spot_img
Thursday, April 30, 2026
spot_img

ತುಳಸಿಯ ಕರದಲ್ಲರಳುವ ಚಂದನೆಯ ಕಲಾಕೃತಿಗಳು

  ಕೊರೊನಾ ಕಾಲಘಟ್ಟವೆನ್ನುವಂತಾದ್ದು ಜನರಿಗೆ ಬಾರೀ ಸಂಕಷ್ಟಗಳನ್ನು ತಂದೊಡ್ಡಿದ್ದು ನಿಜವಾದರೂ ಅದೇ ಸಮಯವನ್ನು ತಮ್ಮಲ್ಲಿನ ಸುಪ್ತ ಪ್ರತಿಭೆ ಮತ್ತು ಕೌಶಲ್ಯಗಳನ್ನು ಹೊರಹೊಮ್ಮಿಸಲು ಒಂದು ವೇದಿಕೆಯಾಗಿ ಬಳಸಿಕೊಂಡು ಸಂತೋಷವನ್ನು ಕಂಡುಕೊಂಡವರೂ ಇದ್ದಾರೆ. ಹಾಗೆ ಕೊರೊನಾ ಸಮಯದಲ್ಲಿ ಸಿಕ್ಕ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಪ್ರೇರಣೆಯಿಂದ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡು ತನ್ನೊಳಗಿದ್ದ ಚಿತ್ರಗಾರ್ತಿಯನ್ನು ಕೃತಿರೂಪಕ್ಕಿಳಿಸಿ ನೋಡುಗರು ಬೆರಗಾಗುವಂತೆ ಮೆಚ್ಚಿ ಹೊಗಳುವಂತೆ ಮಾಡಿರುವುದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಪ್ರತಿಭೆ ತುಳಸಿ.

ಗಂಗೊಳ್ಳಿಯ ಛಾಯಾ ಚಿತ್ರಗ್ರಾಹಕ ಗಣೇಶ್ ಪೂಜಾರಿ ಮತ್ತು ಮಾಲತಿ ಗಣೇಶ್ ದಂಪತಿಯ ಪುತ್ರಿ ತುಳಸಿ ಯಾವತ್ತೂ ಚಿತ್ರ ರಚನೆಯ ತರಗತಿಗಳಿಗೆ ಹೋದವಳಲ್ಲ. ತರಗತಿಗಳಲ್ಲಿ  ಸ್ನೇಹಿತೆಯರು ಬಿಡಿಸುತ್ತಿದ್ದ ಚಿತ್ರಗಳಿಂದ ಸ್ಪೂರ್ತಿ ಪಡೆದು ಬಂಧು ಶರಣ್ ಮತ್ತು  ತಂದೆ ಗಣೇಶರು  ಬಿಡಿಸುತ್ತಿದ್ದ ಚಿತ್ರಗಳಿಂದ ಪ್ರೇರಣೆ ಪಡೆದು ಹಾಗೆ ಸುಮ್ಮನೆ ಪ್ರಯತ್ನಕ್ಕೆ ಎನ್ನುವಂತೆ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡವಳು. ಮೊದಲಿನಿಂದ ಚಿತ್ರ ರಚನೆಯೆಡೆಗೆ ಆಸಕ್ತಿಯಿದ್ದರೂ ಕೊರೊನ ಅವಧಿಯಲ್ಲಿ ಮತ್ತಷ್ಟು ಹೆಚ್ಚಿನ ಆಸಕ್ತಿಯಿಂದ ಅದರಲ್ಲಿ ತೊಡಗಿಸಿಕೊಂಡ ತುಳಸಿ ಇದೀಗ ಅದರಲ್ಲಿ ಪಳಗಿರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈಕೆಯ ಕರಗಳಲ್ಲಿ ಅರಳಿದ ಕೃಷ್ಣ ,ಗಣೇಶ, ಬುದ್ಧ, ಮುದುಕಿ, ಸನ್ಯಾಸಿ,  ಹಂಸ,  ವೃದ್ಧ, ಪ್ರಕೃತಿ ಮೊದಲಾದ ಚಿತ್ರಗಳು ಈಕೆಯ ಕಲಾ ಪ್ರೌಢಿಮೆಯನ್ನು ಸಾರಿ ಹೇಳುತ್ತವೆ. ಇವಳು ಕಲಿತ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಳೆದ ಬಾರಿಯ ವಾರ್ಷಿಕ ಸಂಚಿಕೆಗೆ ಇವಳ ರಚನೆಯ ಚಿತ್ರವನ್ನೇ ಮುಖಪುಟಕ್ಕೆ ಬಳಸಿಕೊಂಡಿದ್ದು ವಿಶೇಷ. ಕಳೆದ ವರುಷ ಪುಟ್ಟ ಪುಟ್ಟ ಬೆಣಚುಕಲ್ಲಿನಲ್ಲಿ ವೈವಿಧ್ಯಮಯವಾದ ಆಕರ್ಷಕ  ಚಿತ್ರಗಳನ್ನು ರಚಿಸಿ ಶಿಕ್ಷಕರ ದಿನಾಚರಣೆಯಂದು ತನ್ನೆಲ್ಲಾ ಗುರುಗಳಿಗೆ ಅರ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. 

