Sunday, September 8, 2024

ಬಗ್ವಾಡಿಯಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹಕ್ಕೆ ಚಾಲನೆ| ಅನ್ನದಾಸೋಹ ನಿಧಿಯಿಂದ ನಿರಂತರ ದಾಸೋಹ ನಡೆಯಲಿ-ಡಾ.ಜಿ.ಶಂಕರ್

ಕುಂದಾಪುರ, ಅ.6: (ಜನಪ್ರತಿನಿಧಿ ವಾರ್ತೆ) ಅನ್ನದಾಸೋಹ ನಡೆಸುವುದರಿಂದ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ವೃದ್ದಿಯಾಗುತ್ತದೆ. ಮೊಗವೀರ ಸಮಾಜದ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನದಾಸೋಹ ಚಿಂತನೆಗಳು ಇವೆ. ಈಗಾಗಲೇ ಉಚ್ಚಿಲದಲ್ಲಿ ನಿತ್ಯ ಅನ್ನದಾಸೋಹ, ಬೆಣ್ಣೆಕುದ್ರುವಿನಲ್ಲಿ ವಾರಕ್ಕೆ ಮೂರು ದಿನ ಅನ್ನಸಂತರ್ಪಣೆ ನಡೆಯುತ್ತಿದೆ. ಬಗ್ವಾಡಿಯಲ್ಲಿ ವಾರದಲ್ಲಿ ಎರಡು ದಿನ ಅನ್ನದಾಸೋಹ ನಡೆಯುವಂತಾಗಲಿ. ಬಗ್ವಾಡಿಯ ಅನ್ನದಾಸೋಹದ ನಿಧಿಯಲ್ಲಿ 70 ಲಕ್ಷ ಸಂಗ್ರಹವಾಗಿದೆ. ಚಿತ್ರಪೂರ್ಣಿಮೆಯ ರಥೋತ್ಸವದ ಒಳಗೆ ಅದು 1 ಕೋಟಿ ತಲುಪಲಿ. ಅದರ ಬಡ್ಡಿ ಹಣದಿಂದಲೇ ಅನ್ನದಾಸೋಹ ಸೇವೆ ನಡೆಯಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್ ಹೇಳಿದರು.

ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಡಾ.ಜಿ.ಶಂಕರ್ ಅವರ 68ನೇ ಜನ್ಮದಿನಾಚರಣೆಯ ಸವಿನೆನಪಿನಲ್ಲಿ ಆರಂಭಿಸಲಾದ ಪ್ರತಿ ಶುಕ್ರವಾರದ ಅನ್ನದಾಸೋಹ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೊಗವೀರ ಸಮುದಾಯ ಇವತ್ತು ಪ್ರಗತಿ ಹೊಂದುತ್ತಿದೆ. ಯುವ ಸಂಘಟನೆಯಿಂದ ಶಾಸಕರಾಗುವ ಮಟ್ಟಕ್ಕೆ ಯುವ ಜನತೆ ಬೆಳೆದಿದ್ದಾರೆ. ನಾಯಕತ್ವ ಬೆಳೆಸಿಕೊಂಡಿದ್ದಾರೆ. ಮೊಗವೀರ ಯುವ ಸಮುದಾಯ ಬಲಿಷ್ಠವಾಗಿ ಬೆಳೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ವಹಿಸಿದ್ದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್, ಮಾತನಾಡಿ, ಡಾ.ಜಿ.ಶಂಕರ್ ಅವರ ಸಮಾಜಸೇವೆ ಇಡೀ ಸಮಾಜಕ್ಕೆ ಪ್ರೇರಣೆಯಾಗಿದೆ. ಇದೇ ರೀತಿ ಅವರ ಸೇವೆ ಮುಂದುವರಿಯಲಿ. ಬಗ್ವಾಡಿಯ ಅನ್ನದಾಸೋಹದ ಚಿಂತನೆಯ ನಿಧಿ ಸಂಗ್ರಹಣೆರಥೋತ್ಸವದ ಒಳಗೆ ನಿರೀಕ್ಷಿತ ಗುರಿ ತಲುಪಲಿ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮಾತನಾಡಿ, ಅತ್ಯುತ್ತಮವಾದ ಕಾರ್ಯವೊಂದಕ್ಕೆ ಬಗ್ವಾಡಿ ಇಂದು ಸಾಕ್ಷಿಯಾಗಿದೆ. ಇವತ್ತು ಮೊಗವೀರ ಸಮಾಜದ ಯುವಜನರು, ಗುರಿಕಾರರನ್ನು ಸಂಘಟಿಸಿ ಬಲಿಷ್ಠ ಸಮಾಜವನ್ನಾಗಿಸುವಲ್ಲಿ ಡಾ. ಜಿ.ಶಂಕರ್ ಅವರದ್ದು ಪ್ರಮುಖವಾದ ಪಾತ್ರವಿದೆ. ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅನ್ನದಾಸೋಹಕ್ಕೆ ಚಾಲನೆ ನೀಡುವುದು ಅರ್ಥಪೂರ್ಣವಾಗಿದೆ ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‍ಪಾಲ್ ಸುವರ್ಣ, ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಮಾಜಿ ಅಧ್ಯಕ್ಷ ರಮೇಶ ಬಂಗೇರ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಬಗ್ವಾಡಿ ಶಾಖೆಯ ನಿಕಟಪೂರ್ವ ಅಧ್ಯಕ್ಷ ಕೆ.ಕೆ ಕಾಂಚನ್, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ,ಕೋಟ್ಯಾನ್, ಉಚ್ಚಿಲ ಕ್ಷೇತ್ರಾಡಳಿತದ ಅಧ್ಯಕ್ಷ ವಾಸುದೇವ ಸಾಲ್ಯಾನ್, ಉಚ್ಚಿಲ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಚಿಕ್ಕಮಗಳೂರು ಮೊಗವೀರ ಸಂಘಟನೆಯ ನಾರಾಯಣ ಬಿ., ರಾಣೆಬೆನ್ನೂರು ಮೊಗವೀರ ಸಂಘಟನೆ ಅಧ್ಯಕ್ಷ ನಿತ್ಯಾನಂದ ಜೆ ಕುಂದಾಪುರ, ದ.ಕ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಸುಧಾಕರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನಾ ಆರ್.ಕುಂದರ್, ಮೊಗವೀರ ಮಹಾಜನ ಸಂಘ ಮುಂಬಯಿ ಸಂಘಟನೆಯ ರಾಜೇಂದ್ರ ಚಂದನ್, ರಾಜು ತಗ್ಗರ್ಸೆ, ಮೊಗವೀರ ಸ್ತ್ರೀಶಕ್ತಿಯ ಅಧ್ಯಕ್ಷ ಶ್ಯಾಮಲ ಜಿ.ಚಂದನ್ ಉಪಸ್ಥಿತರಿದ್ದರು,

