Sunday, September 8, 2024

ಅಂಗವೈಕಲ್ಯತೆಯಿರುವ ಮಕ್ಕಳ ಪಾಲಕರ ನೋವಿನ ಕೂಗು: ಶಾಸಕರು, ಅಧಿಕಾರಿಗಳ ಮುಂದೆ ತೆರೆದುಕೊಂಡವು ಕರುಳು ಕನಿಕರಿಸುವ ಅಳಲು

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಹುಟ್ಟುವಾಗಲೇ ಅಂಗವೈಕಲ್ಯತೆಯಿಂದಿರುವ ಮಕ್ಕಳ ಲಾಲನೆ ಪಾಲನೆ ಮಾಡುವುದು ದೊಡ್ಡ ಸವಾಲು. ಇಂಥಹ ಮಕ್ಕಳ ಪಾಲನೆ ಮಾಡಲು ಓರ್ವರಂತೂ ಇರಲೇ ಬೇಕು. ಇಂಥಹ ಬಡ ಕುಟುಂಬಗಳು ಅನುಭವಿಸುವ ನೋವುಗಳು ಶಾಸಕರು, ಅಧಿಕಾರಿಗಳ ಮುಂದೆ ತೆರೆದುಕೊಂಡ ಪರಿಗೆ ಕಣ್ಣಲಿಗಳು ಒದ್ದೆಯಾಗುವಂತಹದ್ದು. ಕರುಳು ಮಿಡಿಯುವ ನೋವಿನ ಅಳಲು ತೆರೆದುಕೊಂಡಿದ್ದು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ.

ದಿ ಕನ್ಸನ್ರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‍ಗಳಲ್ಲಿ ಅಂಗವೈಕಲ್ಯತೆ ಇರುವ 18 ವರ್ಷದೊಳಗಿನ ಮಕ್ಕಳ ಪರಿಸ್ಥಿತಿಯ ಅವಲೋಕನ ನಡೆಸಿದೆ. ಅವರ ಪರಿಸ್ಥಿತಿಯ ಬಗ್ಗೆ ತಾಲೂಕು ಮಟ್ಟದಲ್ಲಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಭಾಗವಹಿಸುವಿಕೆಯಲ್ಲಿ ಅಂಗವಿಕಲತೆಯಿರುವ ಮಕ್ಕಳ ಪಾಲಕರೊಂದಿಗೆ ತಾಲೂಕು ಮಟ್ಟದ ಸಮಾಲೋಚನೆ ಸಭೆಯನ್ನು ಕುಂದಾಪುರ ತಾಲೂಕು ಪಂಚಾಯತ್‍ನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುಮಾರು 274 ಮಕ್ಕಳು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ನಾಡ ಗ್ರಾಮದಲ್ಲಿ 17, ಕಾವ್ರಾಡಿ ಗ್ರಾಮದಲ್ಲಿ 13, ಹೊಸಾಡು, ಹಕ್ಲಾಡಿ ಗ್ರಾಮ, ಶಂಕರನಾರಾಯಣ ಗ್ರಾಮದಲ್ಲಿ 12 ಮಕ್ಕಳು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಈ ಕುಟುಂಬಗಳು ತೀವ್ರ ಬಡತನವನ್ನು ಹೊಂದಿದೆ. ಅಂಗವೈಕಲ್ಯತೆಗೆ ಇರುವ ಮಕ್ಕಳಿಗೆ ಅಂಗವೈಕಲ್ಯತೆಯ ಅನುಪಾತಕ್ಕೆ ಅನುಸಾರವಾಗಿ ಬರುವ ಪ್ರಸ್ತುತ ಮಾಸಾಶನ ರೂ.800-1400. ಪ್ರತಿ ಮಗುವಿನ ಸಮಸ್ಯೆಗನುಗುಣವಾಗಿ ಪ್ರತಿ ತಿಂಗಳು ಔಷಧಕ್ಕೆ ಕನಿಷ್ಠ 1000-5000ಕ್ಕೂ ಮಿಕ್ಕಿ ಆಗುತ್ತದೆ. ಈಗ ಬರುತ್ತಿರುವ ಮಾಸಾಶನ ಯಾವುದೇ ಖರ್ಚಿಗೂ ಕೂಡಾ ಸಾಕಾಗುತ್ತಿಲ್ಲ. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ನೋಡಿಕೊಳ್ಳಲು ನಿತ್ಯವು ಒಬ್ಬರ ಅವಶ್ಯಕತೆ ಇರುತ್ತದೆ. ಏಕ ಪೋಷಕರಿರುವ ಅಥವಾ ಒಬ್ಬರ ದುಡಿಮೆಯಿಂದಲೇ ನಡೆಯುವಂತಹ ಕುಟುಂಬಗಳು ತುಂಬಾ ಸಮಸ್ಯೆ ಅನುಭವಿಸುತ್ತಿವೆ. ಅದ್ದರಿಂದ ವೈಕಲ್ಯತೆಯ ಅನುಪಾತಕ್ಕೆ ಅನುಸಾರವಾಗಿ ಮಾಸಾಸನವನ್ನು ಹೆಚ್ಚಿಸಬೇಕು. ಗ್ರಾಮ ಪಂಚಾಯತ್ ಅನುದಾನದಲ್ಲಿ ನೀಡುವ ಶೇ.5% ಅಂಗವಿಕಲರಿಗೆ ನೀಡುವ ಅನುದಾನದಲ್ಲಿ ಮಕ್ಕಳಿಗೆ ಅಧ್ಯತವಾರು ಅನುದಾನ ನೀಡಬೇಕು, ಪ್ರತ್ಯೇಕವಾದ ವಿಶೇಷ ಅನುದಾನ ನೀಡಬೇಕು.

