Sunday, September 8, 2024

ದಶಮ ಸಂಭ್ರಮದ ಸಾರ್ಥಕ್ಯ ಮೆರೆದ ಕುಂದಾಪುರ ತಾಲೂಕು ಯುವ ಬಂಟರ ಸಂಘ: ಹತ್ತು ವರ್ಷಗಳ ಅವಧಿಯಲ್ಲಿ 5000 ಕುಟುಂಬಗಳಿಗೆ 2 ಕೋಟಿ ರೂ. ಆರ್ಥಿಕ ನೆರವು


ಕುಂದಾಪುರ, (ಜನಪ್ರತಿನಿಧಿ ವಾರ್ತೆ): ಕುಂದಾಪುರ ತಾಲೂಕಿನಲ್ಲಿ ಬಂಟ ಸಮುದಾಯದ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಸಮುದಾಯ ಬಾಂಧವರಿಗೆ ಅನುಕೂಲವಾಗುವಂತೆ ಒಂದಿಷ್ಟು ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘವು 2013ರ ಎಪ್ರಿಲ್ 15 ರಂದು ಸ್ಥಾಪನೆಗೊಂಡಿತು. ಬಂಟ ಸಮುದಾಯದ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಮಹತ್ವದ ಕಳಕಳಿಯೊಂದಿಗೆ ಅವಕಾಶಗಳಿಂದ ವಂಚಿತರಾದ ಮತ್ತು ಸಮುದಾಯದ ಹಿಂದುಳಿದ ಜನರನ್ನು ಪ್ರಧಾನವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘವು ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ.

ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸಾರಥ್ಯ; ಸಂಘ ಸ್ಥಾಪನೆಗೊಂಡ ಮೊದಲ ಅವಧಿಯಲ್ಲಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಮುಂದೆ, ಸುಕೇಶ್ ಶೆಟ್ಟಿ ಹೊಸ್ಮಠ, ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಸುನಿಲ್ ಶೆಟ್ಟಿ ಹೇರಿಕುದ್ರು ಇವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ದಶಮ ಸಂಭ್ರಮದ ಅಧ್ಯಕ್ಷರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿಯವರು ಪುನರಾಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ 16 ಮಂದಿ ಪದಾಧಿಕಾರಿಗಳು ಮತ್ತು 32 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ತಂಡವಿದೆ. ಅಭಿನಂದನ್ ಶೆಟ್ಟಿ, ಉದ್ಯಮಿ, ಹೊಟೆಲ್ ಹರಿಪ್ರಸಾದ್, ಕುಂದಾಪುರ, ಡಾ. ರಂಜನ್ ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರ ಇವರು ಸಂಘದ ಗೌರವಾಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ದಶಮ ಸಂಭ್ರಮದ ಗೌರವಾಧ್ಯಕ್ಷರಾಗಿ ಯುವ ಮೇರಿಡಿಯನ್ ಸಮೂಹ ಉದ್ಯಮ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಬೈಲೂರು ಉದಯ್ ಕುಮಾರ್ ಶೆಟ್ಟಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ದಶಮ ಸಂಭ್ರಮ: 2022-23ನೇ ವರ್ಷಪೂರ್ತಿ ಹಲವು ಸಮಾಜಪರ ಚಟುವಟಿಕೆಗಳೊಂದಿಗೆ ‘ದಶಮ ಸಂಭ್ರಮ’ ವನ್ನಾಗಿ ಆಚರಿಸಲಾಗುತ್ತಿದೆ. ಈ ‘ದಶಮ ಸಂಭ್ರಮ’ ವನ್ನು ಕೇವಲ ಮನರಂಜನೆಯ ಹಾಗೂ ವಿಜೃಂಭಿತ ಕಾರ್ಯಕ್ರಮಗಳ ಆಯೋಜನೆಗೆ ಮಾತ್ರ ಮಿತಗೊಳಿಸದೆ ಸದಾ ಕಾಲ ನೆನಪಾಗಿ ಉಳಿಯಬಹುದಾದ ಹಲವು ಸಾಮಾಜಿಕ ಉಪಯುಕ್ತ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಂಡು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ದಶಮ ಸಂಭ್ರಮದ ಎಲ್ಲಾ ಕ್ರಿಯಾಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮತ್ತು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ತಲುಪುವ ಹಂತದಲ್ಲಿ 9 ಮಂದಿ ಗೌರವ ಮಹಾಪೋಷಕರು, 3 ಮಂದಿ ಮಹಾಪೋಷಕರು, 42 ಮಂದಿ ಪೋಷಕರನ್ನೂ ಒಳಗೊಂಡಂತೆ 16 ಮಂದಿ ಆರಂಭಿಕ ದತ್ತಿನಿಧಿ ಮಹಾಪೋಷಕರ ಹಾಗೂ ನೂರಾರು ಮಂದಿ ದಾನಿಗಳ ಕೊಡುಗೆ ನಿರ್ಣಾಯಕವಾದುದು.

