Sunday, September 8, 2024

ಕುಂದಾಪ್ರದ ಮಾತು, ವಿಚಾರಗಳಿಗೆ ಸಮುದಾಯ ಬಾನುಲಿ ವೇದಿಕೆಯಾಗಲಿ : ರವಿ ಬಸ್ರೂರು

ರೇಡಿಯೋ ಕುಂದಾಪ್ರ 89.6 FM | ಅಧಿಕೃತ ಲಾಂಛನ, ರಾಗ ಬಿಡುಗಡೆ ಸಮಾರಂಭ

ಜನಪ್ರತಿನಿಧಿ ವಾರ್ತೆ : ಸಮುದಾಯ ಬಾನುಲಿ ಒಂದು ಬೇರೆಯೇ ಪ್ರಪಂಚ. ರೇಡಿಯೋ ಕುಂದಾಪ್ರ 89.6 FMನಿಂದ ಈ ಭಾಗದ ಪ್ರತಿಭೆಗಳ ಸೃಜನಾತ್ಮಕತೆಗಳಿಗೆ ವೇದಿಕೆ ಸಷ್ಟಿಯಾಗಲಿ ಎಂದು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಹೇಳಿದರು.

ಅವರು ಭಂಡಾರ್‌ಕಾರ್ಸ್‌  ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಆರಂಭಗೊಳ್ಳುತ್ತಿರುವ ರೇಡಿಯೋ ಕುಂದಾಪ್ರ 89.6 FM ಇದರ ಅಧಿಕೃತ ಲಾಂಛನ ಬಿಡುಗಡೆಗೊಳಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕುಂದಾಪ್ರದ ಮಾತು, ವಿಚಾರ ಮತ್ತು ಸಂಗೀತಗಳಿಗೆ ಈ ಸಮುದಾಯ ಬಾನುಲಿ ವೇದಿಕೆ ಮಾಡಿಕೊಡಲಿ. ಈ ರೇಡಿಯೋ ತರಂಗಗಳ ಮೂಲಕ ಹೊರಡುವ ಮಾಹಿತಿ, ಮಾತು, ವಿಚಾರಗಳು ಕೂಡ ಮನರಂಜನೆಯಾಗಲಿ. ಊರ ಪ್ರತಿಭೆಗಳಿಗೆ ಅವಕಾಶ ದೊರಕಿಸಿಕೊಡುವಂತಹ ಕಾಳಜಿ ಈ ಸಮುದಾಯ ಬಾನುಲಿ ರೂಢಿಸಿಕೊಳ್ಳಲಿ ಎಂದು ಅವರು ಅಭಿಪ್ರಾಯಪಟ್ಟರು.  

ರೇಡಿಯೋ ಕುಂದಾಪ್ರದ ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಿ ಮಾತನಾಡಿದ ಜಾದೂಗಾರ, ಸಾಹಿತಿ ಓಂ ಗಣೇಶ್, ರೇಡಿಯೋದ ಹೊರತು ಪ್ರಪಂಚ ಇಷ್ಟು ಬೆಳೆದು ನಿಂತಿರುವುದಕ್ಕೆ ಸಾಧ್ಯವಿಲ್ಲ. ಬದುಕನ್ನು ಸಂಸ್ಕಾರಗೊಳಿಸುವಂತಹ ಕೆಲಸ ಈ ರೇಡಿಯೋ ಕುಂದಾಪ್ರ ಮಾಡಲಿ. ಕುಂದಾಪ್ರದಿಂದ ಹೊರಡುವ ರೇಡಿಯೋ ತರಂಗ ಜಗತ್ತನ್ನು ತಲುಪಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.  

ಕ.ಸಾ.ಪ ಉಡುಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎ. ಎಸ್. ಎನ್ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ. ಶಾಂತಾರಾಮ ಪ್ರಭು ಸಮಾರಂಭವನ್ನು ಉದ್ಘಾಟಿಸಿದರು.

ವಿಶ್ವಸ್ಥ ಮಂಡಳಿಯ ಸದಸ್ಯ ಯು. ಎಸ್‌ ಶೆಣೈ ಪ್ರಾಸ್ತಾವಿಕ ಮಾತನಾಡಿದರು, ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿ, ಪದವಿ ಪೂರ್ವ ಕಾಲೇಜಿನ ಪಾಂಶುಪಾಲ ಡಾ. ಜಿ.ಎಂ ಗೊಂಡ ವಂದಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯಕ್‌ ಪರಿಚಯಿಸಿ, ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರಿಗೆ ಸನ್ಮಾನ ಹಾಗೂ ರೇಡಿಯೋ ಕುಂದಾಪ್ರ ಲಾಂಛನ ವಿನ್ಯಾಸ ಮಾಡಿದ ಕೇಶವ ಸಸಿಹಿತ್ಲು ಅವರಿಗೆ ಪುರಸ್ಕರಿಸಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!