ಕನಿಷ್ಠ ತಾಲೂಕು ಕೇಂದ್ರದಲ್ಲಾದರೂ ಒಂದು ಸರ್ಕಾರಿ ವಿಶೇಷ ಶಾಲೆ ಆರಂಭಿಸಬೇಕು ಹೋಬಳಿ ಮಟ್ಟದಲ್ಲಿ 4-5 ಪಂಚಾಯತ್‍ಗಳನ್ನು ಒಟ್ಟೂ ಸೇರಿಸಿ ಅಂಗವಿಕತೆ ಇರುವ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಸರ್ಕಾರಿ ವಿಶೇಷ ಶಾಲೆ ಆರಂಭಿಸಬೇಕು, ಮಾನಸಿಕ ಅಥವಾ ಬೌದ್ಧಿಕ ಸಾಮಥ್ರ್ಯದ ಬೆಳವಣಿಗೆ ಕಡಿಮೆ ಇರುವ ಮಕ್ಕಳಿಗೆ ಅಥವಾ ವಾಕ್ ಮತ್ತು ಶ್ರವಣ ಅಂಗವೈಕಲ್ಯತೆ ಇರುವ ಮಕ್ಕಳಿಗೆ ವಿಶೇಷ ಶಿಕ್ಷಕರನ್ನು ನಿಯೋಜಿಸಬೇಕು, ಶಾಲೆಗೆ ಹೋಗಲಾಗದ ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಪಡೆಯಲು ವ್ಯವಸ್ಥೆ ಮಾಡಬೇಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಇಂತಹ ಮಕ್ಕಳಿಗೆ ನಿಯಮಿತವಾಗಿ ಪೌಷ್ಠಿಕ ಆಹಾರ ಪೂರೈಕೆ ಮಾಡಬೇಕು, ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವರಿಗೂ ಮಾಸಾಶನ ಸಿಗುವಂತಾಗಬೇಕು, ದೈಹಿಕವಾಗಿ ಸಂಪೂರ್ಣ ಅಂಗವಿಕಲತೆ ಇರುವ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿಗೆ ಪೋಷಣಾಭತ್ಯೆ ನೀಡುವಂತಾಗಬೇಕು, ಮಗುವಿನ ಪರಿಸ್ಥಿತಿ ಸೂಕ್ಷ್ಮವಾಗಿ ನೋಡಿ ಸೂಕ್ತವಾದ ರೀತಿಯ ಅಂಗವೈಕಲ್ಯತೆಯ ಪ್ರಮಾಣಪತ್ರ ನೀಡಬೇಕು, ಪ್ರಾಥಮಿಕ, ತಾಲೂಕು ಆಸ್ಪತ್ರೆ, ಜನೌಷಧಿ ಕೇಂದ್ರಗಳಲ್ಲಿ ವಿವಿಧ ರೀತಿಯ ಅಂಗವೈಕಲ್ಯತೆ ಇರುವವರಿಗೆ ನೀಡುವ ಔಷಧಿಗಳು ಸಿಗುವಂತಾಗಬೇಕು,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಸೂಕ್ತ ಥೆರಪಿ ನೀಡುವಂತಾಗಬೇಕು, ಗ್ರಹಿಕೆ ಹಾಗೂ ಸಂವೇದನಾ ಶಕ್ತಿ ಇಲ್ಲದಿರುವ ಮಕ್ಕಳಿಗೆ ಪ್ಯಾಡ್‍ಗಳನ್ನು ಸರ್ಕಾರಿ ಆಸ್ಪತ್ರೆಗಲ್ಲಿ ಉಚಿತವಾಗಿ ನೀಡುವಂತಾಗಬೇಕು, ಇಂತಹ ಮಕ್ಕಳನ್ನು ಶಾಲೆಗೆ ಕಳುಹಿಸಲು ತಗಲುವ ಪ್ರಯಾಣ ವೆಚ್ಚವನ್ನು ಶಿಕ್ಷಣ ಇಲಾಖೆ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಜಂಟಿಯಾಗಿ ಭರಿಸುವಂತಾಗಬೇಕು, ಎಂಡೋ ಸಲ್ಫಾನ್‍ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಅಂಗವಿಕಲತೆ ಇರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರ ಸಿಗುವಂತಾಗಬೇಕು ಎನ್ನುವ ಪರಿಹಾರಕ್ಕೆ ಶಿಫಾರಸ್ಸುಗಳನ್ನು ಕುಂದಾಪುರ, ಬೈಂದೂರು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ, ಅಂಗವಿಕಲ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು.

