Sunday, September 8, 2024

ಕೃಷಿ ಇಲಾಖೆ ಹುದ್ದೆಗಳ ಕುಸಿತಕ್ಕೆ ಕೃಷಿಕರ ನಿರಾಸಕ್ತಿಯೂ ಕಾರಣ-ಕೆ.ಪ್ರತಾಪಚಂದ್ರ ಶೆಟ್ಟಿ

ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ರಘುರಾಮ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನೆ

ಕುಂದಾಪುರ: ಗ್ರಾಮ ಮಟ್ಟದಲ್ಲಿದ್ದ ಗ್ರಾಮ ಸಹಾಯಕ ಹುದ್ದೆಗಳು ಸಂಪೂರ್ಣವಾಗಿ ಮರೆಯಾಗಿದೆ. ಪ್ರಸ್ತುತ ಹೋಬಳಿಗೊಬ್ಬರು ಕೃಷಿ ಅಧಿಕಾರಿಯನ್ನು ಮಾತ್ರ ಕಾಣುವ ಹಂತಕ್ಕೆ ಬಂದಿದ್ದೇವೆ. ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಕೃಷಿ ಇಲಾಖೆಯಲ್ಲಿ ಮಾತ್ರ ಹುದ್ದೆಗಳು ಕುಂಠಿತವಾಗುತ್ತಿದೆ. ಆಧ್ಯತಾ ವಲಯವಾಗಿದ್ದ ಕೃಷಿವಲಯವೇ ಇವತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ರೈತರ ನಿರಾಸಕ್ತಿ, ಅಧಿಕಾರಿಗಳ ಬಗ್ಗೆ ಬೇಡಿಕೆ ಕುಸಿದಂತೆ ಅಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ವಂಡ್ಸೆ ಶ್ರೀಯಾ ಕನ್ವನ್‌ಷನ್ ಹಾಲ್‌ನಲ್ಲಿ ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅ.31ರಂದು ನಿವೃತ್ತರಾದ ಸಿ. ಅಧಿಕಾರಿ ರಘುರಾಮ ಶೆಟ್ಟಿ ಚಿತ್ತೂರು ಇವರನ್ನು ಸಾರ್ವಜನಿಕರ ಅಭಿನಂದನಾ ಸಮಿತಿ ವಂಡ್ಸೆ ಹೋಬಳಿಯ ವತಿಯಿಂದ ಜರುಗಿದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯೋಜನೆಯೊಂದರ ಯಶಸ್ವಿ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಮುಖರಾಗುತ್ತಾರೆ. ರೈತ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ರೈತರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾರೆ. ರಘುರಾಮ ಶೆಟ್ಟರು ನಿವೃತ್ತಿಯ ಬಳಿಕವೂ ಕೃಷಿ, ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಬೇಕು. ರೈತ ಪರವಾಗಿರಬೇಕು ಎಂದರು.

ಯಾವುದೇ ಸರ್ಕಾರ ಬಂದರೂ ಕೂಡಾ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಭತ್ತ ಅನಿಶ್ಚಿತವಾಗಿದೆ. ಕಟಾವು ಮಾಡಿ ನೇರ ಅಕ್ಕಿ ಗಿರಣಿಗಳಿಗೆ ಭತ್ತ ಹೋಗುತ್ತದೆ. ಬೆಂಬಲ ಬೆಲೆಯೂ ನಿಗಧಿತ ಸಮಯಕ್ಕೆ ಘೋಷಣೆಯಾಗುತ್ತಿಲ್ಲ. ಕೃಷಿ ಪ್ರಧಾನ್ಯವಾದ ಪ್ರದೇಶದಲ್ಲಿ ಅಧಿಕಾರಿಗಳ ಕೊರತೆಯೂ ಕೃಷಿಯ ಹಿನ್ನೆಡೆಗೆ ಕಾರಣವಾಗುತ್ತದೆ. ರೈತರ ಸಕ್ರಿಯ ಭಾಗವಹಿಸುವಿಕೆ, ಬೆಂಬಲ ಬೆಲೆ ಇತ್ಯಾದಿ ಸಂದರ್ಭದಲ್ಲಿ ತಮಗಿರುವ ಅವಕಾಶಗಳನ್ನು ಕೇಳುವ ಹಂತಕ್ಕೆ ಬೆಳೆಯಬೇಕು ಎಂದು ಹೇಳಿದರು,