ಕಲಿಕೆಯಲ್ಲೂ ಮುಂದಿರುವ ಈಕೆ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯನ್ನು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿ ಇದೀಗ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಂದುವರೆಸುವ ಇಚ್ಛೆ ಹೊಂದಿದ್ದಾಳೆ. ವಿದುಷಿ ತೇಜಸ್ವಿನಿ, ವಿದುಷಿ ಶಾಂಭವಿ ಮತ್ತು ವಿದುಷಿ ಮೋನಿಕಾ ಅವರಿಂದ ಭರತನಾಟ್ಯ ತರಬೇತಿಯನ್ನು ಪಡೆದು ಭರತನಾಟ್ಯದಲ್ಲಿ ಜೂನಿಯರ್ ಮುಗಿಸಿ ಹಲವು ಪ್ರದರ್ಶಗಳನ್ನು ವೇದಿಕೆಯಲ್ಲಿ ನೀಡಿ  ಸೈ ಎನಿಸಿಕೊಂಡಿದ್ದಾಳೆ. ಸ್ಪರ್ಧೆಯ ಕಡೆಗೆ ಹೆಚ್ಚು ಆಸಕ್ತಿ ತೋರಿಸದ ತುಳಸಿ ಚಿತ್ರ ಬಿಡಿಸುವುದರಲ್ಲಿಯೇ ಮನಸ್ಸಿಗೆ ನೆಮ್ಮದಿ ಖುಷಿ ಸಂತೃಪ್ತಿ ಸಿಗುತ್ತದೆ  ಅಷ್ಟು ಸಾಕು ಎನ್ನುವ ವಿನೀತ ಭಾವ ಹೊಂದಿದ್ದಾಳೆ. ನವೀನ ಕಲ್ಪನೆ ಮತ್ತು ಸೃಜನಶೀಲತೆಯನ್ನು ಮೇಳೈಸಿಕೊಂಡು ಮತ್ತಷ್ಟು ಈ ನಿಟ್ಟಿನಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ತುಳಸಿ ಅದ್ಭುತ ಚಿತ್ರಗಾರ್ತಿಯಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಹಾಗಾಗಲಿ ಎನ್ನುವುದು ಆಶಯ. ಮೊಬೈಲು , ರೀಲ್ಸು, ಟಿ.ವಿ , ಸಾಮಾಜಿಕ ಜಾಲತಾಣಗಳ ಭರಾಟೆಗಳಲ್ಲಿ ಕಳೆದುಹೋಗಿರುವ ಇಂದಿನ ವಿದ್ಯಾರ್ಥಿಗಳಿಗೆ ತುಳಸಿಯಂತಹ ಪ್ರತಿಭೆಗಳು ನಿಜಕ್ಕೂ ಪ್ರೇರಣೆ ತುಂಬಬಲ್ಲರು. 

ಲೇಖನ: ನರೇಂದ್ರ ಎಸ್ ಗಂಗೊಳ್ಳಿ
9242127307

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!