Sunday, September 8, 2024

ಕಾವೇರಿ ನೀರು ಹಂಚಿಕೆ ವಿವಾದ : ಕಾಂಗ್ರೆಸ್‌ಗೆ ರಾಜ್ಯದ ಹಿತಾಸಕ್ತಿಗಿಂತಲೂ I.N.D.I.A ಮೈತ್ರಿಕೂಟದ ಹಿತಾಸಕ್ತಿ ಮುಖ್ಯ : ಬಿಜೆಪಿ ಆರೋಪ

ಜನಪ್ರತಿನಿಧಿ ವಾರ್ತೆ :  ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ವಾದ ವಿವಾದ ತಾರಕಕ್ಕೆ ಏರಿದೆ. ಪ್ರತಿಭಟನೆಯ ಕಾವು ರಾಜ್ಯದೆಲ್ಲೆಡೆ ವ್ಯಾಪಿಸಿದೆ. ಈ ನಡುವೆ ರಾಜ್ಯ ಬಿಜೆಪಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಡಳಿತ ಸರ್ಕಾರ ಕಾಂಗ್ರೆಸ್‌ನ ನಡೆಯ ಬಗ್ಗೆ ಕಿಡಿ ಕಾರಿದೆ.

ಕಾವೇರಿಯನ್ನು ಹರಿಯಲು ಬಿಟ್ಟು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಶ್ರಮಪಡದಿದ್ದರೇ…ಆಗುತ್ತಿತ್ತೇ I.N.D.I.A ಮೈತ್ರಿಕೂಟ, ಸೇರುತ್ತಿತ್ತೇ ಡಿ.ಎಂ.ಕೆ..?? ಸೇರುತ್ತಿತ್ತೇ ಡಿ.ಎಂ.ಕೆ..?! ಎಂದು ಪ್ರಶ್ನೆ ಕೇಳಿ ಕುಟುಕಿದೆ. ಈ ಮೇಲಿನ ಸಾಲುಗಳು ಸದ್ಯ ಸಮಾಜದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿವೆ. ಸದ್ದು ಮಾಡಲು ಪ್ರಮುಖ ಕಾರಣ ಆ ಸಾಲುಗಳಲ್ಲಿರುವ ನಿಜಾಂಶ. ರಾಜ್ಯದ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮೊದಲೇ ಸ್ಟಾಲಿನ್ ನಾಡಿನ ಕಡೆಗೆ ನೀರು ಹರಿಸಿದ್ದು ಯಾಕೆ ಅನ್ನುವ ಸತ್ಯ ಕನ್ನಡಿಗರೆಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಲ್ಲದೆ, ಪೊಂಗಲ್ ಮೀಟಿಂಗ್‌ನಲ್ಲಿ ರಾಜ್ಯದ ಹಿತ ಕಾಯುವ ಬದಲು, ರಾಜ್ಯದ ಹಿತಕ್ಕೆ ಧಕ್ಕೆ ತರುವ ನಿರ್ಧಾರಗಳನ್ನೇ ಮಾಡಿದ್ದಾರೆ. ಹೀಗಾಗಿ ತಮ್ಮ ಚಿನ್ನತಂಬಿ ಸ್ಟಾಲಿನ್ ಅವರಿಗೆ ಉಡುಗೊರೆಯಾಗಿ ರಾಜ್ಯದ ಕಾವೇರಿಯನ್ನು ಬರಿದು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಇನ್ನು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೇವರ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿತ್ತು. ಆದಾಗ್ಯೂ 2012 ರಲ್ಲಿ ಕಾವೇರಿ ವಿವಾದ ತಲೆದೋರಿದ್ದಾಗ ಅಂದಿನ ರಾಜ್ಯ ಬಿಜೆಪಿ ಸರ್ಕಾರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿತ್ತು. ನ್ಯಾಯಾಲಯದಲ್ಲಿ ಸತತವಾಗಿ ಮೇಲ್ಮನವಿಗಳನ್ನು ಸಲ್ಲಿಸುತ್ತಾ ರಾಜ್ಯದ ಹಿತಾಸಕ್ತಿಯನ್ನು ಬಿಜೆಪಿ ಕಾಪಾಡಿತ್ತು. ದರ್ಪ, ಉದ್ದಟತನ ತೋರದೆ, ಬಹಳಷ್ಟು ನೈಪುಣ್ಯತೆಯಿಂದ ‌ಸಮಸ್ಯೆಯನ್ನು ಬಗೆಹರಿಸಿತ್ತೇ ಹೊರತು ಯಾರ ಮೇಲೆಯೂ ಗೂಬೆ ಕೂರಿಸುವಂತಹ ಚಿಲ್ಲರೆ ರಾಜಕಾರಣ ಮಾಡಲಿಲ್ಲ ಎಂದು ಹೇಳಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಟ್ವೀಟ್‌ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ಆ ಸಮಯದಲ್ಲಿ ಕೇಂದ್ರದಲ್ಲಿದ್ದ ಯು.ಪಿ.ಎ ಸರ್ಕಾರ ಎಷ್ಟು ಬಾರಿ ಮಧ್ಯಪ್ರವೇಶಿಸಿತ್ತು ಎಂಬುದನ್ನು ಸನ್ಮಾನ್ಯ ಸಿದ್ದರಾಮಯ್ಯನವರೇ ತಿಳಿಸಬೇಕು. ಕರ್ನಾಟಕ ಕಾಂಗ್ರೆಸ್‌ ಗೆ ನಿಜಕ್ಕೂ ರಾಜ್ಯದ ಹಿತ ಕಾಪಾಡುವ ಮಹತ್ವಾಕಾಂಕ್ಷೆಯಿದ್ದರೆ ತಮಿಳುನಾಡು ಸರ್ಕಾರದ ಜೊತೆ ಮಾತನಾಡಿ ಕಾವೇರಿ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದೆ.

ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಹಿತಾಸಕ್ತಿಗಿಂತಲೂ ಹೆಚ್ಚಾಗಿ ತಮ್ಮ ಸ್ವಾರ್ಥದ I.N.D.I.A ಮೈತ್ರಿಕೂಟದ ಹಿತಾಸಕ್ತಿ ಮುಖ್ಯವಾಗಿದೆ. ಹೀಗಾಗಿ ರಾಜ್ಯದ ಜನತೆ ಕಣ್ಣೀರು ಹಾಕಿದರೂ ಸರಿಯೇ, ಸ್ಟಾಲಿನ್ ಅವರು ಮಾತ್ರ ಸದಾ ಸಂತಸದಲ್ಲಿರಬೇಕು ಎಂಬ ಕಾರಣಕ್ಕೆ ಕಾವೇರಿ ನೀರನ್ನು ಮನಸ್ಸಿಗೆ ಬಂದಂತೆ ಸ್ಟಾಲಿನ್‌ ನಾಡಿಗೆ ಹರಿಬಿಡಲಾಗುತ್ತಿದೆ ಎಂದು ಆರೋಪಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!