್ಯಾಸ ಮಾಡುವತ್ತ ಸಲಹೆ ನೀಡುತ್ತದೆ: ನೀವು ಕ್ಷಮಿಸುವುದು ನಿಮ್ಮ ಬಗ್ಗೆ ದಯೆ ತೋರಿ. ಕ್ಷಮೆ ಒಂದು ಪ್ರಕ್ರಿಯೆ, ಒಂದು ಬಾರಿಯ ಘಟನೆಯಲ್ಲ ಇದನ್ನು ಒಪ್ಪಿಕೊಳ್ಳಿ.  ಹಿನ್ನಡೆಗಳು ಆಗುತ್ತಾ ಇರುತ್ತದೆ ಹಿನ್ನಡೆಗಳನ್ನು ಸ್ವೀಕರಿಸಿ ಮುಂದೆ ಹೋಗಿ.

ಕ್ಷಮಿಸುವ ಮನಸ್ಸು ಬಂದಾಗ ವಿಶ್ವಾಸಾರ್ಹ ಸ್ನೇಹಿತ, ಚಿಕಿತ್ಸಕ ಅಥವಾ ನೀವು ಗೌರವಿಸುವ ಹಿರಿಯರು ಅಥವಾ ಧಾರ್ಮಿಕ ಮುಖಂಡರೊಂದಿಗೆ ಮಾತನಾಡುವುದು ಒಳ್ಳೆಯದು. ನಿಮ್ಮ ಕಥೆಯನ್ನು ಹಂಚಿಕೊಳ್ಳುವುದು ಮತ್ತು ಪ್ರೋತ್ಸಾಹವನ್ನು ಪಡೆಯುವುದು ನಿಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ.

ಕ್ಷಮೆಯು ವೈಯಕ್ತಿಕ ಪ್ರಯಾಣವಾಗಿದೆ,ದಾರಿಯುದ್ದಕ್ಕೂ ಉಬ್ಬುಗಳು, ಅನುಮಾನದ ಕ್ಷಣಗಳು ಮತ್ತು ಹಿಂಜರಿಕೆಗಳು ಕೂಡ ಇರುತ್ತದೆ. ನಿಮ್ಮೊಂದಿಗೆ ತಾಳ್ಮೆಯಿಂದಿರಿ.ಕ್ಷಮೆಯ ಆಯ್ಕೆಯು ಹಿಂದಿನದನ್ನು ಅಳಿಸುವುದಿಲ್ಲ, ಆದರೆ ಅದರ ಋಣಾತ್ಮಕ ಹಿಡಿತದಿಂದ ಹೊರಬರಲು ಮತ್ತು ನಿಮ್ಮ ಭವಿಷ್ಯವನ್ನು ಬೆಳೆಸಿಕೊಳ್ಳಲು ಅದು ನಿಮಗೆ ಅಧಿಕಾರ ನೀಡುತ್ತದೆ. ಒಬ್ಬ ಮನೋ ಚಿಕಿತ್ಸಕನಾಗಿ ನಾನು ನೋಡಿದ ಒಂದು ಮುಖ್ಯ ವಿಚಾರ ಎಂದರೆ ಹಿಂದೆ ನಡೆದ ಒಂದು ವಿಷಯ ಮನಸ್ಸಿನಲ್ಲಿ ಇಟ್ಟು ಕೊಂಡು ಕೊರಗಿ ಅದನ್ನು ನೇರವಾಗಿಯೂ ಹೇಳಲಾಗದೆ ನುಂಗಲಾರದೆಅನುಭವಿಸಿ ಖಿನ್ನತೆ,ಆತಂಕ ,ಗೀಳು ಮುಂತಾದ ಸಮಸ್ಯೆಗಳಿಗೆ ತುತ್ತಾಗುವುದು ಹಾಗೆಯೇ ಕೆಲವೊಮ್ಮೆ ಹೃದಯರೋಗ, ರಕ್ತದ ಒತ್ತಡ ,ಸಕ್ಕರೆ ಖಾಹಿಲೆ ಉಲ್ಬಣಿಸಿಕೊಳ್ಳುವವರೇ ಹೆಚ್ಚು. ಇಂದು ಕುಳಿತು ಯೋಚಿಸಿದರೆ ನಮಗೆ ಗೊತ್ತಾಗುವ ವಿಷಯ ಅಂದರೆ

“ಕ್ಷಮೆ” ದಾಂಪತ್ಯ ವಿರಸಗಳನ್ನು,ಅಪ್ಪ ಮಕ್ಕಳ ಜಗಳಗಳನ್ನು ಮಾತ್ರ ಅಲ್ಲ ಆಫೀಸಿನಲ್ಲಿ ನಡೆಯುವ ಹಲವಾರು ಮನಸ್ತಾಪಗಳನ್ನು ಸುಧಾರಿಸುವ ಒಂದು ಪ್ರಕ್ರಿಯೆ ಆಗಿದೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ಸುಧಾರಿಸುವ ಕೋಮು ಕೋಮುಗಳ ನಡುವೆ ಸೌಹಾರ್ದತೆಯನ್ನು ಕಾಪಾಡುವ ಶಕ್ತಿ ಇಟ್ಟುಕೊಂಡಿದೆ.

ನಮ್ಮ ಆಧ್ಯಾತ್ಮಿಕ ಗ್ರಂಥಗಳನ್ನು ಧಾರ್ಮಿಕ  ಅಡಿಪಾಯಗಳನ್ನು ಗಮನಿಸಿದರೆ ಉಪನಿಷತ್ತುಗಳೆ ಆಗಲಿ ಯೇಸು,ಬುದ್ಧ,ಮಹಾವೀರ ಎಲ್ಲರೂ “ಕ್ಷಮೆ” ಎಲ್ಲರೂ ಪಾಲಿಸಬೇಕಾದ ಧರ್ಮ ಎಂದು ಸಾರುತ್ತವೆ.

ಕ್ಷಮಿಸುವ ಮುನ್ನ ಇದೆಲ್ಲವನ್ನೂ ಯೋಚಿಸಿ ಮತ್ತು ಕ್ಷಮಿಸಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!