Sunday, September 8, 2024

‘ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡದಿರುವ ವ್ಯವಸ್ಥೆಯ ಅಡಿಯಲ್ಲಿ ನಾವಿದ್ದೇವೆ’
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮೇಲೆ ವಂಚನೆ ಆರೋಪ | ರೈತ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಆಕ್ರೋಶ


ಬ್ರಹ್ಮಾವರ: ಸಕ್ಕರೆ ಕಾರ್ಖಾನೆಯ ಅವ್ಯವಸ್ಥೆಗಳ ವಾಸ್ತವಾಂಶವನ್ನು ಬಯಲಿಗೆಳೆಯುವುದು ಅಷ್ಟೆ ಅಲ್ಲ. ನಡೆದ ಅಷ್ಟು ಭ್ರಷ್ಟಾಚಾರಕ್ಕೆ ನ್ಯಾಯ ಒದಗಿಸಿಕೊಡುವುದೇ ನಮ್ಮ ಉದ್ದೇಶ. ಆರ್.ಟಿ.ಸಿ ಯಲ್ಲಿ ಋಣಭಾರ ಮುಕ್ತಿ ಮಾಡಿ ಸಕ್ಕರೆ ಕಾರ್ಖಾನೆಯನ್ನೇ ಮಾರುವ ಪ್ರಯತ್ನ ಕಾರ್ಖಾನೆಯ ಆಡಳಿತ ಮಂಡಳಿ ಮಾಡಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

ಬ್ರಹ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘ (ರಿ.) ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ (ನಿ.) 14ಕೋಟಿಗೂ ಮಿಕ್ಕಿ ಹಣವನ್ನು ವಂಚನೆ ಮಾಡಿರುವ ಕುರಿತು ಹೋರಾಟ- ಸಮಾಲೋಚನೆ ಸಭೆ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆಯನ್ನು ಪರಾಧೀನ ಆಗುವುದಕ್ಕೆ ಯಾವುದೇ ಕಾರಣಕ್ಕೂ ರೈತ ಸಂಘ ಬಿಡುವುದಿಲ್ಲ. ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಶಾಸನಬದ್ಧವಾಗಿ, ಕಾನೂನಾತ್ಮಕವಾಗಿ ಬಯಲಿಗೆಳೆಯುವುದು ಮತ್ತು ರೈತರಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸುವುದೇ ನಮ್ಮ ಪ್ರಯತ್ನ. ಒಂದು ಸಹಕಾರಿ ವ್ಯವಸ್ಥೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡದಿರುವ ವ್ಯವಸ್ಥೆಯ ಅಡಿಯಲ್ಲಿ ನಾವಿದ್ದೇವೆ ಎನ್ನುವ ಅರಿವನ್ನು ರೈತರಿಗೆ ತಲುಪಿಸುವುದರ ಜೊತೆಗೆ ಈ ಬಗ್ಗೆ ಹೋರಾಟ ಮಾಡುವಂತಾಗಿ ಸಕ್ಕರೆ ಕಾರ್ಖಾನೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಕಾರ್ಖಾನೆಯ ಗುಜರಿಗಳನ್ನು ಗುತ್ತಿಗೆದಾರರೊಂದಿಗೆ ಶಾಮೀಲು ಮಾಡಿಕೊಂಡು ಸುಮಾರು 14ಕೋಟಿಗೂ ಮಿಕ್ಕಿ ವಂಚನೆ ಮಾಡಿದ್ದಾರೆ. ಕಾರ್ಖಾನೆಯ ಎಲ್ಲಾ ಸ್ತರಗಳಲ್ಲಿ ವಂಚನೆ ನಡೆದಿದೆ. ಇದರಲ್ಲಿ ಜಿಲ್ಲಾ ಮಟ್ಟದಿಂದ ಹಿಡಿದು ರಾಜ್ಯಾಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ಆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ಮಾಡಿ ಇದರಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಡಿ.ಆರ್ ಸರ್ಕಾರಕ್ಕೆ ತಲುಪಿಸುವ ವರದಿಯಲ್ಲೂ ಸುಳ್ಳು ವರದಿಯನ್ನು ತಲುಪಿಸಿದ್ದಾರೆ. ಈ ಕುರಿತಾಗಿ ಕಾನೂನು ಹೋರಾಟ ಮಾಡುವುದು ರೈತ ಸಂಘದ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.