ಪ್ರಾಸ್ತಾವಿಕ ಮಾತುಗಳನ್ನಾಡಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಬಗ್ವಾಡಿಯಲ್ಲಿ ಮಧ್ಯಾಹ್ನ ಭಕ್ತರ ಉದರ ತಂಪಾಗಿಸುವ ನಿತ್ಯ ಅನ್ನಸಂತರ್ಪಣೆಗೆ ಯೋಜನೆ ರೂಪಿಸಬೇಕೆಂಬುದು ಭಕ್ತ ಜನರ ಬಹುದಿನದ ಕನಸು. ನಿತ್ಯ ಅನ್ನದಾನ ಕಾರ್ಯಕ್ರಮಕ್ಕೆ ಪೂರಕವಾಗಿ ಶ್ರೀ ಮಹಿಷಾಸುರಮರ್ದಿನಿ ಅನ್ನದಾಸೋಹ ನಿಧಿ ಸ್ಥಾಪಿಸಿ, ಭವಿಷ್ಯದ ನಿರಂತರ ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದಲ್ಲಿ ಹಣ ಕ್ರೋಢೀಕರಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶದಿಂದ ದೊಡ್ಡ ನಿಧಿಯೊಂದನ್ನು ಸಂಗ್ರಹಿಸುವ ಗುರಿ ಇಟ್ಟುಕೊಂಡು ಕಾರ್ಯಪ್ರವೃತ್ತವಾಗಿದೆ. ಅದರಲ್ಲಿ ಯಶಸ್ಸು ಲಭಿಸಿದೆ. ಶ್ರೀ ಕ್ಷೇತ್ರ ಬಗ್ವಾಡಿ ಇದರ ಜೀರ್ಣೋದ್ಧಾರದ ಹರಿಕಾರರಾದ ನಾಡೋಜ ಡಾ.ಜಿ.ಶಂಕರ 68ನೇ ನೆನಪಿನೊಂದಿಗೆ ಮೊದಲ ಹಂತವಾಗಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಪ್ರತೀ ಶುಕ್ರವಾರ ಅನ್ನಸಂತರ್ಪಣೆ ಶಾಶ್ವತವಾಗಿ ನಡೆಯಲಿದೆ. ಮೊಗವೀರ ಸಮಾಜದ ಅಭಿವೃದ್ದಿಯಲ್ಲಿ ಡಾ.ಜಿ.ಶಂಕರ್ ಅವರ ಕೊಡುಗೆ ಅಪಾರವಾದುದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಾ ಮೊಗವೀರ ಸಮಾಜದ ಏಳ್ಗೆಯಲ್ಲಿ ಶ್ರಮಿಸುತ್ತಿದ್ದಾರೆ. ಅವರ 68ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಈ ಮಹತ್ತರವಾದ ಯೋಜನೆ ಲೋಕಾರ್ಪಣೆಗೊಳ್ಳುತ್ತಿದೆ ಎಂದರು.

68ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಡಾ.ಜಿ.ಶಂಕರ್ ಹಾಗೂ ಶ್ಯಾಮಿಲಿ ಜಿ.ಶಂಕರ್‍ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿಯೇ ಅನ್ನಪೂಜೆ ನೆರವೇರಿಸಲಾಯಿತು. ಅನ್ನ ಸೇರಿದಂತೆ ಎಲ್ಲಾ ಭಕ್ಷ್ಯಗಳನ್ನು ಬಡಿಸುವ ಮೂಲಕ ನೈವೇದ್ಯ ಸಮರ್ಪಿಸಲಾಯಿತು.

ಕ್ಷೇತ್ರದ ಪುರೋಹಿತರಾದ ಗಿರೀಶ್ ಭಟ್ ವೇದಘೋಷ ಪಠಿಸಿದರು. ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಸತೀಶ ಎಂ.ನಾಯ್ಕ್ ಸ್ವಾಗತಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ವಂದಿಸಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

ಚಂಡಿಕಾ ಹೋಮ:
68ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಮೊಗವೀರ ಕುಲರತ್ನ ಡಾ.ಜಿ.ಶಂಕರ್ ಅವರ ಶ್ರೇಯಸ್ಸಿಗಾಗಿ ಶ್ರೀದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ನಡೆಯಿತು.

ಸಾಮೂಹಿಕ ಕುಂಕುಮಾರ್ಚನೆ:
ಚಂಡಿಕಾ ಹೋಮದ ಬಳಿಕ 68 ಮಹಿಳೆಯರಿಂದ ಶ್ರೀದೇವಿಗೆ ಏಕಕಾಲದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. 68 ಮಹಿಳೆಯರು ಏಕಕಾಲದಲ್ಲಿ ದೇವಿಗೆ ಕುಂಕುಮರ್ಚನೆ ಮಾಡಿದರು.

ಸಾಮೂಹಿಕ ತುಪ್ಪ ದೀಪಾರ್ಚನೆ:
ಕುಂಕುಮಾರ್ಚನೆ ಸಮಾಪ್ತವಾಗುತ್ತಿದ್ದಂತೆ 68 ಮಂದಿ ಪುರುಷರು ಶ್ರೀ ದೇವಿಗೆ ಏಕಕಾಲದಲ್ಲಿ ತುಪ್ಪ ದೀಪ ಬೆಳಗಿದರು. ಇದು ಇಲ್ಲಿ ಬಹು ಅಪರೂಪದ ಸೇವೆಯಾಗಿದ್ದು ದೀಪ ಬೆಳಗಿಸಿ ದೇವಿಯನ್ನು ಏಕಾಗ್ರಚಿತ್ತದಿಂದ ಪ್ರಾರ್ಥಿಸುವ ದಿವ್ಯಕ್ಷಣಕ್ಕೆ ಡಾ.ಜಿ.ಶಂಕರ್ ದೀಪ ಪ್ರಜ್ವಲನೆ ಮಾಡಿದರು.

ಅನ್ನದಾಸೋಹದ ನಿಧಿ ಸಮರ್ಪಣೆ:
ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶಕ್ಕೆ ಪೂರಕವಾಗಿ ಅನ್ನದಾನದ ನಿಧಿ ಸ್ಥಾಪಿಸಲಾಗಿದ್ದು ಈಗಾಗಲೇ ಹೆಸರು ನೊಂದಾಯಿಸಿಕೊಂಡ ಸೇವಾರ್ಥಿಗಳು ಸಂಕಲ್ಪ ಮಾಡಿ, ಹುಂಡಿಗೆ ನಿಧಿ ಸಮರ್ಪಣೆ ಮಾಡಿದರು.

ಹಿರಿಯ ದಂಪತಿಗಳಿಗೆ ಗೌರವ
ಈ ಸಂದರ್ಭದಲ್ಲಿ ಬಚ್ಚು ಕುಂದರ್ ಮತ್ತು ಕಮಲ ಬಿ.ಕುಂದರ್, ಶ್ರೀನಿವಾಸ ಹದ್ದೂರ್ ಮತ್ತು ರತ್ನಾ ಶಂಕರನಾರಾಯಣ, ನಾರಾಯಣ ನಾಯ್ಕ್ ಮತ್ತು ಮುತ್ತು ಗೋಪಾಡಿ, ಸಂಜೀವ ಶ್ರೀಯಾನ್ ಮತ್ತು ಗಂಗಾ ಕುಂದಾಪುರ, ನಾಗ ಮೊಗವೀರ ಮತ್ತು ಮಂಜಿ ಮೊಗವೀರ ಕಂಬದಕೋಣೆ ದಂಪತಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಖಧ್ಯಕ್ಷ ಎಂ.ಎಂ.ಸುವವರ್ಣ ದಂಪತಿಗಳು ಹಾಗೂ ಮೊಗವೀರ ಸ್ತ್ರೀ ಶಕ್ತಿ ಸ್ಥಾಪಕಧ್ಯಕ್ಷೆ ವಸಂತಿ ಟೀಚರ್ ಅವರನ್ನು ಸನ್ಮಾನಿಸಲಯಿತು.

ಪ್ರತಿಭಾ ಪುರಸ್ಕಾರ
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!