Sunday, September 8, 2024

ಕಾವೇರಿ ನದಿ ನೀರು ಹಂಚಿಕೆ ವಿವಾದ : ಉಭಯ ರಾಜ್ಯಗಳ ಈ ಹಿಂದಿನ ಒಪ್ಪಂದಗಳ ಬಗ್ಗೆ ಇಲ್ಲಿದೆ ಮಾಹಿತಿ

-ಶ್ರೀರಾಜ್‌ ವಕ್ವಾಡಿ

ಕಾವೇರಿ ನದಿ ನೀರು ಹಂಚಿಕೆಯ ವಿಚಾರ ರಾಜ್ಯದ ದುರಂತಗಳಲ್ಲಿ ಒಂದು. ಇದು ನಿನ್ನೆ ಮೊನ್ನೆಯ ವಿಚಾರವಲ್ಲ. ಈ ಸಂಬಂಧ ತಮಿಳುನಾಡು ಸರ್ಕಾರ ಮೊದಲಿನಿಂದಲೂ ತಕರಾರು ಎತ್ತುತ್ತಲೇ ಬಂದಿದೆ. ತಮಿಳುನಾಡು ಸರ್ಕಾರ ಇದನ್ನು ತನ್ನ ಹಕ್ಕು ಎಂದು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಇತ್ತ ರಾಜ್ಯ ಸರ್ಕಾರವೂ ಕೂಡ ಕೋರ್ಟ್‌ ಆದೇಶಿಸಿದಂತೆ, ಕಾವೇರಿ ನದಿ ನೀರು ಮೇಲ್ವಿಚಾರಣಾ ಪ್ರಾಧಿಕಾರ ಸೂಚಿಸಿದಂತೆ ತಮಿಳುನಾಡಿಗೆ ನೀರು ಹರಿಸುತ್ತಲೇ ಬಂದಿದೆ.

 ತಮಿಳುನಾಡಿನ ಪಾಲಿನ ನೀರನ್ನು ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾದಾಗ ಬಿಡುತ್ತಲೇ ಬಂದಿದೆ. ಆದರೆ, ಮಳೆ ಕೊರತೆಯಾದಾಗ ಏನು ಮಾಡಬೇಕು ಎನ್ನುವ ಸಂಕಷ್ಟಕ್ಕೆ ಇಲ್ಲಿ ದಾರಿಯೆ ಇಲ್ಲ. ಇಲ್ಲಿ ಕಷ್ಟ ಪಡುವುದು ಮಾತ್ರ ರೈತರು ಮತ್ತು ಈ ಭಾಗದ ಜನರು. ಈ ಬಾರಿ ಈ ವಿವಾದ ತಾರಕಕ್ಕೆ ಏರುವುದಕ್ಕೆ ಕಾರಣ, ಬರಗಾಲ. ಬರಗಾಲದ ಸಂಕಷ್ಟದಲ್ಲೂ, ಮಳೆಯ ಕೊರತೆಯಿರುವಾಗಲೂ ತಮಿಳುನಾಡು ಬೇಡುವಷ್ಟು ಪೂರೈಸುವುದಕ್ಕೆ ಇಲ್ಲಿ ನೀರಿಲ್ಲ. ಕೋರ್ಟ್‌ ಆದೇಶ ಮತ್ತು ಪ್ರಾಧಿಕಾರವನ್ನು ಮೀರಿ ನಡೆಯುವುದಕ್ಕೂ ರಾಜ್ಯ ಸರ್ಕಾರಕ್ಕೆ ಸಾದ್ಯವಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಬೇಕಾಗಿ ಎಷ್ಟು ನೀರು ಹಂಚಿಕೊಳ್ಳಬೇಕು, ತಮಿಳುನಾಡಿಗೆ ಎಷ್ಟು ನೀರು ಪೂರೈಸಬೇಕು ಎಂಬುವುದರ ಬಗ್ಗೆ ಇಲ್ಲಿ ಒಂದು ಲೆಕ್ಕಚಾರವೇ ಇಲ್ಲ. ಇದೇ ಇವತ್ತಿನ ಕಾವೇರಿ ವಿವಾದಕ್ಕೆ ಮೂಲ ಕಾರಣ.   