ರೈತ ಸಂಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಮಾತನಾಡಿ, ಕಾರ್ಖಾನೆಯ ಆವರಣದಲ್ಲಿದ್ದ ಮರಗಳ ಮಾರಾಟ ಪ್ರಯತ್ನಕ್ಕೆ ತಾಂತ್ರಿಕ ಸಮಸ್ಯೆ ಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಾರ್ಖಾನೆಯ ಗುಜರಿ ಮಾರಾಟ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತ್ತು. ಪ್ರಾರಂಭದಲ್ಲಿ ಶಾಸನಬದ್ಧವಾಗಿ ಇ-ಪ್ರಾಕ್ಯುರ್‍ಮೆಂಟ್ ಟೆಂಡರ್ ಮುಖೇನ ಮಾಡಬೇಕಾಗಿತ್ತು. ಅಥವಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಸೆಂಟ್ರಲ್ ಸ್ಕ್ರಾಪ್ ಬೋರ್ಡ್ ಮುಖಾಂತರ ವಿಲೇವಾರಿ ಮಾಡಬೇಕಾಗಿತ್ತು. ಆದರೆ ಈ ಆಡಳಿತ ಮಂಡಳಿ ಕಾನೂನುಗಳನ್ನು ಗಾಳಿಗೆ ತೂರಿ ಸ್ವೇಚ್ಚಾಚಾರವಾಗಿ ಸಂಬಂಧಪಟ್ಟ ಇಲಾಖೆಯ ಅನುಮೋಧನೆ ಪಡೆಯದೇ ನಾಲ್ವರ ತಾಂತ್ರಿಕ ಸಮಿತಿ ರಚಿಸಿಕೊಂಡು ಅವರಿಗೆ ಬೇಕಾದಂತೆ ಟೆಂಡರ್‍ನಲ್ಲಿ ಅತಿ ಹೆಚ್ಚು ಬಿಡ್ಡಿನ ದರ ನಮೂದಿಸಿ ನ್ಯೂ ರಾಯಲ್ ಟ್ರೇಡರ್ಸ್ ಚನ್ನೈ ಅವರಿಗೆ ಅನುಕೂಲವಾಗುವಂತೆ ನೀಡಿರುವುದು ಆಡಳಿತ ಮಂಡಳಿಯ ಸಭಾ ನಡಾವಳಿ ನೋಡಿದಾಗ ಅರಿವಾಗುತ್ತದೆ.

ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮಾಹಿತಿ ಹಕ್ಕಿನಲ್ಲಿ ನೀಡಿದ ದಾಖಲೆ ಪ್ರಕಾರ ಗುಜರಿ ಮಾರಾಟದ 46 ಲೋಡ್, 11,74,618 ಕೆ.ಜಿ ಮತ್ತು ಟೆಂಡರ್‍ನಲ್ಲಿ ನಮೂದಿಸಿದ ದರ 82/ಪ್ರತಿ ಕೆಜಿಗೆ ರೂಗಳಂತೆ ಒಟ್ಟು ಮಾರಾಟ ಮೊತ್ತ ರೂ.9,63,18,676. ಹಾಗೂ ಸರ್ಕಾರದ ಬೊಕ್ಕಸಕ್ಕೆ ಪಾವತಿಸಬೇಕಾದ ಜಿ.ಎಸ್.ಟಿ ಮೊತ್ತ 1,73,37,362 ರೂ. ಗಳೆಂದು ತಿಳಿದು ಬರುತ್ತದೆ.

ಉಡುಪಿ ಜಿಲ್ಲಾ ರೈತ ಸಂಘ ಕಲೆ ಹಾಕಿದ ಮಾಹಿತಿ ಪ್ರಕಾರ 85 ಲೋಡು 22,66,061 ಕೆ.ಜಿ ಮತ್ತು ಟೆಂಡರ್‍ನಲ್ಲಿ ನಮೂದಿಸಿದ ದರ 82/ಕೆಜಿ ರೂಪಾಯಿಗಳಂತೆ ಒಟ್ಟಾರೆ ಮಾರಾಟದ ಮೊತ್ತ ರೂ.18,58,17,002 ರೂ. ಹಾಗೂ ಸರಕಾರದ ಬೊಕ್ಕಸಕ್ಕೆ ಪಾವತಿಸಬೇಕಾದ ಜಿ.ಎಸ್.ಟಿ ಮೊತ್ತ 3,34,47,060 ರೂಪಾಯಿಗಳೆಂದು ತಿಳಿದು ಬರುತ್ತದೆ.