ಸಭೆಯಲ್ಲಿ ಅಂಗವೈಕಲ್ಯತೆ ಎದುರಿಸುವ ಮಕ್ಕಳೊಂದಿಗೆ ಆಗಮಿಸಿದ ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು. ದುಬಾರಿ ಔಷಧಿಗಳಿಗೆ ತಿಂಗಳಿಗೆ 10ಸಾವಿರದ ತನಕ ವೆಚ್ಚವಾಗುತ್ತದೆ, ಪಿಜಿಯೋ ಥೆರಪಿಗಾಗಿ ಬಾಡಿಗೆ ವಾಹನದಲ್ಲಿ 20-30 ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ. ಕೆಲವೊಂದು ಕಡೆ ವಿ.ಎ ಗಳು ಸರಿಯಾಗಿ ಸ್ಪಂದನ ಮಾಡುತ್ತಿಲ್ಲ ಎಂಬಿತ್ಯಾದಿ ವಿಚಾರಗಳನ್ನು ಶಾಸಕರುಗಳ ಗಮನಕ್ಕೆ ತಂದರು.

ಡಾ.ಪ್ರೇಮಾನಂದ ಅವರು ಮಾತನಾಡಿ ಸರ್ಕಾರಿ ಆಸ್ಪತ್ರೆ ಹಾಗೂ ಜನೌಷಧಿ ಕೇಂದ್ರಗಳಲ್ಲಿಯೂ ಅಂಗವೈಕಲ್ಯತೆಗೆ ಸಂಬಂಧಪಟ್ಟ ಜನರಿಕ್ ಔಷಧಗಳು ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಲ್ಲಿ ಜನರಿಕ್ ಔಷಧಿಗಳನ್ನೇ ಬರೆದುಕೊಡುವಂತೆ ವಿನಂತಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಮಾತನಾಡಿ, ಅಂಗವೈಕಲ್ಯತೆ ಇರುವ ಮಕ್ಕಳನ್ನು ಪಿಜಿಯೋ ಥೆರೆಪಿಗೆ ಕರೆದೋಯ್ಯಲು 108 ವಾಹನವನ್ನು ಬಳಸಬಹುದು ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಅಂಗವೈಕಲ್ಯತೆ ಹೊಂದಿರುವವರಿಗೆ ಸಿಗುವ ಸವಲತ್ತುಗಳನ್ನು ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಈಗಾಗಲೇ ಅಂಗವೈಕಲ್ಯತೆ ಹೊಂದಿರುವ ಮಕ್ಕಳ ಪೋಷಕರು ಸೂಚಿಸಿರುವ ಮನವಿಗಳು ಹಾಗೂ ಮಾಡಿರುವ ಶಿಫಾರಸ್ಸುಗಳನ್ನು ಈಡೇರಿಸಲು ಸರ್ಕಾರದ ಗಮನ ಸಳೆಯಲಾಗುವುದು. ಸಂಬಂಧಪಟ್ಟ ಇಲಾಖೆಗಳು ಕೂಡಾ ಮಾನವಿಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ ಅಂಗವೈಕಲ್ಯತೆ ಎದುರಿಸುತ್ತಿರುವ ಮಕ್ಕಳ ಬೇಡಿಕೆಯನ್ನು ಗಮನಿಸಿದ್ದೇನೆ. ಗೋಳಿಹೊಳೆಯ ಸಮೀಪ ವಿಕಲಚೇತನ ಮಕ್ಕಳನ್ನು ಹೊತ್ತುಕೊಂಡು ಹಳ್ಳ ದಾಟಬೇಕು, ಇಲ್ಲಿ ಕಾಲುಸಂಕ ನಿರ್ಮಾಣಕ್ಕೆ ಆಧ್ಯತೆಯಲ್ಲಿ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭಾರತಿ, ಅಂಗವಿಕಲ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರತ್ನ, ಶ್ಯಾಮಲಾ, ಭಾಗೀರತಿ ಉಪಸ್ಥಿತರಿದ್ದರು.

ಸಿ.ಡಬ್ಲ್ಯೂ.ಸಿ ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಗಾಣಿಗ ಹಾಗೂ ಸಂಯೋಜಕರಾದ ಕೃಪಾ ಎಂ.ಎಂ ಅವರು ಅಂಗವೈಕಲ್ಯತೆ ಇರುವ ಮಕ್ಕಳು ಎದುರಿಸುವ ಸಮಸ್ಯೆಯನ್ನು ಶಾಸಕರು ಮತ್ತು ಅಧಿಕಾರಿಗಳಿಗೆ ವಿವರಿಸಿದರು. ಸಿ.ಡಬ್ಲ್ಯೂ.ಸಿ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!