 1892ರಲ್ಲಿ ಮತ್ತು 1924ರಲ್ಲಿ ಕಾವೇರಿ ನೀರು ಹಂಚಿಕೆ ಸಂಬಂಧ ಮದ್ರಾಸ್‌ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಒ‍ಪ್ಪಂದಗಳು ಆಗಿದ್ದವು. ಆ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನದ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ವಾಡಿಕೆಗಿಂತ ಹೆಚ್ಚು ಮಳೆಯಾದರೆ, ನೀರು ಬಿಡಲು ಅಡ್ಡಿಯಿರಲಿಲ್ಲ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾಗಿ, ನೀರಿನ ಕೊರತೆ ಉಂಟಾದರೆ ಹಂಚಿಕೆ ಸಮಸ್ಯೆ ಇದ್ದೇ ಇತ್ತು. ಈ ಸಮಸ್ಯೆ ಇಂದಿಗೂ ಮುಂದುವರಿದಿದೆ. ದಶಕಗಳ ನ್ಯಾಯ ಹೋರಾಟ ಮತ್ತು ಸುಪ್ರೀಂ ಕೋರ್ಟ್‌ನಲ್ಲಿನ ಹೋರಾಟದ ನಂತರ ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಬೇಕು ಎನ್ನುವುದನ್ನು ನಿರ್ಧರಿಸಲಾಯಿತು. ಆದರೇ, ವಾಡಿಕೆಗಿಂತ ಮಳೆ ಕಡಿಮೆ ಆದರೇ ಎಷ್ಟು ನೀರು ಹಂಚಿಕೆಯಾಗಬೇಕು, ರಾಜ್ಯ ಎಷ್ಟು ನೀರು ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಯಾವ ಲೆಕ್ಕಚಾರವೂ ಇಲ್ಲ. ಇದೇ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನೀರು ಹಂಚಿಕೆಯ ವಿಚಾರದ ವಿವಾದನ್ನು ಇಂದಿಗೂ ಜೀವಂತವಾಗಿ ಇರಿಸಿದೆ.

2018ರಲ್ಲಿ ಸುಪ್ರೀಂ ಕೋರ್ಟ್‌  ಕಾವೇರಿ ಜಲವಿವಾದ ನ್ಯಾಯಮಂಡಳಿಯ ತೀರ್ಪನ್ನು ಮಾರ್ಪಡಿಸಿ ತೀರ್ಪು ನೀಡಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾದರೆ ವಾರ್ಷಿಕ 740 ಟಿಎಂಸಿಯಷ್ಟು ನೀರು ಲಭ್ಯವಾಗುತ್ತದೆ ಎಂಬುದನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಒಪ್ಪಿಕೊಂಡಿದ್ದವು. ವಾಡಿಕೆಯಂತೆ ಮಳೆಯಾದರೇ ಕಾವೇರಿ ಜಲಾನಯನದಲ್ಲಿ ಸಂಗ್ರಹವಾದ 740 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 284.75 ಟಿಎಂಸಿ, ತಮಿಳುನಾಡಿಗೆ 404.25 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿಯಷ್ಟು ನೀರನ್ನು ಹಂಚಿಕೆ ಮಾಡಬೇಕು ಎಂಬುವುದನ್ನು ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ತೀರ್ಪನ್ನು ಎಲ್ಲಾ ರಾಜ್ಯಗಳು ಒಪ್ಪಿಕೊಂಡಿದ್ದವು ಕೂಡ.

ಇದರ ಪ್ರಕಾರ ತಮಿಳುನಾಡಿನಲ್ಲಿ 227 ಟಿಎಂಸಿಯಷ್ಟು ನೀರು ಇದೆ. ಇನ್ನು ಉಳಿದ 177.25 ಟಿಎಂಸಿಯಷ್ಟು ನೀರನ್ನು ಕರ್ನಾಟಕವು ಪ್ರತೀ ವರ್ಷ ತಮಿಳುನಾಡಿಗೆ ಬಿಡಬೇಕು ಎಂಬುದನ್ನು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ. 2018ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ನಂತರ, ರಾಜ್ಯದಲ್ಲಿ ಪ್ರತೀ ವರ್ಷವೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹಾಗಾಗಿ ಅಷ್ಟೂ ವರ್ಷ 177.25 ಟಿಎಂಸಿಗಿಂತ ಹೆಚ್ಚು ನೀರನ್ನು ಕರ್ನಾಟಕವು ತಮಿಳುನಾಡಿಗೆ ಪೂರೈಸುತ್ತಲೆ ಬಂದಿದೆ. ದುರಾಷ್ಟ್ರಷ್ಟವಶಾತ್‌ ಈ ವರ್ಷ ವಾಡಿಕೆಗಿಂತ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಇಳಿಮುಖ ಕಂಡಿದೆ. ಒಳಹರಿವೂ ನಿಂತಿದೆ. ಈ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಬಿಡಬೇಕಿದೆ. ಪ್ರಾಧಿಕಾರದ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಬೇಕಿದೆ. ಸುಪ್ರೀಂ ಕೋರ್ಟ್‌ ಪ್ರಾಧಿಕಾರದ ನಿರ್ದೇಶನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಅಂದಿದ್ದು ರಾಜ್ಯವನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.