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳ ಆಸಕ್ತಿಯಿಂದ ಅಭಿವೃದ್ದಿಯ ವೇಗ ಹೆಚ್ಚಾಗುತ್ತದೆ. ಶ್ರದ್ದೆಯಿಂದ ತಮ್ಮ ಜವಬ್ದಾರಿ ನಿಭಾಯಿಸುವ ಅಧಿಕಾರಿ ವರ್ಗ ಜನಮೆಚ್ಚುಗೆ ಪಡೆಯುವ ಮೂಲಕ ಶ್ಲಾಘನಾರ್ಯ ಸೇವೆಗೆ ಕಾರಣರಾಗುತ್ತಾರೆ. ನಿವೃತ್ತಿಯ ಸಮಯದಲ್ಲಿ ಪುನಾರವಲೋಕನವಾಗುತ್ತದೆ. ರಘುರಾಮ ಶೆಟ್ಟರು ೩೬ ವರ್ಷ ೯ ತಿಂಗಳು ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕವೂ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮೃದ್ಧ ಬೈಂದೂರು ಕಲ್ಪನೆಗೂ ಕೊಡುಗೆ ಇರಲಿ ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಕೃಷಿ ನಿರ್ದೇಶಕರಾದ ಉಪಕೃಷಿ ನಿರ್ದೇಶಕರಾದ ಚಂದ್ರಶೇಖರ ನಾಯಕ್, ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರೂಪಾ ಮಾಡ ಉಪಸ್ಥಿತರಿದ್ದರು.

ಸಾರ್ವಜನಿಕ ಅಭಿನಂದನಾ ಸಮಿತಿಯ ವತಿಯಿಂದ ರಘುರಾಮ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಗಣ್ಯರು ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ರಘುರಾಮ ಶೆಟ್ಟಿ ಅವರು, ಕೃಷಿ ಕುಟುಂಬದಲ್ಲಿ ಹುಟ್ಟಿದ ನನಗೆ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ೩೬ ವರ್ಷ ೯ ತಿಂಗಳು ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ಇದೆ. ಸರ್ಕಾರದ ಸವಲತ್ತುಗಳನ್ನು ಆರ್ಹ ರೈತರಿಗೆ ತಲುಪಿದಾಗ ಹುದ್ದೆಗೆ ಗೌರವ ಬರುತ್ತದೆ. ಸರ್ಕಾರಿ ಸೌಲಭ್ಯಗಳು ಎಲ್ಲಿ ಸಿಗುತ್ತದೆ ಎಂದು ಶೋಧಿಸಿ ತರುವುದು ಅಧಿಕಾರಿಗಳಿಗೆ ಸಾಧ್ಯ. ಇದನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಎಂದು ಹೇಳಿದ ಅವರು ದುಡಿಮೆ ಸಮಾಜಕ್ಕೆ ಸ್ಪಷ್ಟ ಸ್ವರೂಪ ನೀಡುತ್ತದೆ. ಅದು ದೇಶದ ಅಭಿವೃದ್ದಿಗೆ ಕಾರಣವಾಗುತ್ತದೆ. ಜೀವಿತಾವಧಿಯುದ್ದಕ್ಕೂ ದುಡಿಮೆಗೆ ಒತ್ತು ನೀಡಬೇಕು ಸೋಮಾರಿಗಳಾಗಬಾರದು ಎಂದರು.

ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಶ್ರೀನಿವಾಸ ಪೂಜಾರಿ ಕಲ್ಮಾಡಿ, ನಿರ್ಮಲ ವಂಡ್ಸೆ, ಸುಧೀರ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸ್ಮೀತಾ ಮತ್ತು ಬಳಗದವರು ಪ್ರಾರ್ಥನೆ ಮಾಡಿದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ ಶೆಟ್ಟಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!