Sunday, September 8, 2024

‘ಹೃದಯದ ಕಣ್ಣು ತೆರೆಸುವ ಆಳ್ವಾಸ್ ವಿರಾಸತ್’- ಆಳ್ವಾಸ್ ವಿರಾಸತ್ ಮೇಳಗಳ ಉದ್ಘಾಟಿಸಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ

ಮೂಡುಬಿದಿರೆ: ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್, ವಿರಾಸತ್ ಹಾಗೂ ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯ ಶ್ಲಾಘಿಸಿದರು.

ವಿದ್ಯಾಗಿರಿಯಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’29ನೇ ಆಳ್ವಾಸ್ ವಿರಾಸತ್’ ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯಲಿರುವ ನಾಲ್ಕು ದಿನಗಳ ಪ್ರದರ್ಶನ ಹಾಗೂ ಮಹಾಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಆಳ್ವಾಸ್ ವಿರಾಸತ್ ಇಂದು ರಾಜ್ಯದಾದ್ಯಂತ ಮನೆಮಾತಾಗಿದೆ. ಡಾ.ಎಂ. ಮೋಹನ ಆಳ್ವ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಅದ್ವಿತೀಯ ನಾಯಕರಾಗಿದ್ದಾರೆ. ಪ್ರತಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಅವರ ಗುಣ ಹಾಗೂ ಶೈಕ್ಷಣಿಕ ಬದಲಾವಣೆಗೆ ತ್ವರಿತವಾಗಿ ಸ್ಪಂದಿಸುವ ರೀತಿ ಅನನ್ಯ ಎಂದರು.

ಸ್ಕೌಟ್ಸ್ ಗೈಡ್ಸ್ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವ ಅಂತರ ರಾಷ್ಟ್ರೀಯ ಚಳವಳಿ, ೨೦೦ ದೇಶಗಳಲ್ಲಿದೆ. ಜಾಂಬೂರಿ ನಡೆಸುವ ಮೂಲಕ ಆಳ್ವರು ದೇಶಕ್ಕೆ ಹೆಸರು ತಂದರು ಎಂದು ಶ್ಲಾಘಿಸಿದರು.ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಮಾರುಕಟ್ಟೆ ಸಿಗದ ಕೃಷಿ ತಲೆ ಇಲ್ಲದ ದೇಹದ ಹಾಗೆ. ನಮ್ಮೆಲ್ಲರಿಗೆ ಬದುಕು ನೀಡುವ ಕೃಷಿಯ ಪರಿಸ್ಥಿತಿ ಇದಾಗಿದೆ. ಸರ್ಕಾರವು ಯುವ ಕೃಷಿಕರಿಗೆ ಶಿಷ್ಯವೇತನ ನೀಡಿ ಬೆಂಬಲಿಸಬೇಕು ಎಂದರು.

ಮಂಗಳೂರು ಸುರಕ್ಷಿತ ನಗರ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇದು ಹೆಚ್ಚಿನ ಬಲ ನೀಡಿದೆ. ಪುತ್ತಿಗೆಯ ಗುಡ್ಡವನ್ನು ಆಳ್ವರು ನಂದನವನ ಮಾಡಿದ್ದಾರೆ. ಇದು ಅವರ ಕರ್ತತ್ವೃ ಶಕ್ತಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸಣ್ಣದಾಗಿ ಆರಂಭಗೊಂಡ ವಿರಾಸತ್, ಊರಿನಿಂದ ವಿಶ್ವಕ್ಕೆ ಪಸರಿಸಿದೆ. ನಾಡಿನೆಲ್ಲೆಡೆಯ ಜನ ವಿರಾಸತ್‌ಗಾಗಿ ಕಾಯುತ್ತಾರೆ ಎಂದರು.

ಜಾಗತಿಕ ಪರಿಕಲ್ಪನೆಯ ಪುಷ್ಪಮೇಳ, ಸ್ವಾಸ್ಥ್ಯ ಚಿಂತನೆಯ ಆಹಾರ ಮೇಳ, ಪರಿಸರ ಸಂರಕ್ಷಣೆಯ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ, ಮಕ್ಕಳಿಗೆ ಬಲ ನೀಡುವ ಸಾಹಸಮಯ ಚಟುವಟಿಕೆ ಕೇಂದ್ರ, ಕೃಷಿಕರನ್ನು ಗೌರವಿಸುವ ಕೃಷಿ ಮೇಳಗಳ ಜೊತೆಗೂಡಿ, ಒಟ್ಟು ವಿರಾಸತ್ ಮೂಲಕ ಮನಸ್ಸು ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಮನೋರಂಜನೆಗಾಗಿ ಮಾತ್ರವಲ್ಲ, ಸಂಸ್ಕೃತಿಯ ಅರಿವು, ಜ್ಞಾನ, ಪಠ್ಯದ ಜೊತೆಗೆ ಬಯಲು ಶಾಲೆ ಕಲ್ಪನೆಯನ್ನು ಒದಗಿಸಿದೆ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆಯ ಎಂ.ಸಿ.ಎಸ್. ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮೂಡುಬಿದಿರೆ ಎಂ. ಸಿ. ಎಸ್. ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ. ಧನಂಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ನಿವೃತ್ತ ಐ‌ಎಫ್ ಎಸ್ ಅಧಿಕಾರಿ, ವನ್ಯಜೀವಿ ಛಾಯಾಗ್ರಾಹಕ ಎನ್. ಜಯಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಚೌಟರ ಅರಮನೆಯ ಕುಲದೀಪ್ ಎಂ., ಪ್ರಮುಖರಾದ ಬಾಲಕೃ? ಶೆಟ್ಟಿ, ಮೋಹನ್ ದೇವ ಆಳ್ವ, ಶ್ರೀನಿವಾಸ ಆಳ್ವ ಇದ್ದರು.
ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡುಬಿದಿರೆ ಎಂ.ಸಿ.ಎಸ್. ಸೊಸೈಟಿ, ರೈತ ಸಂಘಟನೆಗಳು, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಗಳು ಮೇಳಕ್ಕೆ ಸಹಯೋಗ ನೀಡಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!