ನ್ಯಾಯಮಂಡಳಿಯು ನೀರು ಹಂಚಿಕೆ ಮತ್ತು ನೀರು ಬಿಡುವ ಕಾರ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಕಾವೇರಿ ನೀರು ಮೇಲ್ವಿಚಾರಣಾ ಪ್ರಾಧಿಕಾರವನ್ನು ರಚಿಸಿದೆ. ಮಳೆ ಕೊರತೆಯಾಗಿ ನೀರಿನ ಲಭ್ಯತೆ ಕಡಿಮೆಯಾದರೆ, ಏನು ಮಾಡಬೇಕು ಎಂಬುದನ್ನು ಪ್ರಾಧಿಕಾರ ನಿರ್ಧರಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ. ಹಾಗಾಗಿ ಇದು ಪ್ರಾಧಿಕಾರದ ವಿವೇಚನೆಗೆ ಬಿಟ್ಟ ವಿಚಾರ. ಮಳೆ ಕಡಿಮೆಯಾದಾಗಲೂ ತಮ್ಮ ಪಾಲಿನ ನೀರನ್ನು ಬಿಡಿ ಎಂದು ತಮಿಳುನಾಡು ಪಟ್ಟು ಹಿಡಿಯುತ್ತದೆ. ಪ್ರಾಧಿಕಾರದ ನಿರ್ದೇಶನದಂತೆ ಆಡಳಿತ ಸರ್ಕಾರ ನೀರು ಬಿಡುತ್ತದೆ. ಆಗ ಕರ್ನಾಟಕಕ್ಕೆ ನೀರಿನ ಕೊರತೆಯಾಗುತ್ತದೆ. ರಾಜ್ಯದಲ್ಲಿನ ಬೆಳೆಗಳಿಗೆ, ನೀರು ಇಲ್ಲದಂತಾಗುತ್ತದೆ. ಕಡೆಗೆ ಕುಡಿಯುವ ನೀರಿಗೆ ಕೊರತೆಯಾಗುವ ಅಪಾಯವೂ ಎದುರಾಗುತ್ತದೆ.

ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಆಡಳಿತದಲ್ಲಿರುವ ಸರ್ಕಾರದ ವಿರುದ್ಧ ಪ್ರತಿಭಟನೆಯ ಕಾವು ಏರುವುದು ಸಹಜ. ಈ ಹಿಂದಿನಿಂದ ಈವರೆಗೆ ಈ ಕಾವೇರಿ ವಿಚಾರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಇದಕ್ಕೊಂದು ತಾರ್ಕಿಕ ಅಂತ್ಯ ತಂದುಕೊಡುವ ಪ್ರಯತ್ನ ಮಾಡಿಲ್ಲ ಎನ್ನುವುದದಂತೂ ಸತ್ಯ. ಅದಕ್ಕಾಗಿಯೇ ರೈತರು ಆಡಳಿತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತವೆ. ವಿರೋಧ ಪಕ್ಷಗಳು ಸಹಜವಾಗಿ ಇದನ್ನು ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತವೆ. ಈಗ ವಿರೋಧ ಸ್ಥಾನದಲ್ಲಿದ್ದು ಆಡಳಿತ ಪಕ್ಷದ ವಿರುದ್ಧ ನಡೆಯುವ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಈಗ ಆಡಳಿತ ಪಕ್ಷ ಪ್ರಾಧಿಕಾರದ ನಿರ್ದೇಶನ ಮತ್ತು ಕೋರ್ಟ್‌ನ ಆದೇಶದಂತೆ ಏನು ಮಾಡಿದಿಯೋ ಅದನ್ನೆ ಮಾಡಿವೆ ಎಂಬುವುದನ್ನು ಇಲ್ಲಿ ಮರೆಯುವಂತಿಲ್ಲ. ಒಟ್ಟಿನಲ್ಲಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿರುವ ವಿವಾದಕ್ಕೆ ಒಂದು ಅಂತ್ಯ ಸಿಗಲೇಬೇಕಿದೆ. ಪ್ರತಿಭಟನೆಗಳು, ಹೋರಾಟಗಳು ಯಾರನ್ನೋ ನಿಂದಿಸುವುದರಲ್ಲೇ ಮುಗಿದು ಹೋಗುತ್ತವೆ. ಇಂತಹ ಸಂಕಷ್ಟಕ್ಕೆ ಒಂದು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದರ ಜೊತೆಗೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಾತ್ಮಕವಾಗಿ ಹೋರಾಡಿ ಈ ವಿವಾದಕ್ಕೆ ಅಂತ್ಯ ಕಾಣಿಸಿಕೊಡಬೇಕಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!