ಎರಡು ಕೋಟಿ ರೂಪಾಯಿ ಆರ್ಥಿಕ ನೆರವು: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಂಘದ ವತಿಯಿಂದ ರೂಪಿಸಲಾದ ವಿವಿಧ ಯೋಜನೆಗಳಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 5000 ಕುಟುಂಬಗಳಿಗೆ ಒಟ್ಟು ಎರಡು ಕೋಟಿ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು, ವಿಕಲಚೇತನ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ವಿವಾಹ ನಿಗದಿಯಾದ ಯುವತಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಸರ್ಕಾರದ ಅಕ್ಷರ ದಾಸೋಹ ಯೋಜನೆಯ ಸಹಾಯಕಿಯರು, ವಸತಿ ಇಲ್ಲದವರು ಮೊದಲಾದವರನ್ನು ಒಳಗೊಂಡಂತೆ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ಕುಟುಂಬಗಳು ವಿವಿಧ ಯೋಜನೆಗಳ ಪ್ರಯೋಜನ ಪಡೆದಿವೆ. ಮುಖ್ಯವಾಗಿ ದಶಮ ಸಂಭ್ರಮ ವರ್ಷದಲ್ಲಿ ಒಟ್ಟು 2000 ಕುಟುಂಬಗಳಿಗೆ ರೂ. 1.25 ಕೋಟಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
ಸಂಘದ ಪ್ರಮುಖ ಕಾರ್ಯಚಟುವಟಿಕೆಗಳ ವಿವರ :

