Sunday, September 8, 2024

ಕಾಂಗ್ರೆಸ್‌ ಗ್ಯಾರಂಟಿ :  ‘ಯುವನಿಧಿ’ ನಿರುದ್ಯೋಗ ಭತ್ಯೆ ಯೋಜನೆಯ ನೋಂದಣಿಗೆ ಡಿಸೆಂಬರ್ 26ರಂದು ಚಾಲನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್  

ಜನಪ್ರತಿನಿಧಿ ವಾರ್ತೆ ( ಬೆಂಗಳೂರು) :  ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ  ಕೊನೆಯದಾದ ‘ಯುವನಿಧಿ’ ನಿರುದ್ಯೋಗ ಭತ್ಯೆ ಯೋಜನೆಯ ನೋಂದಣಿಗೆ ಡಿಸೆಂಬರ್ 26ರಂದು ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್  ಇಂದು(ಗುರುವಾರ) ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಡಿಸೆಂಬರ್ 26ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲಾಂಛನ ಬಿಡುಗಡೆಗೊಳಿಸಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಯುವನಿಧಿ ಫಲಾನುಭವಿಗಳು ಯಾರು ? : ಜನವರಿ 12 ರಂದು ವಿವೇಕಾನಂದ ಜಯಂತಿಯಂದು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ಪದವೀಧರ ಮತ್ತು ಡಿಪ್ಲೊಮಾ ಪದವಿ ಪಡೆದು ಉದ್ಯೋಗವಿಲ್ಲದೇ ಇದ್ದ ಅರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಪದವಿ, ಡಿಪ್ಲೋಮಾ ಮುಗಿಸಿ ಆರು ತಿಂಗಳಾದ ನಿರುದ್ಯೋಗಿ ಯುವಕ-ಯುವತಿಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು ಮತ್ತು 2022-23 ಶೈಕ್ಷಣಿಕ ವರ್ಷದಲ್ಲಿ ಪದವಿ ಹೊಂದಿದವರಾಗಿರಬೇಕು. ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಪದವಿ ಪಾಸ್ ಆದವರೆಗೆ 3 ಸಾವಿರ, ಡಿಪ್ಲೋಮಾ ತೇರ್ಗಡೆ ಹೊಂದಿದವರಿಗೆ 1,500 ರೂಪಾಯಿಗಳನ್ನು ಎರಡು ವರ್ಷಗಳವರೆಗೆ ನೀಡುತ್ತೇವೆ. ಎರಡು ವರ್ಷದೊಳಗೆ ಕೆಲಸ ಸಿಕ್ಕಿದ ಕೂಡಲೇ ಸರ್ಕಾರದ ಯುವನಿಧಿ ಸವಲತ್ತು ನಿಲ್ಲುತ್ತದೆ ಎಂದು ಅವರು ಯೋಜನೆ ಬಗ್ಗೆ ವಿವರಣೆ ನೀಡಿದರು. 

ಇನ್ನು,ಯುವ ನಿಧಿ ಫಲಾನುಭವಿಗಳು ಕೆಲಸ ಸಿಕ್ಕಿದೆಯೋ, ಇಲ್ಲವೋ ಎನ್ನುವುದನ್ನು ಪ್ರತಿ ತಿಂಗಳು ಫಲಾನುಭವಿಗಳು ಸ್ವಯಂ ತಿಳಿಸಬೇಕು. ಇದನ್ನು ಶೇ 100 ರಷ್ಟು ನಾವು ನೇರವಾಗಿ ಹುಡುಕಲು ಸಾಧ್ಯವಿಲ್ಲ. ಸಾಕಷ್ಟು ಸವಾಲುಗಳಿವೆ, ಕೆಲಸ ಸಿಕ್ಕಿದವರು ಯುವನಿಧಿ ಪಡೆದುಕೊಂಡರೆ, ಆ ಹಣವನ್ನು ವಾಪಸ್ ಪಡೆಯುತ್ತೇವೆ. ಅಂಥವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಹ  ಅವರು ಎಚ್ಚರಿಕೆ ನೀಡಿದ್ದಾರೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?: ಯುವನಿಧಿ ಯೋಜನೆಗೆ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಪದವೀಧರರು ಅರ್ಹರಾಗಿದ್ದು, ಇದಕ್ಕೆ ಸರ್ಕಾರ ಸುಮಾರು 250 ರೂಪಾಯಿ ನಿಗದಿಪಡಿಸಿದೆ. ಮುಂದಿನ ವರ್ಷ 1,250 ಕೋಟಿ ಬಜೆಟ್ ಅವಶ್ಯಕತೆ ಇದೆ. ಪತ್ರಿ ತಿಂಗಳು 25 ರೊಳಗೆ ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!