ಸಮಗ್ರ ತನಿಖೆಯಿಂದ ಕಾನೂನು ಬಾಹಿರವಾಗಿ ಗುಜರಿ ಸಾಗಾಟ ಮತ್ತು ಮಾರಾಟವಾದ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇವತ್ತು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಸ್ಥಳ ಮಾರಾಟವಾಗದೆ ಉಳಿಯಲು ಪ್ರತಾಪಚಂದ್ರ ಶೆಟ್ಟರ ಹೋರಾಟವೇ ಕಾರಣ. ಸಾಮಾನ್ಯ ಹಾಲು ಉತ್ಪಾದಕರ ಸಹಕಾರ ಸಂಘವೊಂದು 5 ಲಕ್ಷ ರೂಪಾಯಿಯಲ್ಲಿ ಕಟ್ಟಡ ಮಾಡಬೇಕಿದ್ದರೆ ಇ-ಟೆಂಡರ್ ಮಾಡಬೇಕು ಎನ್ನುವ ಸರ್ಕಾರ ನಿರ್ದೇಶನವಿದೆ. ಆದರೆ ಕೋಟ್ಯಾಂತರ ರೂಪಾಯಿಯಲ್ಲಿ ಸಕ್ಕರೆ ಕಾರ್ಖಾನೆ ಗುಜರಿಗೆ ಏಲಂ ಹಾಕುವಾಗ ಇ-ಟೆಂಡರ್ ಮಾಡಲು ಸಮಸ್ಯೆ ಎದುರಾಗುತ್ತದೆ. ತೂಕದಲ್ಲಿಯೂ ಕೂಡಾ ಲೋಪವಾಗಿದೆ. ವೇ ಬಿಡ್ಜ್ ಹಾಳಾಗಿದೆ ಎಂದು ಖಾಸಗಿ ವೇ ಬಿಡ್ಜ್‌ನಲ್ಲಿ ಗುಜರಿ ತೂಕ ಮಾಡಲಾಗುತ್ತದೆ. ಇದೆಲ್ಲಾ ಸಾಕಷ್ಟು ಅನುಮಾನ, ಸಂಶಯಗಳನ್ನು ಸಾಮಾನ್ಯ ರೈತರಲ್ಲೂ ಮೂಡಿಸುತ್ತದೆ. ಇದು ಸಕ್ಕರೆ ಕಾರ್ಕಾನೆ, ಬೆಲ್ಲದ ಕಾರ್ಖಾನೆಯಲ್ಲ ಎಂದರು.

ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಜಿಲ್ಲೆಯ ರೈತರಿಗೆ ಮತ್ತು ಕೃಷಿ ಸಂಬಂಧಿಸಿದ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ರೈತ ಸಂಘ ದುಡಿದಿದೆ. ಸಕ್ಕರೆ ಕಾರ್ಖಾನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಸ್ತಿ. ಸಕ್ಕರೆ ಕಾರ್ಖಾನೆಗೆ ಈ ಜಿಲ್ಲೆಯ ಪ್ರತಿಯೊಬ್ಬ ರೈತರ ಕೊಡುಗೆ ಇದೆ. ಸಕ್ಕರೆ ಕಾರ್ಖಾನೆ ರೈತರ ಆಸ್ತಿ, ಅದನ್ನು ಯಾರದ್ದೋ ಪಾಲಾಗುವುದಕ್ಕೆ ಖಂಡಿತ ಬಿಡುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಉಪಾಧ್ಯಕ್ಷ ರಾಜಾರಾಮ ತಲ್ಲೂರು, ಕೋಶಾಧಿಕಾರಿ ಭೋಜ ಕುಮಾರ್ ಬೆಳಂಜೆ, ರೈತ ಮುಖಂಡರಾದ ಪ್ರದೀಪ್ ಬಲ್ಲಾಳ್, ದಿನೇಶ ಹೆಗ್ಡೆ, ಶಿವರಾಮ ಶೆಟ್ಟಿ ಮಲ್ಯಾಡಿ, ಸಂಪಿಗೇಡಿ ಸಂಜೀವ ಶೆಟ್ಟಿ, ಬಾಕಿಸಂ ಅಧ್ಯಕ್ಷ ಸೀತಾರಾಮ ಗಾಣಿಗ, ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಬಾಬು ಹೆಗ್ಡೆ, ಭುಜಂಗ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರೈತ ಸಂಘದ ಎಲ್ಲಾ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.

ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!