  1. ಆಸರೆ: ತಂದೆ ಅಥವಾ ತಾಯಿಯನ್ನು, ಇಲ್ಲವೇ ಇಬ್ಬರನ್ನೂ ಕಳೆದುಕೊಂಡ ಬಂಟ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆತ್ಮಸ್ಥೈರ್ಯ ತುಂಬುವ ಮತ್ತು ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡುವ ಯೋಜನೆ.
  2. ವಿದ್ಯಾರ್ಥಿ ವೇತನ: ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಪದವಿಪೂರ್ವ, ಪದವಿ ಮತ್ತು ವೃತ್ತಿಪರ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಪ್ರೋತ್ಸಾಹ ಧನ ನೀಡುವ ಯೋಜನೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಹಾಗೂ ಹೆತ್ತವರ ವಾರ್ಷಿಕ ಆದಾಯ ರೂ. 1,00,000-00 ಮಿತಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
  3. ವಿದ್ಯಾ ದೀವಿಗೆ: ಉನ್ನತ ಶಿಕ್ಷಣವನ್ನು ಪಡೆಯುವ ಸಾಮಥ್ರ್ಯ ಪ್ರತಿಬೆ ಮತ್ತು ಹಂಬಲಗಳು ಇರುವ ನಡುವೆಯೂ ಆರ್ಥಿಕ ಅಡೆತಡೆಗಳಿಂದ ವ್ಯಾಸಂಗವನ್ನು ಮುಂದುವರಿಸಲು ಕಷ್ಟಸಾಧ್ಯವಾದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಯೋಜನೆ.
  4. ನವಚೇತನ: ಬಂಟ ಸಮುದಾಯದ ವಿಕಲಚೇತನ ವಿದ್ಯಾರ್ಥಿಗಳಿಗೆ ಮನೋಬಲ ತುಂಬುವ ಹಾಗೂ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ರೂಪಿಸಿರುವ ಯೋಜನೆ.
  5. ಪ್ರತಿಭಾ ಪುರಸ್ಕಾರ: ಈ ಯೋಜನೆಯ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳ ಯುವ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 95%ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಸಿಇಟಿ, ಸಿಪಿಟಿ, ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು, ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆಗೈದ ಅಭ್ಯರ್ಥಿಗಳು, ಸಾಹಿತ್ಯ, ಲಲಿತಕಲೆ, ಕ್ರೀಡೆ ಮೊದಲಾದ ರಂಗಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಅಥವಾ ಬಹುಮಾನ ಪಡೆದ ಸಾಧಕರು-ಮೊದಲಾದವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
  6. ಮಾತೃಸಂಜೀವಿನಿ: ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಬಂಟ ಸಮುದಾಯವನ್ನು ಪ್ರತಿನಿಧಿಸುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಕ್ಷರ ದಾಸೋಹ ಯೋಜನೆಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆ.
  7. ಆರೋಗ್ಯ ಭಾಗ್ಯ: ತೀವೃ ಸ್ವರೂಪದ ಆರೋಗ್ಯ ಸಂಬಂಧಿ ಸಮಸ್ಯಗಳಿಂದ ಬಳಲುತ್ತಿರುವ ವ್ಯಕ್ತಿ ಯಾ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ.
  8. ಮಾಂಗಲ್ಯ ಸೂತ್ರ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬದ ಯುವತಿಯರ ವಿವಾಹಕ್ಕೆ ಸಹಾಯಹಸ್ತ ಚಾಚುವ ಯೋಜನೆ. ಮುಖ್ಯವಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಯುವತಿಯರ ವಿವಾಹ ನಿರ್ವಹಣೆಯ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಗಮನಹರಿಸುವ ಗುರಿ ಹೊಂದಲಾಗಿದೆ.
  9. ಗೃಹಚೇತನ: ಈ ಯೋಜನೆಯಡಿ ಸಮುದಾಯದ ಹಿಂದುಳಿದ ಹಾಗೂ ಬಡ ಕುಟುಂಬಗಳಿಗೆ ವಾಸ್ತವ್ಯದ ನೆಲೆ ಕಲ್ಪಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ. ಎಲ್ಲಿಯೂ ಸರಿಯಾದ ನೆಲೆ ಇಲ್ಲದೆ ಮನೆ ನಿರ್ಮಾಣದ ಕನಸು ಹೊಂದಿ ತೀವ್ರವಾದ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಈ ಯೋಜನೆಯ ವ್ಯಾಪ್ತಿಯಲ್ಲಿ ನೆರವು ನೀಡಲಾಗಿದೆ.
  10. ರಕ್ತದಾನ-ಮಹಾದಾನ: ಸಮುದಾಯದ ಯುವಕರಲ್ಲಿ ರಕ್ತದಾನದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ.
  11. ಹಸಿರು ಹೊನ್ನು: ಇದು ಪರಿಸರ ಕಾಳಜಿಯ ಭಾಗವಾಗಿ ಹಮ್ಮಿಕೊಂಡಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ 1000 ವಿವಿಧ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಗಿದೆ.
  12. ಬಂಟರ ಕ್ರೀಡೋತ್ಸವ: ಬಂಟ ಸಮುದಾಯದ ಎಲ್ಲಾ ವಯೋಮಾನದ ವ್ಯಕ್ತಿಗಳಲ್ಲಿ ಕ್ರೀಡಾಸ್ಪೂರ್ತಿಯನ್ನು ಉತ್ತೇಜಿಸುವ ಕಾರ್ಯಕ್ರಮವಿದು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 5 ಬಾರಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.
  13. ವಿದ್ಯಾರತ್ನ: ಶೈಕ್ಷಣಿಕ ರಂಗದಲ್ಲಿ ಅಪ್ರತಿಮ ಸೇವೆಗೈದ ಹಾಗೂ ವಿಶಿಷ್ಟ ಸಾಧನೆ ಮಾಡಿದ 10 ಮಂದಿ ಶಿಕ್ಷಕರು/ ಉಪನ್ಯಾಸಕರುಗಳಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  14. ಹೊಂಗಿರಣ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಹಾಗೂ ಸಮಾಜಪರವಾಗಿ ದುಡಿದ 10 ಮಂದಿ ಮಹಿಳಾ ಸಾಧಕಿಯರಿಗೆ ಹೊಂಗಿರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  15. ದಶಮ ಸಂಭ್ರಮ ಪ್ರಶಸ್ತಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದ ಹಾಗೂ ವಿಶಿಷ್ಟ ಕೊಡುಗೆ ನೀಡಿದ ಹಿರಿಯರಿಗೆ ‘ದಶಮ ಸಂಭ್ರಮ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮುಖ್ಯವಾಗಿ ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಆಡಳಿತ, ಉದ್ಯಮ, ಕೃಷಿ, ಪರಿಸರ, ಸ್ವ ಉದ್ಯೋಗ, ನ್ಯಾಯಾಂಗ ಇತ್ಯಾದಿ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ ಒಟ್ಟು 20 ಮಂದಿ ಬಂಟ ಸಮುದಾಯದ ಹಿರಿಯ ಸಾಧಕರನ್ನು ಎರಡು ವರ್ಷಗಳ ಅವಧಿಯಲ್ಲಿ ಈ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.
  16. ಹೀಗೆ ಒಂದೆಡೆಯಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಪರಿಸರ ಕಾಳಜಿಯ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ, ಆ ಮೂಲಕ ಯುವ ತಲೆಮಾರಿನ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಹಾಗೂ ಇನ್ನೊಂದೆಡೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಅಂಚಿನಲ್ಲಿರುವವರಿಗೆ ನೆರವಾಗುವ ಮತ್ತು ಮನೋಬಲ ತುಂಬುವ ನಿಟ್ಟಿನಲ್ಲಿ ಸಂಘವು ಅವಿರತವಾಗಿ ಶ್ರಮಿಸುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!